ಪಿ.ಬಿ.ಹರೀಶ್ ರೈ ಮಂಗಳೂರು
ಹೆಸರಿಗೆ ಅಪರ ಜಿಲ್ಲಾಧಿಕಾರಿಯವರ ವಸತಿಗೃಹ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಯವರ ನಿವಾಸ. ಆದರೆ ಯಾರೂ ವಾಸವಾಗಿಲ್ಲ. ವರ್ಷದಿಂದ ಖಾಲಿ ಬಿದ್ದಿದೆ. ಮುರಿದ ಛಾವಣಿ, ಮಾಡಿನ ಮೇಲೆ ಟಾರ್ಪಲ್, ಕಳಚಿ ಬಿದ್ದಿರುವ ಕಿಟಕಿ, ಬಾಗಿಲು, ಶಿಥಿಲವಾಗಿರುವ ಗೋಡೆ….
ಇದು ಮಂಗಳೂರು ನಗರದಲ್ಲಿರುವ ಬಹುತೇಕ ಸರ್ಕಾರಿ ವಸತಿಗೃಹಗಳ ಸ್ಥಿತಿ.
ನಗರದ ಉರ್ವಸ್ಟೋರ್, ಬೋಂದೆಲ್, ಹ್ಯಾಟ್‌ಹಿಲ್, ಕುಂಜತ್‌ಬೈಲ್ ಮತ್ತು ಪಾಂಡೇಶ್ವರದಲ್ಲಿ ವಿವಿಧ ಇಲಾಖೆಗಳ 505 ಸರ್ಕಾರಿ ವಸತಿಗೃಹಗಳಿವೆ. ನಿರ್ವಹಣೆ ಕೊರತೆಯಿಂದ ಇದರಲ್ಲಿ 250ಕೂ ಅಧಿಕ ವಸತಿಗೃಹಗಳು ನಿಷ್ಟ್ರಯೋಜಕ ಸ್ಥಿತಿಯಲ್ಲಿವೆ. ಇವುಗಳ ನಿರ್ವಹಣೆ ಲೋಕೋಪಯೋಗಿ ಇಲಾಖೆ ಹೊಣೆ. ಆದರೆ ಸರ್ಕಾರ ಒದಗಿಸುವ ಅನುದಾನದಲ್ಲಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಕೆಲವು ವಸತಿಗೃಹಗಳು ದುರಸ್ತಿ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು.
ವಿದ್ಯುತ್ ಸಂಪರ್ಕ ಕಟ್: ಹ್ಯಾಟ್‌ಹಿಲ್‌ನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಿವಾಸ ವರ್ಷದಿಂದ ಪಾಳು ಬಿದ್ದಿದೆ. ಮನೆಯ ಸುತ್ತ ಕಸದ ರಾಶಿ ಬಿದ್ದಿದೆ. ವಿದ್ಯುತ್ ಮೀಟರ್ ಗೋಡೆಯಲ್ಲಿ ನೇತಾಡುತ್ತಿದೆ. 1760 ರೂ. ವಿದ್ಯುತ್ ಬಿಲ್ ಪಾವತಿಸಿಲ್ಲ. ಹಾಗಾಗಿ 2021ರ ಜ.21ರಿಂದ ವಿದ್ಯುತ್ ಸಂಪರ್ಕ ಕಟ್ ಮಾಡಲಾಗಿದೆ ಎಂದು ಮೆಸ್ಕಾಂನವರು ಗೋಡೆಗೆ ನೋಟಿಸ್ ಅಂಟಿಸಿದ್ದಾರೆ.
ವಾಸಕ್ಕೆ ಅಯೋಗ್ಯ: ಅಪರ ಜಿಲ್ಲಾಧಿಕಾರಿಯವರ ನಿವಾಸ ವಾಸಕ್ಕೆ ಯೋಗ್ಯವಾಗಿತ್ತು. ಹಿಂದೆ ಕರ್ತವ್ಯ ನಿರ್ವಹಿಸಿದ್ದ ಹೆಚ್ಚಿನ ಅಪರ ಜಿಲ್ಲಾಧಿಕಾರಿಗಳು ಈ ನಿವಾಸದಲ್ಲೇ ವಾಸವಾಗಿದ್ದರು. ಹಿಂದಿನ ಎಡಿಸಿ ಎಂ.ಜೆ.ರೂಪಾ ವರ್ಗಾವಣೆಯಾಗಿ ಬಂದ ಬಳಿಕ ಫ್ಲಾೃಟ್‌ನಲ್ಲಿ ವಾಸವಾಗಿದ್ದರು. ಪರಿಣಾಮ ಈ ನಿವಾಸ ಖಾಲಿ ಉಳಿದಿತ್ತು. ಇತ್ತೀಚೆಗೆ ಅವರೂ ವರ್ಗಾವಣೆಗೊಂಡಿದ್ದಾರೆ. ವರ್ಷಗಳಿಂದ ಯಾರೂ ವಾಸವಾಗಿಲ್ಲದ ಕಾರಣ ನಿವಾಸ ಈಗ ಪಾಳು ಬಿದ್ದಿದೆ. ದುರಸ್ತಿ ಮಾಡುವುದು ಅನಿವಾರ್ಯ.
ಹ್ಯಾಟ್‌ಹಿಲ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ವಸತಿಗೃಹಗಳು ಸುಸ್ಥಿತಿಯಲ್ಲಿವೆ. ಇತರ ಇಲಾಖೆಯ ವಸತಿಗೃಹಗಳನ್ನು ಆಯಾ ಇಲಾಖೆಯವರು ಒದಗಿಸುವ ಅನುದಾನದಿಂದ ನಿರ್ವಹಣೆ ಮಾಡಲಾಗುತ್ತಿದೆ. ನ್ಯಾಯಾಂಗ ಇಲಾಖೆಯ ಅನುದಾನದಿಂದ ಜಿಲ್ಲಾ ನ್ಯಾಯಾಧೀಶರ ವಸತಿ ಗೃಹ ಹಾಗೂ ಎರಡು ಸುಸಜ್ಜಿತ ಫ್ಲಾೃಟ್‌ಗಳನ್ನು ನಿರ್ಮಿಸಲಾಗಿದೆ.
ಯಶವಂತ್
ಕಾರ್ಯನಿರ್ವಾಹಕ ಅಭಿಯಂತ, ಲೋಕೋಪಯೋಗಿ ಇಲಾಖೆ.ವಸತಿಗೃಹ ಸುಸಜ್ಜಿತವಾಗಿದ್ದರೂ ಅದರಲ್ಲಿ ಅಧಿಕಾರಿಗಳು ವಾಸವಿಲ್ಲದೆ ಇರುವ ಬಗ್ಗೆ ಪರಿಶೀಲಿಸಲಾಗುವುದು. ಹ್ಯಾಟ್‌ಹಿಲ್ ಸಹಿತ ನಗರದ ವಿವಿಧೆಡೆ ಸರ್ಕಾರಿ ವಸತಿಗೃಹ ಇರುವಲ್ಲಿ ಸಾಕಷ್ಟು ಜಮೀನು ಲಭ್ಯವಿದೆ. ವಾಸಕ್ಕೆ ಯೋಗವಿಲ್ಲದ ಕಟ್ಟಡಗಳನ್ನು ಕೆಡವಿ ಫ್ಲಾೃಟ್ ಮಾದರಿ ವಸತಿಗೃಹ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಈ ಬಗ್ಗೆ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸುತ್ತೇನೆ.
ವೇದವ್ಯಾಸ ಕಾಮತ್
ಶಾಸಕರು, ಮಂಗಳೂರು ದಕ್ಷಿಣ