More

    ಆಕ್ಸಿಜನ್‌ ಇದ್ದರೂ ಸೋಂಕಿತರ ಪ್ರಾಣ ಕಾಪಾಡಲಾಗದೇ ಕಣ್ಣೀರಿಟ್ಟ ವೈದ್ಯರು- ಉಸಿರು ನಿಲ್ಲುವ ಮುನ್ನವೇ ನಡೆಯಿತು ಪವಾಡ!

    ನವದೆಹಲಿ: ಕರೊನಾ ಎರಡನೆಯ ಅಲೆಯ ಈ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಾಗಿರುವುದು ಆಕ್ಸಿಜನ್‌ ಕೊರತೆಯದ್ದು. ಆಕ್ಸಿಜನ್‌ ಸಿಗದೇ ಪ್ರಾಣ ಕಳೆದುಕೊಂಡವರು ಅದೆಷ್ಟೋ ಮಂದಿ. ಹಲವು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್‌ ಕೊರತೆ ಇದ್ದು, ಪರಿಸ್ಥಿತಿ ಕೈಮೀರುವಂತಾಗಿದೆ.

    ಇಂಥ ಸಂದರ್ಭದಲ್ಲಿ ದೆಹಲಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್‌ ಕೊರತೆಯಿಂದಾಗಿ 100ಕ್ಕೂ ಅಧಿಕ ಕರೊನಾ ಸೋಂಕಿತರು ಪ್ರಾಣ ಕಳೆದುಕೊಳ್ಳುವ ಭೀತಿಯಲ್ಲಿದ್ದಾಗಲೇ ಸಿನಿಮೀಯ ರೀತಿಯಲ್ಲಿ ಆಸ್ಪತ್ರೆಯ ವೈದ್ಯರು ಎಲ್ಲರ ಪ್ರಾಣ ಉಳಿಸಿದ್ದಾರೆ.

    ಇದೊಂದು ರೀತಿಯ ಪವಾಡವೇ ಎಂದು ಎಲ್ಲರೂ ಬಣ್ಣಿಸುತ್ತಿದ್ದಾರೆ. ಇಂಥದ್ದೊಂದು ಪವಾಡ ನಡೆದಿರುವುದು ಸರೋಜ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ. ಇಲ್ಲಿ 130ಕ್ಕೂ ಹೆಚ್ಚು ಕರೊನಾ ಸೋಂಕಿತರಿಗೆ ಕೃತಕ ಆಕ್ಸಿಜನ್‌ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಕ್ಸಿಜನ್‌ ಮುಗಿಯುತ್ತಿದ್ದಂತೆಯೇ, ವೈದ್ಯರು ಮತ್ತೆ ಇವುಗಳ ಪೂರೈಕೆಗಾಗಿ ಎಲ್ಲೆಡೆ ಹುಡುಕಾಟದಲ್ಲಿ ತೊಡಗಿದರು.

    ಆದರೆ ಎಲ್ಲಿಯೂ ಸಿಲಿಂಡರ್‌ಗಳು ಸಿಗಲೇ ಇಲ್ಲ. ವೈದ್ಯರೂ ಹತಾಶರಾದರು. ಸೋಂಕಿತರ ಪ್ರಾಣದ ಬಗ್ಗೆ ಚಿಂತೆಯಾಗಿ, ಎಲ್ಲ ಸೋಂಕಿತರ ಸಂಬಂಧಿಕರಿಗೆ ವಿಷಯ ತಿಳಿಸಿದರು. ಇದರಿಂದ ಹೆದರಿದ ಕೆಲವು ಕುಟುಂಬಸ್ಥರು ಸೋಂಕಿತರನ್ನು ಬೇರೆಡೆಗೆ ಶಿಫ್ಟ್‌ ಮಾಡಿಸಿದರು. ಆದರೆ, 100ಕ್ಕೂ ಅಧಿಕ ಸೋಂಕಿತರು ಅಲ್ಲಿಯೇ ಉಳಿದುಕೊಳ್ಳುವಂತಾಯಿತು. ಆಕ್ಸಿಜನ್‌ ಮುಗಿಯುತ್ತ ಬಂದರೂ ಸಿಲಿಂಡರ್‌ ಪತ್ತೆ ಇಲ್ಲ. ನಂತರ ಮೇಯರ್‌ ಹಾಗೂ ಪೊಲೀಸ್‌ ಇಲಾಖೆಯ ನೆರವಿನಿಂದ ಕೊನೆಗೂ ಒಂದು ಆಕ್ಸಿಜನ್‌ ಟ್ಯಾಂಕರ್‌ ಸಿಕ್ಕಿತು. ಆದರೆ ದುರದೃಷ್ಟಕ್ಕೆ ಆಸ್ಪತ್ರೆಯ ಕಾಂಪೌಂಡ್‌ನೊಳಗಿರುವ ಆಕ್ಸಿಜನ್‌ ಟ್ಯಾಂಕ್‌ನ ಬಳಿಗೆ ಹೋಗಲಾಗದಷ್ಟು ದೊಡ್ಡದಾಗಿತ್ತು.

    ರೋಗಿಗಳ ಪ್ರಾಣವೇ ಮುಖ್ಯವಾಗಿದ್ದರಿಂದ ತಡಮಾಡದ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರು ಸಿಕ್ಕಸಿಕ್ಕಿದ್ದನ್ನೆಲ್ಲಾ ತಂದು ಕಾಂಪೌಂಡ್‌ ಒಡೆಯತೊಡಗಿದರು. ಸೂಪರ್‌ಸ್ಪೆಷ್ಯಾಲಿಟಿ ಆಸ್ಪತ್ರೆ ಎಂದ ಮೇಲೆ ಅಷ್ಟು ಸುಲಭಕ್ಕೆ ಈ ಗೋಡೆ ಒಡೆಯುವುದಾದರೂ ಹೇಗೆ? ಒಳಗೆ ಸೋಂಕಿತರ ಉಸಿರು ನಿಲ್ಲುವ ಸ್ಥಿತಿ, ಇತ್ತ ಆಕ್ಸಿಜನ್‌ ಸಿಲಿಂಡರ್‌ ಇದ್ದರೂ ಕೊಡದ ಪರಿಸ್ಥಿತಿ. ಕೊನೆಗೆ ಸರ್ವ ಪ್ರಯತ್ನ ಮಾಡಿ ಆಸ್ಪತ್ರೆಯ ವೈದ್ಯರು ಜೆಸಿಬಿ ತರಿಸಿದರು. ಕೊನೆಗೂ ಗೋಡೆ ಒಡೆಯಲಾಯಿತು. ಟ್ಯಾಂಕರ್‌ ಅನ್ನು ಆಕ್ಸಿಜನ್‌ ಟ್ಯಾಂಕ್‌ ಬಳಿಗೆ ಕೊಂಡೊಯ್ದು ಸೋಂಕಿತರಿಗೆ ನೀಡಿ ಎಲ್ಲರ ಪ್ರಾಣ ಉಳಿಸಲಾಯಿತು.
    ನಮ್ಮ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯೆಲ್ಲ ಕಣ್ಣೀರು ಹಾಕುತ್ತಿದ್ದರು. ಎಲ್ಲರ ಪ್ರಯತ್ನದಿಂದ ಕೊನೆಗೆ ಹೇಗೋ ಜೀವ ಉಳಿಯಿತು ಎಂದು ಆಸ್ಪತ್ರೆಯ ಮಾಲಿಕ ಪಂಕಜ್‌ ಚಾವ್ಲಾ ನಿಟ್ಟುಸಿರು ಬಿಟ್ಟಿದ್ದಾರೆ.

    ಅರಬ್‌ ರಾಷ್ಟ್ರದಲ್ಲಿ ಹಾರಿತು ಭಾರತದ ಬಾವುಟ- ವಿದ್ಯುದ್ದೀಪಗಳಿಂದ ಅಲಂಕರಿಸಿ ಭಿನ್ನವಾಗಿ ನೀಡಿದರು ಸ್ಥೈರ್ಯ…

    ಎರಡು ದಿನ ವೈದ್ಯರ ಭೇಟಿಗೆ, ಎರಡೂವರೆ ದಿನ ರಿಸಲ್ಟ್‌ಗೆ ಕಾದೆ ಎಂದ ಸಂಸದ ಶಶಿ ತರೂರ್‌ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts