More

    VIDEO: ಮರಣಶಯ್ಯೆಯಲ್ಲಿದ್ದ ಪತ್ನಿಯನ್ನು ಪಿಟಿಲು ನುಡಿಸುತ್ತಾ ಬದುಕಿಸಿದ 77ರ ಕಲಾವಿದ…

    ಕೋಲ್ಕತಾ: ಇವರ ವಯಸ್ಸು 77. ಆದರೆ ಕಲೆಗೇನೂ ಕೊರತೆಯಿಲ್ಲ. ಪಿಟಿಲು ವಾದಕ, ಚಿತ್ರಕಲಾವಿದ, ಶಿಲ್ಪಿ. ಇವರ ಇದೇ ಕಲೆಗಳು ಇಳಿವಯಸ್ಸಿನಲ್ಲಿ ಇವರ ಕೈಹಿಡಿದಿದೆ, ಮರಣಶಯ್ಯೆಯಲ್ಲಿದ್ದ ಪತ್ನಿಗೆ ಜೀವದಾನ ಮಾಡಿದೆ.

    ಕೋಲ್ಕತಾದ ಸ್ವ್ಯಾಪನ್‌ ಸೆಟ್‌ ಅವರೀಗ ಪತ್ನಿಯನ್ನು ಕಾಪಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗಳಿಗೆ ಪಾತ್ರರಾಗಿದ್ದಾರೆ. ಇವರ ಜೀವನ ಯಶೋಗಾಥೆ ವೈರಲ್‌ ಆಗಿದ್ದು, ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡುವ, ತಮ್ಮ ಜೀವವನ್ನಾದರೂ ಒತ್ತೆಯಿಟ್ಟು ಹೆಣಗಾಡುವವರಿಗೇನೂ ಕಮ್ಮಿ ಇಲ್ಲ. ಅಂಥವರಲ್ಲಿಯೇ ಒಬ್ಬರಾಗಿರುವ ಸ್ವ್ಯಾಪನ್‌ ಅವರು ಸತತ 17 ವರ್ಷಗಳಿಂದ ಒಂಟಿಯಾಗಿ ಹೋರಾಟ ನಡೆಸಿರುವ ಕಾರಣ, ಇಷ್ಟೊಂದು ಮೆಚ್ಚುಗೆ ಗಳಿಸಿದ್ದಾರೆ.

    2002ರಲ್ಲಿ ಸ್ವ್ಯಾಪನ್‌ ಅವರ ಪತ್ನಿಯ ಗರ್ಭಕೋಶದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ತೀರಾ ಬಡವರಾಗಿರುವ ಸ್ವ್ಯಾಪನ್‌ ಅವರಿಗೆ ತಮ್ಮಲ್ಲಿರುವ ಕಲೆ ಬಿಟ್ಟರೆ ಪತ್ನಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಯಾವ ಹಾದಿಯೂ ಇರಲಿಲ್ಲ. ಚಿಕಿತ್ಸೆಗೆ ಹಣ ಹೊಂದಿಸಲು ಅವರಿಗೆ ಸಾಧ್ಯವೇ ಇರಲಿಲ್ಲ.

    ಇದರಿಂದಾಗಿ ಪಿಟಿಲು ವಾದನ ಹಾಗೂ ಪೇಂಟಿಂಗ್‌ ಕಲೆಗಳಿಂದ ಜನರ ಗಮನ ಸೆಳೆಯಲು ಶುರು ಮಾಡಿದರು. ಇಂಥ ಅದೆಷ್ಟೋ ಕಲಾವಿದರು ಇರುವಾಗ ಇವರಿಗೆ ಜನರು ಹಣ ನೀಡುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಪಟ್ಟು ಬಿಡದ ಸ್ವ್ಯಾಪನ್‌, ಮೊದಲು ಕೋಲ್ಕತಾದಲ್ಲಿಯೇ ಅನೇಕ ಕಛೇರಿಗಳನ್ನು ಅನೇಕ ಮಂದಿಯ ನೆರವು ಪಡೆದು ನಡೆಸಿದರು. ನಂತರ ಪ್ರಯತ್ನ ಬಿಡದೇ ಹಂತಹಂತವಾಗಿ ಹಣವನ್ನು ಸಂಗ್ರಹಿಸುತ್ತಾ ದೇಶಾದ್ಯಂತ ಸಂಗೀತ ಕಛೇರಿ ನೀಡಿದರು, ಜತೆಗೆ ಪೇಂಟಿಂಗ್‌ ಪ್ರದರ್ಶನ ನಡೆಸಿದರು. ಇವರು ಶಿಲ್ಪಿ ಕೂಡ. ಅದರ ಪ್ರಯೋಜನವನ್ನೂ ಪಡೆದರು.

    ಹನಿಹನಿ ಕೂಡಿ ಹಳ್ಳ ಎಂಬಂತೆ ಕೈಗೆ ಸಿಕ್ಕ ಕಾಸಿನಿಂದ ಹಣ ಸಂಗ್ರಹಿಸಿ ಮೇಲಿಂದ ಮೇಲೆ ಪತ್ನಿಗೆ ಚಿಕಿತ್ಸೆ ನೀಡುತ್ತ ಬಂದರು. ಹೀಗೆ ಸತತ 17 ವರ್ಷ ಚಿಕಿತ್ಸೆ ನೀಡಿಸಿದ ಬಳಿಕ ಪತ್ನಿ 2019 ರಲ್ಲಿ ಚೇತರಿಸಿಕೊಂಡರು. ಈಗ ಸ್ಟ್ಯಾಫನ್‌ ಅವರಿಗೆ 77 ವರ್ಷ. ಕ್ಯಾನ್ಸರ್‌ ಎನ್ನುವುದು ಮತ್ಯಾವಾಗ ಆವರಿಸಿಕೊಳ್ಳುತ್ತದೆ ಎನ್ನುವ ಭಯ ಅವರಿಗೂ ಇದೆ.

    ಇದೇ ಕಾರಣಕ್ಕೆ ಇಂದಿಗೂ ತಮ್ಮ ಕಲಾ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಇವರ ಜೀವನ ಗಾಥೆಯಿಂದ ಪ್ರೇರೇಪಿತರಾದ ನೆಟ್ಟಿಗರೊಬ್ಬರು ಅದನ್ನು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು, ಅದೀಗ ಭಾರಿ ವೈರಲ್‌ ಆಗಿದೆ.

    ಪದವಿಯ ಬೆನ್ನೇರದೇ ಸ್ಪರ್ಧಾ ಪ್ರಪಂಚದ ಒಳಹೊಕ್ಕಾಗ… ಕನ್ನಡದಿಂದ ಚಿನ್ನದವರೆಗೆ…

    ವಿವಿಧ ಪದವೀಧರರಿಗೆ ಆದಾಯ ತೆರಿಗೆ ಇಲಾಖೆಯಿಂದ ಆಹ್ವಾನ: ನಾಳೆಯೇ ಕೊನೆಯ ದಿನ

    ಅಧಿಕ ರಕ್ತದೊತ್ತಡದಿಂದ ಪತಿಗೆ ನನ್ನಲ್ಲಿ ಆಸಕ್ತಿಯೇ ಇಲ್ಲ… ಆಯುರ್ವೇದದಲ್ಲಿ ಇದಕ್ಕೆ ಪರಿಹಾರವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts