More

    ಶಾಂತಸಾಗರದ ತಳದ ಕೊಳಕು ಸ್ವಚ್ಛ ಮಾಡುವ ಮಹಾನ್ ಏಡಿ!

    | ಸುರೇಶ್ ಮರಕಾಲ ಸಾಯ್ಬರಕಟ್ಟೆ

    ನನ್ನ ಅನೇಕ ಸ್ನೇಹಿತರ ಮನೆಗಳು ಸಮುದ್ರ ತೀರದ ಹತ್ತಿರದಲ್ಲಿವೆ. ಆಗಾಗ್ಗೆ ಅವರ ಮನೆಗಳಿಗೆ ಹೋದಾಗ – ದೇವರ ತಲೆಗೆ ಹೂ ತಪ್ಪಿದರೂ ಇದು ಮಾತ್ರ ತಪ್ಪಲಿಕ್ಕಿಲ್ಲ ಎಂಬಂತೆ- ಸಮುದ್ರ ತೀರಕ್ಕೆ ಹೋಗಿ, ದಡದಲ್ಲಿ ಅಡ್ಡಾಡುವುದು ಮಾತ್ರ ತಪ್ಪುವುದಿಲ್ಲ! ಸಮುದ್ರ ದಡದಲ್ಲಿ ನಡೆದಾಡುವವರೆಲ್ಲ ತೆರೆಗಳು ಬಂದು ಹೋಗಿ ಮರಳೆಲ್ಲ ಒದ್ದೆಯಾಗಿರುವ ತೀರದಲ್ಲಿ ಒಂದೇ ಒಂದು ದೊಡ್ಡ ಕೊಂಬುಕಾಲಿನ ‘ಚೋಣ’ನನ್ನು ನೋಡಿರುತ್ತೇವೆ. ಮರಳ ಮೇಲೆ ನಡೆಯುವಾಗ ಈ ಅಸಂಖ್ಯ ಚಿಕ್ಕಚಿಕ್ಕ ಏಡಿರೂಪದ ‘ಚೋಣ’ಗಳು ಇನ್ನೇನು ಕಾಲ ತುಳಿತಕ್ಕೆ ಸಿಕ್ಕಿ ಸತ್ತೇ ಹೋದವೇನೋ ಎಂಬಷ್ಟು ಕಾಲಡಿ ಓಡಾಡುತ್ತವೆ. ದಿಗಿಲಾಗಿ ಕಾಲೆತ್ತಿ ನೋಡಿದರೆ ಅಲ್ಲಿ ಅವುಗಳ ಸುಳಿವೇ ಇರುವುದಿಲ್ಲ- ಇರುವುದು ನಾವು ಹಾಕಿದ್ದ ಚಪ್ಪಲಿಯ ಗುರುತು ಮಾತ್ರ! ಆ ಹೊತ್ತಿಗಾಗಲೇ ಚೋಣ ನಮ್ಮಿಂದ ಹತ್ತಾರು ಮಾರು ದೂರ ಓಡಿಹೋಗಿ ನಿಂತುಕೊಂಡು, ಹ್ಯಾಪು ಮೋರೆ ಹಾಕಿ ನಿಂತಿರುವ ನಮ್ಮತ್ತ ತನ್ನ ಕೊಂಬು ಕಾಲನ್ನು ತಲೆಯ ಮೇಲೆ ಎತ್ತಿ ಮಸೆಯುತ್ತಿರುತ್ತದೆ!

    ನೋಡಲು ಏಡಿಗಳು ಬಲು ವಿಚಿತ್ರ ಪ್ರಾಣಿ! ಒಂದು ಕಡೆಯಿಂದ ನೋಡಿದರೆ ಜೇಡನಂತೆ ಕಾಣುವ, ಆದರೆ ಜೇಡನಲ್ಲದ, ಮಾಂಸಾಹಾರಿ ಪ್ರಿಯರು ಬಹು ಪ್ರೀತಿಸುವ ಆಹಾರವಿದು. ಏಡಿಗಳೇ ಹಾಗೆ, ಬಲು ಚುರುಕು! ಜೊತೆಗೆ ಬಲು ಜೋರು! ಮೊದಲ ಮಳೆನೀರು ಬಿತ್ತೆಂದರೆ ಮೀನಿಗಿಂತ ಮೊದಲು ಆನಂದದಲ್ಲಿ ಹರಿದಾಡುವುದು -ಕಪ್ಪೆಗಳ ನಂತರ- ಏಡಿಗಳೇ! ಹೊಗೆಮೀನು ಅಥವಾ ಹತ್ತುಮೀನು ಹೊಡೆಯಲು ಹೋದಾಗ ನಮ್ಮ ಚೀಲದಲ್ಲಿ ಬಹುಪಾಲು ಏಡಿಗಳೇ ತುಂಬಿರುತ್ತದೆ! ಈ ಮೊದಲು ಹೇಳಿದ- ಸಮುದ್ರ ದಂಡೆಯಲ್ಲಿ ಹೆಜ್ಜೆಗೊಂದರಂತೆ ಸಿಗುವ – ಚೋಣ ಸುಮಾರು ಅಡಿಕೆ ಕಾಯಿ ಗಾತ್ರದ್ದಾದರೆ, ಈಗ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಸಹೋದರ ದಿನಕರನ ಜೊತೆಗೆ ವರ್ಷಕ್ಕೆ ಐದಾರು ಬಾರಿ ಪಾರಂಪಳ್ಳಿ, ಗುಂಡ್ಮಿ ಕಡೆಗಿನ ಉಪ್ಪುನೀರಿನ ಹೊಳೆಯ ಕಾಂಡ್ಲಾ ಮರಗಳ ಬುಡದಲ್ಲಿ – ಯಾರಾದರೂ ಪರಿಚಯವಿಲ್ಲದವರು ನಮ್ಮನ್ನು ಕಂಡರೆ ಥೇಟ್ ಕಿಳ್ಳೆಕ್ಯಾತರ ಹಾಗೆ ಅವತಾರವೆತ್ತಿಕೊಂಡಿರುತ್ತಿದ್ದ ನಾವು – ಕೈಗೊಂದು ಸಣ್ಣ ಬಟ್ಟೆಯನ್ನು ಸುತ್ತಿಕೊಂಡು ಹೆಜ್ಜೆಗೊಂದರಂತೆ ಕೊರೆದಿರುವ ಮಣ್ಣಿನ ಮಾಟೆಯೊಳಗೆ ಕೈಹಾಕಿ ಹಿಡಿಯುತ್ತಿದ್ದ ಕಪ್ಪು ಏಡಿಗಳು ಇನ್ನೂ ದೊಡ್ಡವು- ಸುಮಾರು ಕಾಲು ಕೆ.ಜಿ.ಯವರೆಗೂ ತೂಗುತ್ತವೆ! ಆದರೆ ಇಂದು ಮತ್ತು ನಾಳೆ ನಾವು ತಿಳಿದುಕೊಳ್ಳಲು ಹೊರಟಿರುವುದು ಅಂತಿಂತಹಾ ಏಡಿಗಳನ್ನಲ್ಲ, ಪ್ರಪಂಚದ ಎರಡು ರಾಕ್ಷಸ ಗಾತ್ರದ ಏಡಿಗಳನ್ನು! ಇವೆರಡು ಎಷ್ಟು ದೊಡ್ಡ ಗಾತ್ರದವು ಎಂದರೆ, ಏಡಿ ಪ್ರಿಯರು- “ಅಯ್ಯೋ!, ಇವುಗಳು ನಮ್ಮೂರಿನಲ್ಲಾದರೂ ಇರಬಾರದಿತ್ತೇ?…” ಎಂದು ಮರುಗಬಹುದು!!

    ಶಾಂತಸಾಗರದ ತಳದ ಕೊಳಕು ಸ್ವಚ್ಛ ಮಾಡುವ ಮಹಾನ್ ಏಡಿ!

    ಇಂದು ನಾವು ಮುಟ್ಟಲಿರುವ ದೈತ್ಯಾಕಾರದ ಏಡಿ- ಪ್ರಪಂಚದಲ್ಲೆ ಅತೀ ಉದ್ದನೆಯ ಕಾಲುಗಳಿರುವ ಜಪಾನಿನನ “ಜೇಡಏಡಿ”. Inachidae ಕುಟುಂಬಕ್ಕೆ ಸೇರಿದ ಇವುಗಳ ವಾಸ ಜಪಾನಿನನ ಪೆಸಿಫಿಕ್ ಸಾಗರದಲ್ಲಿ. ಇವುಗಳ ಉದ್ದನೆಯ ಕಾಲುಗಳಿಂದಾಗಿಯೇ, ಜೇಡಏಡಿಯನ್ನು ಜಪಾನೀಯರು ‘ತಕಾಶಿಗಾನಿ’; ಎಂದರೆ ಉದ್ದ ಕಾಲಿನ ಏಡಿ ಎಂದೇ ಕರೆಯುತ್ತಾರೆ. ಇವುಗಳ ಕಾಲುಗಳ ಉದ್ದವನ್ನು ಕೇಳಿದರೆ ಹೌಹಾರುತ್ತೀರಿ! ಬರೋಬ್ಬರಿ 3.8 ಮೀಟರ್; ಎಂದರೆ ಹತ್ತಿರತ್ತಿರ ಹನ್ನೆರಡು ಅಡಿ ಉದ್ದದ (ಸುಮಾರು ಎರಡಾಳು ಉದ್ದದ!) ಕಾಲುಗಳು ಇವುಗಳಿಗಿವೆ!! ಈ ಉದ್ದನೆಯ ಲಂಬೂ ಕಾಲುಗಳಿಂದಾಗಿ ಜೇಡ ಏಡಿಯು ನೀರಿನಲ್ಲಿ ವಾಸಿಸುವ ಜೀವಿಗಳಲ್ಲೇ ಅತ್ಯಂತ ಉದ್ದನೆಯ ಕಾಲುಗಳನ್ನು ಹೊಂದಿರುವ ಜೀವಿಯೆಂಬ ಖ್ಯಾತಿಗೆ ಪಾತ್ರವಾಗಿದೆ! ಮಧ್ಯ ದೇಹದ ಸುತ್ತಳತೆಯೇ ಸುಮಾರು ಹದಿನಾರು ಇಂಚುಗಳು! ಸರಿಯಾಗಿ ಬೆಳೆದ ಜೇಡಏಡಿಗಳು ಏನಿಲ್ಲವೆಂದರೂ ಹತ್ತೊಂಬತ್ತು ಕೆ.ಜಿ.ಗಿಂತಲೂ ಹೆಚ್ಚು ತೂಗುತ್ತವೆ; ಎಂದರೆ ಪೊಗದಸ್ತಾಗಿ ಬೆಳೆದ ಒಂದು ಕುರಿಗಿಂತಲೂ ಭಾರ!!

    ಜೇಡಏಡಿಗಳ ಬಣ್ಣ ಕಡು ಕಿತ್ತಳೆ- ಅದರ ಮೇಲೆ ಬಿಳಿ ಬಣ್ಣದ ಚುಕ್ಕಿಗಳು. ಹುಟ್ಟಿದ ಮರಿಗಳ ಮೈಮೇಲೆ ಉದ್ದನೆಯ ರೋಮಗಳು ಹಾಗೂ ಚೂಪಾದ ಮುಳ್ಳುಗಳು ಇರುತ್ತವೆ. ಆದರೆ ದೊಡ್ಡದಾದ ಹಾಗೆ ರೋಮಗಳು ಮತ್ತು ಮುಳ್ಳುಗಳು ನಶಿಸಿ ಹೋಗುತ್ತವೆ! ಜೇಡ ಏಡಿಯ ಆಹಾರ ಪ್ರಮುಖವಾಗಿ ಸತ್ತು ಸಾಗರ ತಳ ಸೇರುವ ಎಲ್ಲಾ ರೀತಿಯ ಜೀವಿಗಳು! ಹೀಗಾಗಿ ಜೇಡಏಡಿ ಸಾಗರದ ಪ್ರಮುಖ ಜಾಡಮಾಲಿಗಳು ಅಥವಾ ಸ್ವಚ್ಛತಾಗಾರರು!! ಭೂಮಿಯ ಮೇಲೆ ಸತ್ತ ಪ್ರಾಣಿಗಳ ಅವಶೇಷವನ್ನು ತಿಂದು ಪ್ರಕೃತಿಯನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಕಾಗೆ, ಇರುವೆ, ಹದ್ದು, ಗಿಡುಗಗಳು, ಹೈನಾಗಳು ಮಾಡಿದರೆ, ಸಾಗರ ತಳದ ಸ್ವಚ್ಛತೆಯನ್ನು ಬರಾಕುಡಾ, ಟ್ಯೂನಾ, ಶಾರ್ಕ್‌ಗಳು ಮಾಡುತ್ತವೆ. ಜಪಾನ್ ಸುತ್ತಮುತ್ತಲ ಶಾಂತಸಾಗರದ ತಳದ ಕೊಳಕನ್ನು ಸ್ವಚ್ಛ ಮಾಡುವ ಮಹಾನ್ ಕಾರ್ಯವನ್ನು ಜೇಡ ಏಡಿ ಮಾಡುತ್ತದೆ! ಸತ್ತ ಪ್ರಾಣಿಗಳನ್ನು ಭಕ್ಷಿಸುವುದರ ಜೊತೆಗೆ ಇವುಗಳು ಸಾಗರ ತಳದ ಆಲ್ಗೆಗಳು, ಸಮುದ್ರ ಗಿಡಗಳು, ಮೃದ್ವಂಗಿಗಳು ಹಾಗೂ ಸಣ್ಣ ಮೀನುಗಳನ್ನೂ ತಮ್ಮ ಆಹಾರವಾಗಿ ಬಳಸುತ್ತವೆ. ಆದರೆ ಜಪಾನಿನನ ಮೀನುಗಾರರಿಗೆ ಮಾತ್ರ ಇವುಗಳನ್ನು ಕಂಡರೆ ಆಗದು!!- ಏಕೆಂದರೆ ಅವರು ಹಾಕುವ ಬಲೆಗಳನ್ನು ಕಚ್ಚಿ ಪುಡಿಮಾಡಿ ಆಳೆತ್ತರದ ರಂದ್ರ ಕೊರೆದು, ಆ ಬಲೆ ಮುಂದೆ ಯಾವುದಕ್ಕೂ ಬಳಕೆ ಬಾರದ ಹಾಗೆ ಮಾಡಿಬಿಡುತ್ತವೆ!

    ಮೇಲ್ನೋಟಕ್ಕೆ ವಿಭಿನ್ನವಾಗಿ ಕಾಣುವ ಜೇಡಏಡಿಗಳು, ಇನ್ನೂ ಹಲವಾರು ವಿಚಾರಗಳಿಂದಾಗಿ ವಿಶಿಷ್ಟವಾದ ಏಡಿಗಳೆನಿಸಿವೆ. ಎಲ್ಲ ಏಡಿಗಳಂತಲ್ಲ ಇವು! ಜೇಡಏಡಿಯ ಜೀವಿತ ಅವಧಿಯೇ ನೂರು ವರ್ಷಗಳು!! ಪ್ರಪಂಚದ ಯಾವ ಏಡಿಯೂ ಇಷ್ಟು ದೀರ್ಘಕಾಲ ಬದುಕಲಾರದು! ಬಹುತೇಕ ಎಲ್ಲಾ ಏಡಿಗಳು ನೆಲದ ಮೇಲೋ, ನೀರಿನಲ್ಲಾದರೆ- ಕಡಿಮೆ ಆಳದಲ್ಲೋ ಜೀವಿಸಿದರೆ, ಜೇಡಏಡಿಗಳು ಅತ್ಯಂತ ಆಳದ ನೀರಿನಲ್ಲೆ- ಎಂದರೆ ಐವತ್ತು ಮೀಟರ್ ಆಳದಿಂದ ಆರುನೂರು ಮೀಟರ್ ಆಳದವರೆಗೆ ಜೀವಿಸುತ್ತವೆ! ಹೀಗಾಗಿ ಇವುಗಳನ್ನು ಮೀನುಗಾರಿಕೆ ಮಾಡುವುದು ಅದೇನು ಹುಡುಗಾಟಿಕೆಯ ಮಾತಲ್ಲ!! ಹಾಗಂತ ಕಷ್ಟಪಟ್ಟು ಹಿಡಿದರೆ ಮೀನುಗಾರರ ಮುಖದಲ್ಲಿ ಖುಷಿಗೇನೂ ಬರವಿಲ್ಲ! ಏಕೆಂದರೆ ಚೆನ್ನಾಗಿ ಬೆಳೆದ ಒಂದೊಂದು ಏಡಿಯೂ ಮೂವತ್ತೈದರಿಂದ ನಲವತ್ತೈದು ಡಾಲರ್‌‌ಗಳವರೆಗೆ ಮಾರಾಟವಾಗುತ್ತದೆ. ಎಂದರೆ ಒಂದೊಂದು ಏಡಿಗೂ ಏನಿಲ್ಲವೆಂದರೂ ಸುಮಾರು ಎರಡೂವರೆ ಸಾವಿರ ರೂಪಾಯಿಗಳಿಗೆ ಮೋಸವಿಲ್ಲ!! ಮೀನುಗಾರರ ಕಿಸೆ ತುಂಬಾ ಕಾಂಚಾಣದ ಝಣ-ಝಣ!

    ಶಾಂತಸಾಗರದ ತಳದ ಕೊಳಕು ಸ್ವಚ್ಛ ಮಾಡುವ ಮಹಾನ್ ಏಡಿ!

    ಜೇಡಏಡಿಯ ಇನ್ನೊಂದು ವಿಶೇಷತೆಯೆಂದರೆ, ಹೆಣ್ಣು ಏಡಿಗಳ ವಂಶಾಭಿವೃದ್ಧಿ ವಿಚಾರದಲ್ಲಿ. ಪ್ರಪಂಚದ ಕೆಲವೇ ಪ್ರಾಣಿವರ್ಗದಂತೆ, ಜೇಡ ಏಡಿಯ ಗಂಡು-ಹೆಣ್ಣುಗಳ ಒಂದೇ ಒಂದು ಮಿಲನ, ಮುಂದೆ ಹೆಣ್ಣು ಅನೇಕ ವರ್ಷಗಳ ಕಾಲ ಮೊಟ್ಟೆಯಿಡಲು ಸಾಕಾಗುತ್ತದೆ. ಇದಕ್ಕಾಗಿ ಪ್ರತೀವರ್ಷವೂ ಗಂಡಿನೊಡನೆ ಹೆಣ್ಣು ಏಡಿ ಸೇರಬೇಕಾದ ಅಗತ್ಯವೇ ಇರುವುದಿಲ್ಲ! ಜೇಡಏಡಿ ನೋಡಲು ಭಯಂಕರವಾಗಿ ಕಂಡರೂ ಅವುಗಳು ನಮ್ಮ ಯೋಚನೆಗೂ ಮೀರಿದ ಸೌಮ್ಯ ಸ್ವಭಾವದವುಗಳು! ಎಷ್ಟು ಸೌಮ್ಯಸ್ವಭಾದವುಗಳೆಂದರೆ, ಅವು ನಮ್ಮೂರಿನ ಚಿಕ್ಕ ಚಿಕ್ಕ ಏಡಿಗಳಷ್ಟೂ ಜೋರಾಗಿರುವುದಿಲ್ಲ! ಜೊತೆಗೆ, ಅಷ್ಟೊಂದು ಉದ್ದನೆಯ ಕಾಲುಗಳು ಇರುವುದರಿಂದ, ಪಿ.ಟಿ.ಉಷಾಳ ರೀತಿ ನಾಗಾಲೋಟದಲ್ಲಿ ಓಡಬಹುದು ಅಂದುಕೊಂಡರೆ ಖಂಡಿತಾ ತಪ್ಪಾಗುತ್ತದೆ!! ಎರಡಾಳು ಉದ್ದದ ಕಾಲುಗಳನ್ನು ಹೊಂದಿದ್ದರೂ ಜೇಡ ಏಡಿ ಅತ್ಯಂತ ನಿಧಾನಿ! ಆದರೆ ಅವುಗಳ ವಲಸೆಯ ಕ್ರಮ ಮಾತ್ರ ಬಹಳ ವಿಚಿತ್ರವಾಗಿದೆ. ಸದಾ ಅಲೆದಾಡುತ್ತಲೇ ಇರುವ ಇವುಗಳು ಆಹಾರ ಹುಡುಕಿಕೊಂಡು ವರ್ಷದ ಎಂಟು ತಿಂಗಳುಗಳಲ್ಲಿ ಕನಿಷ್ಟವೆಂದರೂ ನೂರೈವತ್ತರಿಂದ ನೂರಾಅರವತ್ತು ಕಿಲೋಮೀಟರ್ ಕ್ರಮಿಸಬಲ್ಲವು!

    ಇನ್ನೊಂದು ವಿಶೇಷತೆ; ಅವುಗಳ ಮೊಟ್ಟೆ ಇಡುವ ಕ್ರಮದಲ್ಲಿ! ಜೇಡಏಡಿ ಜೀವಿಸುವುದು ಸಾಗರದ ಪಾತಾಳ ಆಳದಲ್ಲಿಯಾದರೂ, ಮೊಟ್ಟೆಯಿಡಲು ಅವುಗಳು ಆಳವೇ ಇಲ್ಲದ ನೀರಿನೆಡೆಗೆ ಬರುತ್ತವೆ. ವರ್ಷದ ವಸಂತ ಕಾಲದಲ್ಲಿಯೇ ಅವುಗಳು ಮೊಟ್ಟೆಯಿಡುವುದು. ಹೀಗಾಗಿ ಆಳವಿಲ್ಲದ ನೀರಿನಲ್ಲಿ ಮೊಟ್ಟೆಯಿಡುವಾಗ ಮಾತ್ರ ಜೇಡ ಏಡಿಯನ್ನು ಸುಲಭವಾಗಿ ಹಿಡಿಯಬಹುದು. ಅತ್ಯಂತ ಆಳದಲ್ಲಿ ವಾಸಿಸುವ, ಹಿಡಿಯಲು ಅತ್ಯಂತ ಕಠಿಣವಾದ, ಕಿಸೆತುಂಬಾ ಹಣ ತುಂಬಿಸಬಲ್ಲ ಏಡಿಗಳನ್ನು ಮೊಟ್ಟೆಯಿಡುತ್ತಿರುವಾಗ ಈಗ ನಿರಾಯಾಸವಾಗಿ ಹಿಡಿಯಬಹುದಾದರೂ, ಜಪಾನಿನಲ್ಲಿ ಯಾರೂ ಈ ಕಾಲದಲ್ಲಿ ಅವುಗಳನ್ನು ಹಿಡಿಯುವುದಿಲ್ಲ. ಜಪಾನೀಯರಿಗೆ ತಮ್ಮ ಜೀವ ವೈವಿಧ್ಯದ ಬಗ್ಗೆ ಎಷ್ಟೊಂದು ಆಸ್ಥೆಯೆಂದರೆ, ಮೊಟ್ಟೆ ಹಾಕುವ ಕಾಲದಲ್ಲಿ ಜೇಡ ಏಡಿಯನ್ನು ಯಾರೂ ಹಿಡಿಯುವುದಿಲ್ಲ. ಅಪ್ಪಿತಪ್ಪಿ ಹಿಡಿದವರನ್ನು ಉಳಿದವರು ತುಚ್ಛ ಭಾವನೆಯಿಂದ ಕಾಣುತ್ತಾರೆ, ಜೊತೆಗೆ ಅಂಥವರನ್ನು ಇತರ ಮೀನುಗಾರರು ತಮ್ಮೊಂದಿಗೆ ಮೀನುಗಾರಿಕೆಗೆ ಸೇರಿಸಿಕೊಳ್ಳುವುದೇ ಇಲ್ಲ! ಅಷ್ಟೇ ಏಕೆ, ಮೊಟ್ಟಯಿಡುವಾಗ ಹಿಡಿದ ಏಡೆಯೆಂದು ತಿಳಿದರೆ, ಅರ್ಧ ಬೆಲೆಗೆ ಮಾರುತ್ತೇನೆ ಎಂದರೂ ಮಾರುಕಟ್ಟೆಯಲ್ಲಿ ಒಬ್ಬ ಜಪಾನಿ ಕೂಡಾ ಅವನ ಹತ್ತಿರವೂ ಸುಳಿಯುವುದಿಲ್ಲ!

    “ಮಳೆಗಾಲದಲ್ಲಿ ಮೀನುಗಾರಿಕೆ ಮಾಡಬಾರದು” ಎಂದರೆ ಅದನ್ನು ಕಿವಿಗೇ ಹಾಕಿಕೊಳ್ಳದೆ ಮೀನುಗಳ ಮರಿಮೊಟ್ಟೆಯನ್ನೂ ಬಿಡದೆ ಗುಡಿಸಿ ಗುಂಡಾಂತರ ಮಾಡುವ, ಸಾವಿರಾರು ವ್ಯಾಟ್‌ನ ಚೀನಾ ಬಲ್ಬ್‌ಗಳನ್ನು ಹಾಕಿಕೊಂಡು ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡುವ ಲೈಟ್‌ಮೀನುಗಾರಿಕೆಯ ನಮ್ಮ ದೇಶದ ಜನರು ಜಪಾನಿನವರಿಂದ ಕಲಿಯುವುದು ಎಷ್ಟಿದೆಯೆಂಬುದನ್ನು ಯೋಚಿಸಿದರೇ ಮನಸ್ಸು ಪಿಚ್ಚೆನಿಸುತ್ತದೆ! ಎರಡನೇ ಮಹಾಯುದ್ಧದ ನಂತರ ಅಣುಬಾಂಬ್ ದಾಳಿಯಿಂದ ಇಡೀ ಪ್ರಪಂಚವೇ- ಜಪಾನ್ ಇನ್ನೆಂದೂ ಬದುಕಲಾರದು ಎಂದು ಅಂದುಕೊಂಡರೆ, ಕೇವಲ ಎಪ್ಪತ್ತೈದೇ ವರ್ಷಗಳಲ್ಲಿ – ಯಾವ ಪ್ರಪಂಚ ತಮ್ಮನ್ನು ಅಪಹಾಸ್ಯದ ದೃಷ್ಟಿಯಲ್ಲಿ ಕಂಡಿತ್ತೋ, ಅದೇ ಜಗತ್ತಿನೆದುರು ಕಲೆ, ಸಾಹಿತ್ಯ, ವಿಜ್ಞಾನಗಳಲ್ಲಿ ತ್ರಿವಿಕ್ರಮ ರೂಪದಲ್ಲಿ ಬೆಳೆದು ನಿಂತಿದೆ?! ಇಡೀ ಜಗತ್ತೇ ಜಪಾನಿನ ಸಂಸ್ಕೃತಿಯನ್ನು, ಅಲ್ಲಿನ ಯುವಜನಾಂಗ ಇಂದು ಮೈಗೂಡಿಸಿಕೊಳ್ಳುತ್ತಿರುವ ಸಭ್ಯತೆಯನ್ನು ಕೊಂಡಾಡುವ ಮಟ್ಟಿಗೆ ಬೆಳೆದು ನಿಂತಿದೆ! ಅದೇ ನಾವು ಭಾರತೀಯರು, ಸಾವಿರಾರು ವರ್ಷಗಳ ಭಾರತೀಯ ಸಂಸ್ಕೃತಿಯ ಆಸ್ತಿಯ ವಾರಾಸುದಾರರಾಗಿದ್ದರೂ, ಅಬ್ಬೇಪಾರಿಗಳಂತೆ ಯಾವುದೋ ತಾಳತಂತಿಯಿಲ್ಲದ ಅರ್ಥಹೀನ ಬದುಕಿನತ್ತ ವಾಲಿದ್ದೇವಲ್ಲ?! ಎಲ್ಲಿ ತಪ್ಪಿದ್ದೇವೆ ನಾವು?! ಮಕ್ಕಳನ್ನು ಬೆಳೆಸುವ ಮನೆಯವರೇ ಸಂಸ್ಕೃತಿವಿಹೀನರಾಗಿದ್ದೇವೆಯೇ? ನಾವು ಮಕ್ಕಳಿಗೆ ಕಲಿಸುತ್ತಿರುವ ಶಿಕ್ಷಣದ ಮೂಲದಲ್ಲಿಯೇ ತಪ್ಪಿದೆಯೆ? ಏನೂ ಇಲ್ಲದ ಜಪಾನ್ ಇಂದು ಈ ಎತ್ತರಕ್ಕೆ ಬೆಳೆಯಬಹುದಾದರೆ, ಎಲ್ಲವೂ ಇದ್ದ ನಮ್ಮ ಭಾರತ ನಮ್ಮಲ್ಲಿ ಇರುವುದನ್ನೇ ಬಳಸಿಕೊಂಡರೂ ಸಾಕು; ಮುಂದಿನ ಕಾಲು ಶತಮಾನದಲ್ಲಿ ಸಭ್ಯತೆಯ ಶಿಖರವಾಗಿ ಬೆಳೆಯಬಹುದು!, ಅಲ್ಲವೆ?!

    ಗಾಳಿಯಲ್ಲೇ ನಿಂತು ಮಕರಂದ ಹೀರುವ ಪಕ್ಷಿ ಪ್ರಪಂಚದ ಪುಟಾಣಿ ಅದ್ಭುತ

    ಬರೀ ಮುಟ್ಟಿದರೇ ಹೊಗೆ ಹಾಕಿಸಬಲ್ಲ ಕಪ್ಪೆಗಳು!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts