ಮಮತಾ ಬ್ಯಾನರ್ಜಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ಮುಖಂಡ ನೇಣುಬಿಗಿದ ಸ್ಥಿತಿಯಲ್ಲಿ!

suicide
Published on

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಾವು ಏರುತ್ತಲೇ ಸಾಗಿದೆ. ನಿನ್ನೆಯಷ್ಟೇ ಬಿಜೆಪಿ ಅಭ್ಯರ್ಥಿ ಅಶೋಕ್ ದಿಂಡಾ ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆದಿದೆ. ಅದರ ಬೆನ್ನಲ್ಲೇ ಇದೀಗ ಬೆಜೆಪಿ ಮುಖಂಡ ಉದಯ್​ ದುಬೆ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ!

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸುತ್ತಿರುವ ನಂದಿಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಂಗಾಳದಲ್ಲಿ ನಡೆದ ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಿದ್ದ ಬೆನ್ನಲ್ಲೇ ನಿಗೂಢವಾಗಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದವರು ಬಿಜೆಪಿ ಮುಖಂಡ ಉದಯ್​ ದುಬೆ.

ಇದು ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದರೂ ಸಾವಿಗೆ ನಿಖರ ಕಾರಣ ಇನ್ನೂ ಬಹಿರಂಗಗೊಳ್ಳಬೇಕಿದೆ. ಈಚೆಗೆ ಬಿಜೆಪಿ ಸೇರಿದ್ದ ನಟ ಮಿಥುನ್​ ಚಕ್ರವರ್ತಿಯವರ ಜತೆ ರೋಡ್​ ಷೋನಲ್ಲಿ ದುಬೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ತೃಣಮೂಲ ಕಾಂಗ್ರೆಸ್​ ಕಾರ್ಯಕರ್ತರಿಂದ ಬೆದರಿಕೆ ಬಂದಿತ್ತು ಎನ್ನಲಾಗಿದೆ.

ಈ ಬೆದರಿಕೆಯಿಂದಾಗಿ ದುಬೆಯವರು ತೀವ್ರ ಒತ್ತಡದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂದಿಗ್ರಾಮದ ಭೆಕುಟಿಯಾ ಪ್ರದೇಶದ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಮಾರ್ಚ್ 30 ರಂದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರನ್ನು ಬೆಂಬಲಿಸಿ ಮಿಥುನ್ ಚಕ್ರವರ್ತಿ ಅವರು ನಂದಿಗ್ರಾಮದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದರು. ಸುವೇಂದು ಅಧಿಕಾರಿಯವರು ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಈ ರೋಡ್​ ಷೋನಲ್ಲಿ ದುಬೆ ಭಾಗವಹಿಸಿದ್ದರು.

ನಂದಿಗ್ರಾಮಕ್ಕೆ ಪ್ರಚಾರ ಕಾರ್ಯ ಕೈಗೊಳ್ಳಬೇಕಿದ್ದ ಮಮತಾ ಬ್ಯಾನರ್ಜಿಯವರು ಈ ಸಾವಿನ ಹಿನ್ನೆಲೆಯಲ್ಲಿ ಪ್ರವಾಸವನ್ನು ಕುಂಠಿತಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net