More

    ಇದು ರಾಷ್ಟ್ರೀಯ ಹೆದ್ದಾರಿ ನಂಬಲೇಬೇಕು !

    ಎನ್‌ಎಚ್ 150 ದುಸ್ಥಿತಿಗೆ ವಾಹನ ಸವಾರರು ಹೈರಾಣ | ದುರಸ್ತಿಗಿಲ್ಲ ಕ್ರಮ,

    ಕುರುಗೋಡು: ಸ್ವಲ್ಪ ಯಾಮಾರಿದರೂ ಜೀವಕ್ಕೆ ಸಂಚಕಾರ ಗ್ಯಾರಂಟಿ! ಗುಂಡಿಗಳಿಂದಾಗಿ ವಾಹನ ಸವಾರರು ಸರ್ಕಸ್ ಮಾಡುವುದು ಅನಿವಾರ್ಯ. ಅಪಘಾತವಾದರೆ ಮೈಮೂಳೆಗಳು ಮುರಿಯುವುದು ಖಚಿತ.

    ಇದು ಕುರುಗೋಡಿನ ಸಿಂದಿಗೇರಿಯಿಂದ ಬಳ್ಳಾರಿ ಮಾರ್ಗವಾಗಿ ಸಾಗುವ ರಾಷ್ಟ್ರೀಯ ಹೆದ್ದಾರಿ 150ರ ದುಸ್ಥಿತಿ. ಈ ಮಾರ್ಗದಲ್ಲಿ ಶಾಸಕರು, ಮಂತ್ರಿಗಳು, ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು, ಜಿಪಂ, ತಾಪಂ, ಅಧಿಕಾರಿಗಳು ಓಡಾಡುತ್ತಾರೆ. ಆದರೆ, ದುರಸ್ತಿಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ರಸ್ತೆಯ ಅವ್ಯವಸ್ಥೆ ಕಂಡು ಜನರು ನಿತ್ಯವೂ ಜನಪ್ರತಿನಿಧಿಗಳಿಗೆ, ಆಡಳಿತ ವರ್ಗಕ್ಕೆ ಶಾಪ ಹಾಕುತ್ತಿದ್ದಾರೆ.

    ಎರಡು ವರ್ಷಗಳ ಹಿಂದೆ ನಿರ್ಮಿಸಿರುವ ರಸ್ತೆಯ ಡಾಂಬರ್ ಸ್ವಲ್ಪ ದಿನಗಳಲ್ಲೇ ಕಿತ್ತಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದು, ವಾಹನ ಸವಾರರಿಗೆ ಕಂಟಕವಾಗಿ ಮಾರ್ಪಟ್ಟಿದೆ. ಕೆಲವೆಡೆ ದುರಸ್ತಿ ಮಾಡಿದ್ದರೂ ಸಂಚಾರ ಸಂಕಟ ತಪ್ಪಿಲ್ಲ. ಈ ಮಾರ್ಗದಲ್ಲಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ವಾಹನ ಸವಾರರು ಹರಸಾಹಸ ಪಡಬೇಕಿದೆ. 108 ಆಂಬುಲೆನ್ಸ್ ಸಿಬ್ಬಂದಿಗೆ ಗರ್ಭಿಣಿಯರು ಹಾಗೂ ರೋಗಿಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸುವುದು ಸವಾಲಿನ ಕೆಲಸವಾಗಿದೆ.

    ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನಗಳು ಅಪಘಾತಕ್ಕೀಡಾಗಿವೆ. ವಿಶೇಷವಾಗಿ ರಾತ್ರಿ ವೇಳೆ ಸಂಚಾರ ಮತ್ತಷ್ಟು ಕಷ್ಟದಾಯಕವಾಗಿದೆ. ರಸ್ತೆ ಬದಿಯ ವಿದ್ಯುತ್ ಕಂಬಗಳು ಕೂಡ ಸಂಚಾರಕ್ಕೆ ಅಡ್ಡಿಯಾಗಿವೆ. ರಾಷ್ಟ್ರೀಯ ಹೆದ್ದಾರಿ 150 ಸಿರಗುಪ್ಪ, ಬಳ್ಳಾರಿ ಮಾರ್ಗವಾಗಿ ಬೀದರ್‌ನಿಂದ ಶ್ರೀರಂಗಪಟ್ಟಣಕ್ಕೆ ಸಂಪರ್ಕಿಸುತ್ತದೆ. ಹಲವಾರು ತಿಂಗಳಿಂದ ಸಂಚಾರ ಸಂಕಷ್ಟವಿದ್ದರೂ ಸಂಬಂಧಿಸಿದವರು ಗಮನಹರಿಸುತ್ತಿಲ್ಲ. ಮಳೆ ಬಂದಾಗ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿರುತ್ತದೆ.

    ಸಿಂದಿಗೇರಿಯಿಂದ ಬಳ್ಳಾರಿಗೆ ಸಂಪರ್ಕಿ ಸುವ ಎನ್‌ಎಚ್ 150 ಹದಗೆಟ್ಟಿದ್ದು, ಸವಾರರಿಗೆ ತೀವ್ರ ಸಮಸ್ಯೆ ಯಾಗಿದೆ. ಅನೇಕ ಬಾರಿ ವಾಹನಗಳು ಪಲ್ಟಿಯಾ ಗಿವೆ. ಆದರೂ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಕೆಲವೆಡೆ ಗುಂಡಿಗಳನ್ನು ಮುಚ್ಚಿದ್ದರೂ ಪೂರ್ಣ ಪ್ರಮಾಣದಲ್ಲಿ ದುರಸ್ತಿಗೆ ಕ್ರಮ ವಹಿಸಿಲ್ಲ.
    | ಸಿ.ಲಿಂಗಪ್ಪ ಗ್ರಾಮಸ್ಥ, ಬೈಲೂರು

    ರಸ್ತೆ ದುಸ್ಥಿತಿ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮೂರು ತಿಂಗಳು ಕಳೆದಿದ್ದರೂ ದುರಸ್ತಿ ಕೈಗೊಂಡಿಲ್ಲ. ರಸ್ತೆ ದುರಸ್ತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ.
    | ಎ.ದೇವದಾಸ್ ಎಸ್‌ಯುಸಿಐ ಕಾರ್ಯದರ್ಶಿ, ಕೋಳೂರು

    ಸಿಂದಿಗೇರಿಯಿಂದ ಬಳ್ಳಾರಿವರೆಗಿನ ರಸ್ತೆ ತುಂಬ ಹಾಳಾಗಿದ್ದು, ಅನೇಕ ಅಪಘಾತಗಳು ಸಂಭವಿಸಿವೆ. ರಸ್ತೆ ದುಸ್ಥಿತಿ ಬಗ್ಗೆ ಜನರು ನನಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.
    | ಜೆ.ಎನ್.ಗಣೇಶ್ ಶಾಸಕ, ಕಂಪ್ಲಿ

    ಸಿಂದಿಗೇರಿಯಿಂದ ಬಳ್ಳಾರಿವರೆಗೆ ರಸ್ತೆ ಹದಗೆಟ್ಟಿರುವುದು ಗಮನಕ್ಕೆ ಇದ್ದು, ದುರಸ್ತಿ ಕೈಗೊಳ್ಳಲಾಗುತ್ತಿದೆ.
    | ಶಾಕಿರ್ ಹುಸೇನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts