More

    ತುಮ್ಮಿನಕಟ್ಟೆ-ಹೊನ್ನಾಳಿ ರಸ್ತೆ ಸಂಚಾರ ತಡೆದು ಪ್ರತಿಭಟನೆ

    ರಟ್ಟಿಹಳ್ಳಿ: ಉಡುಗಣಿ-ತಾಳಗುಂದ-ಹೊಸೂರು ನೀರಾವರಿ ಯೋಜನೆ ವಿರೋಧಿಸಿ ತಾಲೂಕಿನ ಚಟ್ನಳ್ಳಿ ಗ್ರಾಮದ ಬಳಿ ತುಮ್ಮಿನಕಟ್ಟೆ-ಹೊನ್ನಾಳಿ ಮುಖ್ಯ ರಸ್ತೆಯಲ್ಲಿ ಸಂಚಾರ ತಡೆದು ವಿವಿಧ ರೈತ ಪರ ಸಂಘಟನೆ ಮತ್ತು ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

    ಹಿರಿಯ ವಕೀಲ ಬಿ.ಡಿ. ಹಿರೇಮಠ ಮಾತನಾಡಿ, ಶಿಕಾರಿಪುರ ತಾಲೂಕಿನ ಉಡುಗಣಿ-ತಾಳಗುಂದ-ಹೊಸೂರು ನೀರಾವರಿ ಯೋಜನೆ ಅನಧಿಕೃತವಾಗಿದ್ದು, ಈ ಯೋಜನೆಗಾಗಿ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕಿನ ರೈತರ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೂಡಲೆ ಕೈಬಿಡಬೇಕು ಎಂದು ಆಗ್ರಹಿಸಿದರು.

    ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಣೆಯಾಗಬೇಕು. ಹೋರಾಟಗಾರರು ಪಕ್ಷಭೇದ ಮರೆತು ನ್ಯಾಯಯುತ ಹೋರಾಟಕ್ಕೆ ಬೆಂಬಲಿಸಬೇಕು. ಸರ್ಕಾರ ಈ ನೀರಾವರಿ ಯೋಜನೆಗೆ ಯಾವುದೇ ರೈತರ ಜಮೀನು ಭೂಸ್ವಾಧೀನಕ್ಕೆ ಮುಂದಾಗದೇ ಬದಲಿ ವ್ಯವಸ್ಥೆ ಮಾಡಬೇಕು ಎಂದರು.

    ರೈತ ಮುಖಂಡರಾದ ಉಜಿನೆಪ್ಪ ಕೋಡಿಹಳ್ಳಿ ಮತ್ತು ವಿನಯ ಪಾಟೀಲ ಮಾತನಾಡಿ, ಸರ್ಕಾರ ಶಿಕಾರಿಪುರದ ಈ ಯೋಜನೆಗಾಗಿ ರಟ್ಟಿಹಳ್ಳಿ ತಾಲೂಕಿನಲ್ಲಿ ಹರಿಯುತ್ತಿರುವ ತುಂಗಾಭದ್ರ ನದಿಗೆ ಚಟ್ನಳ್ಳಿ ಗ್ರಾಮದ ಬಳಿ ಜಾಕ್​ವೆಲ್ ನಿರ್ಮಾಣ ಮಾಡಿ ಪೈಪ್​ಲೈನ್ ಮೂಲಕ ನೀರಾವರಿ ಯೋಜನೆ ಮಾಡಲಾಗುತ್ತಿದೆ. ಈ ಯೋಜನೆಗಾಗಿ ಸರ್ವೀಸ್ ರಸ್ತೆಯ ವಿಚಾರವಾಗಿ ರೈತರ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಸಣ್ಣ ಹಿಡುವಳಿದಾರರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ರೈತರು ಭೂಮಿ ಕಳೆದುಕೊಳ್ಳಬೇಕಾಗಿದೆ. ಆದ್ದರಿಂದ ಸರ್ಕಾರ ಈ ಯೋಜನೆ ಸ್ಥಗಿತಗೊಳಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

    ವಕೀಲರಾದ ಎಸ್.ಡಿ. ಹಿರೇಮಠ, ಜಿ.ಬಿ. ಕುಲಕರ್ಣಿ, ಶಂಕರ ಅಂಬಲಿ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ರೈತ ಸಂಘದ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಬಿ.ಎನ್. ಬಣಕಾರ, ರಾಜಶೇಖರ ಪಾಟೀಲ, ಸುಲೇಮಾನ್ ಹೊರಕೇರಿ, ಹರೀಶ ಇಂಗಳಗುಂದಿ, ಎಂ.ಬಿ. ಪಾಟೀಲ, ಪರ್ವತಪ್ಪ ಅಜಗೋಳ, ರಂಗಪ್ಪ ಬಡಪ್ಪಳವರ, ಭೀಮಪ್ಪ ವೆಂಕಣ್ಣನವರ, ಬಿ.ಜಿ. ಸಿದ್ದನಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts