

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರವು ಯಶಸ್ವಿಯಾಗಿ 50ನೇ ದಿನ ಪೂರೈಸಿದ ಬೆನ್ನಲ್ಲೇ ಚಿತ್ರತಂಡದ ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು. ಇನ್ನು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ತಾವು ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಿದ್ದಾರೆ.
ಕಾಟೇರ ಸಿನಿಮಾ ಕಲೆಕ್ಷನ್ ವಿಚಾರವಾಗಿ ಹಲವು ಉಹಾಪೋಹಗಳು ಎದ್ದಿದ್ದು ಈ ಸಂಬಂಧ ನನಗೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತರಿಗೆ ಇಲಾಖೆಯಿಂದ ನಾಲ್ಕು ನೋಟಿಸ್ಗಳನ್ನು ಕೊಡಲಾಗಿದೆ ಎಂದಿದ್ದಾರೆ.
ಮದಕರಿ ನಾಯಕ ಸಿನಿಮಾ ಮಾಡಲು ಹೋಗಿ ಕಾಟೇರ ಆಯ್ತು. ಮದಕರಿ ನಾಯಕ ಸಿನಿಮಾ ನನ್ನ ಕನಸಿನ ಯೋಜನೆ ಆಗಿದ್ದು, ಆ ಸಿನಿಮಾವನ್ನು ಖಂಡಿತವಾಗಿ ಮಾಡಿಯೇ ಮಾಡುತ್ತೇನೆ. ಕಾಟೇರ ಸಿನಿಮಾದ ಕಲೆಕ್ಷನ್ ಬಗ್ಗೆ ಹಲವರು ಹಲವು ರೀತಿ ಹೇಳುತ್ತಿದ್ದಾರೆ. ಮಾಧ್ಯಮಗಳವರು ಒಬ್ಬೊಬ್ಬರು ಒಂದೊಂದು ಲೆಕ್ಕ ಕೊಟ್ಟಿದ್ದಾರೆ. ಇದರಿಂದ ನನಗೆ ಸಂಕಷ್ಟ ಎದುರಾಗಿದೆ.
ಕಾಟೇರ ಕಲೆಕ್ಷನ್ ವಿಚಾರವಾಗಿ ಬೇರೆ ಬೇರೆ ರೀತಿ ಸುದ್ದಿ ಕೇಳಿ ಬರುತ್ತಿದ್ದು, ನನಗೆ ನಾಲ್ಕು ನೋಟೀಸ್ಗಳು ಬಂದಿವೆ. ಮೊದಲೆಲ್ಲ ತೆರಿಗೆ ಇಲಾಖೆಯವರು ಮಾತ್ರವೇ ನೋಟಿಸ್ ಕಳಿಸುತ್ತಿದ್ದರು. ಆದರೆ ಈಗ ಇಡಿಯವರೂ ಸಹ ಬಂದಿದ್ದಾರೆ. ಯಾರೆಲ್ಲಾ ಕಾಟೇರ ಸಿನಿಮಾದ ಮಾಹಿತಿಬ ಹಂಚಿಕೊಂಡಿದ್ದಾರೋ ಅವರ ಲಿಂಕ್ ಹಾಗೂ ಪೋನ್ ನಂಬರ್ಗಳನ್ನು ಕೊಡುತ್ತೇನೆ ಅವರನ್ನು ವಿಚಾರಣೆಗೆ ಒಳಪಡಿಸಲಿ.
ಕಾಟೇರ ಸಿನಿಮಾದ ಕಲೆಕ್ಷನ್ ಎಷ್ಟಾಗಿದೆ ಎಂದು ನನಗೆ ಗೊತ್ತಿದೆ. ಆ ಮಾಹಿತಿ ನನ್ನ ಕಚೇರಿಯಲ್ಲಿದೆ. ಯಾರಿಗೆ ಬೇಕಾದರೂ ನನ್ನ ಕಚೇರಿಗೆ ಬಂದರೆ ಕಾಟೇರ ಸಿನಿಮಾದ ಕಲೆಕ್ಷನ್ ಬಗ್ಗೆ ಪೂರ್ತಿ ಮಾಹಿತಿ ಕೊಡ್ತೀನಿ ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹೇಳಿದ್ದಾರೆ.