More

    ಬಸ್ ಸ್ಟಾಪ್ ಎದುರು ತರಕಾರಿ ವ್ಯಾಪಾರ

    ಕೊಪ್ಪ: ಪಟ್ಟಣದ ದ್ಯಾವೇಗೌಡ ವೃತ್ತದ ಬಸ್ ನಿಲ್ದಾಣ ಎದುರು ತರಕಾರಿ ವ್ಯಾಪಾರ ಮಾಡುತ್ತಿರುವುದರಿಂದ ಪ್ರಯಾಣಿಕರು, ಪಾದಚಾರಿಗಳು ಹಾಗೂ ಬಸ್ ನಿಲುಗಡೆಗೆ ತೊಂದರೆಯಾಗುತ್ತಿದೆ. ಪಪಂ ಎದುರೇ ರಸ್ತೆ ಬದಿ ವ್ಯಾಪಾರ ನಡೆಯುತ್ತಿದ್ದರೂ ಅಧಿಕಾರಿಗಳು ಮೌನವಾಗಿದ್ದಾರೆ.

    ಬೇರೆ ತಾಲೂಕು, ಜಿಲ್ಲೆಗಳಿಂದ ವರ್ತಕರು ಬಂದು ರಸ್ತೆಯ ಬದಿ ತರಕಾರಿ, ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಇದು ಪಟ್ಟಣದ ತರಕಾರಿ ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ಇಲ್ಲಿನ ವ್ಯಾಪಾರಸ್ಥರು ಹೊರ ಜಿಲ್ಲೆಯವರಿಗೆ ಅವಕಾಶ ನೀಡಬಾರದು ಎಂದು ತಾವೇ ರಸ್ತೆ ಬದಿ ತರಕಾರಿ ವ್ಯಾಪಾರ ಮಾಡಲು ಮುಂದಾಗಿದ್ದಾರೆ.

    ಪಪಂ ಕೂಡ ಭಾನುವಾರ ಸಂತೆ ನಡೆಸಲು ಅವಕಾಶ ಕಲ್ಪಿಸಿದೆ. ಆಗ ಹೊರ ಜಿಲ್ಲೆಗಳಿಂದ ಬಂದು ಇಲ್ಲಿ ವ್ಯಾಪಾರ ನಡೆಸುತ್ತಾರೆ. ಆದರೆ ಶುಕ್ರವಾರ, ಶನಿವಾರವೂ ಬೇರೆಡೆಯಿಂದ ಆಗಮಿಸಿ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಅಸಮಾಧಾನಗೊಂಡ ಪಟ್ಟಣದ ತರಕಾರಿ ವ್ಯಾಪಾರಿಗಳು ತಮ್ಮ ಮಳಿಗೆಯಲ್ಲಿ ವ್ಯಾಪಾರ ಮಾಡುವುದರ ಜತೆಗೆ ರಸ್ತೆ ಬದಿಯಲ್ಲೂ ತರಕಾರಿ ಹಾಕಿ ಮಾರಾಟ ಮಾಡುತ್ತಿದ್ದಾರೆ. ಆದರೆ ಬಸ್ ನಿಲ್ದಾಣದ ಎದುರೇ ವ್ಯಾಪಾರ ಮಾಡುತ್ತಿರುವುದು ಬಸ್ ನಿಲುಗಡೆಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

    ಪಟ್ಟಣದ ರಸ್ತೆಗಳು ಕಿರಿದಾಗಿವೆ. ರಸ್ತೆ ಬದಿ ಈ ರೀತಿ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆ. ರಸ್ತೆ ಬದಿ ಮತ್ತು ಬಸ್ ಸ್ಟಾಪ್ ಎದುರು ತರಕಾರಿ, ಹಣ್ಣುಗಳ ವ್ಯಾಪಾರಕ್ಕೆ ಯಾರಿಗೂ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ರಸ್ತೆ ಬದಿಯಲ್ಲಿ ಹೊರ ಜಿಲ್ಲೆಯಿಂದ ಬಂದು ವ್ಯಾಪಾರ ಮಾಡುವುದನ್ನು ಕಡಿವಾಣ ಹಾಕಿ ಎಂದು ಪಪಂಗೆ ಮನವಿ ಮಾಡಿದ್ದೇವೆ. ಆದರೆ, ಅವರು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ನಾವು ಬಾಡಿಗೆ ಕಟ್ಟಿ ವ್ಯಾಪಾರ ಮಾಡುತ್ತೇವೆ. ಆದರೆ ಬೇರೆಯವರು ಯಾವುದೇ ಶುಲ್ಕ ಕಟ್ಟದೆ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಾರೆ. ಇದರಿಂದ ನಮಗೆ ಹೊಡೆತ ಬಿದ್ದಿದೆ. ಈ ಹೊಡೆತದಿಂದ ತಪ್ಪಿಸಿಕೊಳ್ಳಲು ನಾನೂ ಸೇರಿ ಹಲವರು ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ ಎಂದು ತರಕಾರಿ ಅಂಗಡಿ ಮಾಲೀಕ ಅಭಿಷೇಕ್ ಹೊಸಳ್ಳಿ ತಿಳಿಸಿದ್ದಾರೆ.

    ಬಸ್ ಸ್ಟಾಪ್ ಎದುರು ರಸ್ತೆ ಬದಿ ತರಕಾರಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪಪಂ ಸದಸ್ಯರೊಡನೆ ತುರ್ತು ಸಭೆ ನಡೆಸಿ ಕ್ರಮ ಕೈಗೊಳ್ಳುವಂತೆ ನಿರ್ಣಯ ಮಾಡಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಬಸವರಾಜ್ ಟಾಕಪ್ಪ ಶಿಗ್ಗಾವಿ ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts