More

    ‘ಮಕ್ಕಳನ್ನು ಜೈಲಿಗೆ ಹಾಕಿ 20 ವರ್ಷವಾಯ್ತು, ಏನಾದ್ರೋ ಗೊತ್ತಿಲ್ಲ. ಕಣ್ಮುಚ್ಚುವ ಮುನ್ನ ಒಮ್ಮೆ ನೋಡುವಾಸೆ…’

    ಶ್ರೀನಗರ: ಉದ್ಯೋಗಕ್ಕೆಂದು ಹೋದ ಇಬ್ಬರು ಮಕ್ಕಳು 20 ವರ್ಷವಾದರೂ ಪತ್ತೆಯಿಲ್ಲದೆ ಅವರಿಗಾಗಿ ಕೊರಗಿ ಕೊರಗಿ ಜೀವ ಬಿಡುವ ಹಂತದಲ್ಲಿರುವ ಪಾಲಕರು ತಮ್ಮ ಮಕ್ಕಳನ್ನು ಹುಡುಕಿಕೊಡುವಂತೆ ಕಣ್ಣೀರು ಸುರಿಸುತ್ತಿರುವ ಹೃದಯವಿದ್ರಾವಕ ಘಟನೆ ಶ್ರೀನಗರದಿಂದ ವರದಿಯಾಗಿದೆ.

    ಅಬ್ದುಲ್ ಅಹದ್ ರಾಹ್ ಮತ್ತು ಅವರ ಪತ್ನಿ ಖದೀಜಾ ಎಂಬವರು ತಮ್ಮ ಮಕ್ಕಳಾದ ಮಹಮ್ಮದ್ ಶಫಿ ರಾಹ್ ಮತ್ತು ಮುಷ್ತಾಕ್ ಅಹ್ಮದ್ ರಾಹ್ ಅವರಿಗಾಗಿ ಹಂಬಲಿಸುತ್ತಿರುವ ನತದೃಷ್ಟ ದಂಪತಿಯಾಗಿದ್ದಾರೆ. ಮಕ್ಕಳ ಚಿಂತೆಯಲ್ಲಿಯೇ ಹಲವು ಕಾಯಿಲೆಗಳಿಂದ ಬಳಲುತ್ತಿರುವ 80ರ ಆಸುಪಾಸಿನ ಈ ವೃದ್ಧ ದಂಪತಿ ಇದುವರೆಗೆ ತಮ್ಮ ಮಕ್ಕಳನ್ನು ನೋಡಲು ಜೀವ ಹಿಡಿದಿಟ್ಟುಕೊಂಡಿದ್ದಾರೆ.

    ಆದದ್ದೇನೆಂದರೆ, 1995ರಲ್ಲಿ ಇವರ ಮಕ್ಕಳು ಶ್ರೀನಗರವನ್ನು ಬಿಟ್ಟು ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಉದ್ಯೋಗಕ್ಕಾಗಿ ಹೋಗಿದ್ದರು. ಅಲ್ಲಿ ಅವರಿಗೆ ಟ್ಯಾನರಿ ಒಂದರಲ್ಲಿ ಉದ್ಯೋಗ ಕೂಡ ಸಿಕ್ಕಿತ್ತು. ಆದರೆ 2000ನೇ ಸಾಲಿನ ಸೆಪ್ಟೆಂಬರ್ 5ರಂದು ಇಂಡಿಯನ್ ಏರ್‌ಲೈನ್ಸ್ ವಿಮಾನ (ಐಸಿ -814) ಹೈಜಾಕ್​ ಆಗಿತ್ತು. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ನೇಪಾಳದಲ್ಲಿ ದಾಳಿ ನಡೆಸಿದ್ದರು. ಆಗ ಅನೇಕ ಕಾಶ್ಮೀರಿ ಉದ್ಯಮಿಗಳನ್ನು ಬಂಧಿಸಿದ್ದರು. ಇವರಲ್ಲಿ ಈ ದಂಪತಿ ಮಕ್ಕಳು ಇದ್ದರು.

    ಆದರೆ ತಮ್ಮ ಮಕ್ಕಳು ಏನೂ ತಪ್ಪು ಮಾಡಿಲ್ಲ ಎನ್ನುವುದು ಈ ವೃದ್ಧ ದಂಪತಿ ಅಳಲು. ಬಂಧಿಸಿದ ನಂತರ ವಿಚಾರಣೆ ನಡೆಸಿದ ಬಳಿಕ ಈ ಕೇಸ್‌ನಲ್ಲಿ ಶಾಮೀಲು ಇಲ್ಲದ ಹಲವರನ್ನು ಬಿಡುಗಡೆ ಮಾಡಲಾಗಿತ್ತು. ಇದಾಗಿ 20 ವರ್ಷಗಳಾದರೂ ಇವರ ಮಕ್ಕಳು ಪತ್ತೆಯಾಗಿಲ್ಲ. ಅವರು ಏನಾಗಿದ್ದಾರೆ, ಅವರನ್ನು ಬಿಡುಗಡೆ ಮಾಡಲಾಗಿದೆಯೇ ಅಥವಾ ಅವರನ್ನು ಇನ್ನೇನು ಮಾಡಿದ್ದಾರೋ ಎನ್ನುವುದು ಈ ದಂಪತಿಗೆ ತಿಳಿದಿಲ್ಲ.
    ‘ವಿಮಾನ ಹೈಜಾಕ್‌ ಪ್ರಕರಣದಲ್ಲಿ ನನ್ನ ಮಕ್ಕಳನ್ನು ಬಂಧಿಸಿದಾಗ ನಾನು ನೇಪಾಳಕ್ಕೆ ಹೋಗಿದ್ದೆ. ಆದರೆ ಅದಾಗಲೇ ಅವರನ್ನುಜೋಧ್‌ಪುರ ಜೈಲಿಗೆ ಸ್ಥಳಾಂತರಿಲಾಗಿತ್ತು. ಆಗ ನನ್ನ ಸಹೋದರನ ಜತೆಗೂಡಿ ಅಲ್ಲಿಯೂ ಹೋದೆ. ಅಲ್ಲಿನ ಅಧಿಕಾರಿಗಳು ನನ್ನ ಇಬ್ಬರೂ ಮಕ್ಕಳು ಒಂದೇ ಜೈಲಿನಲ್ಲಿರುವುದಾಗಿ ನಮಗೆ ತಿಳಿಸಿದರು. ಆದರೆ ನಮಗೆ ಮಕ್ಕಳನ್ನು ನೋಡಲು ಬಿಡಲಿಲ್ಲ. ಬದಲಿಗೆ ಮಕ್ಕಳನ್ನು ನೋಡಲು ಶ್ರೀನಗರದಿಂದ ಪ್ರಮಾಣಪತ್ರ ತರುವಂತೆ ಹೇಳಿದರು. ಪುನಃ ಶ್ರೀನಗರಕ್ಕೆ ಬಂದ ನಾವು ಅಲ್ಲಿಂದ ಪ್ರಮಾಣಪತ್ರ ತೆಗೆದುಕೊಂಡು ಹೋದೆವು.

    ಈ ಪ್ರಮಾಣ ಪತ್ರ ಕೊಟ್ಟರೂ ಮಕ್ಕಳನ್ನು ನೋಡಲು ಬಿಡಲಿಲ್ಲ. ಬದಲಿಗೆ ಯಾರ ಭೇಟಿಗೂ ಅವಕಾಶ ನೀಡಬಾರದು ಎಂದು ನಮಗೆ ಆದೇಶವಾಗಿದೆ, ಆದ್ದರಿಂದ ಮಕ್ಕಳನ್ನು ನೋಡಲು ಬಿಡುವುದಿಲ್ಲ ಎಂದರು. ಈ ಬಗ್ಗೆ ತುಂಬಾ ಒತ್ತಾಯ ಮಾಡಿದಾಗ ಅಲ್ಲಿಯ ಪೊಲೀಸರು ನಮಗೆ ಬೆದರಿಕೆ ಹಾಕಿ, ಇಲ್ಲಿಯ ಜೈಲಿನ ಮೇಲೆ ದಾಳಿಯಾಗಲಿದೆ. ನೀವು ಇಲ್ಲಿಂದ ಹೋಗದಿದ್ದರೆ ನಿಮ್ಮನ್ನೂ ಇದೇ ಆರೋಪದ ಮೇಲೆ ಬಂಧಿಸಬೇಕಾಗುತ್ತದೆ ಎಂದರು. ಆದ್ದರಿಂದ ವಿಧಿಯಿಲ್ಲದೇ ವಾಪಸ‌ ಬಂದೆವು’ ಎಂದು ಹಿಂದಿನ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಅಬ್ದುಲ್‌.

    ನಮ್ಮ ಮಕ್ಕಳು ತಪ್ಪು ಮಾಡಿಲ್ಲ. ಅವರ ತಪ್ಪು ಏನೆಂದು ಎಂಬುದೂ ನಮಗೆ ಯಾರೂ ಹೇಳಲಿಲ್ಲ. ಅವರ ಬರುವಿಕೆಗಾಗಿ 20 ವರ್ಷಗಳಿಂದ ಕಾದಿದ್ದೇವೆ. ಈಗ 80 ವರ್ಷ ದಾಟಿದೆ. ಇಬ್ಬರೂ ಹಾಸಿಗೆ ಹಿಡಿದಿದ್ದೇವೆ. ಮಕ್ಕಳನ್ನು ಸಾಯುವ ಮುನ್ನ ನೋಡುವ ಆಸೆ. ಇಲ್ಲಿಯವರೆಗೆ ನಮಗೆ ಭರವಸೆ ಸಿಕ್ಕಿದೆ. ಆದರೆ ಏನೂ ಆಗಿಲ್ಲ. ನಮಗೆ ನ್ಯಾಯ ಬೇಕು’ ಎಂದು ಈ ವೃದ್ಧ ದಂಪತಿ ಕಣ್ಣೀರು ಹಾಕುತ್ತಿದ್ದಾರೆ. ಇಲ್ಲಿಯವರೆಗೆ ಮಕ್ಕಳನ್ನು ನೋಡಲು ಇದ್ದ ಹಣವನ್ನೆಲ್ಲಾ ವ್ಯಯಿಸಿರುವ ಅವರು, ಇರುವ ಮನೆಯನ್ನೂ ಮಾರಾಟ ಮಾಡಲು ಸಿದ್ಧರಿದ್ದಾರೆ. ಮಕ್ಕಳನ್ನು ನೋಡುವ ಅವರ ಹಂಬಲ ಈಡೇರುವುದೆ? ಕಾಲವೇ ಉತ್ತರಿಸಬೇಕಿದೆ.

    ಬಿಜೆಪಿ ನಾಯಕನಿಗೆ ಐದು ಡೋಸ್‌ ಕರೊನಾ ಲಸಿಕೆ! ಕೋಲಾಹಲ ಸೃಷ್ಟಿಸಿದ ಪ್ರಮಾಣಪತ್ರ

    ದ್ವಿತೀಯ ಪಿಯುಸಿ ರಿಸಲ್ಟ್‌- ಚಾಲೆಂಜ್ ಮಾಡಿ ಪರೀಕ್ಷೆ ತೆಗೆದುಕೊಂಡವರಲ್ಲಿ 36 ವಿದ್ಯಾರ್ಥಿಗಳು ಫೇಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts