More

    ಯತ್ನಾಳ ರಾಜೀನಾಮೆ ಕೊಟ್ಟು ಮಾತನಾಡಲಿ – ಮುರಗೇಶ ನಿರಾಣಿ

    ಬೆಳಗಾವಿ: ಬಿಜೆಪಿಯ ಕಮಲ ಚಿಹ್ನೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿನಿಂದಾಗಿಯೇ ಶಾಸಕರಾಗಿ ಆಯ್ಕೆಯಾಗಿರುವ ಬಸವನಗೌಡ ಪಾಟೀಲ ಯತ್ನಾಳ ಅವರು ತಾಕತ್ತಿದ್ದರೆ ರಾಜೀನಾಮೆ ಕೊಟ್ಟು ಪಕ್ಷದಿಂದ ಹೊರ ಹೋಗಿ ಮಾತನಾಡಲಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ವಾಗ್ದಾಳಿ ನಡೆಸಿದರು.

    ಬೆಳಗಾವಿ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ, ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ನಾಯಕರ ವಿರುದ್ಧ ನಿರಂತರವಾಗಿ ಟೀಕೆ ಮಾಡುತ್ತಿರುವ ಶಾಸಕ ಯತ್ನಾಳ ರಾಜೀನಾಮೆ ಕೊಟ್ಟು ಹೊರ ಹೋಗಲಿ. ಇಲ್ಲದಿದ್ದಲ್ಲಿ ಅವರಿಗೆ ನೈತಿಕತೆ ಇದ್ದರೆ ಸುಮ್ಮನೆ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಹೇಳಿದರು.

    ಈ ಮೊದಲು ಮೂರು ವರ್ಷಗಳ ಕಾಲ ಕೇಂದ್ರ ಸಚಿವ ಪ್ರಲ್ದಾದ ಜೋಶಿ, ಸಚಿವ ಜಗದೀಶ ಶೆಟ್ಟರ್ ವಿರುದ್ಧ ಮಾತನಾಡುತ್ತಿದ್ದರು. ಇದೀಗ ಸಿಎಂ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ವಿರುದ್ಧ ಮಾತನಾಡುತ್ತಿದ್ದಾರೆ. ಈ ಎಲ್ಲ ವಿಷಯಗಳನ್ನು ಪಕ್ಷದ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಾಗಲೇ ಸರಿಪಡಿಸಿಕೊಳ್ಳಲು ಒಂದು ವರ್ಷ ಕಾಲಾವಧಿ ನೀಡಿತ್ತು. ಇದೇ ರೀತಿ ವರ್ತನೆ ಮುಂದುವರಿದರೆ ಪಕ್ಷವೇ ಯತ್ನಾಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದ ಎಚ್ಚರಿಸಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಇತರರು ಇದ್ದರು.

    ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರು ಲಕ್ಷಾಂತರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ದಿ.ಸುರೇಶ ಅಂಗಡಿ ಕೈಗೊಂಡಿದ್ದ ಅಭಿವೃದ್ಧಿ ಕೆಲಸಗಳು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನಪ್ರಿಯ ಆಡಳಿತದಿಂದಾಗಿ ಕ್ಷೇತ್ರದಲ್ಲಿನ ಮತದಾರರು ಬಿಜೆಪಿಗೆ ಆಶೀರ್ವದಿಸಲಿದ್ದಾರೆ.

    ಕ್ಷೇತ್ರದಲ್ಲಿ ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ಮುಂದುವರಿಸಲು ಮತ್ತು ಹೊಸ ಯೋಜನೆ ಅನುಷ್ಠಾನಗೊಳಿಸಲು ಮತದಾರರು ಬಿಜೆಪಿ ಅಭ್ಯರ್ಥಿ ಮಂಗಲ ಅವರ ಕೈ ಬಲಪಡಿಸಬೇಕು ಎಂದು ಸಚಿವ ಮುರುಗೇಶ ನಿರಾಣಿ ಮತದಾರರಲ್ಲಿ ವಿನಂತಿಸಿದರು.

    ಉಸ್ತುವಾರಿ ಅವಶ್ಯಕತೆ ಇಲ್ಲ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಸಚಿವ ಜಗದೀಶ ಶೆಟ್ಟರ್ ಮುಂದಾಳತ್ವದಲ್ಲಿ ನಾವೆಲ್ಲ ಸಾಮೂಹಿಕ ಉಸ್ತುವಾರಿಯಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಹಾಗಾಗಿ ಚುನಾವಣೆಗಾಗಿ ಜಿಲ್ಲಾ ಉಸ್ತುವಾರಿ ನೇಮಕ ಮಾಡುವುದು ಅವಶ್ಯಕತೆ ಇಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಿದ್ದಾರೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts