More

    ಮೈಷುಗರ್ ನಿವೃತ್ತ ನೌಕರರಿಗೆ ಕಿರುಕುಳ?: ನ್ಯಾಯ ಕೇಳಿದಕ್ಕೆ ಸಿಬ್ಬಂದಿಯ ದರ್ಪ

    ಮಂಡ್ಯ: ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯಲ್ಲಿ ಹಲವು ವರ್ಷ ದುಡಿದು ಸ್ವಯಂ ಹಾಗೂ ವಯೋ ನಿವೃತ್ತಿ ತೆಗೆದುಕೊಂಡಿರುವ ನೌಕರರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಗಂಭೀರ ಆರೋಪ ಕೇಳಿಬರುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಕೆಲ ದಿನದ ಹಿಂದೆ ನೌಕರರ ಮನೆಗೆ ಪೂರೈಕೆಯಾಗುತ್ತಿದ್ದ ನೀರಿನ ಸಂಪರ್ಕ ಕಡಿತಗೊಳಿಸಿ, ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸುವ ಕೆಲಸಕ್ಕೆ ಮುಂದಾಗಿ ಆಕ್ರೋಶಕ್ಕೆ ತುತ್ತಾಗುವಂತಾಗಿದೆ.
    ಮೈಷುಗರ್‌ನಿಂದ ನಿವೃತ್ತಿಯಾಗಿರುವ ನೌಕರರಿಗೆ ಸರ್ಕಾರದಿಂದ ಬಾಕಿ ಹಣ ಪಾವತಿಯಾಗಬೇಕಿದೆ. ಪ್ರತಿಯೊಬ್ಬರಿಯೂ ಲಕ್ಷಾಂತರ ರೂ ಸಂದಾಯವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಬಾಕಿ ಹಣ ಕೊಡುವವರೆಗೂ ಕಾರ್ಖಾನೆಯ ವಸತಿಗೃಹದಲ್ಲಿಯೇ ಇರುವ ನಿರ್ಧಾರ ಮಾಡಿದ್ದು, ಅದರಂತೆ ಹಲವು ತಿಂಗಳಿಂದಲೂ ಇದ್ದಾರೆ. ಈ ನಡುವೆ ಕೆಲವರ ಚಿತಾವಣೆಯಿಂದ ಆಡಳಿತ ಮಂಡಳಿ ನಿವೃತ್ತ ನೌಕರರ ಮೇಲೆ ಸವಾರಿಗೆ ಮುಂದಾಗಿದೆ. ನೀರು, ವಿದ್ಯುತ್ ಕಡಿತಗೊಳಿಸುವ ಮೂಲಕ ಕಿತಾಪತಿ ಮಾಡಲೊರಟಿದೆ ಎನ್ನುವ ಆರೋಪವಿದೆ.
    ಹಿಂದೆ ನೀರಿನ ಸಂಪರ್ಕ ಕಡಿತಗೊಳಿಸಿದಾಗ ಶಾಸಕರ ಗಮನಕ್ಕೆ ತಂದು ಸರಿಪಡಿಸಲಾಗಿತ್ತು. ಆದರೆ ಶುಕ್ರವಾರ ಏಕಾಏಕಿ ಬಂದ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಮಾತ್ರವಲ್ಲದೆ ಮೂರು ಮನೆಯ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಈ ಮಾಹಿತಿ ತಿಳಿದು ನಿವೃತ್ತ ನೌಕರರು ಹಾಗೂ ಕುಟುಂಬದವರು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ವಿಆರ್‌ಎಸ್ ಪಡೆದ ನೌಕರರಿಗೆ ಬರಬೇಕಾದ ಹಣವನ್ನು ಸರ್ಕಾರ ಕೊಟ್ಟಿಲ್ಲ. ವಸತಿಗೃಹಗಳನ್ನು ಖಾಲಿ ಮಾಡಿದ ಮೇಲೆ ಹಣ ಕೊಡುತ್ತಾರೆ ಎನ್ನುವುದಕ್ಕೆ ಏನು ಗ್ಯಾರಂಟಿ. ಅಧಿಕಾರಿಗಳು ಬಲವಂತದಿಂದ ವಸತಿಗೃಹಗಳಲ್ಲಿರುವ ನಮ್ಮನ್ನು ಖಾಲಿ ಮಾಡಿಸುವುದಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಸ್ವಯಂನಿವೃತ್ತಿ ಪಡೆದ ಸುಮಾರು 20 ನೌಕರರ ಕುಟುಂಬ ವಸತಿಗೃಹಗಳಲ್ಲಿ ನೌಕರರು ವಾಸವಿದೆ. ನಮಗೆ ಯಾವುದೇ ನೋಟಿಸ್ ಕೊಡದೆ, ಸರ್ಕಾರದಿಂದ ನಮಗೆ ಬರಬೇಕಿರುವ ಹಣವನ್ನೂ ಪಾವತಿಸದೆ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ನಾವೇನು ಮಾಡೋಣ, ಎಲ್ಲಿಗೆ ಹೋಗೋಣ. ಈ ರೀತಿಯ ದೌರ್ಜನ್ಯ ಸರಿಯಲ್ಲ. ಹಣ ಕೊಡದ ಸರ್ಕಾರದ ವಿರುದ್ಧ ನಾವು ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ಹೈಕೋರ್ಟ್ ನಮ್ಮ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈಗ ನ್ಯಾಯಾಲಯಕ್ಕೆ ರಜೆ ಇರುವುದನ್ನು ಮುಂದಿಟ್ಟುಕೊಂಡು ನಮ್ಮನ್ನು ಖಾಲಿ ಮಾಡಿಸಲು ಬಂದಿದ್ದೀರಿ. ಯಾರದೋ ಕುಮ್ಮಕ್ಕಿನಿಂದ ನಮ್ಮನ್ನು ಖಾಲಿ ಮಾಡಿಸಲು ಬಂದಿರುವುದು ಸರಿಯೇ ಎಂದು ಪ್ರಶ್ನಿಸಿದರು.
    ನಮಗೆ ಮೇಲಧಿಕಾರಿಗಳು ಆದೇಶ ಮಾಡಿದ್ದಾರೆ. ಅದರಂತೆ ವಸತಿಗೃಹಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದೇವೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಹೇಳಿದಾಗ, ಆದೇಶದ ಪತ್ರ ನೀಡುವಂತೆ ನೌಕರರು ಕೇಳಿದರು. ಅದನ್ನು ಕೊಡಲಾಗದೆ ಕಂಪನಿಯ ಅಧಿಕಾರಿಗಳು ತಡವರಿಸಿದರು. ಜತೆಗೆ ಈ ವೇಳೆ ನಿವೃತ್ತ ನೌಕರರು ಮತ್ತು ಕುಟುಂಬವರು ನ್ಯಾಯ ಕೇಳಿದಾಗ ಅಧಿಕಾರಿಗಳು ದರ್ಪದಿಂದ ನಡೆದುಕೊಂಡಿದ್ದಾರೆ. ವಿರೋಧ ತೀವ್ರಗೊಳ್ಳುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದನ್ನು ಬಿಟ್ಟು ಕಂಪನಿಯ ಅಧಿಕಾರಿಗಳು ವಾಪಸಾದರು. ಈ ನಡುವೆ ಮತ್ತೆ ಅಧಿಕಾರಿಗಳು ಬಂದು ಕಿರುಕುಳ ನೀಡಬಹುದೆಂಬ ಆತಂಕದಲ್ಲೇ ನಿವೃತ್ತ ನೌಕರರು ಮತ್ತವರ ಕುಟುಂಬದವರು ಕಾಲಕಳೆಯುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts