

ನವದೆಹಲಿ: ನಿಮಗೆ ಎಷ್ಟೇ ಕೆಲಸವಿರಲಿ, ಎಷ್ಟೇ ಒತ್ತಡವಿರಲಿ. ಕೊನೆಯ ಪಕ್ಷ ದಿನಕ್ಕೆ ಕೇವಲ ಅರ್ಧಗಂಟೆಯನ್ನು ಫಿಟ್ನೆಸ್ಗಾಗಿ ಮೀಸಲು ಇರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕಿವಿ ಮಾತು ಹೇಳಿದರು.
ಫಿಟ್ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಆನ್‌ಲೈನ್ ಫಿಟ್ ಇಂಡಿಯಾ ಮೂವ್ಮೆಂಟ್ ಸಂವಾದ ಕಾರ್ಯಕ್ರಮದಲ್ಲಿ ಫಿಟ್ನೆಸ್ ದಿಗ್ಗಜರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ಜನರಿಗೆ ಎರಡು ಮಂತ್ರಗಳನ್ನು ಹೇಳಿದ್ದಾರೆ.
ಅವೆಂದರೆ ಫಿಟ್ನೆಸ್ ಡೋಸ್, ಆಧಾ ಘಂಟಾ ರೋಸ್; ಫಿಟ್ ಬನೋ, ಇಂಡಿಯಾ ಕೋ ಹಿಟ್ ಕರೋ (ಪ್ರತಿ ದಿನ ಅರ್ಧ ಗಂಟೆ ಫಿಟ್ನೆಸ್ಗೆ ಮೀಸಲು ಇಡಿ; ಪ್ರತಿಯೊಬ್ಬರೂ ಫಿಟ್ ಆಗಿರಿ, ಭಾರತವನ್ನು ಹಿಟ್ ಮಾಡಿ) ಎಂದು ಹೇಳಿದರು.
ಆರೋಗ್ಯವಿದ್ದರೆ ಭಾಗ್ಯ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ಆದ್ದರಿಂದ ಈಗಿನ ಸನ್ನಿವೇಶದಲ್ಲಿ, ಧಾವಂತದ ಬದುಕಿನಲ್ಲಿ ಕೊನೆಯ ಪಕ್ಷ ಅರ್ಧ ಗಂಟೆಯನ್ನು ಫಿಟ್ನೆಸ್ಗೆ ಮೀಸಲು ಇರಿಸಿ, ಅದು ಧ್ಯಾನ, ಯೋಗ, ಪ್ರಾಣಾಯಾಮ ಯಾವುದೇ ರೂಪದಲ್ಲಿ ಇರಬಹುದು ಎಂದು ಹೇಳಿದರು.
ಇದೇ ವೇಳೆ ಕರೊನಾ, ಲಾಕ್ಡೌನ್ ಸಮಯದಲ್ಲಿ ಮನೆಯವರೆಲ್ಲರೂ ಒಟ್ಟಿಗೇ ಇದ್ದು, ಫಿಟ್ನೆಸ್ಗೆ ಸಾಕಷ್ಟು ಮಹತ್ವ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ, ಮಾತ್ರವಲ್ಲದೇ ಮನೆಯವರೆಲ್ಲರೂ ಒಗ್ಗಟ್ಟಾಗಿದ್ದು, ಪರಸ್ಪರ ಅರ್ಥ ಮಾಡಿಕೊಳ್ಳಲು ಇದು ಉತ್ತಮ ಸಮಯವಾಗಿದೆ ಎಂದು ಹೇಳಿದರು.
ಕೇವಲ ಫಿಟ್ನೆಸ್ ಮಾಡಿ ಶರೀರವನ್ನು ಸಮರ್ಥ ಮಾಡಿಕೊಳ್ಳುವುದು ಮಾತ್ರವಲ್ಲದೇ ಮಾನಸಿಕವಾಗಿಯೂ ಸಮರ್ಥರಾಗುವುದು ಬಹುಮುಖ್ಯವಾದದ್ದು. ಕರೊನಾದ ಈ ಸಮಯದಲ್ಲಿ ಕುಟುಂಬದ ಸದಸ್ಯರೆಲ್ಲರೂ ಒಗ್ಗಟ್ಟಾಗಿ ಇದ್ದು, ಪ್ರೀತಿ ವಿಶ್ವಾಸದಿಂದ ಮಾನಸಿಕವಾಗಿಯೂ ಸದೃಢರಾಗಿ ಎಂದು ಪ್ರಧಾನಿ ಹೇಳಿದರು. ಅದರಲ್ಲಿಯೂ ಕರೊನಾದ ಈ ಬಿಕ್ಕಟ್ಟಿನ ಸಮಯದಲ್ಲಿ ಮಾನಸಿಕವಾಗಿ ಸದೃಢರಾಗಿ ಇರುವುದು ಬಹಳ ಮುಖ್ಯವಾಗಿದೆ. ಇದಕ್ಕಾಗಿ ಸ್ವಲ್ಪ ಸಮಯವನ್ನು ಧ್ಯಾನಕ್ಕಾಗಿ ಮೀಸಲು ಇರಿಸಬೇಕಿದೆ. ಹೀಗೆ ಮಾಡಿದರೆ, ಸಂಪೂರ್ಣವಾಗಿ ಮಾನಸಿಕ ಹಾಗೂ ಶಾರೀರಿಕವಾಗಿ ಫಿಟ್ನೆಸ್ ಪಡೆಯಬಹುದು ಎಂದು ಅವರು ಹೇಳಿದರು.