More

    ದುಬೈ ಟು ಮುಂಬೈ- 18 ಸಾವಿರ ರೂಪಾಯಿಯಲ್ಲಿ ರೋಚಕ ಅನುಭವ: ಒಂಟಿ ಪ್ರಯಾಣಿಕನಿಗಾಗಿ ಉರಿದದ್ದು 17 ಟನ್ ಇಂಧನ!

    ಮುಂಬೈ: ಮುಂಬೈ ನಿವಾಸಿ ಭವೇಶ್ ಜವೇರಿ ಅವರಿಗೆ ಜೀವಮಾನದಲ್ಲಿ ಮರೆಯಲಾರದ ಅನುಭೂತಿ ಕೊಟ್ಟಿದೆ ವಿಮಾನ ಪ್ರಯಾಣ. ಜೀವನದಲ್ಲಿ ಅದೆಷ್ಟೋ ಬಾರಿ ವಿಮಾನದಲ್ಲಿ ಸಂಚರಿಸಿರುವ ಅವರಿಗೆ ಈ ಒಂದು ಪ್ರಯಾಣ ಬಹಳ ರೋಮಾಂಚನ ತಂದಿದ್ದು, ಈ ಪ್ರಯಾಣದ ಸುದ್ದಿ ಭಾರಿ ವೈರಲ್‌ ಆಗಿದೆ.

    ಇದಕ್ಕೆ ಕಾರಣ, ಇವರು ದುಬೈನಿಂದ ಮುಂಬೈಗೆ ವಿಮಾನದಲ್ಲಿ ಒಬ್ಬರೇ ಕುಳಿತು ಬಂದಿದ್ದಾರೆ. ಅದೂ 360 ಸೀಟುಗಳಿರುವ ಬೋಯಿಂಗ್ 777 ಎಮಿರೈಟ್ಸ್ ವಿಮಾನದಲ್ಲಿ, ಕೇವಲ 18 ಸಾವಿರ ರೂಪಾಯಿ ಕೊಟ್ಟು! ಈ ರೋಚಕ ಪ್ರಯಾಣವನ್ನು ಅವರು ಮಾಧ್ಯಮಗಳ ಜತೆ ಹಂಚಿಕೊಂಡಿದ್ದು, ಈ ಎರಡೂವರೆ ಗಂಟೆಗಳ ಜರ್ನಿ ಜೀವನದಲ್ಲಿ ಮರೆಯಲಾರೆ ಎಂದಿದ್ದಾರೆ.

    ಯುಎಇಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ನಿರ್ಬಂಧಗಳ ಪ್ರಕಾರ, ಯುಎಇ ಪ್ರಜೆಗಳು, ಯುಎಇ ಗೋಲ್ಡನ್ ವೀಸಾ ಹೊಂದಿರುವವರು ಮತ್ತು ರಾಜತಾಂತ್ರಿಕ ಯೋಜನೆಯ ಸದಸ್ಯರು ಮಾತ್ರವೇ ಭಾರತದಿಂದ ಯುಎಇಗೆ ತೆರಳಬಹುದಾಗಿದೆ. ಭವೇಶ್ ಅವರು ತಮ್ಮ ಬಳಿ ಗೋಲ್ಡನ್ ವೀಸಾ ಹೊಂದಿದ್ದ ಕಾರಣ ಇಂಥದ್ದೊಂದು ಅವಕಾಶ ಅವರಿಗೆ ಸಿಕ್ಕಿದೆ.

    ಅವರು ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ… ‘’ನಾನು ವಿಮಾನದೊಳಗೆ ಪ್ರವೇಶಿಸುತ್ತಿದ್ದಂತೆಯೇ ಗಗನಸಖಿಯರು ಜೋರಾಗಿ ಚಪ್ಪಾಳೆ ತಟ್ಟಿ ನಗುಮೊಗದಿಂದ ಸ್ವಾಗತಿಸಿದರು. ಇಂಥ ಅನುಭವ ಸಾಮಾನ್ಯ ಆದರೆ ಈ ಪಯಣದಲ್ಲಿನ ಅನುಭವ ವಿಶೇಷವೇ ಆಗಿತ್ತು. ಇದು ಏಕಾಂಗಿ ಪಯಣ. ಇದಾಗಲೇ ದುಬೈ ಮತ್ತು ಮುಂಬೈ ನಡುವೆ 240 ಬಾರಿ ಸಂಚರಿಸಿದ್ದೇನೆ. ಆದರೆ ಇಂಥ ಸ್ವಾಗತ ಇದೇ ಮೊದಲು ನೋಡಿದ್ದು’ ಎಂದಿದ್ದಾರೆ.

    ಆಗ ಒಬ್ಬರು ಗಗನಸಖಿ ಮುಂದೆ ಬಂದು ನಿಮಗೆ ಒಂಟಿ ಪ್ರಯಾಣ ಭಯವೇ ಎಂದು ಪ್ರಶ್ನಿಸಿದರು. ಕಾಕ್‌ಪಿಟ್‌ನಲ್ಲಿದ್ದ ಕಮಾಂಡರ್ ಕೂಡ ಬಂದು ನನ್ನ ಜತೆ ಹರಟಿದರು. ಇದೊಂದು ರೀತಿಯ ವಿಚಿತ್ರ ಅನುಭವ, ವಿಮಾನ ಹೊರಡುವ, ಸೀಟು ಬೆಲ್ಟ್ ಧರಿಸುವಂತೆ ಸೂಚಿಸುವ, ವಿಮಾನ ಇಳಿಯುವ ಸಂದರ್ಭಗಳಲ್ಲಿ ವಿಮಾನದ ಸಿಬ್ಬಂದಿ ಪ್ರಕಟಣೆ ಹೊರಡಿಸುತ್ತಾರೆ. ಆದರೆ ಈ ಬಾರಿ ಪ್ರತಿ ಬಾರಿಯೂ ನನ್ನ ಹೆಸರು ಹೇಳುವ ಮೂಲಕ ಘೋಷಣೆ ಮಾಡಿದ್ದು ನನಗೆ ರೋಮಾಂಚನವನ್ನು ಉಂಟುಮಾಡಿತ್ತು ಎಂದಿದ್ದಾರೆ.

    ವಿಮಾನ ಇಳಿದ ಬಳಿಕ ಬ್ಯಾಗ್ ಸಂಗ್ರಹಿಸಲು ತೆರಳಿದಾಗಲೂ ಕನ್ವೇಯರ್ ಬೆಲ್ಟ್‌ನಲ್ಲಿ ಇದ್ದಿದ್ದು ನನ್ನ ಬ್ಯಾಗ್‌ ಮಾತ್ರ ಎಂದಿದ್ದಾರೆ. ಭಾರತದ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣಗಳಲ್ಲಿ ಮುಂಬೈ ವಿಮಾನ ನಿಲ್ದಾಣ ಒಂದಾಗಿದೆ. ಸುಮಾರು 180 ಟನ್ ತೂಕದ ಬೋಯಿಂಗ್ ವಿಮಾನವನ್ನು ಒಬ್ಬರೇ ಒಬ್ಬ ಎಕಾನಮಿ ದರ್ಜೆಯ ಪ್ರಯಾಣಿಕನ ಎರಡೂವರೆ ಗಂಟೆ ಪ್ರಯಾಣಕ್ಕಾಗಿ ಸುಮಾರು ಎಂಟು ಲಕ್ಷ ರೂ ಮೌಲ್ಯದ 17 ಟನ್ ಇಂಧನ ಉರಿಸಿದ್ದು ಅಚ್ಚರಿಯ ಸಂಗತಿ. ಆದರೆ ಮುಂಬೈನಿಂದ ದುಬೈಗೆ ವಿಮಾನ ಹೋದ ಮೇಲೆ ಅಲ್ಲಿಂದ ವಾಪಸ್‌ ಬರಲೇಬೇಕಿರುವುದು ಅನಿವಾರ್ಯ. ಆದ್ದರಿಂದ ಪ್ರಯಾಣಿಕರು ಇಲ್ಲದಿದ್ದರೂ ಬರಲೇಬೇಕಿತ್ತು ಎಂದು ವಿಮಾನಯಾನ ಸ್ಪಷ್ಟನೆ ಕೊಟ್ಟಿದೆ.

    ಲಸಿಕೆ ಪಡೆಯುವ ಸಮಯದ ಲಭ್ಯತೆ ಇನ್ನು ತಿಳಿಯೋದು ಸುಲಭ- ಇದಕ್ಕಾಗಿ ರೂಪುಗೊಂಡಿದೆ ಈ ತಂತ್ರಾಂಶ

    ಪುಲ್ವಾಮಾ ಹುತಾತ್ಮ ಪತಿಯ ಶವದ ಎದುರೇ ಪಣತೊಟ್ಟಿದ್ದ ನವವಿವಾಹಿತೆ: ಇಂದು ಸೇನೆಯ ಲೆಫ್ಟಿನೆಂಟ್‌

    ಗೋಮಾತೆಯ ಅಪ್ಪುಗೆಯೇ ಚಿಕಿತ್ಸೆ: ತಾಸಿಗೆ 15 ಸಾವಿರ ರೂ. ಕೊಟ್ಟು ಹಸು ತಬ್ಬಿಕೊಳ್ಳುತ್ತಿರೋ ಅಮೆರಿಕನ್ನರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts