More

    ಹಿಪ್ಪುನೇರಳೆಗೆ ನುಸಿ ರೋಗ ಕಾಟ : ರೋಗ ನಿಯಂತ್ರಣಕ್ಕೆ ಬಾರದೆ ಆತಂಕದಲ್ಲಿ ರೇಷ್ಮೆ ಬೆಳೆಗಾರರು

    ಬೂದಿಕೋಟೆ : ನೂರಾರು ಹೆಕ್ಟೇರ್ ಪ್ರದೇಶದ ಹಿಪ್ಪನೇರಳೆ ಬೆಳೆಗೆ ಥ್ರೀಪ್ಸ್ ಮತ್ತು ಮೈಟ್ಸ್ ಕೀಟಗಳ ಹಾವಳಿ ಹೆಚ್ಚಾಗಿದ್ದು (ನುಸಿ ರೋಗ), ಎಷ್ಟೇ ಕೀಟ ನಾಶಕ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬಾರದೆ ರೇಷ್ಮೆ ಬೆಳೆಗಾರರು ಚಿಂತೆಗೀಡಾಗಿದ್ದಾರೆ.
    ಕೋಲಾರ ಜಿಲ್ಲೆಯು ಹೈನೋದ್ಯಮ, ಟೊಮ್ಯಾಟೊ, ತರಕಾರಿ ಬೆಳೆಗಳ ಜತೆ ರೇಷ್ಮೆ ಬೆಳೆಗೂ ಹೆಸರುವಾಸಿಯಾಗಿದ್ದು, ಟೊಮ್ಯಾಟೊ, ಹೂವು ಹಾಗೂ ತರಕಾರಿಗಳಿಗೆ ಸೂಕ್ತ ಬೆಲೆ ಇಲ್ಲದಿದ್ದರೂ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಇರುವ ಕಾರಣ ಸಾಕಷ್ಟು ರೈತರು ತರಕಾರಿ ಬೆಳೆಯೊಂದಿಗೆ ರೇಷ್ಮೆ ಬೆಳೆಯಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಸುಮಾರು 19079 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಲಾಗಿದ್ದು, ಅಂದಾಜು 19617 ರೈತರು ರೇಷ್ಮೆ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಬಂಗಾರಪೇಟೆ ಹಾಗೂ ಕೆಜಿಎಫ್ ತಾಲೂಕುಗಳಲ್ಲಿ ಸುಮಾರು 3400 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹಿಪ್ಪುನೇರಳೆ ಬೆಳೆಯುತ್ತ ಸುಮಾರು 3500 ರೈತರು ರೇಷ್ಮೆಯನ್ನೇ ಅವಲಂಬಿಸಿದ್ದಾರೆ. ಪ್ರತಿ ತಿಂಗಳು ಸುಮಾರು 2ರಿಂದ 2.5 ಲಕ್ಷದಷ್ಟು ದ್ವಿತಳಿ ಹಾಗೂ ಮಿಶ್ರತಳಿಯ ಮೊಟ್ಟೆಯೊಂದಿಗೆ ಪ್ರತಿ ತಿಂಗಳು 140ರಿಂದ 150 ಟನ್ ಗೂಡು ಉತ್ಪಾದನೆ ಮಾಡುತ್ತಾರೆ. ಮುಖ್ಯವಾಗಿ ತಾಲೂಕಿನಲ್ಲಿ ಸುಮಾರು 50 ಟನ್‌ನಷ್ಟು ದ್ವಿತಳಿ ಗೂಡು ಉತ್ಪಾದನೆ ಮಾಡುವುದು ಹೆಗ್ಗಳಿಕೆಗೆ ಕಾರಣವಾಗಿದೆ. ಇಂತಹ ಸಮಯದಲ್ಲಿ ಕಳೆದ 20 ದಿನಗಳಿಂದ ವಾತಾವರಣದಲ್ಲಿ ಉಂಟಾದ ಏರುಪೇರಿನಿಂದ ಹಿಪ್ಪನೇರಳೆ ಸೊಪ್ಪಿಗೆ ನುಸಿ ರೋಗ ತಗುಲಿದ್ದು, ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ.
    ಆಹಾರಕ್ಕಾಗಿ ಪರದಾಟ: ಬೂದಿಕೋಟೆ ಹೋಬಳಿಯ ಮೂತನೂರು ಗ್ರಾಮವೊಂದರಲ್ಲೇ 300 ರೈತರು ರೇಷ್ಮೆ ಬೆಳೆಯುತ್ತಾರೆ. ಸುಮಾರು 150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ಹಿಪ್ಪನೇರಳೆ ಬೆಳೆಗೆ ತಗುಲಿದ ನುಸಿ ರೋಗ ಹತೋಟಿಗೆ ತರಲು ಸಾವಿರಾರು ರೂ. ವೆಚ್ಚ ಮಾಡಿ ಎಷ್ಟೇ ಔಷಧ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬಾರದ ಕಾರಣ ರೇಷ್ಮೆ ಹುಳುಗಳಿಗೆ ಮುದುಡಿದ ಸೊಪ್ಪನ್ನೇ ಹಾಕಿ ಕಾಪಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಕಳೆದ ವರ್ಷ ಅಲ್ಲಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡ ಥ್ರೀಪ್ಸ್ ಮತ್ತು ಮೈಟ್ಸ್ ಕೀಟಗಳ ಹಾವಳಿ ಈ ಬಾರಿ ತಾಲೂಕಿನ ಎಲ್ಲೆಡೆ ಹರಡಿದೆ. ಕಡ್ಡಿ ಕಟಾವು ಮಾಡಿ ಗಿಡ ಚಿಗುರುತ್ತಿದ್ದಂತೆ ಕೀಟಗಳು ಸೊಪ್ಪಿನಲ್ಲಿರುವ ರಸ ಹೀರಿಕೊಂಡು ಬೆಂಡಾಗಿಸುತ್ತಿವೆ. ಚಿಗುರು ಹತ್ತಾರು ಕವಲುಗಳಾಗಿ ಸೊಪ್ಪೇ ಬಾರದಂತಾಗುತ್ತಿದೆ. ಕಳೆದೊಂದು ತಿಂಗಳಿಂದ ಈ ರೋಗ ವ್ಯಾಪಕವಾಗಿ ಹರಡುತ್ತಿರುವುದರಿಂದ ರೈತರ ನಿದ್ದೆ ಕೆಡಿಸಿದೆ.

    ಔಷಧ ಸಿಂಪಡಣೆಯ ವಿಧಾನ:  ಹಿಪ್ಪುನೇರಳೆ ಕಟಾವು ಮಾಡಿದ 10-12 ದಿನಗಳಲ್ಲಿ ಪೆನಜಾಕ್ವಿನ್ ಶೇ.10 ಇಸಿ (ಮ್ಯಾಜಿಸ್ಟರ್) 1.5 ಎಂಎಲ್‌ನಂತೆ ಪ್ರತಿ ಲೀಟರ್ ನೀರಿಗೆ ಎಕರೆಗೆ 150 ಲೀ. ದ್ರಾವಣ ಸಿದ್ಧಪಡಿಸಿ ಎಲೆ ಕೆಳಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕು. ಸೊಪ್ಪು ಕೊಯ್ಯುವ ಹಂತಕ್ಕೆ ಬಂದಿದ್ದರೆ ಕೀಟ ನಿಯಂತ್ರಣಕ್ಕೆ ಶೇ. 3ರ ಸಲ್ಪರ್ ದ್ರಾವಣವನ್ನು 3 ಗ್ರಾಂ ಪ್ರತಿ ಲೀಟರ್ ನೀರಿಗೆ, ಎಕರೆಗೆ 450 ಗ್ರಾಂ ಸಲ್ಫರ್ ಪುಡಿ 150 ಲೀಟರ್ ನೀರಿನಲ್ಲಿ ಬೆರೆಸಿ ಗಿಡದ ಎಲ್ಲ ಭಾಗ ನೆನೆಯುವಂತೆ ಸಿಂಪಡಿಸಬೇಕು ಹಾಗೂ ಬದುಗಳ ಮೇಲಿನ ಇತರ ಸಸ್ಯಗಳ ಮೇಲೂ ಸಿಂಪಡಿಸಬೇಕು ಎಂದು ಬಂಗಾರಪೇಟೆ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ತಿಳಿಸಿದ್ದಾರೆ.

    ಗ್ರಾಮದಲ್ಲಿ ಬಹುತೇಕ ಬೆಳೆಗೆ ನುಸಿ ರೋಗ ತಗುಲಿದ್ದು, ರೇಷ್ಮೆ ಉಲಾಖೆ ಅಧಿಕಾರಿಗಳು ನೀಡಿದ ಔಷದೋಪಚಾರದಂತೆ ಕೀಟನಾಶಕ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಚೆನ್ನಾಗಿರುವ ಸೊಪ್ಪನ್ನು ಆಯ್ಕೆ ಮಾಡಿ ಹುಳುವಿಗೆ ನೀಡಲಾಗುತ್ತಿದ್ದು, ಯೋಗ್ಯವಲ್ಲದ ಸೊಪ್ಪಿನಿಂದ ಹುಳುಗಳು ರೋಗಕ್ಕೆ ತುತ್ತಾಗಿ ಬೆಳೆ ಸಹ ಕಳೆದುಕೊಳ್ಳುವ ಭೀತಿ ಎದುರಾಗಿದೆ.
    ವೆಂಕಟೇಶಪ್ಪ, ರೇಷ್ಮೆ ಬೆಳೆಗಾರ, ಮೂತನೂರು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts