More

    ಗ್ರಾಮೀಣ ಕ್ರೀಡಾಕೂಟ ವಿವಿ ವಿದ್ಯಾರ್ಥಿಗಳ ಪಾಲು

    ತುಮಕೂರು: ಗ್ರಾಮೀಣ ಯುವಜನರನ್ನು ಸಂಘಟಿಸುವ ಸಲುವಾಗಿ ನಡೆಯಬೇಕಾದ ಜಿಲ್ಲಾಮಟ್ಟದ ಕ್ರೀಡಾಕೂಟ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪಾಲಾಗಿದ್ದು, ಗ್ರಾಮೀಣ ಯುವಕರಿಗೆ ಅನ್ಯಾಯವಾಗಿದೆ.

    ಕೇಂದ್ರ ಯುವ ಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ‘ನೆಹರು ಯುವಕೇಂದ್ರ’ ತುಮಕೂರು ವಿವಿ ವಿದ್ಯಾರ್ಥಿಗಳಿಗೆ ಗುರುವಾರ ಜಿಲ್ಲಾಮಟ್ಟದ ಕ್ರೀಡಾಕೂಟ ಆಯೋಜಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಶಾಲಾ-ಕಾಲೇಜುಗಳಿಂದ ಹೊರತಾಗಿರುವ ಯುವಜನರು ಸಂಘಟಿತರಾಗಲು ಆಯೋಜಿಸಬೇಕಾದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಸದಾ ಚಟುವಟಿಕೆಗಳಿಂದಲೇ ಇರುವ ವಿವಿ ವಿದ್ಯಾರ್ಥಿಗಳಿಗೆ ಮಾಡಿಸಿ ಗ್ರಾಮೀಣ ಯುವಜನರಿಗೆ ಅನ್ಯಾಯವೆಸಗಿದೆ. ವಿವಿ ಆವರಣದಲ್ಲಿ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಕುಲಪತಿ ಪ್ರೊ.ವೈ. ಎಸ್. ಸಿದ್ದೇಗೌಡ, ಜವಾಬ್ದಾರಿಯಿಂದ ಹೊರ ಉಳಿದವರಿಗೆ, ಜ್ಞಾನ ಸಂಪಾದನೆ, ವಿವೇಕವನ್ನು ಬಲವಂತವಾಗಿ ಕೊಡುವಂತಾಗಿದೆ ಎಂದರು.

    ಯುವಕರಲ್ಲಿ ಆತ್ಮವಿಶ್ವಾಸದ ಕೊರತೆಯಿಂದಾಗಿ ಯುವಜನ ಮತ್ತು ಸಬಲೀಕರಣ ಎನ್ನುವುದು ಜನ್ಮತಾಳಬೇಕಾಯಿತು. ಇಂದಿನ ವಿದ್ಯಾಭ್ಯಾಸದಲ್ಲಿ ಹಿಂದಿನ ಕಾಲದಲ್ಲಿದ್ದಷ್ಟು ಕಠಿಣ ಶ್ರಮವಾಗಲಿ, ಕೊರತೆ ಆಗಲಿ ಇಲ್ಲ, ಆದರೆ ಇಂದು ವಿದ್ಯೆ ಕಲಿಯುವ ಆಸಕ್ತಿಯೇ ಮಕ್ಕಳಲ್ಲಿ ಇಲ್ಲದಂತಾಗಿದೆ ಎಂದರು.

    ಪಾಲಕರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸದಿದ್ದರೆ ಮುಂದಿನ ದಿನಗಳಲ್ಲಿ ಸಮಾಜ ಎತ್ತ ಸಾಗುವುದೋ ಎಂಬ ಆತಂಕವಿದೆ ಎಂದರು. ಮಹಾತ್ಮಗಾಂಧಿ ಯುವ ಸಂಘದ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವ ಇಚ್ಛಾಶಕ್ತಿ ಮುಖ್ಯ, ಪಠ್ಯದ ಜೊತೆ ಇತರ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ನೆಹರು ಯುವ ಕೇಂದ್ರದ ಡಿಎಸಿವೈಪಿ ಸದಸ್ಯ ಎಂ.ಪಿ.ಸ್ವಾಮಿಕುಮಾರ್, ಕೆ.ಮಂಜುನಾಥ್, ಮಹಾತ್ಮಗಾಂಧಿ ಯುವ ಸಂಘದ ನಿರ್ದೇಶಕಿ ಆರ್.ಅನಿತಾ, ವಿವಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕ ಆರ್.ಸುದೀಪ್ ಕುಮಾರ್, ಪಿ.ಆರ್.ನವೀನ್ ಕುಮಾರ್ ಮತ್ತಿತರರು ಇದ್ದರು.

    ಎನ್‌ವೈಕೆ ಉದ್ದೇಶವೇ ಮಾಯ!: ಶಾಲಾ-ಕಾಲೇಜುಗಳಲ್ಲಿ ಸಾಕಷ್ಟು ಚಟುವಟಿಕೆ ನಡೆಯುವುದರಿಂದ ಇದರಿಂದ ಹೊರತಾಗಿರುವ ಗ್ರಾಮೀಣ ಯುವಜನರಿಗೆ ಚಟುವಟಿಕೆ ರೂಪಿಸುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ನೆಹರು ಯುವ ಕೇಂದ್ರಕ್ಕೆ ಲಕ್ಷಾಂತರ ರೂ. ಅನುದಾನ ನೀಡುತ್ತಿದೆ. ಯುವಜನರ ಪಾಲಿಗೆ ಇದ್ದೂ ಇಲ್ಲದಂತಾಗಿರುವ ಇಲಾಖೆ ಹಣ ಖರ್ಚು ಮಾಡಿ, ದಾಖಲೆಗಳನ್ನು ಸೃಷ್ಟಿಕೊಳ್ಳಲಷ್ಟೇ ಸೀಮಿತವಾಗಿದೆ. ಇದಕ್ಕಾಗಿ ಕಾಲೇಜು, ವಿವಿಗಳಲ್ಲಿ ಕಾರ್ಯಕ್ರಮ ರೂಪಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts