More

    ಮದುವೆಗೆ ಕೆಲವೇ ದಿನವಿದ್ದು, ಈಗ ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿದ್ದಾಳೆ- ತಲೆ ಕೆಟ್ಟುಹೋಗಿದೆ…

    ಮದುವೆಗೆ ಕೆಲವೇ ದಿನವಿದ್ದು, ಈಗ ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿದ್ದಾಳೆ- ತಲೆ ಕೆಟ್ಟುಹೋಗಿದೆ... ಪ್ರಶ್ನೆ : ನಾನು 28 ವರ್ಷದ ಎಂ.ಟೆಕ್ ಪದವಿಧರ. ಒಳ್ಳೆಯ ಉದ್ಯೋಗದಲ್ಲಿದ್ದೇನೆ. ನಾನು ಮುಂಬೈಯಲ್ಲಿ ಎಂ.ಟೆಕ್ ಓದುವಾಗ ನನಗೊಬ್ಬ ಬೇರೆ ರಾಜ್ಯದ ಹುಡುಗಿ ಪರಿಚಯವಾದಳು. ಅವಳು ಬಹಳ ಮುಂದುವರೆದ ಮನೆತನದವಳಾಗಿದ್ದಳು. ಅವಳು ನನ್ನನ್ನು ಒಪ್ಪಿಸಿದ್ದರಿಂದ ’ ಲಿವಿಂಗ್ ಟುಗೆದರ್ ರಿಲೇಷನ್ ’ ವ್ಯವಸ್ಥೆಯಲ್ಲಿ ಇಬ್ಬರೂ ಎರಡು ವರ್ಷ ಒಂದೇ ರೂಮಿನಲ್ಲಿ ವಾಸಿಸಿದೆವು.

    ನಾನು ಪ್ರಾರಂಭದಲ್ಲಿ ಅವಳನ್ನು ಮದುವೆಯಾಗಬೇಕೆಂದೇ ಇದ್ದೆ. ಆದರೆ ಕಡೆಕಡೆಗೆ ಅವಳ ಸರ್ವಾಧಿಕಾರ ಧೋರಣೆ ನನಗೆ ಹಿಂಸೆಯಾಗತೊಡಗಿತು. ಆದರೂ ನಾನು ಮದುವೆಯ ಪ್ರಪೋಸಲ್ ಮಾಡಿದೆ. ಅವಳು ನನ್ನ ಪ್ರಪೋಸಲ್ ಒಪ್ಪದೇ ” ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ” ಎಂದು ಹೋಗಿಬಿಟ್ಟಳು. ನಾನಾಗ ತೀರಾ ಹತಾಶನಾಗಿದ್ದೆ ಮೇಡಂ. ಆ ಸಮಯದಲ್ಲೇ ನನ್ನ ತಂದೆತಾಯಿ ನನಗೊಬ್ಬ ಹುಡುಗಿಯನ್ನು ಗೊತ್ತು ಮಾಡಿದರು. ನನಗೂ ಅವಳು ಇಷ್ಟವಾದಳು. ಲಗ್ನಪತ್ರಿಕೆಯೂ ಆಯಿತು. ಅವಳೂ ಬಿ.ಇ ಮಾಡಿ ಒಳ್ಳೆಯ ಕೆಲಸದಲ್ಲಿದ್ದಾಳೆ.

    ನಾನು ಪ್ರಾರಂಭದಲ್ಲೇ ನನ್ನ ಹಳೆ ಗೆಳತಿಯ ಎಲ್ಲಾ ವಿಚಾರಗಳನ್ನೂ ಅವಳಿಗೆ ಹೇಳಿದೆ. ಅದನ್ನವಳು ತುಂಬಾ ಆರೋಗ್ಯಕರ ಮನಸ್ಸಿನಿಂದ ಪರಿಗಣಿಸಿದಳು. ಮತ್ತು ” ಹಳೆಯದನ್ನು ಮರೆತುಬಿಡು, ನಾವೀಗ ಹೊಸ ಜೀವನವನ್ನು ಪ್ರಾರಂಭಿಸೋಣ ” ಎಂದು ಸಮಾಧಾನ ಮಾಡಿದಳು. ಅವಳು ನಗುನಗುತ್ತಾ ಎಲ್ಲರೊಂದಿಗೆ ಹೊಂದಿಕೊಳ್ಳುವ ಸ್ವಭಾವದವಳು. ಇದು ನನ್ನ ತಂದೆ ಮತ್ತು ತಾಯಿಗೆ ಬಹಳ ಇಷ್ಟವಾಗಿದೆ. ಆರು ತಿಂಗಳು ನಾವು ಎಲ್ಲಾ ಕಡೆಗೆ ಖುಷಿಯಾಗಿ ಸುತ್ತಾಡಿದೆವು. ನಮ್ಮ ಮದುವೆಗೆ ಇನ್ನೂ ಮೂರುತಿಂಗಳಿದೆ. ಈಗ ಹದಿನೈದು ದಿನಗಳ ಕೆಳಗೆ ಅವಳೊಂದು ಘೋರ ಸುದ್ದಿಯನ್ನು ಬಯಲು ಮಾಡಿದಳು.

    ಅವಳು ಸಹ ಬೇರೆ ಊರಿನಲ್ಲಿ ಬಿ.ಇ ಓದುವಾಗ ಒಬ್ಬನ ಜೊತೆ ಮೂರುತಿಂಗಳು ’ ಲಿವಿಂಗ್ ಟುಗೆದರ್ ’ ವ್ಯವಸ್ಥೆಯಲ್ಲಿ ಇದ್ದಳಂತೆ. ಅವನನ್ನೇ ಮದುವೆಯಾಗುವುದು ಎಂದೇ ತೀರ್ಮಾನಿಸಿದ್ದಳಂತೆ. ಆದರೆ ಮೂರೇ ತಿಂಗಳಿಗೆ ಅವನ ಸಹವಾಸ ಸಾಕಾಯಿತಂತೆ. ಅವನು ತುಂಬಾ ಕ್ರೂರಿಯಂತೆ. ಒಂದೆರಡು ಬಾರಿ ಇವಳನ್ನು ಹೊಡೆದೂ ಬಿಟ್ಟಿದ್ದನಂತೆ. ಅಂಥವನ ಜೊತೆ ಇಡೀ ಬದುಕು ಕಳೆಯುವುದು ಬೇಡವೆಂದು ಮೂರೇ ತಿಂಗಳಿಗೆ ಅವನನ್ನು ಬಿಟ್ಟು ಬಂದಳಂತೆ. ಇದು ಅವಳ ತಂದೆತಾಯಿಗೂ ಗೊತ್ತಿಲ್ಲವಂತೆ.

    ” ಯಾರಿಗೂ ಗೊತ್ತಿಲ್ಲದ ನನ್ನ ಸತ್ಯವನ್ನು ನಿನಗೆ ಮಾತ್ರ ಹೇಳುತ್ತಿದ್ದೇನೆ. ಏಕೆಂದರೆ ನೀನೂ ಇಂಥಾ ಜೀವನವನ್ನು ಕಳೆದಿರುವುದರಿಂದ ನಿನಗೆ ನನ್ನ ನೋವು ಅರ್ಥವಾಗುತ್ತದೆ, ಮತ್ತು ನೀನು ಉದಾರವಾಗಿ ಇದನ್ನು ಗ್ರಹಿಸುತ್ತೀಯಾ ಎಂದು ನಂಬಿದ್ದೇನೆ ” ಎಂದು ಹೇಳಿದಳು. ಇದನ್ನು ಕೇಳಿದಾಗಿನಿಂದ ನನ್ನ ಮನಸ್ಸು ಒಡೆದಂತಾಗಿದೆ ಮೇಡಂ . ಇಂಥಾ ಹುಡುಗಿಯನ್ನು ಹೇಗೆ ಮದುವೆಯಾಗುವುದು? ನಾನು ಯಾವುದನ್ನು ಹೂವೆಂದು ಕೈಲಿ ಹಿಡಿದೆನೋ ಅದು ಹಾವಾಗಿದೆಯಲ್ಲ? ಹೇಗೆ ಸಹಿಸುವುದು?

    ಉತ್ತರ: ನಿಮ್ಮ ಪತ್ರದಲ್ಲಿ ಎರಡು ಸ್ಪಷ್ಟವಾದ ಅಂಶಗಳಿವೆ. ಒಳ್ಳೆಯ ದಾಂಪತ್ಯಕ್ಕೆ ಒಬ್ಬರನ್ನೊಬ್ಬರು ದರ್ಪದಿಂದ ಆಳುವುದು ಹಿತವಲ್ಲ ಎನ್ನುವುದನ್ನು ನೀವೂ ಮತ್ತು ಈಗ ನಿಮ್ಮನ್ನು ಮದುವೆಯಾಗಲು ಒಪ್ಪಿರುವ ಹುಡುಗಿಯೂ ಅರಿತಿದ್ದೀರಿ. ನಿಮ್ಮಿಬ್ಬರ ಈ ಅಭಿಪ್ರಾಯವನ್ನು ನಿಜಕ್ಕೂ ಗೌರವಿಸಬೇಕು. ನಿಮ್ಮ ಮೊದಲ ಹುಡುಗಿ ನಿಮ್ಮನ್ನು ಸರ್ವಾಧಿಕಾರಿಯಂತೆ ಆಳಲು ಪ್ರಯತ್ನಿಸಿದ್ದನ್ನು ನೀವು ತಿರಸ್ಕರಿಸಿದಿರಿ.

    ಈಗ ಗೊತ್ತಾಗಿರುವ ಹುಡುಗಿಯ ಹಳೆಯ ಗೆಳೆಯನ ಕ್ರೌರ್ಯವನ್ನು ಅವಳು ತಿರಸ್ಕರಿಸಿದಳು. ಇಬ್ಬರೂ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೀರಿ. ಇದಕ್ಕಾಗಿ ನಿಮ್ಮಿಬ್ಬರನ್ನು ಅಭಿನಂದಿಸುತ್ತೇನೆ. ಆದರೆ ಈಗಿನ ನಿಮ್ಮ ಮನಸ್ಥಿತಿಯ ಬಗ್ಗೆ ನನಗೆ ನಿಜಕ್ಕೂ ಆಶ್ಚರ್ಯವೆನಿಸುತ್ತಿದೆ. ನೀವು ’ ಲಿವಿಂಗ್ ಟುಗೆದರ್ ’ ಒಪ್ಪಿ ಬದುಕಿದ್ದು ಎರಡು ವರ್ಷ! ನಿಮ್ಮ ಹೆಂಡತಿಯಾಗುವವಳು ಇದ್ದದ್ದು ಮೂರು ತಿಂಗಳು! ನೀವು ಎರಡು ವರ್ಷ ಅನುಭವಿಸಿದ ವ್ಯವಸ್ಥೆಯನ್ನು ಅವಳು ಮೂರು ತಿಂಗಳು ಒಪ್ಪಿದ್ದಳು ಎಂದರೆ ನಿಮಗೇಕೆ ಮನಸ್ಸು ಒಡೆಯಬೇಕು? ಅಂದರೆ ಹೆಣ್ಣಿಗೊಂದು ಮೌಲ್ಯ, ಗಂಡಿಗೊಂದು ಮೌಲ್ಯವೇ? ಪಾಶ್ಚಾತ್ಯರು ಈ ಲಿವಿಂಗ್ ಟುಗೆದರ್ ವ್ಯವಸ್ಥೆಯನ್ನು ಮಾಡಿಕೊಂಡಿರುವುದೇ ಉದಾರ ಮನಸ್ಥಿತಿಯ ಕಾರಣವಾಗಿ. ಮದುವೆ ಎಂದಾಗಿಬಿಟ್ಟರೆ, ಅನೇಕ ಕಟ್ಟುಪಾಡುಗಳಿಗೆ ಒಳಗಾಗಬೇಕಾಗುತ್ತದೆ.

    ಗಂಡ ಅವನಿಗೆ ಒಂದಷ್ಟು ಕರ್ತ್ಯವ್ಯಗಳು, ಹೆಂಡತಿ ಅವಳಿಗೊಂದಷ್ಟು ಕರ್ತವ್ಯಗಳು. ಇದನ್ನು ಸರಿಯಾಗಿ ಪಾಲಿಸದಿದ್ದರೆ ಉಭಯ ಕಡೆಯ ಬಂಧುಗಳಿಗೂ ಉತ್ತರಿಸಬೇಕಾದ ಅನಿವಾರ್ಯತೆ! ಇನ್ನು ವಿಚ್ಛೇದನವೋ ಪರದೇಶಗಳಲ್ಲಿ ವಿಪರೀತ ದುಬಾರಿ! ಹೀಗಾಗಿ ಅವರು ಈ ವ್ಯವಸ್ಥೆಯನ್ನು ಕಂಡುಕೊಂಡರು. ಇಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನರು! ನಮ್ಮ ದೇಶದ ಯುವಜನತೆಗೆ ಪಾಶ್ಚಾತ್ಯ ಹೊಸ ವ್ಯವಸ್ಥೆಗಳು ಆಕರ್ಷಕವಾಗಿ ಕಾಣುತ್ತವೆ. ತಕ್ಷಣ ಅನುಕರಿಸಲು ಪ್ರಯತ್ನಿಸುತ್ತೀರಿ. ಆದರೆ ಗಂಡುಗಳಿನ್ನೂ ಅಂತರಂಗದಲ್ಲಿ ’ ಓಲ್ಡ್ ಸ್ಕೂಲ್ ಆಫ಼್ ಥಾಟ್ ’ ನಲ್ಲೇ ಇರುತ್ತೀರಿ! ಈಗ ನಿಮ್ಮ ಮನಸ್ಥಿತಿಯನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ನೀವು ಎರಡು ವರ್ಷ ಯಾರದೋ ಜೊತೆ ಬದುಕಿದರೂ ಪರವಾಗಿಲ್ಲ, ಆದರೆ ನಿಮ್ಮನ್ನು ಮದುವೆಯಾಗುವವಳು ಮಾತ್ರ ೧೦೦% ಕನ್ಯೆಯೇ ಆಗಿರಬೇಕು ಎನ್ನುವ ನಿರೀಕ್ಷೆ! ಇದು ಎಷ್ಟರ ಮಟ್ಟಿಗೆ ಸರಿ? ಶೀಲವೆನ್ನುವುದು ಇರಲೇ ಬೇಕಾದರೆ ಗಂಡಿಗೂ ಹೆಣ್ಣಿಗೂ ಇಬ್ಬರಿಗೂ ಸಮಾನವಾಗಿರಬೇಕೇಲ್ಲವೇ? ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯವೇ? ಯಾರೋ ಅವಿದ್ಯಾವಂತ ಹೆಳ್ಳಿಯ ಜನ ಈ ಮಾತನ್ನು ಹೇಳಿದರೆ ಕ್ಷಮಿಸಬಹುದು.

    ವಿದ್ಯಾವಂತರಾದ, ಮತ್ತು ಲಿವಿಂಗ್ ಟುಗೆದರ್ ವ್ಯವಸ್ಥೆಯಲ್ಲಿ ಎರಡು ವರ್ಷ ಜೀವನದ ಅನುಭವಗಳನ್ನು ಪಡೆದ ನೀವು ಈ ರೀತಿ ಚಿಂತಿಸುವುದು ಅಕ್ಷಮ್ಯ ಅಪರಾಧ! ನಿಮಗೂ ನಿಮ್ಮ ಮನೆಯ ಎಲ್ಲರಿಗೂ ಇಷ್ಟವಾಗಿರುವ ಈ ಹುಡುಗಿಯನ್ನು ನಿರ್ಮಲ ಮನಸ್ಸಿನಿಂದ ಮದುವೆಯಾಗಿ ಸುಖವಾಗಿರಿ. ನೀವೇನೂ ಅವಳಿಗೆ ಉಪಕಾರ ಮಾಡುತ್ತಿಲ್ಲ. ಬದಲಿಗೆ ಅವಳೆ ನಿಮಗೆ ಉಪಕಾರ ಮಾಡುತ್ತಿದ್ದಾಳೆ. ಎರಡು ವರ್ಷ ಒಬ್ಬಳ ಜೊತೆ ಬದುಕಿದ ನಿಮ್ಮನ್ನು ಒಪ್ಪಿಕೊಂಡಿರುವ ಅವಳ ಔದಾರ್ಯವನ್ನು ನೀವು ಮೆಚ್ಚಲೇ ಬೇಕು. ಅವಳಿಗಿರುವ ಹೃದಯ ವೈಶಾಲ್ಯದ ಮುಂದೆ ನಿಮ್ಮ ಈ ಚಿಂತನೆ ಸಂಕುಚಿತ ಮನೋಭಾವದ್ದಂದೆ ಅನ್ನಿಸುವುದಿಲ್ಲವೇ? ನೀವೇ ಸರಿಯಾಗಿ ಮತ್ತೊಮ್ಮೆ ಯೋಚಿಸಿ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ನಮಗಾಗಿ ಅಪ್ಪ ಒಮ್ಮೆಯೂ ​ರಜೆ ಹಾಕಲ್ಲ, ಕೇಳಿದ್ದನ್ನು ಕೊಟ್ರೆ ಸಾಕೆ? ತಂದೆ ಪ್ರೀತಿ ಬಯಸೋದೇ ತಪ್ಪಾ?

    ಈ ಪತ್ರವನ್ನು ಗುಟ್ಟಾಗಿ ಬರೆಯುತ್ತಿದ್ದೇನೆ. ಈ ನತದೃಷ್ಟೆಗೆ ದಯವಿಟ್ಟು ನೆರವಾಗಿ ಮೇಡಂ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts