More

    ಬಹಿರಂಗ ಪ್ರಚಾರಕ್ಕೆ ತೆರೆ, ಗುಪ್ತಗಾಮಿನಿಯಂತೆ ನಾಯಕರ ಓಡಾಟ

    ಕೊಪ್ಪಳ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳ ಅಬ್ಬರದ ಪ್ರಚಾರಕ್ಕೆ ಸೋಮವಾರ ಅಂತಿಮ ತೆರೆ ಬಿದ್ದಿದೆ.

    ಮನೆಮನೆ ಪ್ರಚಾರಕ್ಕೆ ಅವಕಾಶವಿದ್ದು, ಕೊನೇ ಹಂತದಲ್ಲಿ ಅಭ್ಯರ್ಥಿಗಳು ಮತ್ತವರ ಕಟ್ಟಾಳುಗಳು ಕ್ಷೇತ್ರದಲ್ಲಿ ಗುಪ್ತಗಾಮಿನಿಯಂತೆ ಓಡಾಡುತ್ತಿದ್ದು, ಗೆಲುವಿಗಾಗಿ ನಾನಾ ಕಸರತ್ತುಗಳಿಗೆ ಕೈ ಹಾಕಿದ್ದಾರೆ.

    ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 69 ಅಭ್ಯರ್ಥಿಗಳು ಅಂತಿಮ ಅಖಾಡದಲ್ಲಿದ್ದರೂ ಬಹುಪಾಲು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

    ಜಿಲ್ಲಾ ಕೇಂದ್ರ ಕೊಪ್ಪಳ ಹಾಗೂ ಭತ್ತದ ನಗರಿ ಗಂಗಾವತಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿಜಯ ಮಾಲೆ ಧರಿಸಲು ಹುರಿಯಾಳುಗಳು ಇನ್ನಿಲ್ಲದ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದಾರೆ.

    ರಾಜ್ಯ, ರಾಷ್ಟ್ರ ನಾಯಕರನ್ನು ಕರೆಸಿ ಮತದಾರರ ಓಲೈಕೆ ಮಾಡಿದ್ದು, ಎಷ್ಟರ ಮಟ್ಟಿಗೆ ಮತ ಫಸಲು ನೀಡಲಿದೆ ಎಂಬ ಲೆಕ್ಕಾಚಾರ ಶುರುವಾಗಿವೆ.

    ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಲೆಕ್ಕಾಚಾರಗಳು ಕೇಳಿ ಬರುತ್ತಿದ್ದು, ಜಟ್ಟಿ ಕಾಳಗದಲ್ಲಿ ಯಾರ ಮೀಸೆ ಮಣ್ಣಾಗಲಿದೆ. ಯಾರಿಗೆ ವಿಜಯದ ಕಡಗ ಕೈ ಸೇರಲಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ.

    ಇದನ್ನೂ ಓದಿ: ಬಹಿರಂಗ ಪ್ರಚಾರಕ್ಕೆ ತೆರೆ

    ಕುಷ್ಟಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಮರೇಗೌಡ ಬಯ್ಯಪುರ ಮತ್ತು ಬಿಜೆಪಿ ದೊಡ್ಡನಗೌಡ ಪಾಟೀಲ್ ಹೊಸ ಇತಿಹಾಸ ಬರೆಯಲು ಹಗ್ಗ-ಜಗ್ಗಾಟ ಮುಂದುವರೆಸಿದ್ದಾರೆ. ಎರಡೂ ಪಕ್ಷಗಳ ಮುಖಂಡರು ಮತ್ತು ಮತದಾರರು ಕೊನೇ ಕ್ಷಣದಲ್ಲೂ ಪಕ್ಷಾಂತರಕ್ಕೆ ಬಲಿಯಾಗುತ್ತಿದ್ದು, ಅಭ್ಯರ್ಥಿಗಳಲ್ಲಿ ಟೆನ್ಶನ್ ಹೆಚ್ಚಿಸಿದೆ.

    ಮೀಸಲು ಕ್ಷೇತ್ರ ಕನಕಗಿರಿಯಲ್ಲಿ ಹಾಲಿ ಶಾಸಕ ಬಿಜೆಪಿಯ ಬಸವರಾಜ ದಢೇಸುಗೂರು ಮತ್ತು ಮಾಜಿ ಸಚಿವ ಕಾಂಗ್ರೆಸ್‌ನ ಶಿವರಾಜ ತಂಗಡಗಿ ನಡುವೆಯೂ ಹಾವು-ಏಣಿ ಆಟ ಮುಂದುವರೆದಿದ್ದು, ಜೆಡಿಎಸ್ ಮತ್ತು ಕೆಆರ್‌ಪಿಪಿ ಅಭ್ಯರ್ಥಿಗಳು ಎಷ್ಟು ಮತ ಕದಿಯಲಿದ್ದಾರೆ ? ಅದರಿಂದ ಫಲಿತಾಂಶದ ಮೇಲಾಗುವ ಪರಿಣಾಮಗಳೇನೆಂಬ ಚರ್ಚೆಗಳು ನಡೆದಿವೆ.

    ಉಭಯ ನಾಯಕರ ವಿರುದ್ಧ ಕ್ಷೇತ್ರದಲ್ಲಿ ಅಸಮಾಧಾನವಿದ್ದು, ಮತದಾರ ಯಾರಿಗೆ ವಿಜಯದ ಹಾದಿ ತೋರುವನೆಂಬ ಕುತೂಹಲ ಹೆಚ್ಚಿಸಿದೆ.

    ಭತ್ತದ ನಗರಿ ಗಂಗಾವತಿಯಲ್ಲಿ ಬಿಜೆಪಿಯಿಂದ ಪರಣ್ಣ ಮುನವಳ್ಳಿ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಗಣಿ ನಾಡಿನಿಂದ ವಲಸೆ ಬಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಕೆಆರ್‌ಪಿಪಿಯಿಂದ ಕಣದಲ್ಲಿದ್ದಾರೆ.

    ಕ್ಷೇತ್ರದಲ್ಲಿ ಹಿಂದುತ್ವ ವರ್ಸಸ್ ಇತರರು ಎಂಬ ವಾತಾವರಣವಿದ್ದು, ಜೆಡಿಎಸ್‌ನಿಂದ ಎಚ್.ಆರ್.ಚನ್ನಕೇಶವ ಅಖಾಡಕ್ಕಿಳಿದಿದ್ದಾರೆ.

    ಅನ್ಸಾರಿ ಪರ ಮುಸ್ಲಿಂ ಹಾಗೂ ಹಿಂದುಳಿದ ಮತದಾರರಿದ್ದರೂ, ಇರಕಲ್‌ಗಡಾ ಭಾಗದಲ್ಲಿ ವಾತಾವರಣ ಬೇರೆಯೇ ಇದೆ. ಹೀಗಾಗಿ ರೆಡ್ಡಿ, ಚನ್ನಕೇಶವ ಯಾರ ಮತ ಹೆಚ್ಚು ಕದಿಯಲಿದ್ದಾರೆಂಬುದರ ಮೇಲೆ ಫಲಿತಾಂಶದ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ.

    ಯಲಬುರ್ಗಾದಲ್ಲಿ ಹಾಲಿ ಸಚಿವ ಬಿಜೆಪಿಯ ಹಾಲಪ್ಪ ಆಚಾರ್ ಮತ್ತು ಮಾಜಿ ಸಚಿವ ಕಾಂಗ್ರೆಸ್‌ನ ರಾಯರಡ್ಡಿ ನಡುವೆ ತೀವ್ರ ಪೈಪೋಟಿ ಮುಂದುವರೆದಿದೆ. ಇಬ್ಬರ ಪರವಾಗಿ ಒಲವು ವ್ಯಕ್ತವಾಗುತ್ತಿದ್ದು, ಅಂತಿಮ ದಡ ಸೇರುವವರು ಯಾರೆಂಬುದು ಊಹೆಗೆ ನಿಲುಕದಂತಾಗಿದೆ.

    ಇನ್ನು ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಮೂರು ದಶಕದ ಬಳಿಕ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕದನ ಕುತೂಹಲ ಹೆಚ್ಚಿಸಿದೆ. ಹಾಲಿ ಶಾಸಕ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ್, ಬಿಜೆಪಿ ಮಂಜುಳಾ ಕರಡಿ ಹಾಗೂ ಜೆಡಿಎಸ್‌ನ ಸಿ.ವಿ.ಚಂದ್ರಶೇಖರ್ ನಡುವೆ ಪ್ರಚಾರದಲ್ಲೂ ಪೈಪೋಟಿ ತೀವ್ರತೆ ಪಡೆದಿದೆ.

    ಅಂತಿಮ ಕ್ಷಣದವರೆಗೂ ಕಸರತ್ತುಗಳನ್ನು ಮುಂದುವರೆಸಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ. ಪ್ರಚಾರ, ಕಾರ್ಯಕರ್ತರನ್ನು ಸೆಳೆಯುವುದು, ಪ್ರಮುಖ ಸಮುದಾಯಗಳ ಮತ ಗಟ್ಟಿ ಮಾಡಿಕೊಳ್ಳುವಿಕೆಯಲ್ಲೂ ಮೂವರು ಪೈಪೋಟಿ ನಡೆಸುತ್ತಿದ್ದು, ಯಾವ ಸಮುದಾಯ ಯಾರನ್ನು ಬೆಂಬಲಿಸಲಿದೆ ಎಂಬ ಗೊಂದಲ ಸೃಷ್ಟಿಸಿದೆ. ಹೀಗಾಗಿ ಮತದಾನ ಮತ್ತು ಫಲಿತಾಂಶ ಪ್ರಕಟ ದಿನಕ್ಕಾಗಿ ಮತದಾರರು ದಿನಗಣನೆ ನಡೆಸುವಂತಾಗಿದೆ.

    ಪಟ್ಟು ಬದಲಿಸಿದ ನಾಯಕರು

    ಗೆಲುವಿಗಾಗಿ ಈವರೆಗೆ ಒಂದು ಹಂತದ ಕಸರತ್ತು ನಡೆಸಿರವ ಅಭ್ಯರ್ಥಿಗಳು ಇದೀಗ ಹೊಸ ಮಾದರಿಗಳನ್ನು ಅನುಸರಿಸುತ್ತಿದ್ದಾರೆ. ಬೆಳಗಿನಿಂದ ರಾತ್ರಿವರೆಗೆ ಬಹಿರಂಗ ಪ್ರಚಾರ ನಡೆಸುವುದರ ಜತೆಗೆ ತಡರಾತ್ರಿ ಕಾರ್ಯಾಚರಣೆ ಶುರುವಿಟ್ಟುಕೊಂಡಿದ್ದಾರೆ. ತಮ್ಮ ಎದುರಾಳಿಗಳು ಹಗಲೆಲ್ಲ ಪ್ರಚಾರ ನಡೆಸುವ ಗ್ರಾಮಗಳು, ಭೇಟಿಯಾಗುವ ಸಮುದಾಯ ಹಾಗೂ ನಾಯಕರನ್ನು ತಡರಾತ್ರಿ ಸಂಧಿಸಿ ಬೆಂಬಲಿಸುವಂತೆ ಮನವೊಲಿಸುತ್ತಿದ್ದಾರೆ.


    ಗುಂಪು ಕಟ್ಟಿಕೊಂಡು ಹೋಗದೆ ಏಕಾಂಗಿಯಾಗಿ ಸುತ್ತಾಡುತ್ತಿದ್ದು, ತಮ್ಮ ಮೂಲ ಮತದಾರರೊಂದಿಗೆ ಇತರ ಪಕ್ಷಗಳ ಅಸಮಾಧಾನಿತರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಬೂತ್ ಮಟ್ಟದಲ್ಲಿ ಹೊಸ ಕಾರ್ಯಕರ್ತರನ್ನು ಸೃಷ್ಟಿಸಿ ಮತ ಹಾಕಿಸುವ ಜವಾಬ್ದಾರಿ ವಹಿಸುತ್ತಿದ್ದಾರೆ. ಸಣ್ಣಪುಟ್ಟ ಸಮುದಾಯ ನಾಯಕರನ್ನು ಒಟ್ಟುಗೂಡಿಸಿ ಅವರ ಬೇಡಿಕೆ ಈಡೇರಿಸವ ಭರವಸೆ ನೀಡುವ ಮಲಕ ಮತಪೆಟ್ಟಿಗೆ ಭದ್ರಪಡಿಸಿಕೊಳ್ಳುತ್ತಿದ್ದಾರೆ.

    ಕಾರ್ಯಕರ್ತರನ್ನು ಕಾಯುವುದೇ ಸವಾಲು

    ಮತ್ತೊಂದೆಡೆ ತ್ರಿಕೋನ ಸ್ಪರ್ಧೆ ಏರ್ಪಟ್ಟ ಗಂಗಾವತಿ ಮತ್ತು ಕೊಪ್ಪಳ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಕಾಯ್ದಿಟ್ಟುಕೊಳ್ಳುವುದೇ ಅಭ್ಯರ್ಥಿಗಳು ಮತ್ತವರ ತಂಡಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಮತದಾನಕ್ಕೆ ದಿನಗಳು ಹತ್ತಿರವಾದಂತೆ ದಿನಕ್ಕೆ ಮೂರು ಪಕ್ಷಗಳಲ್ಲಿ ಕಾರ್ಯಕರ್ತರು ಗುರುತಿಸಿಕೊಳ್ಳುವ ಮೂಲಕ ತಮ್ಮ ನಾಯಕರ ಟೆನ್ಶನ್ ಹೆಚ್ಚಿಸುತ್ತಿದ್ದಾರೆ.

    ಬೆಳಗ್ಗೆ-ಮಧ್ಯಾಹ್ನ ಹಾಗೂ ರಾತ್ರಿಗೆ ಒಂದೊಂದು ಪಕ್ಷದ ಶಾಲು ಧರಿಸಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತಿಮವಾಗಿ ಯಾವ ಪಕ್ಷಕ್ಕೆ ನಿಷ್ಠರಾಗಿರುತ್ತಾರೆ. ಯಾರಿಗೆ ಮತ ಹಾಕಿಸುತ್ತಾರೆ ಎಂಬ ಗೊಂದಲ ಸೃಷ್ಟಿಸುತ್ತಿದ್ದು, ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts