More

    ಇಲ್ಲಿ ಹೆಣ್ಣು ಸಿಕ್ತಿಲ್ಲ, ಅಲ್ಲಿ ವರದಕ್ಷಿಣೆ ಇಲ್ಲದೇ ಮದುವೆಯಿಲ್ಲ: ವಿವಾಹದ ಆಸೆಹೊತ್ತ ಬ್ರಾಹ್ಮಣರಿಗೆ ತೆರೆದಿದೆ ‘ಸ್ವರ್ಣವಲ್ಲಿ’ಯ ಬಾಗಿಲು..

    ಬೆಂಗಳೂರು: ಇಂದು ಬಹುತೇಕ ಎಲ್ಲಾ ಸಮುದಾಯಗಳಲ್ಲಿಯೂ ಹೆಣ್ಣುಮಕ್ಕಳ ಕೊರತೆ ಎದ್ದುಕಾಣುತ್ತಿದೆ. ಇದೇ ಕಾರಣಕ್ಕೆ ಮದುವೆಯ ವಿಷಯ ಬಂದಾಗ ಇರುವ ಹೆಣ್ಣುಮಕ್ಕಳ ಡಿಮಾಂಡ್ ಕೂಡ ಹೆಚ್ಚಾಗಿದೆ. ಇಂಥದ್ದೇ ವರ, ಇಂತಿಥ ಉದ್ಯೋಗದಲ್ಲಿಯೇ ಇರುವವ, ಇಷ್ಟೇ ಜಮೀನು ಹೊಂದಿರುವವ… ಹೀಗೆ ಹೆಣ್ಣು ಮಕ್ಕಳ ಹಾಗೂ ಹೆಣ್ಣು ಹೆತ್ತವರ ಬೇಡಿಕೆಗಳ ದೊಡ್ಡ ಪಟ್ಟಿಯೇ ಬೆಳೆಯುತ್ತಿರುವ ಕಾರಣ, ಹೆಚ್ಚಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮೂಲದ ಬ್ರಾಹ್ಮಣ ವರರು ಹೆಣ್ಣುಮಕ್ಕಳು ಸಿಗುವುದೇ ದುಸ್ತರವಾಗಿ ಬಿಟ್ಟಿದೆ.

    ಚಿಕ್ಕಪುಟ್ಟ ಉದ್ಯೋಗದಲ್ಲಿ ಇರುವ, ಹಳ್ಳಿಯಲ್ಲಿಯೇ ಇದ್ದುಕೊಂಡು ಜಮೀನು ನೋಡಿಕೊಳ್ಳುವ ಅಥವಾ ಅರ್ಚಕ ವೃತ್ತಿಯಲ್ಲಿ ಇರುವಂಥ ಯುವಕರಿಗೆ ಮದುವೆಯೆನ್ನುವುದು ಮರೀಚಿಕೆಯೇ ಆಗಿಬಿಟ್ಟಿದೆ. ಆದ್ದರಿಂದ ಜೀವನಪೂರ್ತಿ ಮದುವೆಯಾಗದೇ ಉಳಿಯುವ ಪ್ರಸಂಗಗಳೂ ನಡೆಯುತ್ತಿವೆ. ಎಷ್ಟೇ ಕಷ್ಟವಾದರೂ ತಮ್ಮದೇ ಜಾತಿಯ ಹುಡುಗಿ ಬೇಕು ಎನ್ನುವ ಪಟ್ಟು ಇನ್ನೊಂದೆಡೆ.

    ಇದು ಇಲ್ಲಿಯ ಕಥೆಯಾದರೆ, ಉತ್ತರ ಪ್ರದೇಶದಲ್ಲಿ ವರದಕ್ಷಿಣೆಯ ಪೆಂಡಭೂತ ಬೃಹದಾಕಾರವಾಗಿ ಬೆಳೆದುಬಿಟ್ಟಿದೆ. ಇದರಿಂದ ಎಲ್ಲಾ ಜಾತಿಯ ಅದರಲ್ಲಿಯೂ ಹೆಚ್ಚಾಗಿ ಬ್ರಾಹ್ಮಣ ಮನೆಯಲ್ಲಿ ಹುಟ್ಟಿದ ಮಧ್ಯಮ ಕುಟುಂಬದಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ಮದುವೆ ಮಾಡಿಸುವುದೇ ಅಪ್ಪ-ಅಮ್ಮನಿಗೆ ದೊಡ್ಡ ಕಷ್ಟವಾಗಿಬಿಟ್ಟಿದೆ.

    ಇದಕ್ಕೆ ಉತ್ತರವನ್ನು ಕಂಡುಕೊಂಡಿದೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ಶ್ರೀ ಸೋಂದಾ ಸ್ವರ್ಣವಲ್ಲೀ ಮಠ. ಇಲ್ಲಿಯ ಯುವಕರಿಗೆ ಹುಡುಗಿ ಬೇಕು, ಅಲ್ಲಿಯ ಯುವತಿಯರಿಗೆ ವರದಕ್ಷಿಣೆಯಿಂದ ತಪ್ಪಿಸಿಕೊಳ್ಳಬೇಕು… ಇದನ್ನು ಅರಿತಿರುವ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಈ ಎರಡೂ ರಾಜ್ಯಗಳ ಬ್ರಾಹ್ಮಣ ವಧು-ವರರನ್ನು ಒಂದುಗೂಡಿಸುವ ಬಹುದೊಡ್ಡ ಕಾರ್ಯಕ್ಕೆ ಕೈಹಾಕಿದ್ದಾರೆ.

    ಸ್ವಾಮಿಗಳ ನೇತೃತ್ವದಲ್ಲಿ ಇದಾಗಲೇ ಕರ್ನಾಟಕದ 40 ಬ್ರಾಹ್ಮಣ ಯುವಕರು, ಉತ್ತರ ಪ್ರದೇಶದ ಬ್ರಾಹ್ಮಣ ಯುವತಿಯರೊಂದಿಗೆ ಮದುವೆಯಾಗಿದ್ದಾರೆ. ಇದಕ್ಕೆ ಇಟ್ಟಿರುವ ಹೆಸರು ‘ಸಪ್ತಪದಿ’.
    ನಾರಾಯಣ ಹೆಗಡೆ ಗಡಿಕೈ ಅವರ ನೇತೃತ್ವದಲ್ಲಿ ಸಪ್ತಪದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉತ್ತರ ಭಾರತದ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಬ್ರಾಹ್ಮಣ ಮನೆತನದ ಯುವತಿಯರು ಅನುಭವಿಸುತ್ತಿರುವ ಕಷ್ಟವನ್ನು ಕಂಡಿರುವ ಹೆಗಡೆಯವರು ಇಂಥದ್ದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ. ಎರಡು ರಾಜ್ಯಗಳಲ್ಲಿನ ಸಂಸ್ಕೃತಿ ಭಿನ್ನಭಿನ್ನ, ಬ್ರಾಹ್ಮಣರಾದರೂ ಆಚಾರ-ವಿಚಾರಗಳಲ್ಲಿ ಸಾಕಷ್ಟು ವ್ಯತ್ಯಾಸ ಇರುವ ಕಾರಣ, ಅಲ್ಲಿಯ ಹೆಣ್ಣುಮಕ್ಕಳು ಇಲ್ಲಿ ಹೊಂದಿಕೊಳ್ಳುವುದು ಕಷ್ಟವಾದ್ದರಿಂದ ಆರಂಭದಲ್ಲಿ ಈ ಕಾರ್ಯ ಸಾಹಸವೇ ಆಯಿತು ಎನ್ನುವ ನಾರಾಯಣ ಹೆಗಡೆಯವರು ಇದೀಗ ಅದನ್ನೇ ಸವಾಲಾಗಿ ಸ್ವೀಕರಿಸಿ 40 ಮದುವೆ ಮಾಡಿಸಿದ್ದಾರೆ.

    ಒಂದು ವೇಳೆ ದಂಪತಿ ನಡುವೆ ಏನೇ ಬಿಕ್ಕಟ್ಟು ಬಂದರೂ ಅದನ್ನು ಪರಿಹರಿಸಲು ತಮ್ಮ ಮಠ ಸದಾ ಸಿದ್ಧ ಎನ್ನುತ್ತಾರೆ ಹೆಗಡೆಯವರು. ಈ ಹಿನ್ನೆಲೆಯಲ್ಲಿ ಮದುವೆಯ ಆಸೆಯನ್ನೇ ಬಿಟ್ಟಿದ್ದ ಎಷ್ಟೋ ಬ್ರಾಹ್ಮಣ ಯುವಕರಲ್ಲೀಗ ಉತ್ಸಾಹ ತುಂಬಿದೆ.

    VIDEO: ಏಳು ಗಂಟೆ ಶವಾಗಾರದ ಫ್ರೀಜರ್‌ನಲ್ಲಿದ್ದ ಮೃತದೇಹ ಎದ್ದು ಉಸಿರಾಡಿತು! ವಿಡಿಯೋ ವೈರಲ್‌

    VIDEO: ಸೆಲ್ಫಿ ಕೇಳುವ ನೆಪದಲ್ಲಿ ನಟಿ ಕವಿತಾ ಗೌಡ ಕಿಡ್ನಾಪ್‌! ಸಿಸಿಟಿವಿಯಲ್ಲಿ ಭಯಾನಕ ದೃಶ್ಯ; ಅಪಹರಣದ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts