ಉನ್ನತ ಶಿಕ್ಷಣಕ್ಕಾಗಿ ಉಕ್ರೇನ್​ಗೆ ಹೋಗಿದ್ದ ಬೀದರ್​ ಹುಡುಗನ ಅಪಹರಣ ಸುಖಾಂತ್ಯ

kidnap1
Published on

ಬೀದರ್: ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ ಬೀದರ್​ ಜಿಲ್ಲೆಯ ಔರಾದ್ ತಾಲೂಕಿನ ಹುಕ್ಯಾಳ ತಾಂಡದ ಯುವಕ ಅಪಹರಣಕ್ಕೊಳಗಾಗಿದ್ದ ಘಟನೆ ನಡೆದಿದೆ.

ಹುಕ್ಯಾಳ ತಾಂಡಾದ 21 ವರ್ಷದ ಅಜಯ್​ ರಾಠೋಡ್​ ಡಿಸೆಂಬರ್ 14ರಂದು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ. ಜನವರಿ 16ರಂದು ಈತನನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ನಂತರ ಆತನ ಸಂಬಂಧಿಕರಿಗೆ ಫೋನ್ ಮಾಡಿ 1 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ ಮಾಡಿರುವುದಾಗಿ ವರದಿಯಾಗಿದೆ.

ಯುವಕನ ಸಂಬಂಧಿಕರು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರ ಗಮನಕ್ಕೆ ತಂದಿದ್ದಾರೆ.

ದುಷ್ಕರ್ಮಿಗಳು ಆ ಬಳಿಕ ಅಜಯ್​ನನ್ನು ಕಿರ್ಗಿಸ್ತಾನ್​ಗೆ ಕರೆದುಕೊಂಡು ಹೋಗಿ 1 ಕೋಟಿ ನೀಡದಿದ್ದಲ್ಲಿ ಅಫ್ಘಾನಿಸ್ತಾನ ಗಡಿಯಲ್ಲಿ ಕೊಂದು ಬಿಸಾಕುವ ಬೆದರಿಕೆ ಕರೆ ಮಾಡುವುದರ ಜೊತೆಗೆ ಆತನ ಕೈ-ಕಾಲುಗಳನ್ನು ಕಟ್ಟಿ ಹಾಕಿರುವ ಫೋಟೋ ರವಾನಿಸಿದ್ದಾರೆ.

ಇಷ್ಟೇ ಅಲ್ಲದೇ, ಎರಡು ಬಾರಿ ವಿಡಿಯೋ ಕಾಲ್ ಮೂಲಕ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ್ದಾರೆ. ನಂತರ ಜಿಲ್ಲಾ ಪೊಲೀಸರು, ಭಾರತ ರಾಯಭಾರಿ ಕಚೇರಿ ಅಧಿಕಾರಿಗಳ ಸಹಕಾರದಿಂದ ಉಕ್ರೇನ್ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಕಷ್ಟದಲ್ಲಿದ್ದ ಯುವಕನನ್ನು ರಕ್ಷಿಸಿದ್ದಾರೆ.

ಕೆಲವೇ ದಿನಗಳಲ್ಲಿ ಅಜಯ್​ ಭಾರತಕ್ಕೆ ಮರಳಲಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net