More

    ಹಳೆಯ ಪಿಂಚಣಿ ಯೋಜನೆ ಮರುಜಾರಿ ಮಾಡಿದರೆ ರಾಜ್ಯಗಳ ಗತಿ ಏನು?: ಆರ್​ಬಿಐ ವರದಿಯಲ್ಲಿ ಆತಂಕಕಾರಿ ಸಂಗತಿ

    ಮುಂಬೈ: ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ವಾಪಸು ತರಬೇಕೆಂಬ ಬಲವಾದ ಬೇಡಿಕೆಯು ಸರ್ಕಾರಿ ನೌಕರರಿಂದ ಕೇಳಿಬರುತ್ತಿದೆ. ಕೆಲ ರಾಜ್ಯಗಳು ಒಪಿಎಸ್​ ಮರುಜಾರಿಗೊಳಿಸಿವೆ. ಮತ್ತೆ ಕೆಲವು ರಾಜ್ಯಗಳ ಮರುಜಾರಿಗೆ ಮುಂದಾಗಿದೆ. ಆದರೆ, ಒಪಿಎಸ್​ಗೆ ವಾಪಸಾಗುವುದರಿಂದ ತಲೆದೋರಬಹುದಾದ ಹಣಕಾಸು ಬಿಕಟ್ಟು, ಆರ್ಥಿಕ ಸಂಕಷ್ಟ, ಅಭಿವೃದ್ಧಿ ಯೋಜನೆಗಳಿಗೆ ಅಡಚಣೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ವರದಿಯೊಂದು ಈಗ ಆತಂಕ ವ್ಯಕ್ತಪಡಿಸಿದೆ.

    ಕೆಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಗೆ (OPS) ಹಿಂದಿರುಗಿದರೆ ಆ ರಾಜ್ಯಗಳ ಹಣಕಾಸಿನ ಮೇಲೆ ಭಾರಿ ಹೊರೆ ಬೀಳುತ್ತದೆ, ಬೆಳವಣಿಗೆಯನ್ನು ಹೆಚ್ಚಿಸುವುದಕ್ಕಾಗಿ ಬಂಡವಾಳ ವೆಚ್ಚವನ್ನು ಮಾಡುವುದರ ಮೇಲೆ ಇಂತಹ ಕ್ರಮವು ನಿರ್ಬಂಧಿಸುತ್ತದೆ ಎಂದು ಆರ್​ಬಿಐ ಬಿಡುಗಡೆ ಮಾಡಿದ ವರದಿ ಹೇಳಿದೆ.

    2020-21ನೇ ಹಣಕಾಸು ವರ್ಷದಲ್ಲಿ ರಾಜ್ಯಗಳ ಒಟ್ಟು ಬಾಕಿ ಹೊಣೆಗಾರಿಕೆಗಳು (ಬಹುತೇಕವಾಗಿ ಸಾಲ ಮರುಪಾವತಿ) ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 31ರಷ್ಟು ಗರಿಷ್ಠ ಪ್ರಮಾಣಕ್ಕೆ ತಲುಪಿತ್ತು. 2023-24ನೇ ಹಣಕಾಸು ವರ್ಷದಲ್ಲಿ ಇದು ಶೇಕಡಾ 27.6ಕ್ಕೆ ಇಳಿದಿದೆ. ಆದರೆ, ಈ ಪೈಕಿ ಅನೇಕ ರಾಜ್ಯಗಳಲ್ಲಿ ಇದು ಈಗಲೂ ಶೇಕಡಾ 30ರಷ್ಟು ಮುಂದುವರಿದಿದೆ.

    ರಾಜ್ಯಗಳು ಒಪಿಎಸ್‌ಗೆ ಹಿಂತಿರುಗುವ ಕ್ರಮವು ಈ ಹಿಂದಿನ ಸುಧಾರಣೆಗಳ ಪ್ರಯೋಜನಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ, ಭವಿಷ್ಯದ ಪೀಳಿಗೆಯ ಹಿತಾಸಕ್ತಿಗಳನ್ನು ದುರ್ಬಲಗೊಳಿಸುತ್ತದೆ ಎಂದು “ರಾಜ್ಯ ಹಣಕಾಸು: 2023-24ರ ಬಜೆಟ್‌ಗಳ ಅಧ್ಯಯನ” ಎಂಬ ವರದಿಯಲ್ಲಿ ಆರ್​ಬಿಐ ಹೇಳಿದೆ.

    ಒಪಿಎಸ್ ಒಂದು ನಿರ್ದಿಷ್ಟ ಪ್ರಯೋಜನ ಯೋಜನೆಯಾಗಿದ್ದು, ನಿವೃತ್ತಿಯ ನಂತರ, ರಾಜ್ಯ ಸರ್ಕಾರಿ ನೌಕರರು ಕೊನೆಯದಾಗಿ ಪಡೆದ ಸಂಬಳದ ಶೇಕಡಾ 50 ರಷ್ಟು ಪಿಂಚಣಿಯನ್ನು ಈ ಯೋಜನೆ ಪ್ರಕಾರ ಪಡೆಯುತ್ತಾರೆ. ಒಪಿಎಸ್​ ಬದಲಾಗಿ ನೂತನ ಪಿಂಚಣೆ ಯೋಜನೆ (ಎನ್​ಪಿಎಸ್​) ಜಾರಿಗೊಳಿಸಲಾಗಿದೆ. ಈ ಯೋಜನೆಯು ವಂತಿಗೆ ಆಧಾರಿತವಾದುದು. ಎನ್​ಪಿಎಸ್​ನಲ್ಲಿ ನೌಕರರ ಮೂಲ ವೇತನ ಮತ್ತು ತುಟ್ಟಿಭತ್ಯೆಗಳ ಶೇಕಡಾ 10 ರಷ್ಟನ್ನು ಪಿಂಚಣಿಗಾಗಿ ಪಡೆದುಕೊಳ್ಳಲಾಗುತ್ತದೆ. ಅಲ್ಲದೆ, ರಾಜ್ಯ ಸರ್ಕಾರ ಕೂಡ ಇದಕ್ಕೆ ಸಮನಾದ ಹಣವನ್ನು ಕೊಡುಗೆ ನೀಡುತ್ತದೆ.

    ರಾಜಸ್ಥಾನ ಮತ್ತು ಛತ್ತೀಸ್‌ಗಢದಂತಹ ರಾಜ್ಯಗಳಲ್ಲಿ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಒಪಿಎಸ್‌ ಮರುಜಾರಿ ಮಾಡಿದೆ. ಅಲ್ಲದೆ, ಈಗ ಜಯ ಗಳಿಸಿರುವ ತೆಲಂಗಾಣದಲ್ಲಿ ಒಪಿಎಸ್​ ಮರುಜಾರಿಯ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಆದರೆ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ಈಗ ಮತ್ತೆ ಬಿಜೆಪಿ ಅಧಿಕಾರಕ್ಕೆ ವಾಪಸಾಗಿರುವುದರಿಂದ ಎನ್​ಪಿಎಸ್​ ಮರುಜಾರಿ ಸಾಧ್ಯತೆ ಇದೆ.

    ಎಲ್ಲಾ ರಾಜ್ಯ ಸರ್ಕಾರಗಳು ಎನ್​ಪಿಎಸ್​ನಿಂದ ಒಪಿಸ್​ಗೆ ಹಿಂತಿರುಗಿದರೆ, ಎನ್​ಪಿಎಸ್​ಗಿಂತ 4.5 ಪಟ್ಟು ಹೆಚ್ಚು ಹಣಕಾಸು ಹೊರೆ ಹೊರಬೇಕಾಗಬಹುದು ಎಂದು ಆರ್​ಬಿಐ ವರದಿಯಲ್ಲಿ ಅಂದಾಜಿಸಲಾಗಿದೆ. ಈ ಹೆಚ್ಚುವರಿ ಹೊರೆಯು 2060ರ ವೇಳೆಗೆ ಜಿಡಿಪಿ ಶೇಕಡಾ 0.9 ರಷ್ಟು ಆಗಬಹುದು ಎಂದು ಆರ್​ಬಿಐ ವರದಿ ಹೇಳಿದೆ. ಒಪಿಎಸ್​ ಅನ್ವಯವಾಗುವ ಕೊನೆಯ ಬ್ಯಾಚ್ 2040ರ ದಶಕದ ಆರಂಭದಲ್ಲಿ ನಿವೃತ್ತಿ ಹೊಂದುವ ನಿರೀಕ್ಷೆಯಿದೆ. ಆದ್ದರಿಂದ, 2060 ರವರೆಗೆ ಒಪಿಎಸ್​ ಅಡಿಯಲ್ಲಿ ಅವರು ಪಿಂಚಣಿ ಪಡೆಯಬಹುದಾಗಿದೆ ಎಂದು ವರದಿ ಹೇಳಿದೆ.

    ‘ಅಮಿತ್ ಶಾಗೆ ಇತಿಹಾಸ ತಿಳಿಯುತ್ತದೆ ಎಂದು ನಿರೀಕ್ಷಿಸಲಾಗದು: ನೆಹರು ವಿರುದ್ಧದ ವಾಗ್ದಾಳಿಗೆ ರಾಹುಲ್ ತಿರುಗೇಟು

    ಛತ್ತೀಸ್​ಗಢ, ಮಧ್ಯಪ್ರದೇಶದಂತೆ ರಾಜಸ್ಥಾನದಲ್ಲೂ ಕಾದಿದೆ ಅಚ್ಚರಿ: ಸಿಎಂ ಘೋಷಣೆಗೂ ಮುನ್ನ ಕುತೂಹಲ

    ಕಾಂಗ್ರೆಸ್​ ದರೋಡೆ ಮುಂದುವರಿದಿರುವಾಗ ಯಾರಿಗೆ ಬೇಕು ‘ಮನಿ ಹೀಸ್ಟ್’ ಕಾಲ್ಪನಿಕ ಕಥೆ: ಪ್ರಧಾನಿ ಲೇವಡಿ

    ವಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts