More

    ವರದಕ್ಷಿಣೆಗೆ ಕೂಡಿದ್ದ 75 ಲಕ್ಷ ರೂ. ಬಡ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಕೊಟ್ಟ ವಧು: ಎಲ್ಲೆಡೆ ಶ್ಲಾಘನೆಗಳ ಮಹಾಪೂರ

    ಜೈಪುರ (ರಾಜಸ್ಥಾನ): ವರದಕ್ಷಿಣೆಯ ರೂಪದಲ್ಲಿ ಲಕ್ಷಾಂತರ ರೂಪಾಯಿ ನೀಡುವುದು ಕೆಲವು ಪ್ರದೇಶಗಳಲ್ಲಿ ಮಾಮೂಲಾಗಿದೆ. ಅದರಲ್ಲಿಯೂ ರಾಜಸ್ಥಾನದಲ್ಲಿ ವರದಕ್ಷಿಣೆಯೆಂಬುದು ಬೃಹದಾಕಾರವಾಗಿ ಬೆಳೆದಿದೆ. ಈ ಮಧ್ಯೆ ಇಲ್ಲಿಯ ವಧುವೊಬ್ಬಳು ಇದೀಗ ಭಾರಿ ಸುದ್ದಿಯಲ್ಲಿದ್ದು, ಎಲ್ಲೆಡೆಯಿಂದ ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.

    ಬಾರ್ಮರ್​​ ನಗರದ ಕಿಶೋರ್​ ಸಿಂಗ್ ಕಾನೋಡ್​ ಅವರ ಮಗಳಾಗಿರುವ ಅಂಜಲಿ ಕನ್ವರ್​​ ಎಂಬಾಕೆ ತನಗೆ ವರದಕ್ಷಿಣೆಗಾಗಿ ಕೂಡಿಟ್ಟ 75 ಲಕ್ಷ ರೂ. ಹಣವನ್ನು ವಿದ್ಯಾರ್ಥಿನಿಯರ ಹಾಸ್ಟೆಲ್‌ ಕಟ್ಟಲು ನೀಡಿದ್ದಾಳೆ. ಮಗಳಿಗೆ ವರದಕ್ಷಿಣೆ ನೀಡಲು ಕಿಶೋರ್‌ ಸಿಂಗ್‌ ಅವರು 75 ಲಕ್ಷ ರೂಪಾಯಿಯನ್ನು ಮೀಸಲು ಇರಿಸಿದ್ದರು. ಆದರೆ ಮೊದಲಿನಿಂದಲೂ ಸಮಾಜಸೇವೆಯಲ್ಲಿ ಆಸಕ್ತಿ ಇದ್ದ ಅಂಜಲಿ ಅವರಿಗೆ ವರದಕ್ಷಿಣೆ ಬದಲು ಈ ಹಣವನ್ನು ಎಲ್ಲಿಯಾದರೂ ಸದ್ವಿನಿಯೋಗ ಮಾಡುವ ಆಸೆಯಿತ್ತು.

    ಆಕೆಯ ಅದೃಷ್ಟಕ್ಕೆ, ಜೀವನಸಂಗಾತಿಯಾಗಿ ಬಂದ ಪ್ರವೀಣ್​ ಸಿಂಗ್ ಮದುವೆಗೂ ಮುನ್ನ ಭಾವಿ ಪತ್ನಿಯ ಆಸೆಯನ್ನು ತಿಳಿದುಕೊಂಡಿದ್ದರು. ಅವರು ವರದಕ್ಷಿಣೆ ಪಡೆದಿರಲಿಲ್ಲ. ತನ್ನ ಆಸೆಯನ್ನು ಈಡೇರಿಸಿಕೊಂಡ ಅಂಜಲಿ ಆ ಹಣವನ್ನು ಹಾಸ್ಟೆಲ್‌ ನಿರ್ಮಾಣಕ್ಕೆ ನೀಡುವಂತೆ ತಂದೆಯನ್ನು ಕೋರಿಕೊಂಡಿದ್ದಾಳೆ.

    ಮಗಳ ಇಚ್ಛೆಯಂತೆ ಕಿಶೋರ್​ ಸಿಂಗ್ ಹಣವನ್ನು ಬಾಲಕಿಯರ ಹಾಸ್ಟೆಲ್​ ನಿರ್ಮಾಣಕ್ಕೆ ನೀಡಿದ್ದಾರೆ. ರಾಜಸ್ಥಾನದಲ್ಲಿ ಬಡ ವಿದ್ಯಾರ್ಥಿನಿಯರಿಗಾಗಿ ಕಿಶೋರ್‌ ಸಿಂಗ್‌ ಅವರು ಇದಾಗಲೇ 1 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು. ಆದರೆ ಇನ್ನೂ 50-75 ಲಕ್ಷ ರೂಪಾಯಿ ಅಗತ್ಯವಿತ್ತು. ಇದೀಗ ಅವರ ಮಗಳೇ ಈ ಹಣ ನೀಡಿರುವ ಕಾರಣ, ಹಾಸ್ಟೆಲ್‌ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ. ಅಪ್ಪ-ಮಗಳ ಈ ನಿರ್ಧಾರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

    ಇಲ್ಲಿ ಹೆಣ್ಣು ಸಿಕ್ತಿಲ್ಲ, ಅಲ್ಲಿ ವರದಕ್ಷಿಣೆ ಇಲ್ಲದೇ ಮದುವೆಯಿಲ್ಲ: ವಿವಾಹದ ಆಸೆಹೊತ್ತ ಬ್ರಾಹ್ಮಣರಿಗೆ ತೆರೆದಿದೆ ‘ಸ್ವರ್ಣವಲ್ಲಿ’ಯ ಬಾಗಿಲು..

    ಕಾರಣವೇ ಇಲ್ಲದೇ ಹೆಂಡ್ತಿಗೆ ಸದಾ ನನ್ನ ಮೇಲೆ ಕೋಪ… ಜೀವನ ಸಾಕಾಗಿ ಹುಚ್ಚನಾಂಗ್ತಿದ್ದೇನೆ… ಪ್ಲೀಸ್‌ ದಾರಿತೋರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts