More

    ಮುಂಗಾರು ಬಿತ್ತನೆಗೆ ಬಿರುಸಿನ ಸಿದ್ಧತೆ

    ರಾಯಚೂರು: ಹಿಂದಿನ ವರ್ಷಗಳಲ್ಲಿ ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ನಷ್ಟಕ್ಕೆ ಗುರಿಯಾಗಿದ್ದ ರೈತರು ಈ ಬಾರಿಯ ಮುಂಗಾರು ಹಂಗಾಮಿನಲ್ಲಾದರೂ ಸಮರ್ಪಕ ಮಳೆಯಾಗಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದಾರೆ. ಅದಕ್ಕೆ ತಕ್ಕಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
    ಈಗಾಗಲೇ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದರೂ ಇನ್ನೆರಡು ಬಾರಿ ಮಳೆಯಾದರೆ ಜೂನ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ಆರಂಭವಾಗಲಿದೆ. ಹೀಗಾಗಿ ರೈತರು ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡುವುದರ ಜತೆಗೆ ಭೂಮಿಯನ್ನು ಹದಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
    ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.91 ಲಕ್ಷ ಹೆಕ್ಟೇರ್ ಖುಷ್ಕಿ ಪ್ರದೇಶ ಮತ್ತು 2.64 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಸೇರಿದಂತೆ ಒಟ್ಟು 5,56 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಹೊಂದಲಾಗಿದೆ. ತುಂಗಭದ್ರಾ ಎಡದಂಡೆ ನಾಲೆ ಮತ್ತು ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸಿದ ನಂತರದಲ್ಲಿ ಭತ್ತ ನಾಟಿ ಕಾರ್ಯ ಆರಂಭವಾಗಲಿದೆ.
    ರಾಯಚೂರು ತಾಲೂಕಿನಲ್ಲಿ 74,174 ಹೆಕ್ಟೇರ್ ಖುಷ್ಕಿ, 28,034 ಹೆಕ್ಟೇರ್ ನೀರಾವರಿ ಪ್ರದೇಶ ಸೇರಿದಂತೆ ಒಟ್ಟು 1.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, ಮಾನ್ವಿ ತಾಲೂಕಿನಲ್ಲಿ 34,323 ಹೆಕ್ಟೇರ್ ಖುಷ್ಕಿ, 27,568 ಹೆಕ್ಟೇರ್ ನೀರಾವರಿ ಸೇರಿದಂತೆ ಒಟ್ಟು 61,891 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
    ಸಿರವಾರ ತಾಲೂಕಿನಲ್ಲಿ 27,105 ಹೆಕ್ಟೇರ್ ಖುಷ್ಕಿ, 18,440 ಹೆಕ್ಟೇರ್ ನೀರಾವರಿ ಸೇರಿದಂತೆ ಒಟ್ಟು 45,545 ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ದೇವದುರ್ಗ ತಾಲೂಕಿನಲ್ಲಿ 50,297 ಹೆಕ್ಟೇರ್ ಖಷ್ಕಿ, 73,103 ಹೆಕ್ಟೇರ್ ನೀರಾವರಿ ಸೇರಿದಂತೆ ಒಟ್ಟು 1.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ.
    ಲಿಂಗಸುಗೂರು ತಾಲೂಕಿನಲ್ಲಿ 4,444 ಹೆಕ್ಟೇರ್ ಖುಷ್ಕಿ, 17 ಸಾವಿರ ಹೆಕ್ಟೇರ್ ನೀರಾವರಿ ಸೇರಿದಂತೆ ಒಟ್ಟು 61,444 ಹೆಕ್ಟೇರ್ ಪ್ರದೇಶದಲ್ಲಿ ಮತ್ತು ಸಿಂಧನೂರು ತಾಲೂಕಿನಲ್ಲಿ 21,883 ಹೆಕ್ಟೇರ್ ಖುಷ್ಕಿ, 68,654 ಹೆಕ್ಟೇರ್ ನೀರಾವರಿ ಸೇರಿದಂತೆ ಒಟ್ಟು 90,537 ಹೆಕ್ಟೇರ್ ಪ್ರದೇಶದಲ್ಲಿ ಹಾಗೂ ಮಸ್ಕಿ ತಾಲೂಕಿನಲ್ಲಿ 39,241 ಹೆಕ್ಟೇರ್ ಖುಷ್ಕಿ, 32,010 ಹೆಕ್ಟೇರ್ ನೀರಾವರಿ ಸೇರಿದಂತೆ ಒಟ್ಟು 71,251 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
    ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಪ್ರಮುಖವಾಗಿ ತೊಗರಿ, ಹತ್ತಿ, ಸೂರ್ಯಕಾಂತಿ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಖುಷ್ಕಿ ಪ್ರದೇಶದಲ್ಲಿ 1.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 96,773 ಹೆಕ್ಟೇರ್‌ನಲ್ಲಿ ಹತ್ತಿ, 18,762 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆ ಗುರಿಯಿದೆ.
    2 ಸಾವಿರ ಹೆಕ್ಟೇರ್‌ನಲ್ಲಿ ಭಃತ್ತ, 4,768 ಹೆಕ್ಟೇರ್‌ನಲ್ಲಿ ಹೈಬ್ರಿಡ್ ಜೋಳ, 31 ಸಾವಿರ ಹೆಕ್ಟೇರ್‌ನಲ್ಲಿ ಹೈಬ್ರಿಡ್ ಸಜ್ಜೆ, 500 ಹೆಕ್ಟೆರ್‌ನಲ್ಲಿ ನವಣೆ, 168 ಹೆಕ್ಟೇರ್‌ನಲ್ಲಿ ಹೆಸರು, 175 ಹೆಕ್ಟೇರ್‌ನಲ್ಲಿ ಸೇಂಗಾ, 1,169 ಹೆಕ್ಟೇರ್‌ನಲ್ಲಿ ಎಳ್ಳು, 122 ಹೆಕ್ಟೇರ್‌ನಲ್ಲಿ ಔಡಲ ಬೆಳೆಯುವ ಗುರಿ ಹೊಂದಲಾಗಿದೆ.
    ನೀರಾವರಿ ಪ್ರದೇಶದಲ್ಲಿ 1.83 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ, 3,217 ಹೆಕ್ಟೇರ್‌ನಲ್ಲಿ ಹೈಬ್ರಿಡ್ ಜೋಳ, 537 ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳ, 9 ಸಾವಿರ ಹೆಕ್ಟೇರ್‌ನಲ್ಲಿ ಹೈಬ್ರಿಡ್ ಸಜ್ಜೆ, 10 ಸಾವಿರ ಹೆಕ್ಟೇರ್‌ನಲ್ಲಿ ತೊಗರಿ, 500 ಹೆಕ್ಟೇರ್‌ನಲ್ಲಿ ಸೇಂಗಾ, 800 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 56,323 ಹೆಕ್ಟೇರ್‌ನಲ್ಲಿ ಹತ್ತಿ ಬೆಳೆಯುವ ಗುರಿಯಿದೆ.
    ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿಯ ಮುಂಗಾರು ಹಂಗಾಮು ಕೈಹಿಡಿಯುವ ನಂಬಿಕೆಯಿಂದ ರೈತರು ಚಟುವಟಿಕೆಯಲ್ಲಿ ತೊಡಗಿದ್ದಾರೆ.

    8,663 ಮೆಟ್ರಿಕ್ ಟನ್ ಸರಬರಾಜು
    ಮುಂಗಾರು ಹಂಗಾಮಿಗೆ ಜಿಲ್ಲೆಗೆ ವಿವಿಧ ರೀತಿಯ ಒಟ್ಟು 2.35 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದ್ದು, ಮೇ ತಿಂಗಳಲ್ಲಿ 69,680 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆಯಿದೆ. ಪ್ರಸ್ತುತ 18,663 ಮೆಟ್ರಿಕ್ ಟನ್ ಸರಬರಾಜಾಗಿದೆ. ಜತೆಗೆ ಬರ್ ಸ್ಟಾಕ್ ಇರುವುದರಿಂದ ರಸಗೊಬ್ಬರ ಸಮಸ್ಯೆಯಾಗುವುದಿಲ್ಲ. ಯೂರಿಯಾ 81,599 ಮೆಟ್ರಿಕ್ ಟನ್ ಅಗತ್ಯವಿದ್ದು, 49,264 ಮೆಟ್ರಿಕ್ ಟನ್ ದಾಸ್ತಾನಿದೆ. ಡಿಎಪಿ 38,155 ಮೆಟ್ರಿಕ್ ಟನ್ ಅಗತ್ಯವಿದ್ದು, 11,148 ಮೆಟ್ರಿಕ್ ಟನ್ ಲಭ್ಯವಿದೆ. ಎಂಒಪಿ 4,218 ಮೆಟ್ರಿಕ್ ಟನ್ ಅಗತ್ಯವಿದ್ದು 1,271 ಮೆಟ್ರಿಕ್ ಲಭ್ಯವಿದೆ. ಎನ್‌ಪಿಕೆ 1.07 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದ್ದು, 38,621 ಮೆಟ್ರಿಕ್ ಟನ್ ದಾಸ್ತಾನಿದೆ.

    ಮುಂಗಾರು ಬಿತ್ತನೆಗೆ ಬಿರುಸಿನ ಸಿದ್ಧತೆ

    ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯವಿರುವ ಬಿತ್ತನೆ, ರಸಗೊಬ್ಬರ ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ರೈತರಿಗೆ ಅಗತ್ಯಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಜೂನ್ ಆರಂಭದಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗಲಿದೆ.

    • ಆರ್.ದೇವಿಕಾ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ, ರಾಯಚೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts