More

    ಬಹಿರಂಗ ಪ್ರಚಾರಕ್ಕೆ ತೆರೆ

    ರಾಣೆಬೆನ್ನೂರ: ಮೊದಲ ಹಂತದ ಗ್ರಾಪಂ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆ ಬಿದ್ದಿದೆ. ಇದೀಗ ಅಭ್ಯರ್ಥಿಗಳು ತೆರೆಮರೆ ಕಸರತ್ತು ನಡೆಸಿದ್ದಾರೆ.

    ರಾಣೆಬೆನ್ನೂರ, ಹಾವೇರಿ, ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನ 105 ಗ್ರಾಪಂಗಳಿಗೆ ಡಿ. 22ರಂದು 1ನೇ ಹಂತದ ಮತದಾನ ನಡೆಯಲಿದೆ. ಆದ್ದರಿಂದ ಸೋಮವಾರ ಕತ್ತಲ ರಾತ್ರಿ ಮೂಲಕ ಕೊನೆಯ ದಿನದ ಕಸರತ್ತು ನಡೆಸಲು ಅಭ್ಯರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

    ಕಳೆದ 6 ದಿನಗಳ ಕಾಲ ಅಭ್ಯರ್ಥಿಗಳು ಬಹಿರಂಗವಾಗಿ ಪ್ರಚಾರ ನಡೆಸಿ ಮತ ಯಾಚಿಸಿದ್ದಾರೆ. ಮತದಾರರನ್ನು ಸೆಳೆಯಲು ಹಿರಿಯರ ಕೈ- ಕಾಲು ಬೀಳುವುದು, ಕಿರಿಯರಿಗೆ ಬೆಂಬಲ ಕೇಳುವುದು, ಮಹಿಳೆಯರಿಗೆ ಉಡುಗೊರೆ ಆಸೆ ತೋರಿಸುವುದು ಸೇರಿ ನಾನಾ ಆಶ್ವಾಸನೆ ನೀಡಿ ತಮಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಇದೀಗ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿರುವುದರಿಂದ ಗ್ರಾಮದ ಮುಖಂಡರ, ಸ್ನೇಹಿತರ ಮನೆ, ತೋಟಗಳಲ್ಲಿ ಸದ್ದಿಲ್ಲದೆ ಬೆಂಬಲಿಗರನ್ನು ಸೇರಿಸಿ ಮತಗಳನ್ನು ಸೆಳೆಯಲು ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ರ್ಚಚಿಸುತ್ತಿದ್ದಾರೆ.

    ಹಣ, ಹೆಂಡದ ಹೊಳೆ: ವಿಧಾನಸಭೆ, ಲೋಕಸಭೆ ಚುನಾವಣೆಯನ್ನೂ ಮೀರಿಸುವಂತೆ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಕೈಗೊಂಡಿದ್ದರು. ಕೊನೆಯ ದಿನದ ಕಸರತ್ತು ನಡೆಸಲು ಮತದಾರರಿಗೆ ಹಣ, ಮದ್ಯ ಹಂಚಲು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲ ಗ್ರಾಪಂ ವ್ಯಾಪ್ತಿಯಲ್ಲಿ ಮತದಾರರಿಗೆ 200 ರೂ.ವರೆಗೂ ನೀಡಲು ಕೆಲವರು ಸಿದ್ಧತೆ ಮಾಡಿದ್ದರೆ, ತುಂಗಭದ್ರಾ ನದಿ ಭಾಗದ ಗ್ರಾಪಂಗಳಲ್ಲಿ 500 ರೂ.ವರೆಗೂ ಹಣ ಹಂಚಲು ತಯಾರಿ ನಡೆದಿದೆ ಎನ್ನಲಾಗುತ್ತಿದೆ.

    ದಾಬಾಗಳು ಹೌಸ್​ಫುಲ್: ಈ ಹಿಂದೆ ಚುನಾವಣೆ ಸಂದರ್ಭ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆಯಾಗುತ್ತಿದ್ದಂತೆ ದಾಬಾಗಳು ಜನರಿಂದ ಭರ್ತಿಯಾಗುತ್ತಿದ್ದವು. ಆದರೆ, ಆಗ ಅಭ್ಯರ್ಥಿಗಳ ಬೆಂಬಲಿಗರಿಗೆ ಮಾತ್ರ ಗುಂಡು, ತುಂಡಿನ ಪಾರ್ಟಿಗಳ ನಡೆಯುತ್ತಿದ್ದವು. ಆದರೀಗ ಮತದಾರರ ಓಲೈಕೆಗೆ ಒಂದೇ ದಿನ ಬಾಕಿಯಿದ್ದು, ದಾಬಾಗಳಲ್ಲಿ ಮತದಾರರಿಗೂ ಮದ್ಯ, ಬಾಡೂಟದ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ದಾಬಾಗಳು ಇಲ್ಲದ ಗ್ರಾಮಗಳಲ್ಲಿ ಮತ್ತು ಪೊಲೀಸರ ಭಯದಿಂದ ಯಾರ ಕಾಟವೂ ಬೇಡ ಎಂದುಕೊಂಡಿರುವ ಅಭ್ಯರ್ಥಿಗಳು ತೋಟದಲ್ಲಿ ಮತದಾರರಿಗೆ ಮೋಜು ಮಸ್ತಿ ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts