More

    ಕುಂಟುತ್ತ ಸಾಗಿದೆ ಕಾಮಗಾರಿ, ವರ್ಷವಾದರೂ ಮುಗಿಯದ ಅಶೋಕನಗರ- ಉರ್ವಸ್ಟೋರ್ ರಸ್ತೆ ಕೆಲಸ

    ಮಂಗಳೂರು: ಅಶೋಕನಗರದಿಂದ ಉರ್ವಸ್ಟೋರ್ ತನಕ ರಸ್ತೆ ವಿಸ್ತರಣೆ ಕಾಮಗಾರಿ ಕುಂಟುತ್ತ ಸಾಗುತ್ತಿದ್ದು, ವರ್ಷವಾದರೂ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಶೇಡಿಗುರಿ ತನಕ ನಡೆದ ಒಳಚರಂಡಿ ಕಾಮಗಾರಿಗೆ ಅಗೆದು ಹಾಕಲಾದ ರಸ್ತೆಯಲ್ಲಿ ಸದ್ಯ ಸಂಚರಿಸುವುದೇ ಪ್ರಯಾಸ.

    ಅಶೋಕನಗರದಿಂದ ಶೇಡಿಗುರಿ ತನಕ ಒಳಚರಂಡಿ ಕಾಮಗಾರಿ ನಡೆದಿದ್ದು, ಈ ಸಂದರ್ಭ ರಸ್ತೆ ಅಗೆದು ಹಾಕಲಾಗಿತ್ತು. ಪೈಪ್ ಅಳವಡಿಸಿದ ಬಳಿಕ ಅಗೆದ ಮಣ್ಣನ್ನು ಸದ್ಯ ಮುಚ್ಚಲಾಗಿದೆ. ಮಳೆ ಬಂದರೆ ರಸ್ತೆ ಕೆಸರುಮಯವಾಗಿ ನಡೆಯಲೂ ತೊಂದರೆ ಆಗುತ್ತಿದ್ದರೆ, ಬಿಸಿಲಿದ್ದರೆ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಧೂಳಿನಿಂದ ಪಡುವ ಕಷ್ಟ ಹೇಳತೀರದು. ಕೆಲವು ದಿನಗಳಿಂದ ಬಿಸಿಲಿನ ವಾತಾವರಣವಿದ್ದು, ವಾಹನಗಳು ಸಂಚರಿಸುವಾಗ ರಸ್ತೆ ಬದಿಯ ಅಂಗಡಿ, ಮನೆಗಳಿಗೆ ಧೂಳು ನುಗ್ಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಪಾಂಡುರಂಗ ಕುಕ್ಯಾನ್ ಕೋಡಿಕಲ್ ತಿಳಿಸಿದ್ದಾರೆ.

    ಮಹಾನಗರ ಪಾಲಿಕೆ ಅಮೃತ್ ಯೋಜನೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಗೊಂಡಿದೆ. ಕೆಲಸ ಆರಂಭಗೊಂಡು ಹಲವು ತಿಂಗಳೇ ಕಳೆದಿವೆ. ಕಿರು ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನಗಳು ಸುತ್ತು ಬಳಸಿ ಇಕ್ಕಟ್ಟಾದ ಪರ್ಯಾಯ ರಸ್ತೆಯಲ್ಲಿ ಸಂಚರಿಸುತ್ತಿವೆ. ಇದರಿಂದ ಈ ಭಾಗದ ನಿತ್ಯ ಸಂಚಾರಿಗಳು ತೊಂದರೆ ಅನುಭವಿಸುವಂತಾಗಿದೆ.

    ಸ್ಥಳೀಯರಿಂದ ಅಡ್ಡಿ: ರಸ್ತೆ ವಿಸ್ತರಣೆಗೆ ಸ್ಥಳೀಯ ಕೆಲವರು ಜಮೀನು ಬಿಟ್ಟು ಕೊಡದಿರುವುದರಿಂದ ಕೆಲಸ ವಿಳಂಬವಾಗಿದೆ. ಮನವೊಲಿಸಿ ಬಹುತೇಕ ಜಮೀನು ವಶಕ್ಕೆ ಪಡೆಯಲಾಗಿದೆ. ಕೆಲವರು ಇನ್ನೂ ಪಟ್ಟು ಸಡಿಲಿಸಿಲ್ಲ. ಸ್ಥಳೀಯ ನಿವಾಸಿಗಳೇ ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ನಿರ್ವಹಿಸುತ್ತಿರುವ ಸಂಸ್ಥೆ ಬೆರಳೆಣಿಕೆಯ ಕೆಲಸಗಾರರನ್ನು ನಿಯೋಜಿಸಿದ್ದು, ಇದರಿಂದಲೂ ಕೆಲಸ ನಿಧಾನವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

    ಅಶೋಕನಗರ, ಶೇಡಿಗುರಿ ಪರಿಸರದಲ್ಲಿ ಹಲವು ಸಮಯಗಳಿಂದ ಒಳಚರಂಡಿ, ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಸಮಸ್ಯೆ ಅನುಭವಿಸುವ ಈ ಭಾಗದ ಜನರಾರೂ ಈ ವಿಷಯದಲ್ಲಿ ಮಾತನಾಡುತ್ತಿಲ್ಲ. ಸಾರ್ವಜನಿಕರು ಪ್ರಶ್ನೆ ಮಾಡದ ತನಕ ಅಧಿಕಾರಿಗಳು, ಜನಪ್ರತಿನಿಧಿಗಳು ಅವರಿಗೆ ಮನಬಂದಂತೆ ಕೆಲಸ ಮಾಡುತ್ತಾರೆ. ಸಾರ್ವಜನಿಕರು ಬಲಿಪಶುಗಳಾಗುತ್ತಿದ್ದಾರೆ.
    -ಸುಂದರ ಪೂಜಾರಿ, ಅಶೋಕನಗರ, ಟೆಂಪೋ ಡ್ರೈವರ್

    ಅಶೋಕನಗರದಿಂದ ಶೇಡಿಗುರಿ ತನಕದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಅಶೋಕನಗರ-ಉರ್ವಸ್ಟೋರ್ ರಸ್ತೆ ವಿಸ್ತರಣೆ ಕಾಮಗಾರಿ ಅಮೃತ್ ಯೋಜನೆಯಲ್ಲಿ ನಡೆಯುತ್ತಿದೆ. ಶೀಘ್ರ ರಸ್ತೆ ವಿಸ್ತರಣೆ ಜತೆ ಡಾಂಬರು ಕಾಮಗಾರಿ ನಡೆದು ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
    -ಜಯಲಕ್ಷ್ಮೀ ವಿ.ಶೆಟ್ಟಿ, ಮನಪಾ ಸದಸ್ಯೆ ದೇರೆಬೈಲ್ ಪಶ್ಚಿಮ ವಾರ್ಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts