More

    ಎಸ್‌ಡಿಆರ್‌ಎಫ್‌ಗೆ ನಿವೃತ್ತ ಸೈನಿಕರು, ಪ್ರಗತಿಯಲ್ಲಿ ನೇಮಕಾತಿ ಪ್ರಕ್ರಿಯೆ

    – ಭರತ್ ಶೆಟ್ಟಿಗಾರ್, ಮಂಗಳೂರು

    ಪ್ರಾಕೃತಿಕ ವಿಕೋಪ, ದೊಡ್ಡ ಅನಾಹುತಗಳು ಸಂಭವಿಸಿದಾಗ ತುರ್ತು ರಕ್ಷಣಾ ಕಾರ್ಯಾಚರಣೆಗೆ ಮಂಗಳೂರಿನಲ್ಲಿ ಆರಂಭಿಸಲು ಉದ್ದೇಶಿಸಿರುವ ರಾಜ್ಯ ವಿಪತ್ತು ನಿರ್ವಹಣೆ ದಳ(ಎಸ್‌ಡಿಆರ್‌ಎಫ್)ಕ್ಕೆ ನಿವೃತ್ತ ಸೈನಿಕರನ್ನು ನೇಮಿಸಲು ನಿರ್ಧರಿಸಲಾಗಿದೆ.

    ಎಸ್‌ಡಿಆರ್‌ಎಫ್‌ಗೆ ಸಂಬಂಧಿಸಿ ಅಗ್ನಿಶಾಮಕ ದಳ, ಪೊಲೀಸ್, ಹೋಂಗಾರ್ಡ್ ಸಿಬ್ಬಂದಿಯನ್ನು ಆಯ್ಕೆ ಮಾಡಿ, ತರಬೇತಿ ನೀಡಲಾಗಿದೆ. ಈ ಸಿಬ್ಬಂದಿ ಪ್ರಸ್ತುತ ಪಾಂಡೇಶ್ವರ ಅಗ್ನಿಶಾಮಕ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 25 ನಿವೃತ್ತ ಸೈನಿಕರನ್ನು ಗುತ್ತಿಗೆ ಆಧಾರದಲ್ಲಿ ತಂಡಕ್ಕೆ ಸೇರಿಸಿ, ಆಯ್ಕೆಯಾದವರಿಗೆ ಎನ್‌ಡಿಆರ್‌ಎಫ್‌ನಿಂದ ಒಂದು ವಾರ ತರಬೇತಿ ನೀಡಲಾಗುತ್ತದೆ. ದ.ಕ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಸಂಬಂಧಿಸಿ ಇದೇ ತಂಡ ಮುಖ್ಯ ಭೂಮಿಕೆಯಲ್ಲಿ ಕೆಲಸ ಮಾಡಲಿದೆ.

    ಎನ್‌ಡಿಆರ್‌ಎಫ್ ಮಾದರಿ ಸಜ್ಜು: ಪ್ರತಿವರ್ಷ ಮುಂಗಾರಿನಲ್ಲಿ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳ)ನ ಒಂದು ತಂಡ ಮಂಗಳೂರಿಗೆ ಆಗಮಿಸುತ್ತ ದೆ. ದ.ಕ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಅದರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. 2-3 ತಿಂಗಳು ಜಿಲ್ಲೆಯಲ್ಲಿರುವ ತಂಡ ಬಳಿಕ ಆಂಧ್ರದ ಗುಂಟೂರಿಗೆ ತೆರಳುತ್ತದೆ. ಆ ಬಳಿಕ ದೊಡ್ಡ ಮಟ್ಟದ ಅವಘಡಗಳು ಸಂಭವಿಸಿದರೆ ಮತ್ತೆ ಕರೆಸಿಕೊಳ್ಳಬೇಕಾಗುತ್ತದೆ. ಇದರ ಬದಲು ಎನ್‌ಡಿಆರ್‌ಎಫ್ ಮಾದರಿಯಲ್ಲಿ ಎಸ್‌ಡಿಆರ್‌ಎಫ್ ಸಜ್ಜುಗೊಳಿಸುವುದು ಸರ್ಕಾರದ ಉದ್ದೇಶ. ರಾಜ್ಯ ವಿಪತ್ತು ನಿರ್ವಹಣಾ ದಳ ಬಲಪಡಿಸಲು 20 ಕೋಟಿ ರೂ. ಅನುದಾನ ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆಯನ್ನೂ ನೀಡಿದೆ. ಕಟೀಲು ಬಳಿ ಬಡಗ ಎಕ್ಕಾರಿನ ಅರಸುಲೆಪದವಿನಲ್ಲಿ 10 ಎಕರೆ ಜಾಗವನ್ನು ಕೇಂದ್ರದ ಉಸ್ತುವಾರಿ ವಹಿಸಿಕೊಂಡಿರುವ ಅಗ್ನಿಶಾಮಕ ದಳಕ್ಕೆ ಹಸ್ತಾಂತರಿಸಲಾಗಿದೆ. ಸ್ಥಳದಲ್ಲಿ ಸುಸಜ್ಜಿತ ಕಟ್ಟಡ ಸಹಿತ ತರಬೇತಿ ವಿಭಾಗ ನಿರ್ಮಾಣವಾಗಬೇಕಿದೆ. ಜಿಲ್ಲಾಡಳಿತ ಸರ್ಕಾರದ ಅನುದಾನದ ನಿರೀಕ್ಷೆಯಲ್ಲಿದೆ.

    ಎನ್‌ಡಿಆರ್‌ಎಫ್ ತೆರಳಲು ಸಿದ್ಧ: ಕಳೆದ ಜೂನ್‌ನಲ್ಲಿ ಆಂಧ್ರದ ಗುಂಟೂರಿನಿಂದ ಜಿಲ್ಲೆಗೆ ಆಗಮಿಸಿರುವ ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಈ ಬಾರಿ ಹೆಚ್ಚಿನ ಒತ್ತಡ ಇರಲಿಲ್ಲ. ಗುರುಪುರದಲ್ಲಿ ಸಂಭವಿಸಿದ ಭೂ ಕುಸಿತ ಕಾರ್ಯಾಚರಣೆಯಲ್ಲಿ ಮಾತ್ರ ತಂಡ ಭಾಗವಹಿಸಿತ್ತು. ಆಗಸ್ಟ್ ಆರಂಭದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಕುಸಿತ ಸಂತ್ರಸ್ತರ ರಕ್ಷಣೆ ಮಾಡಿದೆ. ಪ್ರಸ್ತುತ ತಂಡ ಮಂಗಳೂರಿನಲ್ಲೇ ಕ್ಯಾಂಪ್ ಮಾಡಿದೆ. ಗುಂಟೂರಿಗೆ ಹಿಂತಿರುಗುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಆದೇಶಕ್ಕೆ ತಂಡ ಕಾಯುತ್ತಿದೆ.

    ಕರಾವಳಿಯ ಭೌಗೋಳಿಕ, ಪ್ರಾಕೃತಿಕ ಹಿನ್ನೆಲೆಯಲ್ಲಿ ಎಸ್‌ಡಿಆರ್‌ಎಫ್ ಕೇಂದ್ರ ಅಗತ್ಯ. ಇದಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಎಕ್ಕಾರು ಬಳಿ ಅರಸುಲೆಪದವು ಬಳಿ 10 ಎಕರೆ ಜಾಗ ಲಭಿಸಿದೆ. ಕಟ್ಟಡ ನಿರ್ಮಾಣ ಅನುದಾನಕ್ಕೆ ಸಂಬಂಧಿಸಿದ ಕೆಲಸಗಳು ಸರ್ಕಾರದ ಮಟ್ಟದಲ್ಲಿ ನಡೆಯಬೇಕಿದೆ. ಪ್ರಸ್ತುತ ಮಾಜಿ ಸೈನಿಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ.
    – ಜಿ.ತಿಪ್ಪೇಸ್ವಾಮಿ, ಮುಖ್ಯ ಅಗ್ನಿಶಾಮಕ ದಳ ಅಧಿಕಾರಿ, ದ.ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts