More

    ಮಗಳ ಶಿಕ್ಷಣ, ಮದುವೆ, ನಮ್ಮ ಭವಿಷ್ಯಕ್ಕೆಂದು ಇಟ್ಟ ಹಣವೆಲ್ಲಾ ಹೊಸ ಮನೆ ಗುಳುಂ ಮಾಡಿತ್ತು!

    ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್‌…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ….

    |ಪೂಣಿರ್ಮಾ ಗುರುದೇವ್​ ಭಂಡಾರ್ಕರ್​, ಹೊಸನಗರ

    1995ರಿಂದ ನಾವು ನಮ್ಮ ತಂದೆಯ ವಠಾರದಲ್ಲಿ ಬಾಡಿಗೆ ಕೊಟ್ಟು ಇದ್ದೆವು. 2002ರಲ್ಲಿ ಅದನ್ನು ತಂದೆ ಮಾರಾಟ ಮಾಡಲು ನಿಶ್ಚಯಿಸಿದ್ದರು. ಆಗ ನಾವೇ ಏಕೆ ಕೊಂಡುಕೊಳ್ಳಬಾರದು ಎನಿಸಿತು. ಅಪ್ಪ ಪುಕ್ಕಟೆ ಕೊಡುವೆ ಎಂದರೂ ಎರಡು ಪಟ್ಟು ಹಣ ಕೊಟ್ಟೇ ಖರೀದಿ ಮಾಡಿದೆವು. ಅಲ್ಲಿ ಹೊಸ ಮನೆ ಕಟ್ಟಿಸುವ ಮೊದಲು ನೀರಿನ ವ್ಯವಸ್ಥೆಯಾಗಬೇಕೆಂದು ಬಾವಿ ತೋಡಿಸುವ ಕೆಲಸ ಶುರುವಾಯ್ತು. 40 ಅಡಿ ತೋಡಿದರೂ ನೀರಿನ ದರ್ಶನವಿಲ್ಲ! ಹಾಸು ಬಂಡೆ ಎದುರಾಯಿತು. ಅದನ್ನು ತೆಗೆಸಲು ದಿನವೂ ರಾತ್ರಿ ಬಂಡೆ ಸಡಿಲಗೊಳಿಸಲು ಕುಣಿಯಲ್ಲಿ ರಾಸಾಯನಿಕ ಇಟ್ಟು ಸಣ್ಣ ಪ್ರಮಾಣದ ಸ್ಫೋಟ ಮಾಡಿದ್ದಾಯಿತು.

    ಅಕ್ಕಪಕ್ಕದವರ ತಕರಾರು. ಆದರೂ ಯಾವುದೇ ಹಾನಿಯಾಗದ ರೀತಿ 5 ಅಡಿ ಹಾಸು ಬಂಡೆ ಒಡೆಸಿದಾಗ ಅಲ್ಲಿ ಕಪ್ಪೆಗಳ ದರ್ಶನ ಆಯಿತು! ಆಗಲೇ ನೀರಿನ ಹರಿವು ಅಲ್ಲಿದೆ ಎಂದು ತಿಳಿಯಿತು. ಅಂತೂ 3 ಕಡೆ ಆ ಕಲ್ಲಿನ ಸಂದಿಯಿಂದ ನೀರು ಬರಲು ಶುರುವಾಯ್ತು. ಇನ್ನು ಮನೆ ಕಟ್ಟುವ ಕೆಲಸ ಶುರು ಮಾಡುವುದರಲ್ಲಿದ್ದೆವು. ಪರಿಚಿತರಿಂದೆಲ್ಲಾ “ಮನೆಕೆಲಸ ನಮಗೆ ಕೊಡಿಸಿ’ ಎಂದು ಇನ್ಫುಯೆನ್ಸ್​ ಶುರುವಾಯ್ತು. ಮರಳು, ಇಟ್ಟಿಗೆ, ಜಲ್ಲಿ ಕಲ್ಲು, ಸಿಮೆಂಟ್​ ಎಲ್ಲದಕ್ಕೂ ನಮ್ಮ ಹತ್ತಿರಾನೇ ತೆಗೆದುಕೊಳ್ಳಿ ಎನ್ನುವ ವರಾತ! ಮರದ ಕಿಟಕಿ, ಬಾಗಿಲು, ಟೈಲ್ಸ್​, ವಿದ್ಯುತ್​… ಎಲ್ಲ ಕೆಲಸಕ್ಕೂ ಹಲವರ ದುಂಬಾಲು! ಎಲ್ಲ ಆಯ್ತು. ಹಣ ಬೇಕಲ್ಲ?

    ಮಗಳ ಶಿಕ್ಷಣ, ಮದುವೆ, ನಮ್ಮ ಭವಿಷ್ಯಕ್ಕೆಂದು ಇಟ್ಟ ಹಣವೆಲ್ಲಾ ಹೊಸ ಮನೆ ಗುಳುಂ ಮಾಡಿತ್ತು!ನಾನು, ನನ್ನ ಪತಿ ಇಬ್ಬರೂ ಬ್ಯಾಂಕ್​ ಉದ್ಯೋಗಿಗಳು. ಸಾಲ ಪಡೆದಿದ್ದಾಯಿತು. ಆದರೆ ಅದೂ ಸಾಲದಾಯಿತು. ಪ್ರತಿ ವರ್ಷ ಜನವರಿ ಒಂದನೇ ತಾರೀಖಿಗೆ ಉಳಿತಾಯವೆಂದು ತೊಡಗಿಸುತ್ತಿದ್ದೆವು. ಅದು ಮಗಳ ವಿದ್ಯಾಭ್ಯಾಸ, ಮನೆ ಕಟ್ಟಿಸಲು, ಮದುವೆ, ನಿವೃತ್ತಿ ನಂತರದ ಖರ್ಚಿಗೆ ಎಂದು. ಅದೆಲ್ಲವನ್ನು ಮನಸ್ಸಿಲ್ಲದ ಮನಸ್ಸಿನಿಂದ ಮನೆ ಕಟ್ಟಲು ಬಳಸಬೇಕಾಯ್ತು. ಆದರೂ ಹಣ ಸಾಕಾಗಲಿಲ್ಲ.


    ಕುಟುಂಬಸ್ಥರಲ್ಲೆ ಆಪ್ತರು ಹಣ ಕೊಡಲು ಮುಂದೆ ಬಂದರು. ನಮಗದು ಮುಜುಗರ ತಂದಿತು. ಆದರೂ ಒಂದಿಬ್ಬರ ಬಳಿ ನಾವೇ ಕಂಡೀಷನ್​ ಹಾಕಿ ಹಣ ಪಡೆದೆವು. ಅವರ ಬ್ಯಾಂಕ್​ ಠೇವಣಿಯ ಮೇಲೆ ಸಾಲ ಪಡೆದು ಅದನ್ನು ಪ್ರತಿ ತಿಂಗಳು ಕಟ್ಟಲು ಶುರು ಮಾಡಿದೆವು! 15 ವರ್ಷದ ನಂತರ ಬಾಡಿಗೆಯವರನ್ನು ಬಿಡಿಸಿ ನಾವೇ ಈಗ ಮಗಳ ಮದುವೆಯ ಸಂದರ್ಭದಲ್ಲಿ ನಮ್ಮ ಮನೆಗೇ ವಾಸಕ್ಕೆ ಬಂದಿದ್ದೇವೆ! ಮನೆಯ ಹೆಸರು ಮಹಾಮಾಯಾ. ಮನೆ ಕಟ್ಟಿಸುವುದು ಎಂದರೆ ಮಹಾಮಾಯವೇ ಸರಿ!

    ಬ್ರಹ್ಮಚರ್ಯಪಾಲಕನಾಗಿದ್ದೆ… ಮನೆಕಟ್ಟಿ ಮುಗಿಯವವರೆಗೆ ವಾಚ್‌ಮನ್ನೂ ಆದೆ!

    ನಮಗೆ ಸಿಕ್ಕನೊಬ್ಬ ಕಾಂಟ್ರ್ಯಾಕ್ಟರ್‌… ಎಲ್ಲದಕ್ಕೂ ಹೂಂ ಗುಟ್ಟಿದ: ದುಡ್ಡು ತಗೊಂಡು ತೀರ್ಥಯಾತ್ರೆಗೆ ಎಸ್ಕೇಪ್‌ ಆದ!



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts