More

    ಮೋಹನ ಮಾಳಶೆಟ್ಟಿಯಿಂದ ಸೇಡಿನ ರಾಜಕಾರಣ

    ಗದಗ: ಜಿಲ್ಲಾ ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ವರ್ತಮಾನವನ್ನು ಸಾಮಾಜಿಕ ಜಾಲತಾಣದಲ್ಲಿ (ಫೇಸ್ ಬುಕ್) ಹಾಕಿದ್ದನ್ನೇ ಆಧರಿಸಿ ತಮ್ಮನ್ನು ಪಕ್ಷದಿಂದ ವಜಾಗೊಳಿಸುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಮಂಜುನಾಥ ಎಚ್. ಮುಳಗುಂದ ಆರೋಪಿಸಿದರು.

    ನಗರದ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಮಾಡುತ್ತಿರುವ ಹಣ ವಸೂಲಿ ದಂಧೆ ಸೇರಿ ವಿವಿಧ ಚಟುವಟಕೆಗಳನ್ನು ಪಕ್ಷದ ಯಾವುದೇ ನಾಯಕರ ಹೆಸರನ್ನೂ ಉಲ್ಲೇಖಿಸದೆ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ ಪಕ್ಷದ ಜಿಲ್ಲಾಧ್ಯಕ್ಷ ಮಾಳಶೆಟ್ಟಿ ಅವರು ಪಕ್ಷದ ಎಸ್​ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಪಡಿಯಪ್ಪ ಪೂಜಾರ ಮೂಲಕ ನನ್ನನ್ನು ವಜಾಗೊಳಿಸಿದ ಬಗ್ಗೆ ಪತ್ರ ಕಳುಹಿಸಿದ್ದಾರೆ ಎಂದರು.

    ಬಿಜೆಪಿಯಲ್ಲಿ ಜಾತಿ ಹಾಗೂ ಬಣ ರಾಜಕೀಯವಿದ್ದು, ಒಂದು ಬಣದಲ್ಲಿ ಗುರುತಿಸಿಕೊಂಡವರನ್ನು ಇನ್ನೊಂದು ಬಣದವರು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಮಾಜಿ ಶಾಸಕರೊಬ್ಬರು ಪಕ್ಷವನ್ನು ತ್ಯಜಿಸಿದ್ದಾರೆ. 16 ವರ್ಷ ಕೆಲಸ ಮಾಡಿದರೂ ನನಗೆ ಪಕ್ಷದಲ್ಲಿ ಸ್ಥಾನಮಾನ ನೀಡಲಿಲ್ಲ ಎಂದು ಹೇಳಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗದಗ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಕಾರಣರಾದವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದರು.

    ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯಿಂದ ಕಾರ್ಯಕರ್ತರು ಬೇಸತ್ತು ಹೋಗಿದ್ದಾರೆ. ಈ ಎಲ್ಲ ವಿಷಯಗಳ ಕುರಿತು ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಅವರಿಗೆ ಪತ್ರದ ಮೂಲಕ ತಿಳಿಸಲಾಗುವುದು ಎಂದು ಮಂಜುನಾಥ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts