ಬೂದಿಕೋಟೆ: ಎಲೆಕೋಸು ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಲಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ತೋಟದಲ್ಲಿಯೇ ಬಾಡುವಂತಾಗಿ ರೈತರಿಗೆ ಸಂಕಷ್ಟ ತಂದೊಡ್ಡಿದೆ.
ಬಂಗಾರಪೇಟೆ ತಾಲೂಕಿನ ರೈತರು ಟೊಮ್ಯಾಟೊ ಜತೆಗೆ ಎಲೆಕೋಸನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ತಾಲೂಕಿನಲ್ಲಿ ಬೆಳೆಯುವ ಎಲೆಕೋಸಿಗೆ ಬೇಡಿಕೆ ಇರುತ್ತಿದ್ದು, ಚೆನ್ನೆ, ವಿಜಯವಾಡ, ಕೋಲ್ಕತಾ ಸೇರಿ ಇತರ ರಾಜ್ಯಗಳಿಗೆ ಸರಾಬರಾಜು ಆಗುತ್ತಿತ್ತು. ಒಂದೂವರೆ ತಿಂಗಳ ಹಿಂದೆ 10.5 ಟನ್ ತೂಕದ ಎಲೆಕೋಸು 1.30 ಲ ರೂ.ಗಳಿಗೆ ಮಾರಾಟವಾಗುತ್ತಿತ್ತು. ಈಗ ದಿಢೀರನೆ ಕುಸಿತಗೊಂಡು 10.5 ಟನ್ ತೂಕದ ಒಂದು ಲೋಡ್ ಕೇವಲ 6,000 ದಿಂದ 8,000 ರೂಪಾಯಿಗೆ ಮಾರಾಟವಾಗುತ್ತಿದೆ.
ಬೆಲೆ ಕುಸಿತಕ್ಕೆ ಕಾರಣ: ಒಂದೂವರೆ ತಿಂಗಳ ಹಿಂದೆ ಮಳೆ ಹಾಗೂ ಇತರ ಕಾರಣಗಳಿಂದ ಬೆಳೆ ನಾಶವಾಗಿ ಆವಕ ಕಡಿಮೆಯಿದ್ದು, ಒಂದು ಲೋಡ್ 1.30 ಲ ರೂ.ಗೆ ಮಾರಾಟವಾಗುತ್ತಿತ್ತು. ಬೆಲೆ ಏರಿಕೆ ಕಂಡ ರೈತರು ಹೆಚ್ಚಿನ ಪ್ರಮಾಣದಲ್ಲಿ ಎಲೆಕೋಸು ಬೆಳೆದ ಕಾರಣ ಬೇಡಿಕೆಗಿಂತ ಈಗ ಆವಕ ಹೆಚ್ಚಾಗಿದ್ದು, ಬೆಲೆ ಪಾತಾಳಕ್ಕೆ ಇಳಿದು ರೈತರಿಗೆ ನಷ್ಟ ಉಂಟಾಗುತ್ತಿದೆ.
ಬೇಡಿಕೆ ಇಲ್ಲ: ರಾಜ್ಯ ಸೇರಿದಂತೆ ಇತರ ರಾಜ್ಯಗಳಲ್ಲಿ ಇಳುವರಿ ಹೆಚ್ಚಿರುವ ಕಾರಣ ಹೊರ ರಾಜ್ಯಗಳಿಂದ ವ್ಯಾಪಾರಸ್ಥರು ಬರುತ್ತಿಲ್ಲ. ಇದರಿಂದಾಗಿ ಕಟಾವು ಹಂತಕ್ಕೆ ಬಂದಿರುವ ಬೆಳೆ ಮಾರಾಟ ಮಾಡಲು ಸಾಧ್ಯವಾಗದೆ ರೈತರು ತೋಟಗಳಲ್ಲಿಯೇ ಬಿಟ್ಟಿದ್ದಾರೆ.

ಖರ್ಚು ವೆಚ್ಚ: ಒಂದು ಎಕರೆ ಪ್ರದೇಶದಲ್ಲಿ ಎಲೆಕೋಸು ಬೆಳೆಯಬೇಕಾದರೆ ಸಸಿ, ಕೀಟನಾಶಕ, ಗೊಬ್ಬರ ಇತ್ಯಾದಿ ಸೇರಿ ಕನಿಷ್ಠ 70 ಸಾವಿರ ರೂಪಾಯಿ ಖರ್ಚು ತಗಲುತ್ತದೆ. ಒಂದು ಎಕರೆಯಲ್ಲಿ ಎರಡು ಲೋಡ್ ಇಳುವರಿ ಬರುತ್ತಿದ್ದು, ಈಗಿನ ಬೆಲೆಯಲ್ಲಿ ಹಾಕಿದ ಬಂಡವಾಳವೂ ಕೈ ಸೇರದೆ ಬೆಳೆಗೆ ಹಾಕಿದ ಸಾಲ ತೀರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ತಾಲೂಕಿನ ರೈತರಿದ್ದಾರೆ.
ರೈತರು ಎಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಎಲೆಕೋಸು ಬೆಳೆದಿರುವ ಕಾರಣ ಮಾರುಕಟ್ಟೆಗೆ ಬೇಡಿಕೆಗಿಂತ ಹೆಚ್ಚಾಗಿ ಬರುತ್ತಿದೆ. ಹೊರ ರಾಜ್ಯಗಳಿಂದ ಬೇಡಿಕೆ ಇಲ್ಲದೆ ರಪ್ತು ಆಗದ ಕಾರಣ ಬೆಲೆ ಇಳಿಕೆ ಕಂಡಿದೆ. ಹೊರ ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಬರುವವರೆಗೂ ಬೆಲೆ ಏರಿಕೆ ಕಾಣುವುದಿಲ್ಲ.

ನಾಗರಾಜ ಶೆಟ್ಟಿ, ವ್ಯಾಪಾರಸ್ಥ ಬೂದಿಕೋಟೆ
ಟೊಮ್ಯಾಟೊ ಜತೆಗೆ ಎಲೆಕೋಸು ಬೆಳೆದಿದ್ದು, ಟೊಮ್ಯಾಟೊಗೆ ಉತ್ತಮ ಬೆಲೆ ಇಲ್ಲ. ಎಲೆಕೋಸಿನಿಂದಾದರೂ ಮೂರು ಕಾಸು ಕಾಣಬಹುದು ಎಂದು ಕನಸು ಕಂಡಿದ್ದರೇ ಅದರ ಬೆಲೆಯೂ ಈಗ ಪಾತಾಳಕ್ಕೆ ಕುಸಿದಿದೆ. ಸಾಲ ಮಾಡಿ ಲಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆಯನ್ನು ಕೇಳುವವರೇ ಇಲ್ಲದಂತಾಗಿದೆ. ಬೆಳೆಗೆ ಮಾಡಿದ ಸಾಲ ತೀರಿಸೋದು ಹೇಗೆ ಎಂಬುದು ಗೊತ್ತಾಗುತ್ತಿಲ್ಲ.

ಗೋಪಾಲ್, ರೈತ, ವಟ್ಟಿಗಲ್ಲು