More

    ಕೋಶವನ್ನು ಓದಬೇಕು ಲೋಕವನ್ನು ನೋಡಬೇಕು

    ಕೋಶವನ್ನು ಓದಬೇಕು ಲೋಕವನ್ನು ನೋಡಬೇಕುಮಧ್ಯ ಏಷ್ಯಾ ಮತ್ತು ಯುರೋಪಿಯನ್ ರಾಷ್ಟ್ರಗಳ ಪ್ರವಚನ ಪ್ರವಾಸ ಮುಗಿಸಿಕೊಂಡು ಬೆಂಗಳೂರಿನಲ್ಲಿಳಿದಾಗ ಬೆಂಗಳೂರು ನನಗೆ ಕಂಡಿದ್ದು ಒಂದು ಬೃಹತ್ ಹಳ್ಳಿಯಂತೆ. ನನಗೇ ಆಶ್ಚರ್ಯ! ಹಾಗೆ ಹೇಳಬೇಕೆಂದರೆ ಬೆಂಗಳೂರಿನ ಅಭಿಮಾನಿ ನಾನು. ನನ್ನ ಜೀವನದ ಬಹುಮುಖ್ಯ ಒಂಬತ್ತು ವರ್ಷಗಳನ್ನು ಕಳೆದದ್ದು ಇಲ್ಲಿಯೇ. ಕಾಲೇಜ ಶಿಕ್ಷಣ, ಪ್ರಾರಂಭಿಕ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಪ್ರಭಾವಗಳು ನನ್ನ ಮೇಲೆ ಆಗಿದ್ದೂ ಬೆಂಗಳೂರಿನಲ್ಲಿಯೇ. ಆದರೆ ಕಣ್ಣುಕೋರೈಸುವ ಸಮೃದ್ಧಿ, ಕಟ್ಟುನಿಟ್ಟಿನ ನಿಯಮ ಪಾಲನೆ, ಸಾರ್ವಜನಿಕ ವಲಯಗಳಲ್ಲಿ ಸಂಚರಿಸುವಾಗ ಅನುಸರಿಸಬೇಕಾದ ಶಿಸ್ತು, ಸಂಯಮ, ಸ್ವಚ್ಛತೆ, ಇವುಗಳನ್ನೇ ಒಂದು ತಿಂಗಳು ಎಲ್ಲೆಲ್ಲೂ ಕಂಡ ಕಣ್ಣುಗಳಿಗೆ ಭಾರತದಲ್ಲಿ ಇವುಗಳ ನ್ಯೂನತೆ ಕಂಡಾಗ ಒಂದು ಕ್ಷಣಕ್ಕೆ ನನಗೆ ಅನ್ನಿಸಿದ್ದು ಮೂಲಭೂತವಾಗಿಯೇ ನಾವೆಲ್ಲೋ ಒಂದು ಪ್ರಮಾದವನ್ನೇ ಎಸಗುತ್ತಿದ್ದೇವೆ ಎಂದು. ಆ ದೇಶಗಳಿಗೆಲ್ಲ ಹೋಲಿಸಿದರೆ ನಮ್ಮಲ್ಲಿ ಯಾವ ಸಂಪನ್ಮೂಲದ ಕೊರತೆಯೂ ಇಲ್ಲ. ಇನ್ನೂ ಹೇಳಬೇಕೆಂದರೆ ಆ ಸೃಷ್ಟಿಕರ್ತ ಅಥವಾ ಪ್ರಕೃತಿಮಾತೆ ನಮ್ಮನ್ನು ಆಶೀರ್ವದಿಸಿದಷ್ಟು ಬೇರಾವ ದೇಶವನ್ನೂ ಆಶೀರ್ವದಿಸಿಲ್ಲ. ಶಿಲಾಯುಗ, ಹಿಮಯುಗದ ನಂತರ ಅಲೆಮಾರಿ ಮಾನವ ಕೊನೆಗೆ ಆರಿಸಿಕೊಂಡಿದ್ದು ಆಫ್ರಿಕಾ ಮತ್ತು ಏಷ್ಯಾಗಳನ್ನು. ಆದರೆ ಸಮೃದ್ಧಿಯ ನಾಡು ಅದು ಹೇಗೋ ಏಷ್ಯಾ ಅದರಲ್ಲೂ ಭಾರತವೇ ಆಗಿದ್ದು ವಿಧಾತನ ಕೃಪೆ. ಮುಂದಿನ ದಿನಗಳು ಗೊತ್ತಿರುವ ಭಾರತದ ಚರಿತ್ರೆಯೇ. ಅದನ್ನು ಇಲ್ಲಿ ವಿಸõತವಾಗಿ ಪ್ರಸ್ತಾಪಿಸುವುದಿಲ್ಲ. ಆದರೆ ಹಿಂದಿನ ಎರಡು ಶತಮಾನಗಳವರೆಗೂ ಪ್ರಪಂಚದಲ್ಲೇ ಶ್ರೀಮಂತವಾಗಿದ್ದ ರಾಷ್ಟ್ರ ಸ್ವಾತಂತ್ರೊ್ಯೕತ್ತರ ಎಪ್ಪತೆ ôದು ವರ್ಷಗಳ ನಂತರವೂ ಬೆಂಗಳೂರಿನಂತಹ ನಗರವನ್ನೂ ಹಳ್ಳಿಯಂತೆ ಕಾಣುವಂತೆ ಇಟ್ಟುಕೊಂಡಿದೆ. ಆದರೆ ಕೇವಲ ಐವತ್ತು ವರ್ಷಗಳಷ್ಟು ಹಿಂದೆ ಅಲೆಮಾರಿಗಳಂತೆ, ಎಲ್ಲದರಿಂದಲೂ ವಂಚಿತರಂತೆ ಕಾಣುತ್ತಿದ್ದ ಜನ ಇಂದು ಅಮರಾವತಿಯಂಥ ನಗರಗಳನ್ನು ನಿರ್ವಿುಸಿಕೊಂಡಿದ್ದಾರೆ ಎಂದರೆ ಇದೊಂದು ಪ್ರಜ್ಞಾವಂತ, ದೇಶಪ್ರೇಮಿ, ಎಚ್ಚೆತ್ತ ಮನಸ್ಸಿನ ವ್ಯಕ್ತಿಯನ್ನಂತೂ ನಿದ್ದೆಗೆಡುವಂತೆ ಮಾಡದಿರಲಾರದು.

    ಇದೊಂದು ಗಂಭೀರ ವಿಷಯ. ಇದನ್ನೂ ಮತ್ತೊಮ್ಮೆ ಪ್ರಸ್ತಾಪಿಸುತ್ತೇನೆ. ಯುರೋಪಿನಲ್ಲಿ ನನ್ನ ಗಮನ ಸೆಳೆದ ಯುರೋಪಿಯನ್ನರೇ ನಡೆಸುತ್ತಿರುವ ಎರಡು ಆಶ್ರಮಗಳನ್ನು ಕುರಿತು ಮಾತ್ರ ಇಲ್ಲಿ ಪ್ರಸ್ತಾಪಿಸಲಿಚ್ಛಿಸುತ್ತೇನೆ.

    ಇಟಾಲಿಯನ್ ಯುವಕನೊಬ್ಬ ಸಂನ್ಯಾಸಿಯಾಗಿ ನಲ್ವತ್ತು ವರ್ಷಗಳ ಹಿಂದೆ ಸ್ಥಾಪಿಸಿದ ಆಶ್ರಮ ಇನ್ನೂರು ಎಕರೆ ಜಾಗದಲ್ಲಿ ಅಲ್ಲಿಯ ಸವೋನಾ ನಗರದ ಸಮೀಪ ಆಲ್ತೊರೆ ಎಂಬಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಸರು ಗೀತಾನಂದ ಆಶ್ರಮ. ಈಗಿನ ಮುಖ್ಯಸ್ಥರು ಎಂಬತ್ತರ ಪ್ರಾಯದ ಸ್ವಾಮಿ ಯೋಗಾನಂದ ಗಿರಿ. ಈ ಯೋಗಾನಂದರು 1970ರ ಆಸುಪಾಸಿನಲ್ಲಿ ಯೋಗ ಕಲಿಯಲು ಪಾಂಡಿಚೇರಿಗೆ ಬಂದು ಸ್ವಾಮಿ ಗೀತಾನಂದರಿಂದ ದೀಕ್ಷೆ ಪಡೆದರು. ಯೋಗದ ಜತೆ ಅವರ ಮನಸ್ಸನ್ನು ಆಕರ್ಷಿಸಿದ್ದು ಭಾರತದ ಶಕ್ತಿಪೂಜೆ ಅಥವಾ ದೇವಿಯ ಆರಾಧನೆ. ತಮಿಳುನಾಡಿನ ಬೃಹತ್ ದೇವಾಲಯಗಳು, ಇಲ್ಲಿನ ಭರತನಾಟ್ಯ, ಶಾಸ್ತ್ರೀಯ ಸಂಗೀತ, ವೇದಾಭ್ಯಾಸ, ಸಂನ್ಯಾಸಿ ಪರಂಪರೆ, ಕೌಟುಂಬಿಕ ಸಂಬಂಧಗಳ ಗಟ್ಟಿತನ ಇದರಿಂದ ಬಹಳಷ್ಟು ಪ್ರಭಾವಿತರಾದ ಅವರು ಇಟಲಿಯಲ್ಲೂ ಒಂದು ಪುಟ್ಟ ಭಾರತವನ್ನೇ ನಿರ್ವಿುಸುವ ಕನಸುಕಂಡಿದ್ದು ದೈವೇಚ್ಛೆ. ಗುರುವಿನಿಂದ ಪ್ರೀತಿ, ಕೃಪೆಗಳನ್ನು ಸಂಪಾದಿಸಿ ತಾಯ್ನಾಡಿಗೆ ಮರಳಿದ ಅವರು ಅಲ್ಲಿ ಯೋಗಗುರುಗಳಾಗಿ ಬಹುಬೇಗನೇ ಜನಪ್ರಿಯರಾದರು. ಭಾರತಯಾತ್ರೆಯನ್ನು ತೀರ್ಥಯಾತ್ರೆಯನ್ನಾಗಿ ನಿರಂತರ ಮುಂದುವರಿಸಿಕೊಂಡೇ ಬರುತ್ತಿದ್ದ ಅವರಿಗೆ ಸಂನ್ಯಾಸದೆಡೆಗೆ ಆಕರ್ಷಣೆಯಾಗಿದ್ದು ಸಹಜವೇ!

    ಈಗಾಗಲೇ ಶ್ರೀವಿದ್ಯಾ ಉಪಾಸನೆಯ ಭಾವ, ವೈವಿಧ್ಯ, ಆಳಗಳೆಡೆಗೆ ಮನಸೋತಿದ್ದ ಅವರು ಇಟಲಿಯಲ್ಲೂ ಅದನ್ನೂ ಪ್ರಚುರಪಡಿಸಿದಾಗ ಇಟಲಿಯ ಸ್ತ್ರೀವರ್ಗ ಹೊಸಲೋಕವನ್ನೇ ಕಂಡಂತೆ ಸಂಭ್ರಮಿಸಿತು. ಇದಕ್ಕೆ ಸ್ಪಷ್ಟ ಹಾಗೂ ವಿಸõತ ರೂಪವನ್ನು ಕೊಡಲು ಈಗಾಗಲೇ ಗುರುವಿನಿಂದ ತೀವ್ರವಾಗಿ ಪ್ರಭಾವಿತರಾಗಿದ್ದ ಹಲವು ಶಿಷ್ಯೆಯರು ತಾವೂ ಸಂನ್ಯಾಸದೀಕ್ಷೆ ಕೈಗೊಂಡು ಶ್ರೀವಿದ್ಯಾ ಉಪಾಸನೆಯ ಕೇಂದ್ರ ಸ್ಥಾಪಿಸಲು ಪಣತೊಟ್ಟರು. ಇದರ ಫಲಶೃತಿಯೇ ಇಂದು ಆಶ್ರಮದಲ್ಲಿ ತಲೆಎತ್ತಿರುವ ಭವ್ಯ ದೇವಿದೇಗುಲ ಮತ್ತು 18 ಅಡಿ ಎತ್ತರದ ಲಲಿತಾ ದೇವಿಯ ಸುಂದರ ಮೂರ್ತಿ. ದೇವಿ ದೇವಾಲಯ ನೂರಕ್ಕೆ ನೂರರಷ್ಟು ಭಾರತೀಯ ಆಗಮಶಾಸ್ತ್ರದ ತದ್ವತ್ ನಿರೂಪಣೆ. ಅದರ ಒಳಗಡೆಯೇ ಮಹಾಲಕ್ಷ್ಮೀ, ಸರಸ್ವತಿ, ಸಪ್ತ ಮಾತೃಕೆಯರು, ನವದುರ್ಗೆಯರ ಸುಂದರ ಶಾಸ್ತ್ರೋಕ್ತ ನಿರ್ವಿುತ ಮೂರ್ತಿಗಳು. ಭವ್ಯವಾದ ಶಿವಲಿಂಗ, ಆಚಾರ್ಯ ಶಂಕರರ ಮೂರ್ತಿಗಳೂ ಇಲ್ಲಿವೆ. ದೇವಾಲಯದ ಹೊರಗೆ ಆಶ್ರಮದಲ್ಲಿ ಆಯಕಟ್ಟಾದ ಜಾಗಗಳಲ್ಲಿ ನಟರಾಜ, ಗಣಪತಿ, ಹನುಮಂತ, ಶಿವನ ವಿಗ್ರಹಗಳಿಗೆ ಲೆಕ್ಕವೇ ಇಲ್ಲ. ಒಂದಕ್ಕಿಂತಲೂ ಒಂದು ಸುಂದರ, ಇದರ ನಡುವೆ ಭವ್ಯ ನಾಟ್ಯರಂಗ, ಯಾಗಶಾಲೆ, ಸುತ್ತಲೂ ಹಸಿರು ವೃಕ್ಷಗಳ ಸುಂದರಮಾಲೆ, ಆಯುರ್ವೆದ, ಯೋಗ, ಧ್ಯಾನ, ದೇವಿಯ ಉಪಾಸನಾ ಸ್ತುತಿಗಳ ಉಚ್ಚಾರಣೆ, ಲಲಿತಾ ಸಹಸ್ರನಾಮ ಪಠಣ ಇವುಗಳು ಮನಸ್ಸನ್ನು ಬೇರೆ ಲೋಕದೆಡೆಗೇ ಒಯ್ಯುತ್ತವೆ. ಹತ್ತು, ಹದಿನೈದು ಸಂನ್ಯಾಸಿನಿಯರು ಮತ್ತು ಮೂರ್ನಾಲ್ಕು ಸಂನ್ಯಾಸಿಗಳು ತಮ್ಮ ಸಾಧನಾಜೀವನವನ್ನು ನಡೆಸಿಕೊಂಡು ಹೊರಟಿದ್ದಾರೆ. ಇಲ್ಲಿಯ ಶಾಸ್ತ್ರೋಕ್ತ ರೀತಿಯ ಉಪಾಸನೆಗಳು, ಭವ್ಯದೇಗುಲ ಮತ್ತು ಅಧ್ಯಾತ್ಮ ಪ್ರಧಾನ ವಾತಾವರಣಕ್ಕೆ ಮನಸೋತು ಇಟಲಿಯಲ್ಲಿ ನೆಲೆಸಿರುವ ಭಾರತ, ಶ್ರೀಲಂಕಾಗಳಿಂದ ವಲಸೆ ಹೋದ ಜನರಲ್ಲದೆ ಇಟಲಿಯವರೇ ಆದ ಸಹಸ್ರಾರು ಜನ ಇಲ್ಲಿಯ ಗಣೇಶಚೌತಿ, ನವರಾತ್ರಿ, ಮೊದಲಾದ ಹಬ್ಬಗಳಲ್ಲಿ ಸ್ವರ್ಗಸದೃಶ ವಾತಾವರಣ ನಿರ್ವಿುಸಿಕೊಡುತ್ತಾರೆ. ಕೆಲ ಸಾವಿರ ಜನ ಇಟಾಲಿಯನ್ನರು ಸನಾತನ ಧರ್ಮವನ್ನು ಯಾವ ಆಸೆ ಆಮಿಷಗಳಿಗೂ ಒಳಗಾಗದೆ, ಬಲವಂತಗಳಿಗೆ ಮಣಿಯದೆ ಸ್ವಇಚ್ಛೆಯಿಂದಲೇ ಸ್ವೀಕರಿಸಿದ್ದಾರೆ. ಅಲ್ಲದೆ, ‘ಇಟ್ಯಾಲಿಯನ್ ಹಿಂದೂ ಯೂನಿಯನ್’ ಎಂಬ ವೇದಿಕೆಯನ್ನೂ ನಿರ್ವಿುಸಿಕೊಂಡಿದ್ದಾರೆ. ರೋಮ್ಲ್ಲಿ ನೆಲೆಸಿದ ಜಯೇಂದ್ರನಾಥ ಎನ್ನುವ ದೇಶದ ಸವೋಚ್ಚನ್ಯಾಯಾಲಯದ ನ್ಯಾಯವಾದಿ ಇದರ ಅಧ್ಯಕ್ಷರು. ಇವರು ಹುಟ್ಟಿನಿಂದ ಇಟಾಲಿಯನ್, ಸ್ವಾಮಿ ಹಂಸಾನಂದ ಎನ್ನುವ ಆಶ್ರಮದ ಸಂನ್ಯಾಸಿನಿ ಇದರ ಕಾರ್ಯದರ್ಶಿ. ಇವರು ಪ್ರತಿವರ್ಷ ಹಲವು ಸಲ ಅಂತರ ಧರ್ವಿುಯ ಸಂವಾದ (Inter religious dialogue)ಗಳನ್ನು ಏರ್ಪಡಿಸುತ್ತಾರೆ. 2012 ರಲ್ಲಿ ಇಂತಹ ಸಂವಾದದಲ್ಲಿ ನಾನು ಮತ್ತು ತುಮಕೂರಿನ ಸ್ವಾಮಿ ವೀರೇಶಾನಂದರು ಹಿಂದೂಧರ್ಮವನ್ನು ಪ್ರತಿನಿಧಿಸಿದ್ದೆವು. ಇದೇ ಸಂದರ್ಭದಲ್ಲಿಯೇ ಇಟ್ಯಾಲಿಯನ್ ಭಾಷೆಯಲ್ಲಿ ರಚಿಸಲ್ಪಟ್ಟ ಸ್ವಾಮಿ ವಿವೇಕಾನಂದರ ಜೀವನಚರಿತ್ರೆಯನ್ನೂ ಬಿಡುಗಡೆಗೊಳಿಸಿದ್ದೆವು. 2018ರಲ್ಲಿ ವ್ಯಾಟಿಕನ್ನಿನಲ್ಲಿ ನಾನು ಹಿಂದೂಧರ್ಮವನ್ನು ಕುರಿತ ಲೇಖನವನ್ನು ಪ್ರಸ್ತುತ ಪಡಿಸಿದ ಕಾರ್ಯಕ್ರಮದಲ್ಲಿ ಈ ಸಂಸ್ಥೆಯವರ ಕೊಡುಗೆ ಗಮನೀಯ.

    ಸ್ವಾಮಿ ಯೋಗಾನಂದ, ಸ್ವಾಮಿ ಹಂಸಾನಂದರ ಜತೆಗೆ ಈ ಮಹಾನ್ ಯೋಜನೆಯಲ್ಲಿ ತೊಡಗಿಸಿಕೊಂಡವರು ಸ್ವಾಮಿನಿ ಉಮಾಶಕ್ತಿ, ಸ್ವಾಮಿನಿ ನೀರಾಜನ, ಸ್ವಾಮಿ ಪ್ರಿಯಾನಂದ, ಸ್ವಾಮಿ ಆತ್ಮಾನಂದ, ಸ್ವಾಮಿ ತ್ಯಾಗಾನಂದ ಮೊದಲಾದವರು. ಆಶ್ರಮದ ನಾಲ್ಕು ದಶಕಗಳ ಸುದೀರ್ಘ ಸೇವೆ ಮತ್ತು ಅದರ ಸಂಸ್ಥಾಪಕ ಸ್ವಾಮಿ ಯೋಗಾನಂದರ ಎಂಬತ್ತು ವರ್ಷಗಳ ವರ್ದಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಿನ ವರ್ಷ 2024ಕ್ಕೆ ಆಶ್ರಮವು ಬೃಹತ್ ಅಕಾಡೆಮಿಯನ್ನು ಸ್ಥಾಪಿಸುತ್ತಿದೆ. ಇಟಲಿಯ ಆಸಕ್ತ ವಿದ್ಯಾರ್ಥಿ ಸಮುದಾಯಕ್ಕೆ ಸನಾತನಧರ್ಮದ ಹೆಗ್ಗಳಿಕೆ, ಭಾರತದ ಅದ್ಭುತ ಸಾಧನೆಗಳ ಮತ್ತು ಜಾಗತಿಕ ಪುರೋಭಿವೃದ್ಧಿಗಾಗಿ ಅದರ ಕೊಡುಗೆ ಸಹಿತ ಸಮರ್ಥ ಮತ್ತು ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಇವುಗಳನ್ನು ಅಧ್ಯಯನವಸ್ತುಗಳನ್ನಾಗಿ ಉಳ್ಳ ಸನಿವಾಸಿ ತರಬೇತಿ ಕಾರ್ಯಕ್ರಮಗಳು ಇದರ ಗುರಿ. ಇದಕ್ಕೆ ಬೇಕಾದ ಸುಸಜ್ಜಿತ ಕಟ್ಟಡ ಸಿದ್ಧವಾಗಿದೆ. ಮುಂದಿನ ವರ್ಷ ಇದು ಕಾರ್ಯಪ್ರವೃತ್ತವಾಗುತ್ತದೆ. ಆಶ್ರಮದಲ್ಲಿ ನವರಾತ್ರಿಯಲ್ಲಿ ನಾವು ಕಳೆದ 3 ದಿನಗಳು ಚಿರಕಾಲ ನೆನಪಿನಲ್ಲಿ ಉಳಿಯುವಂಥದ್ದು. ಸನಾತನಧರ್ಮ ಮತ್ತು ಭಾರತದೆಡೆಗಿನ ಆ ಜನರ ಅಭಿಮಾನ ಮತ್ತು ಪ್ರೀತಿ, ಅವರ ಪ್ರಾತಃ ಹಾಗೂ ಸಾಯಂಸಂಧ್ಯೆಯ ಉಪಾಸನೆ ಆರತಿಗಳು, ವಾತ್ಸಲ್ಯಪೂರ್ಣ ನಡವಳಿಕೆಗಳು, ಆಶ್ರಮದ ಸುಂದರ ವಾತಾವರಣ ವೇದಕಾಲದ ವಸಿಷ್ಠಾಶ್ರಮವನ್ನೋ, ಅತ್ರಿಮಹರ್ಷಿಗಳ ಆಶ್ರಮವನ್ನೋ ನೆನಪಿಗೆ ತರುವಂತಿತ್ತು. ಇದು ನಮಗಷ್ಟೇ ಆದ ಅನುಭವವಲ್ಲ, ಯಾರಿಗೂ ಅಷ್ಟೇ. ಇಟಾಲಿಯನ್ ಹಿಂದೂ ಯೂನಿಯನ್ನಿನ ಸದಸ್ಯರ ಸಂಖ್ಯೆ ಕ್ರಮೇಣ ಏರುತ್ತಿರುವುದೇ ಇದಕ್ಕೆ ಸಾಕ್ಷಿ. ಕರೊನಾ ಹೆಮ್ಮಾರಿಯ ನಂತರ ಇಟಲಿಯಲ್ಲಿ ಆಯುರ್ವೆದಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು ಇದರಿಂದ ಆಶ್ರಮದ ಅವಿರತ ಪ್ರಯತ್ನಗಳಿಗೆ ಒಂದು ಪೂರಕಶಕ್ತಿ ಒದಗಿದಂತಾಗಿದೆ.

    ಇದೇ ರೀತಿಯಲ್ಲಿ ತಲೆಯೆತ್ತಿ ನಿಂತು ಯುರೋಪಿಯನ್ ವಾತಾವರಣದಲ್ಲಿ ಭಾರತೀಯ ಸನಾತನ ಆಧ್ಯಾತ್ಮಿಕ ಸಂಸ್ಕೃತಿಯ ಸೌರಭವನ್ನು ಪಸರಿಸುತ್ತಿರುವ ಇನ್ನೊಂದು ಆಶ್ರಮ ಸ್ವಿಟ್ಜರ್ಲೆಂಡಿನ ಝುೂರಿಕ್ ನಗರ ವಲಯದ ವಿಂಟರ್ ಥೂರ್​ನಲ್ಲಿಯ ಶ್ರೀ ಓಂಕಾರಾನಂದ ಸರಸ್ವತಿ ಆಶ್ರಮ. ಮೂಲತಃ ಆಂಧ್ರಪ್ರದೇಶದವರಾದ ಓಂಕಾರಾನಂದ ಸರಸ್ವತಿಯವರು ಋಷಿಕೇಶದ ದಿವ್ಯಜೀವನ ಸಂಘ (Divine Life Society)ದ ಸುಪ್ರಸಿದ್ಧ ಶ್ರೀ ಸ್ವಾಮಿ ಶಿವಾನಂದರ ಶಿಷ್ಯರು. ಇವರ ಅದ್ಭುತ ತಪಸ್ವಿ ವ್ಯಕ್ತಿತ್ವ, ಸರಳತೆ ಮತ್ತು ವಿದ್ವತ್ತುಗಳನ್ನು ಕಂಡ ಶ್ರೀಮಂತ ಸ್ವಿಸ್ ಮಹಿಳೆಯೊಬ್ಬಳು ಸ್ವಾಮಿಗಳನ್ನು ಯುರೋಪಿಗೆ ಕಳಿಸಿಕೊಟ್ಟರೆ ಅಲ್ಲೊಂದು ಆಶ್ರಮ ಸ್ಥಾಪಿಸಿ ಪ್ರಚಾರಕಾರ್ಯಕ್ಕೆ ಬೇಕಾದ ಎಲ್ಲ ನೆರವನ್ನು ಒದಗಿಸಿಕೊಡುವ ಭರವಸೆಯನ್ನಿತ್ತಳು. ಸುಪ್ರೀತರಾದ ಗುರುಗಳು ಹೃತ್ಪೂರ್ವಕವಾಗಿ ಆಶೀರ್ವದಿಸಿ ಶಿಷ್ಯನನ್ನು ಕಳಿಸಿಕೊಟ್ಟ ಪ್ರತಿಫಲ ಇಂದು ಇಲ್ಲಿ ಹಾಗೂ ಸಮೀಪದ ಆಸ್ಟ್ರೀಯನ್ ಗಡಿಯಲ್ಲಿ ಆಶ್ರಮಗಳ ರೂಪವನ್ನು ತಳೆದಿದೆ. ಹಂಗೇರಿಯನ್ ಒಬ್ಬ ವೇದ ಹಾಗೂ ಯಜ್ಞಗಳಿಗೆ ಸಂಬಂಧಿಸಿದ ಮಂತ್ರಗಳನ್ನು ಸಸ್ವರಪೂರ್ವಕ ಪಠಿಸಿ, ಪೂಜೆಗೈಯುವ ಹಾಗೂ ಹೋಮಗಳನ್ನು ಮಾಡುವ ದೃಶ್ಯ ಭಾರತೀಯರಿಗೆ ಒಂದು ‘ಸಂದೇಶ’ವೇ ಸರಿ. ಶಿಖೆ, ಯಜ್ಞೋಪವೀತವನ್ನು ಧರಿಸಿದ ಈತ ಹಿತಭಾಷಿ ಮತ್ತು ಮಿತಭಾಷಿ. ಇದೇ ಆಶ್ರಮದಲ್ಲಿ ಮುಂದೆ ಸಂನ್ಯಾಸ ಸ್ವೀಕರಿಸಿದ ಮಹಿಳೆಯೊಬ್ಬಳ ಪೂರ್ವಾಶ್ರಮದ ಮಗ ಭಾರತದ ಋಷಿಕೇಶದಲ್ಲಿ ‘ಗುರುಕುಲ ಪದ್ಧತಿ’ಯಡಿಯಲ್ಲಿ ವೇದ, ಸಂಸ್ಕೃತಗಳನ್ನು ಅಧ್ಯಯನ ಮಾಡಿ ಉನ್ನತ ಮಟ್ಟದ ಸಾಧನೆಯನ್ನು ಮಾಡಿದ್ದಾರೆ. ಹೆಸರು ವಿದ್ಯಾಭಾಸ್ಕರ್. ಜನಾಂಗದ ದೃಷ್ಟಿಯಲ್ಲಿ ಇವರು ಜರ್ಮನ್. ಆದರೆ ಗೀತೆ, ಉಪನಿಷತ್, ಬ್ರಹ್ಮಸೂತ್ರಗಳು, ವೇದಗಳ ಕರ್ಮಕಾಂಡ ಇತ್ಯಾದಿಗಳಲ್ಲಿ ಅದ್ಭುತ ಪಾಂಡಿತ್ಯ. ಬಹಳಷ್ಟು ಜನ ಭಾರತೀಯರು ಇವರಿಂದ ಸಂಸ್ಕೃತ ಪಾಠ ಹೇಳಿಸಿಕೊಳ್ಳುತ್ತಾರೆ. ವಿದ್ಯಾಭಾಸ್ಕರ್ ಆಗಾಗ್ಗೆ ಸ್ವಿಟ್ಜರ್ಲೆಂಡ್ ಮತ್ತು ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ indology ವಿಭಾಗದಲ್ಲಿ ಅತಿಥಿ ಉಪನ್ಯಾಸಗಳನ್ನು ಮಾಡುತ್ತಿದ್ದು ವಿದ್ಯಾರ್ಥಿಗಳು ಇವರ ಪ್ರವಚನಗಳಿಗೆ ಮನಸೋತು ಮಂತ್ರಮುಗ್ಧರಾಗಿದ್ದಾರೆ. ನಲ್ವತ್ತರ ಹರೆಯದ ಇವರ ಸಾಧನೆ ಸ್ತುತ್ಯಾರ್ಹ. ಭಾರತೀಯ ಪರಂಪರೆಯ ಎಲ್ಲ ವಿಷಯಗಳನ್ನು ಜರ್ಮನ್ ಭಾಷೆಗೆ ತರ್ಜುಮೆ ಮಾಡಿ ಪ್ರಕಟಿಸುವ ಬೃಹತ್ ಪ್ರಸಾರಾಂಗ ಇವರ ಆಶ್ರಮದಲ್ಲಿದೆ. ಈ ಆಶ್ರಮದಲ್ಲೂ ಇಪ್ಪತ್ತು ಸಂನ್ಯಾಸಿ ಹಾಗೂ ಸಂನ್ಯಾಸಿನಿಯರು ಸಾಧನಾಜೀವನದಲ್ಲಿ ಮಗ್ನರಾಗಿದ್ದಾರೆ. ಓಂಕಾರಾನಂದ ಸರಸ್ವತಿಯವರು ಈಗಿಲ್ಲ. ಬ್ರಹ್ಮಲೀನರಾಗಿ ಹಲವು ವರ್ಷಗಳೇ ಕಳೆದರೂ ಶಿಷ್ಯವರ್ಗ ಶ್ರದ್ಧೆ, ಭಕ್ತಿಗಳಿಂದ ಆಶ್ರಮದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದ, ಸ್ವಾಮಿ ಜ್ಞಾನೇಶ್ವರಾನಂದ ಇಲ್ಲಿಯ ಪ್ರಮುಖರು. ಇವರಿಬ್ಬರೂ ಪೂರ್ವಾಶ್ರಮದಲ್ಲಿ ಸೋದರಿಯರು. ವಿವೇಕಾನಂದ ಝುೂರಿಕ್ ಕೇಂದ್ರದ ಮೇಲ್ವಿಚಾರಕಿ. ಜ್ಞಾನೇಶ್ವರಾನಂದ ಆಸ್ಟ್ರೀಯನ್ ಕೇಂದ್ರದಲ್ಲಿ ಪ್ರಮುಖಳು.

    ಸನಾತನ ಧರ್ಮದ ಬಗ್ಗೆ ಅಪಸ್ವರಗಳು, ಅದರ ಪ್ರತಿಧ್ವನಿಗಳು, ಅಪಪ್ರಚಾರಗಳಲ್ಲಿ ಭಾರತದ ಕೆಲ ವರ್ಗಗಳು ತಮ್ಮ ಜೀವನ ಸಾರ್ಥಕತೆಯನ್ನು ಕಾಣುತ್ತಿರುವ ಈ ದಿನಗಳಲ್ಲಿ ಯುರೋಪಿನ ನಮ್ಮ ಸೋದರ, ಸೋದರಿಯರು ಮೊದಲೇ ಇದನ್ನೆಲ್ಲ ಕಂಡಿದ್ದರೇನೋ ಎನ್ನುವಂತೆ ಅಪರಿಮಿತ ಶ್ರದ್ಧೆ, ಉತ್ಸಾಹಗಳಿಂದ ಇದೇ ಸನಾತನ ತತ್ತ ್ವಳನ್ನು ಹಠ ಹಿಡಿದವರಂತೆ ಪ್ರಚಾರಗೈಯುತ್ತಿರುವುದನ್ನು ಕಂಡಾಗ ವಿಧಾತನ ಕಾರ್ಯಲೀಲೆಗಳು ನಮ್ಮನ್ನು ಮುಗ್ಧರನ್ನಾಗಿಸುತ್ತವೆ. ಯುರೋಪಿಯನ್ ಭವಿಷ್ಯವನ್ನು ತಮ್ಮ ಋಷಿಗಣ್ಣಿನಲ್ಲಿ ಕಂಡ ವಿವೇಕಾನಂದರು, ‘ಯುರೋಪ್ ಯುದ್ಧಗಳಿಂದ ಬಸವಳಿದು ಮತ್ತೊಮ್ಮೆ ಪುನರುತ್ಥಾನಗೊಳ್ಳುವ ಆ ಪರ್ವಕಾಲದಲ್ಲಿ ಅದು ಮೊರಹೊಕ್ಕುವುದು ವೇದಾಂತಕ್ಕೇ’ ಎಂದು ನುಡಿದಿದ್ದರು. ಋಷಿವಾಕ್ಯ ಸುಳ್ಳಾಗುವುದುಂಟೆ? ಕೃವೇಷಿಯಾ, ರಷ್ಯಾ, ಸ್ಪೇನ್​ಗಳು ಸಹ ಸ್ಪರ್ಧೆಗಿಳಿದವರಂತೆ ಆದರೆ ಮೌನವಾಗಿ ಇದೇ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಜರ್ಮನಿಯ ಹ್ಯಾಂಬರ್ಗ್, ಮ್ಯೂನಿಕ್, ಎರ್ಲಾಂಗೆನ್ ನಗರಗಳಲ್ಲಿ ಇದರ ಸ್ಪಷ್ಟರೂಪ ನಮ್ಮ ಗಮನಕ್ಕೆ ಬಾರದಿರಲಿಲ್ಲ.

    ‘ಕೃಣ್ವಂತೋ ವಿಶ್ವಮಾರ್ಯಂ- ಇಡೀ ವಿಶ್ವವನ್ನೇ ಆರ್ಯರನ್ನಾಗಿಸೋಣ’- ಎನ್ನುವ ವೇದಮಾತೆಯ ಸಾತ್ವಿಕ ಆಸೆ ಇಂದು ಸ್ಪಷ್ಟರೂಪ ಪಡೆದುಕೊಳ್ಳುತ್ತಿದೆ. ಭೂಮಂಡಲವನ್ನೇ ತನ್ನ ಕುಟುಂಬವನ್ನಾಗಿಸಿಕೊಂಡ (ವಸುಧೈವ ಕುಟುಂಬಕಮ್ ಆರ್ಯಧರ್ಮಕ್ಕೆ ಸನಾತನಧರ್ಮ ಭಾರತದಲ್ಲೋ, ಯುರೋಪಿನಲ್ಲೋ, ಅಮೆರಿಕದಲ್ಲೋ ವಿಜೃಂಭಿಸಿದರೆ ಬಹಳಷ್ಟು ವ್ಯತ್ಯಾಸವೇನೂ ಕಾಣುವುದಿಲ್ಲ. ಕಾಣಬಲ್ಲ ಕಣ್ಣುಗಳಿಗೆ ಸತ್ಯ ಸ್ಪಷ್ಟ. ನಿಜಕ್ಕೂ ಈ ಪ್ರವಾಸ ಹಲವು ರೋಮಾಂಚನಗಳನ್ನು ಸೃಷ್ಟಿಸಿದ್ದಂತೂ ದಿಟ.

    (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ರಾಜಸ್ಥಾನ ವಿಧಾನಸಭಾ ಚುನಾವಣೆ: ಪ್ರಲ್ಹಾದ ಜೋಶಿ ದೆಹಲಿ ನಿವಾಸ ಈಗ ಬಿಜೆಪಿ ಚಟುವಟಿಕೆಯ ಕೇಂದ್ರ

    ಮಕ್ಕಳಾದರೆ ದಂಡ ಹಾಕಬಾರದು; ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸಬೇಕು: ಎಲಾನ್ ಮಸ್ಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts