More

    ಬೆಂಗಳೂರಲ್ಲೊಂದು ಕುತೂಹಲದ ಕೇಸ್‌: ಸ್ಕೂಟರ್‌ ಕದ್ದು ಸಿಕ್ಕಿಬಿದ್ದ- ಇವನ ಬಳಿಯಿತ್ತು ವರ್ಷದ ಹಿಂದೆ ಕಾಣೆಯಾದ ಮಗು!

    ಬೆಂಗಳೂರು: ದ್ವಿಚಕ್ರವಾಹನ ಕದ್ದು ಬ್ಯಾಟರಾಯನಪುರ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಯ ಹಿನ್ನೆಲೆ ಕೆದಕಿದಾಗ ವರ್ಷದ ಹಿಂದೆ ಮಗು ಅಪಹರಣ ಮಾಡಿದ ಕೇಸ್ ಬೆಳಕಿಗೆ ಬಂದಿದ್ದು, ಮಗುವನ್ನು ಸುರಕ್ಷಿತವಾಗಿ ಪಾಲಕರ ಮಡಿಲಿಗೆ ಸೇರಿಸಲಾಗಿದೆ.

    ಮೈಸೂರು ರಸ್ತೆ ಶಾಮಣ್ಣ ಗಾರ್ಡನ್ ನಿವಾಸಿ ಕಾರ್ತಿಕ್ (34) ಬಂಧಿತ. ಶಾಮಣ್ಣ ಗಾರ್ಡನ್‌ನ ಅರ್ಬಿನ್ ತಾಜ್, ಆಯಾಜ್ ಪಾಷಾ ದಂಪತಿಗೆ ಪುತ್ರ ಅಲಿಖಾನ್ (3) ಕಾಣೆಯಾಗಿ ಪತ್ತೆಯಾದ ಮಗು.

    ಆಯಾಜ್ ಪಾಷಾ ಪ್ಲಾಸ್ಟಿಕ್ ವ್ಯಾಪಾರ ಮಾಡುತ್ತಿದ್ದರೆ, ಅರ್ಬಿನ್ ಮನೆ ಕೆಲಸಕ್ಕೆ ಹೋಗುತ್ತಿದ್ದರು. ದಂಪತಿಗೆ ಅಲಿಖಾನ್ ಹಾಗೂ ಉಮಾರ್ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಈ ಪೈಕಿ ಉಮಾರ್ ಮೃತಪಟ್ಟಿದ್ದ. 2020 ನ.11ರಂದು ಮಧ್ಯಾಹ್ನ 3 ಗಂಟೆಗೆ ಅಲಿಖಾನ್ ಮನೆ ಬಳಿ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಆತನನ್ನು ಗಮನಿಸಿದ ನೆರೆ ಮನೆ ನಿವಾಸಿ ಆರೋಪಿ ಕಾರ್ತಿಕ್ ಚಾಕಲೇಟ್ ಕೊಡಿಸುವುದಾಗಿ ಅಲಿಖಾನ್‌ನನ್ನು ಅಪಹರಣ ಮಾಡಿದ್ದ. ಕಾರ್ತಿಕ್‌ನ ಪರಿಚಿತ ಸರ್ಜಾಪುರದ ನಿವಾಸಿ ಜಗನ್ ಸಹೋದರನಿಗೆ ಮಕ್ಕಳಿರಲಿಲ್ಲ. ಹೀಗಾಗಿ ಆತ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದ.

    ಇದನ್ನು ಅರಿತಿದ್ದ ಕಾರ್ತಿಕ್, ತಾನು ಅಪಹರಿಸಿದ್ದ ಅಲಿಖಾನ್‌ನ್ನು ಜಗನ್‌ಗೆ ಒಪ್ಪಿಸಿದ್ದ. ನನಗೆ ನಾಲ್ವರು ಮಕ್ಕಳಿದ್ದು, ಇಷ್ಟು ಮಂದಿ ಮಕ್ಕಳನ್ನು ಸಾಕಲು ಕಷ್ಟವಾಗುತ್ತದೆ. ಹೀಗಾಗಿ ಒಂದು ಮಗುವನ್ನು ನಿಮಗೆ ಕೊಡುತ್ತಿದ್ದೇನೆ ಎಂದು ಸುಳ್ಳು ಹೇಳಿದ್ದ. ನನ್ನ ಉಳಿದ ಮೂವರು ಮಕ್ಕಳನ್ನು ಸಾಕಲು 60 ಸಾವಿರ ರೂ. ಕೊಡುವಂತೆ ಕಾರ್ತಿಕ್ ಹಣಕ್ಕೆ ಬೇಡಿಕೆಯಿಟ್ಟದ್ದ. ಆತನ ಮಾತನ್ನು ನಂಬಿದ ಜಗನ್ 60 ಸಾವಿರ ರೂ. ಕೊಟ್ಟು, ಅಲಿಖಾನ್‌ನ್ನು ತನ್ನ ಅತ್ತಿಗೆ ಸುಮಿತ್ರಾಗೆ ಕೊಟ್ಟಿದ್ದ.

    ಇತ್ತ ಅರ್ಬಿನ್ ತಾಜ್ ದಂಪತಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಮಗು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಕಳೆದ 1 ವರ್ಷಗಳಿಂದ ಮಗುವನ್ನು ಸುಮಿತ್ರಾ ದಂಪತಿ ಸಾಕಿ-ಸಲಹುತ್ತಿದ್ದರು.

    ಸ್ಕೂಟರ್ ಕದ್ದು ಸಿಕ್ಕಿಬಿದ್ದ: ಮೈಸೂರು ರಸ್ತೆಯ ನಿವಾಸಿ ಸೈಯ್ಯದ್ ಕರೀಂ ಜು.13ರಂದು ತಮ್ಮ ಡಿಯೋ ಸ್ಕೂಟರ್‌ನಲ್ಲಿ ಹೊಸಗುಡ್ಡದಹಳ್ಳಿಯ ಮಂಜುನಾಥನಗರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಮನೆ ಮುಂದೆ ದ್ವಿಚಕ್ರವಾಹನ ನಿಲುಗಡೆ ಮಾಡಿದ್ದರು. ಅದೇ ದಿನ ರಾತ್ರಿ ಕಾರ್ತಿಕ್ ಸ್ಕೂಟರ್ ಕಳ್ಳತನ ಮಾಡಿ ಕಡಿಮೆ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಲು ಮುಂದಾಗಿದ್ದ. ಕರೀಂ ಸ್ಕೂಟರ್ ಕಳ್ಳತನವಾಗಿರುವ ಬಗ್ಗೆ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಆ.26ರಂದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ಹಿನ್ನೆಲೆ ಕೆದಕಿದಾಗ, 1 ವರ್ಷದ ಹಿಂದೆ ಮಗುವನ್ನು ಕಳ್ಳತನ ಮಾಡಿರುವ ವಿಚಾರವನ್ನು ತಿಳಿಸಿದ್ದ.

    ಈ ಮಾಹಿತಿ ಆಧರಿಸಿ ಸುಮಿತ್ರಾ ದಂಪತಿಯನ್ನು ಸಂಪರ್ಕಿಸಿದ ಪೊಲೀಸರು ಈ ಬಗ್ಗೆ ಪ್ರಶ್ನಿಸಿದಾಗ ನಿಜ ಸಂಗತಿ ಬಯಲಾಗಿದೆ. ಮಗುವನ್ನು ಅರ್ಬಿನ್ ದಂಪತಿಗೆ ಒಪ್ಪಿಸಲಾಗಿದೆ.

    ಹಣದ ಆಸೆಗಾಗಿ ಕೃತ್ಯ: ಕಾರ್ತಿಕ್ ದ್ವಿಚಕ್ರವಾಹನ ಕಳ್ಳತನದಲ್ಲಿ ಆಗಾಗ ಭಾಗಿಯಾಗುತ್ತಿದ್ದ. ಹಣದ ಆಸೆಗಾಗಿ ಮಗುವನ್ನು ಅಪಹರಣ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದ. ಅಲಿಖಾನ್‌ನ್ನು ಸಾಕುತ್ತಿದ್ದ ಸುಮಿತ್ರಾ ದಂಪತಿಗೆ ಮಕ್ಕಳು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಮಗುವನ್ನು ದತ್ತು ಪಡೆಯಲು ಮುಂದಾಗಿದ್ದರು.

    ‘ರೇಪ್‌ ಮಾಡೋ ಯೋಚ್ನೆ ಇರ್ಲಿಲ್ಲ… ಮೂರು ದಿನ ಇದೇ ಜಾಗದಲ್ಲಿ ನೋಡಿ ನಾಲ್ಕನೇ ದಿನ ಹೀಗೆ ಮಾಡಿದ್ವಿ’

    ವಾಯುಭಾರ ಕುಸಿತ: ನಾಳೆಯಿಂದ ಭಾರಿ ಮಳೆ ಸಾಧ್ಯತೆ- 12 ಜಿಲ್ಲೆಗಳಲ್ಲಿ ಹೈ ಅಲರ್ಟ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts