More

    ಆರೆಸ್ಸೆಸ್: ರಾಷ್ಟ್ರಸೇವೆಯಲ್ಲಿ ತೊಂಬತ್ತೈದು ವರ್ಷ

    ಎಡಬಲಗಳ ಚರ್ಚೆಯಲ್ಲಿ ತೊಡಗಿರುವವರು ಏನೇ ವಾದಿಸಿದರೂ, ಹಿಂದು ಚಿಂತನೆಯ ಆಧಾರದ ಮೇಲೆ ವಿಕಾಸಗೊಂಡ ಸಂಘಕಾರ್ಯವು ರಾಷ್ಟ್ರದ ಪುನರ್ನಿರ್ವಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಸ್ವಯಂಸೇವಕನಿಗೆ ರಾಷ್ಟ್ರಹಿತವೇ ಸವೋಚ್ಚ.

    ಆರೆಸ್ಸೆಸ್: ರಾಷ್ಟ್ರಸೇವೆಯಲ್ಲಿ ತೊಂಬತ್ತೈದು ವರ್ಷಆರೆಸ್ಸೆಸ್ ಅಥವಾ ಚಿಕ್ಕದಾಗಿ ‘ಸಂಘ’ ಎಂಬುದು ನಮ್ಮ ದೇಶದಲ್ಲಿ ಚಿರಪರಿಚಿತ ಹೆಸರು. 1925ರ ವಿಜಯದಶಮಿಯಂದು ನಾಗಪುರದಲ್ಲಿ ಡಾಕ್ಟರ್ ಕೇಶವ ಬಲಿರಾಂ ಹೆಡಗೇವಾರರು ಹತ್ತಾರು ಬಾಲಕರನ್ನು ಸೇರಿಸಿಕೊಂಡು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಸಾವಿರಾರು ಶಾಖೆಗಳುಳ್ಳ ವಟವೃಕ್ಷವಾಗಿ ಬೆಳೆದಿದೆ. ಭಿನ್ನಭಿನ್ನ ಆಯಾಮಗಳಲ್ಲಿ ರಾಷ್ಟ್ರನಿರ್ವಣದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಇಂದು ಸಂಘವನ್ನು ವಿರೋಧಿಸುವವರು ಸಹ ಸಂಘದ ಸ್ವಯಂಸೇವಕರ ಶಿಸ್ತು, ಪ್ರಾಮಾಣಿಕತೆೆ ಮತ್ತು ದೇಶಪ್ರೇಮವನ್ನು ಮೆಚ್ಚಿಕೊಳ್ಳುತ್ತಾರೆ.

    ಸ್ವತಃ ಕ್ರಾಂತಿಕಾರಿಯಾಗಿದ್ದು, ಬಳಿಕ ಕಾಂಗ್ರೆಸ್ಸಿನಲ್ಲಿಯೂ ಸಕ್ರಿಯರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಡಾ.ಹೆಡಗೇವಾರ್ ಅವರ ಮನಸ್ಸಿನಲ್ಲಿ ಮೂಡಿದ್ದು ‘ಭಾರತ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದು ಏಕೆ?’ ಎನ್ನುವ ಮೂಲ ಪ್ರಶ್ನೆ. ನಮ್ಮನ್ನು ನಾವು ಮರೆತಿದ್ದೇ ಅವನತಿಗೆ ಕಾರಣ ಎಂದು ಮನಗಂಡ ಅವರು ಸಮಸ್ಯೆಯ ಮೂಲದಲ್ಲೇ ಪರಿಹಾರ ಕಂಡುಕೊಳ್ಳಲು ಮುಂದಾದರು. ಮೊಗಲರ ಆಳ್ವಿಕೆಯ ವಿರುದ್ಧ ಸಿಡಿದೆದ್ದು ಹಿಂದವೀ ಸ್ವರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿಯ ಸಾಹಸ ಅವರಿಗೆ ಪ್ರೇರಣೆಯಾಯಿತು. ಸಾವಿರಾರು ವರ್ಷಗಳ ಕಾಲ ನಮ್ಮ ತಾಯ್ನೆಲದ ಮೇಲೆ ಆಕ್ರಮಣಗಳಾದರೂ ಸದಾ ಆಕ್ರಮಕರ ವಿರುದ್ಧ ಹೋರಾಡಿದ ಕ್ಷಾತ್ರಪರಂಪರೆಯ ಇತಿಹಾಸವು ಹಿಂದೂ ಸಮಾಜ ಮತ್ತೆ ಮೈಕೊಡವಿ ಮೇಲೇಳಬಹುದೆಂಬ ವಿಶ್ವಾಸ ಮೂಡಿಸಿತು. ಈ ಹಿನ್ನೆಲೆಯಲ್ಲಿ ಸಂಘಕಾರ್ಯವನ್ನು ಆರಂಭಿಸಿದ ಹೆಡಗೇವಾರರು ಆಯ್ದುಕೊಂಡ ಮಾರ್ಗ ಸಂಘಟನೆ, ವ್ಯಕ್ತಿನಿರ್ವಣ ಹಾಗೂ ಅದರ ಮೂಲಕ ಸ್ವಾಭಿಮಾನಿ ಮತ್ತು ಸ್ವಾವಲಂಬಿ ಸಮಾಜ ನಿರ್ವಣ.

    1940ರಲ್ಲಿ ಡಾಕ್ಟರ್​ಜೀ ಸ್ವರ್ಗಸ್ಥರಾಗುವ ಕಾಲಕ್ಕೇ ಸಂಘ ದೇಶದಾದ್ಯಂತ ತಲುಪಿತ್ತು. ಆ ವರ್ಷದ ಸಂಘದ ಶಿಬಿರದಲ್ಲಿ ಪಾಲ್ಗೊಂಡಿದ್ದ ದೇಶದ ಎಲ್ಲ ಭಾಗಗಳಿಂದ ಬಂದಿದ್ದ ಸ್ವಯಂಸೇವಕರನ್ನು ಉದ್ದೇಶಿಸಿ ಕೊನೆಯ ಬಾರಿಗೆ ಮಾತನಾಡುತ್ತಾ, ಡಾಕ್ಟರ್​ಜೀ ‘ನನ್ನ ಕಣ್ಣಿನ ಮುಂದೆ ಒಂದು ಪುಟ್ಟ ಭಾರತವನ್ನು ಇಂದು ಕಾಣುತ್ತಿದ್ದೇನೆ’ ಎಂದು ಸಂತಸದಿಂದ ಉದ್ಗರಿಸಿದ್ದರು.

    ಸಂಘ ಸ್ಥಾಪನೆಯಾಗಿ 95 ವರ್ಷಗಳು ಕಳೆದಿವೆ. ಇಂದಿನ ಈ ಕಾಲಘಟ್ಟದಲ್ಲಿ ನಿಂತು ನೋಡಿದರೆ, ಸಂಘದ ಸ್ವಯಂಸೇವಕರು ರಾಷ್ಟ್ರಜೀವನದ ಪ್ರತಿಯೊಂದು ರಂಗವನ್ನೂ ತಲುಪಿರುವುದು ನಮಗೆ ಗೋಚರವಾಗುತ್ತದೆ. ಹೊರದೇಶಗಳಿಗೆ ವಲಸೆ ಹೋದ ಸ್ವಯಂಸೇವಕರೂ ತಮ್ಮೊಡನೆ ಸಂಘವನ್ನೂ ಕೊಂಡೊಯ್ದು, ಸಂಘಕಾರ್ಯದ ಕಂಪನ್ನು ಎಲ್ಲೆಡೆ ಹರಡಿಸಿದ್ದಾರೆ.

    ಸವಾಲುಗಳನ್ನೆದುರಿಸಿ ಬೆಳೆದ ಆರೆಸ್ಸೆಸ್: 1947ರ ದೇಶವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಈಗಿನ ಪಾಕಿಸ್ತಾನದ ಪ್ರದೇಶದಲ್ಲಿ ಮತ್ತು ಮುಸ್ಲಿಂ ಬಾಹುಳ್ಯವುಳ್ಳ ಭಾರತದ ಅನೇಕ ಕಡೆಗಳಲ್ಲಿ ಹಿಂದುಗಳ ರಕ್ಷಣೆಗೆ ಟೊಂಕಕಟ್ಟಿ ನಿಂತವರು ಸಂಘದ ಸ್ವಯಂಸೇವಕರು. ‘ಕೊನೆಯ ಹಿಂದು ಸುರಕ್ಷಿತವಾಗಿ ಭಾರತಕ್ಕೆ ಬರುವವರೆಗೆ ಅವರ ರಕ್ಷಣೆ ನಮ್ಮ ಹೊಣೆ’ ಎಂಬ ಸಂಘದ ಸೂಚನೆಯನ್ನು ಅಕ್ಷರಶಃ ಪಾಲಿಸಿದ ನೂರಾರು ಸ್ವಯಂಸೇವಕರು ಸ್ವತಃ ಭಾರತಕ್ಕೆ ಬರಲೇ ಇಲ್ಲ, ಅವರ ಶವ ಮಾತ್ರ ರೈಲಿನಲ್ಲಿ ಬಂತು!

    ಗಾಂಧಿ ಹತ್ಯೆಯ ಮಿಥ್ಯಾರೋಪವನ್ನು ಹೊರಿಸಿ ಸಂಘವನ್ನು ನಿಷೇಧಿಸಿದ ಕಾಂಗ್ರೆಸ್, ಅದೇ ಅವಕಾಶ ಬಳಸಿಕೊಂಡು ಸಂಘವನ್ನು ದಮನಿಸುವ ಪ್ರಯತ್ನ ಮಾಡಿತು. ಆದರೂ, ಸಂಘದ ಸ್ವಯಂಸೇವಕರು ಯಾರ ಮೇಲೂ ಪ್ರತೀಕಾರ ತೆಗೆದುಕೊಳ್ಳಲಿಲ್ಲ. ಸ್ವಯಂಸೇವಕರ ಮನೆ, ಅಂಗಡಿಗಳಿಗೆ ಬೆಂಕಿಯಿಟ್ಟರೂ, ಕೊಲೆಗಳು ನಡೆದರೂ ಅಂದಿನ ಸರಸಂಘಚಾಲಕರಾದ ಗುರೂಜಿ ಗೋಳ್ವಲ್ಕರ್ ಹೇಳಿದ್ದು, ‘ಹಲ್ಲು ನಾಲಿಗೆಯನ್ನು ಕಚ್ಚಿತೆಂದು, ಹಲ್ಲನ್ನು ಮುರಿಯಬಾರದು. ಎರಡೂ, ನಮ್ಮದೇ ದೇಹದ ಅಂಗಗಳು’ ಎಂದು. ಆರೋಪ ಸುಳ್ಳೆಂದು ನ್ಯಾಯಾಲಯದಲ್ಲಿ ಸಾಬೀತಾಗಿ, ಸಂಘದ ಮೇಲಿನ ನಿಷೇಧವನ್ನು ಹಿಂತೆಗೆದಿದ್ದು ಈಗ ಇತಿಹಾಸ. 1975ರ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಆರೆಸ್ಸೆಸ್. ಇಂದಿರಾ ಗಾಂಧಿಯವರ ಕಾಂಗ್ರೆಸ್ ಸರ್ಕಾರ ಸಂಘವನ್ನು ನಿಷೇಧಿಸಿದರೂ ಭೂಗತರಾಗಿದ್ದುಕೊಂಡೇ ಹೋರಾಟ ಮಾಡಿದವರು ಸಂಘದ ಸ್ವಯಂಸೇವಕರು.

    ಐವತ್ತು ವರ್ಷಗಳ ಹಿಂದೆ (1969) ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆದ ಸಂತ ಸಮ್ಮೇಳನದ ವೇದಿಕೆಯಲ್ಲಿ ಒಂದುಗೂಡಿದ ಅನೇಕ ಮಠಾಧಿಪತಿಗಳು ಮತ್ತು ಸಂತರು ‘ಹಿಂದವಃ ಸೋದರಾಃ ಸರ್ವೆ, ನ ಹಿಂದು ಪತಿತೋ ಭವೇತ್’ ಎಂದು ಘೊಷಿಸಿ ಜಾತಿಭೇದ, ಅಸ್ಪಶ್ಯತೆ ಮೊದಲಾದ ಆಚರಣೆಗಳಿಗೆ ಹಿಂದು ಧರ್ಮದಲ್ಲಿ ಯಾವುದೇ ಮಾನ್ಯತೆಯಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದರು. ಅದುವರೆಗೆ ಎಲ್ಲ ಜಾತಿಗಳ ಮಠಾಧಿಪತಿಗಳು ಒಂದೇ ವೇದಿಕೆಗೆ ಬರುವುದು ಅಸಾಧ್ಯವೆಂದೇ ಚಾಲ್ತಿಯಲ್ಲಿದ್ದ ಮಾತಾಗಿತ್ತು. ಆದರೆ, ವಿಹಿಂಪ ಮತ್ತು ಸಂಘ ಅದನ್ನು ಮಾಡಿ ತೋರಿಸಿದವು.

    ಸೇವೆ, ವೈಚಾರಿಕ ಕ್ಷೇತ್ರದಲ್ಲಿ ಸಂಘ: ಕೇವಲ ಒಂದು ಶಾಖೆಯಿಂದ ಪ್ರಾರಂಭವಾದ ಸಂಘ, ಇಂದು ಶಾಖೆ ಮಾತ್ರ ನಡೆಸುತ್ತಿಲ್ಲ. ಒಂದೂವರೆ ಲಕ್ಷಕ್ಕೂ ಅಧಿಕ ಸೇವಾಕಾರ್ಯಗಳು ದೇಶಾದ್ಯಂತ ನಡೆಯುತ್ತಿವೆ. ಪ್ರವಾಹ, ಭೂಕಂಪ, ಬರಗಾಲ, ಕರೊನಾದಂತಹ ಸಂಕಷ್ಟದ ಸಮಯದಲ್ಲಿ ಸಮಾಜದ ಸಹಾಯಕ್ಕೆ ತಕ್ಷಣ ಧಾವಿಸುವುದು ಸಂಘದ ಸ್ವಭಾವವೇ ಆಗಿದೆ. ಸಂಘದಿಂದ ಪ್ರೇರಣೆ ಪಡೆದ ವಿದ್ಯಾಭಾರತಿ, ವನವಾಸಿ ಕಲ್ಯಾಣ, ವಿಹಿಂಪ, ಮಜ್ದೂರ್ ಸಂಘ, ಕಿಸಾನ್ ಸಂಘ, ಸ್ವದೇಶಿ ಜಾಗರಣ ಮಂಚ್, ಎಬಿವಿಪಿ, ಸಂಸ್ಕಾರ ಭಾರತಿ, ಸಂಸ್ಕೃತ ಭಾರತಿ ಮೊದಲಾದ ಅನೇಕ ಸಂಘಟನೆಗಳು ರಾಷ್ಟ್ರೀಯ ವಿಚಾರದ ಆಧಾರದಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಘಟನೆ, ಪರಿವರ್ತನೆಯ ಕೆಲಸ ಮಾಡುತ್ತಿವೆ. ಗ್ರಾಮ ವಿಕಾಸ, ಜಲ-ಪರಿಸರ ಸಂರಕ್ಷಣೆ, ಗೋಸೇವೆಯಂತಹ ಕೆಲಸಗಳಲ್ಲೂ ಸಾವಿರಾರು ಸ್ವಯಂಸೇವಕರು ತೊಡಗಿಸಿಕೊಂಡು ಯಶಸ್ವಿ ಮಾದರಿಗಳನ್ನು ಕಟ್ಟಿಕೊಡುತ್ತಿದ್ದಾರೆ.

    ದೇಶ ಮೊದಲು ಎಂಬುದು ಪ್ರತಿಯೊಬ್ಬ ಪ್ರಜೆಯ ವಿಚಾರವಾದಾಗ, ಯಾವುದೇ ದೇಶ ಸಹಜವಾಗಿಯೇ ಉನ್ನತಿಯತ್ತ ಸಾಗುತ್ತದೆ. ಅಂತಹ ವೈಚಾರಿಕ ಜಾಗೃತಿಯಲ್ಲೂ ಸಂಘ ಮುಂಚೂಣಿಯಲ್ಲಿದೆ. ಮಕ್ಕಳಿಗಾಗಿ ಮಹಾಪುರುಷರ, ಕ್ರಾಂತಿಕಾರಿಗಳ ಕತೆ ಹೇಳುವ ಭಾರತ-ಭಾರತ ಸರಣಿಯಿಂದು ಹಿಡಿದು, ಭಾರತದ ನೈಜ ಇತಿಹಾಸ ತಿಳಿಸುವ ಸೀತಾರಾಮ್ ಗೋಯಲ್, ರಾಮ್ ಸ್ವರೂಪ್​ರಂತಹ ಖ್ಯಾತ ಲೇಖಕರ ಪುಸ್ತಕಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯ ಕನ್ನಡದಲ್ಲಿ ಪ್ರಕಟಿಸಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನಂತಹ ಸಂಘಟನೆಗಳು ಸಾಹಿತ್ಯಾಸಕ್ತರಿಗೆ ತರಬೇತಿ ನೀಡುವ, ಭವಿಷ್ಯದ ಲೇಖಕರನ್ನು ತಯಾರು ಮಾಡುವ ಕೆಲಸದಲ್ಲಿ ನಿರತವಾಗಿವೆ. ನಮ್ಮ ದೇಶದ ಶಿಕ್ಷಣ ಭಾರತೀಯ ಚಿಂತನೆಯ ಆಧಾರದಲ್ಲಿರಬೇಕು ಎಂಬುದು ಎಲ್ಲರೂ ಒಪ್ಪುವ ವಿಷಯ. ಮೆಕಾಲೆ ಶಿಕ್ಷಣಕ್ಕೆ ಪರ್ಯಾಯ ಮಾದರಿಗಳೇನು ಎಂಬ ಬಗ್ಗೆ ಸಂಶೋಧನೆ ಮತ್ತು ಪ್ರಯೋಗ ನಡೆಸುತ್ತಿದೆ ಭಾರತೀಯ ಶಿಕ್ಷಣ ಮಂಡಲ. ಗುರುಕುಲ ಪದ್ಧತಿಯಲ್ಲಿ ವೇದ, ಸಂಸ್ಕೃತಗಳ ಜೊತೆಗೇ ಆಧುನಿಕ ಶಿಕ್ಷಣವನ್ನೂ ನೀಡುವ ಪ್ರಯೋಗ ಕರ್ನಾಟಕದಲ್ಲಿ 25 ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ.

    ಎಡಬಲಗಳ ಚರ್ಚೆಯಲ್ಲಿ ತೊಡಗಿರುವವರು ಏನೇ ವಾದಿಸಿದರೂ, ಹಿಂದು ಚಿಂತನೆಯ ಆಧಾರದ ಮೇಲೆ ವಿಕಾಸಗೊಂಡ ಸಂಘಕಾರ್ಯವು ರಾಷ್ಟ್ರದ ಪುನರ್ನಿರ್ವಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದನ್ನು ಅಲ್ಲಗಳೆಯುವುದು ಸಾಧ್ಯವಿಲ್ಲ. ಸ್ವಯಂಸೇವಕನಿಗೆ ರಾಷ್ಟ್ರಹಿತವೇ ಸವೋಚ್ಚ. ಸಂಕಷ್ಟದ ಕಾಲದಲ್ಲಿ ಸಮಾಜದ ನೆರವಿಗೆ ಧಾವಿಸಲು ಆತ ಎಂದಿಗೂ ಸಿದ್ಧ. ಅದಕ್ಕೆ ಯಾರ ಅಪ್ಪಣೆಗೂ, ಅನುಮತಿಗೂ ಕಾಯುವವನಲ್ಲ ಆತ. ಎಷ್ಟೇ ವಿರೋಧ, ಅಡೆತಡೆಗಳು ಎದುರಾದರೂ ಮಾತೃಭೂಮಿಯನ್ನು ಪರಮವೈಭವದೆಡೆಗೆ ಕೊಂಡೊಯ್ಯಬೇಕೆಂಬ ಸಂಕಲ್ಪದಿಂದ ಹಿಮ್ಮೆಟ್ಟುವ ಯೋಚನೆಯೇ ಆತನಲ್ಲಿ ಹುಟ್ಟುವುದಿಲ್ಲ. ಇಂತಹ ವೀರವ್ರತಿಗಳ ಸಂತಾನ ಹೆಚ್ಚಲಿ. ಈ ವಿಜಯದಶಮಿಯು ಸಜ್ಜನಶಕ್ತಿಗೆ ವಿಜಯವನ್ನು ತಂದುಕೊಡಲಿ. ಎಲ್ಲರಿಗೂ ಒಳಿತಾಗಲಿ.

    (ಲೇಖಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಕಾರ್ಯವಾಹರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts