More

    ಇಂದು ಪಂಜಾಬ್ ಕಿಂಗ್ಸ್-ರಾಜಸ್ಥಾನ ರಾಯಲ್ಸ್ ಕಾದಾಟ

    ಮುಂಬೈ: ಹೊಸ ಹೆಸರು, ಹೊಸ ಲಾಂಛನ, ಹೊಸ ಜೆರ್ಸಿ ಜತೆಗೆ ಹೊಸ ಹುರುಪಿನೊಂದಿಗೆ ಸಜ್ಜಾಗಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್-14ರಲ್ಲಿ, ಹೊಸ ನಾಯಕ ಸಂಜು ಸ್ಯಾಮ್ಸನ್ ನೇತೃತ್ವದಲ್ಲಿ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ವಿರುದ್ಧ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಇದರೊಂದಿಗೆ ಲೀಗ್‌ನಲ್ಲಿ ಎಲ್ಲ 8 ತಂಡಗಳು ಕಣಕ್ಕಿಳಿದಂತಾಗಲಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ನಡೆಯಲಿರುವ ಕದನದಲ್ಲಿ ರನ್‌ಹೊಳೆಯೇ ಹರಿಯುವ ನಿರೀಕ್ಷೆ ಇದೆ. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಕನ್ನಡಿಗ ಅನಿಲ್ ಕುಂಬ್ಳೆ ಮಾರ್ಗದರ್ಶನದ ಪಂಜಾಬ್ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ.

    *ಆತ್ಮವಿಶ್ವಾಸದಲ್ಲಿ ಪಂಜಾಬ್
    ಕಳೆದ ಬಾರಿ ಆರಂಭಿಕ ಹಂತದಲ್ಲಿ ಮುಗ್ಗರಿಸಿ ಬಳಿಕ ಪುಟಿದೆದ್ದರೂ ಪ್ಲೇಆಫ್ ಹಂತಕ್ಕೇರುವ ಅವಕಾಶ ತಪ್ಪಿಸಿಕೊಂಡಿದ್ದ ಪಂಜಾಬ್ ತಂಡ ಈ ಬಾರಿ ಹೊಸತನದೊಂದಿಗೆ ಪ್ರಶಸ್ತಿ ಕನಸು ನನಸಾಗಿಸಲು ಸಜ್ಜಾಗಿದೆ. ಕಳೆದ ಆವೃತ್ತಿಯಲ್ಲಿ ಪಂಚ ಕನ್ನಡಿಗರಿಂದ ಕೂಡಿದ್ದ ಪಂಜಾಬ್‌ದಲ್ಲಿ ಈ ಬಾರಿ ಆ ಸಂಖ್ಯೆ ಎರಡಕ್ಕಿಳಿದಿದೆ. ಕನ್ನಡಿಗರಾದ ಕೆಎಲ್ ರಾಹುಲ್ (670ರನ್) ಮಯಾಂಕ್ ಅಗರ್ವಾಲ್ (424) ಹಾಗೂ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಉತ್ತಮ ಆರಂಭ ನೀಡಿದ್ದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸೂಕ್ತ ಬೆಂಬಲವಿಲ್ಲದೆ ಪಂಜಾಬ್ ತಂಡ ಎಡವಿತ್ತು. ದುಬಾರಿ ಮೊತ್ತಕ್ಕೆ ಖರೀದಿಯಾಗಿರುವ ತಮಿಳುನಾಡಿನ ಆಲ್ರೌಂಡರ್ ಶಾರೂಖ್ ಖಾನ್, ದೀಪಕ್ ಹೂಡಾ, ಸರ್ಫ್ರಾಜ್ ಖಾನ್, ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್ ಒಳಗೊಂಡ ಬ್ಯಾಟಿಂಗ್ ಪಡೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಬಲ್ಲದು. ಮೊಹಮದ್ ಶಮಿ, ಆಸ್ಟ್ರೇಲಿಯಾದ ವೇಗಿಗಳಾದ ಜೇ ರಿಚರ್ಡ್‌ಸನ್, ರಿಲಿ ಮೆರಿಡಿತ್ ಹಾಗೂ ಕ್ರಿಸ್ ಜೋರ್ಡನ್ ಒಳಗೊಂಡ ಬೌಲಿಂಗ್ ಪಡೆ ಎದುರಾಳಿ ತಂಡಕ್ಕೆ ಕಂಟಕವಾಗಬಲ್ಲದು.

    *ಸ್ಯಾಮನ್ಸ್‌ಗೆ ನಾಯಕತ್ವದ ಸವಾಲು
    ಆಸೀಸ್ ಮಾಜಿ ನಾಯಕ ಸ್ಟೀವನ್ ಸ್ಮಿತ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕೇರಳದ ಸಂಜು ಸ್ಯಾಮ್ಸನ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಇಂಗ್ಲೆಂಡ್ ಆಟಗಾರರಾದ ಆಲ್ರೌಂಡರ್ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ. ಬಟ್ಲರ್ ಜತೆಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಲೀಗ್ ಇತಿಹಾಸದಲ್ಲಿಯೇ ದುಬಾರಿಗೆ ಮೊತ್ತಕ್ಕೆ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕ್ರಿಸ್ ಮಾರಿಸ್ ಅವರನ್ನು ಕೊಂಡುಕೊಂಡಿದೆ. ಇವರೊಂದಿಗೆ ದೇಶೀಯ ಆಲ್ರೌಂಡರ್‌ಗಳಾದ ಕನ್ನಡಿಗ ಶ್ರೇಯಸ್ ಗೋಪಾಲ್, ಶಿವಂ ದುಬೆ, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್ ಹಾಗೂ ಲಿಯಾಮ್ ಲಿವೀಂಗ್‌ಸ್ಟೋನ್ ಒಳಗೊಂಡಿದೆ. ಅಲ್ಲದೆ, ಮುಸ್ತಾಫಿಜರ್ ರೆಹಮಾನ್, ಜೈದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ ಅಥವಾ ಚೇತನ್ ಸಕಾರಿಯಾ ಒಳಗೊಂಡ ಬೌಲಿಂಗ್ ಪಡೆಯೂ ಬಲಿಷ್ಠವಾಗಿದೆ. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅನುಪಸ್ಥಿತಿಯಲ್ಲಿ ಮುಸ್ತಾಫಿಜರ್ ರೆಹಮಾನ್ ವೇಗದ ಬೌಲಿಂಗ್ ವಿಭಾಗದ ನೇತೃತ್ವ ವಹಿಸಲಿದ್ದಾರೆ.

    ಸಂಭಾವ್ಯ ತಂಡಗಳು

    ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ (ನಾಯಕ, ವಿಕೀ), ಡೇವಿಡ್ ಮಲಾನ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರೂಖ್ ಖಾನ್, ಕ್ರಿಸ್ ಜೋರ್ಡನ್/ಫ್ಯಾಬಿಯನ್ ಅಲೆನ್, ಜೇ ರಿಚರ್ಡ್‌ಸನ್, ರವಿ ಬಿಷ್ಣೋಯಿ, ಅರ್ಷ್‌ದೀಪ್ ಸಿಂಗ್, ಮೊಹಮದ್ ಶಮಿ.

    ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಯಶಸ್ವಿ ಜೈಸ್ವಾಲ್/ಲಿವಿಂಗ್‌ಸ್ಟೋನ್, ರಿಯಾನ್ ಪರಾಗ್, ಶಿವಂ ದುಬೆ, ರಾಹುಲ್ ತೆವಾಟಿಯಾ, ಕ್ರಿಸ್ ಮಾರಿಸ್, ಶ್ರೇಯಸ್ ಗೋಪಾಲ್, ಆಂಡ್ರ್ಯೋ ಟೈ/ಜೈದೇವ್ ಉನಾದ್ಕತ್, ಕಾರ್ತಿಕ್ ತ್ಯಾಗಿ.

    ಮುಖಾಮುಖಿ: 21, ರಾಜಸ್ಥಾನ: 12, ಪಂಜಾಬ್: 9

    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಆರಂಭ: ರಾತ್ರಿ 7.30ಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts