More

    ಮಂಡ್ಯದಲ್ಲಿ ರೋಡ್ ಶೋ ಭರ್ಜರಿ ಯಶಸ್ಸು: ಕಾರ್ಯಕರ್ತರನ್ನು ಅಭಿನಂದಿಸಿದ ಬಿಜೆಪಿಗರು

    ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ರೋಡ್ ಶೋ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಜಿಲ್ಲಾ ಬಿಜೆಪಿಯಿಂದ ಅಭಿನಂದನೆ ಸಲ್ಲಿಸಲಾಯಿತು.
    ನಗರದ ಹೊರವಲಯದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲೆಯ ವಿವಿಧೆಡೆಯಿಂದ 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಯಶಸ್ಸಿನ ಹಿಂದೆ ಶ್ರಮಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ವಂದನೆ ಅರ್ಪಿಸುವುದರ ಜತೆಗೆ ಎಲ್ಲರನ್ನೂ ಒಂದೆಡೆ ಕೂರಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಗೌರವಿಸಲಾಯಿತು. ಜತೆಗೆ ಔತಣಕೂಟ ಆಯೋಜಿಸಲಾಗಿತ್ತು.
    ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ ಮಾತನಾಡಿ, ಪಕ್ಷದ ಕಾರ್ಯಕರ್ತರ ಶ್ರಮದಿಂದ ರೋಡ್ ಶೋ ಕಾರ್ಯಕ್ರಮವನ್ನು ಅದ್ಭುತ ಯಶಸ್ಸು ಕಾಣಲು ಸಾಧ್ಯವಾಯಿತು. ಅದರ ಬಗ್ಗೆ ಪ್ರಧಾನಿ ಸೇರಿದಂತೆ ಪಕ್ಷದ ಹಲವು ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಪ್ರಬಲವಾಗಿ ಎದುರಿಸಲು ಉತ್ಸಾಹ ಬಂದಂತಾಗಿದೆ. ಎಲ್ಲರೂ ಇದೇ ರೀತಿ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.
    ಜಿಲ್ಲಾಧ್ಯಕ್ಷರನ್ನು ಹೊತ್ತು ಕುಣಿದರು: ರೋಡ್ ಶೋ ನೇತೃತ್ವ ವಹಿಸಿಕೊಳ್ಳುವುದರ ಜತೆಗೆ ಅದನ್ನು ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಅವರನ್ನು ಕಾರ್ಯಕರ್ತರು ಹೊತ್ತು ಕುಣಿದರು. ಜತೆಗೆ ಅವರ ಮೇಲೆ ಹೂವಿನ ಸುರಿಮಳೆಯನ್ನು ಸುರಿಸಿದರು.
    ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಆಯೋಜಿಸುವ ಸವಾಲಿನ ಕೆಲಸವನ್ನು ಉಮೇಶ್ ವಹಿಸಿಕೊಂಡಿದ್ದರು. ಅದರಂತೆ ಪ್ರತಿ ಹಂತದಲ್ಲಿಯೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಲ್ಲಿಯೂ ಲೋಪವಾಗದಂತೆ ನೋಡಿಕೊಂಡರು. ಮುಖ್ಯವಾಗಿ ರೋಡ್ ಶೋ ದಿನ ಪ್ರಧಾನಿ ಅವರ ಆಗಮನದ ಸಮಯವಾಗುತ್ತಿದ್ದರೂ ನಿರೀಕ್ಷಿತ ಜನರು ಬಂದಿರಲಿಲ್ಲ. ಕಾರಣ ಅಂದು ಭದ್ರತೆ ದೃಷ್ಟಿಯಿಂದ ನಗರದೊಳಗೆ ಬರಲು ಜನರಿಗೆ ಸಾಧ್ಯವಾಗಿರಲಿಲ್ಲ. ಕೂಡಲೇ ಜಿಲ್ಲಾಧ್ಯಕ್ಷರು, ಜನರಿಗೆ ಒಳಗೆ ಬರಲು ಅನುವು ಮಾಡಿಕೊಂಡುವಂತೆ ಸಂಬಂಧಿಸಿದವರಿಗೆ ಮನವಿ ಮಾಡಿದರು. ಬಳಿಕ ಬೆರಳೆಣಿಕೆಯಷ್ಟು ನಿಮಿಷದಲ್ಲಿಯೇ ನಗರದೊಳಗೆ ಜನಸಂದಣಿಯಾಗುವುದರ ಜತೆಗೆ ರೋಡ್ ಶೋ ಕೂಡ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕಾರ್ಯಕರ್ತರು ಅಭಿನಂದಿಸಿದರು.
    ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್, ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ಫೈಟರ್ ರವಿ, ಇಂಡುವಾಳು ಸಚ್ಚಿದಾನಂದ, ಮುನಿರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts