More

    ಜಲಮರುಪೂರಣ ಜನಜಾಗೃತಿಯೇ ಪರಿಹಾರ; ಜಲತಜ್ಞ ಅಯ್ಯಪ್ಪ ಮಸಗಿ ಅಭಿಪ್ರಾಯ

    ಪ್ರಕೃತಿದತ್ತವಾಗಿ ಲಭ್ಯವಾಗುವ ಮಳೆನೀರನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ದೈನಂದಿನ ಜೀವನಾವಶ್ಯಕತೆಗೆ ಬಳಸಿಕೊಂಡಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದು. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಹಾಗೂ ಸಾರ್ವಜನಿಕರು ಮಳೆಕೊಯ್ಲು, ಜಲಮರುಪೂರಣ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸಲು ಜನಜಾಗೃತಿಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯ ಇದೆ- ಇದು ಜಲತಜ್ಞ ಅಯ್ಯಪ್ಪ ಮಸಗಿಯವರ ಸ್ಪಷ್ಟ ಅಭಿಪ್ರಾಯ.

    ವಿಶ್ವ ಜಲ ದಿನ ಹಿನ್ನೆಲೆಯಲ್ಲಿ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಗುರುವಾರ ಪಾಲ್ಗೊಂಡಿದ್ದ ಅವರು, ಜಲ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಜೀವಜಲದ ಅಲಭ್ಯತೆಯ ದಿನಗಳು ಮನುಷ್ಯರನ್ನು ಹೆಚ್ಚಾಗಿ ಕಾಡುತ್ತಿರುವುದರಿಂದ ನೀರಿನ ಮಿತವ್ಯಯ ಮಾಡುವ ಜತೆಗೆ ಜಲ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಬೆಂಗಳೂರಿನಂತಹ ನಗರಗಳಲ್ಲಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕಿದರೆ ಭವಿಷ್ಯದಲ್ಲಿ ಕೇಪ್​ಟೌನ್ ನಗರದಲ್ಲಿ ಉಂಟಾಗಿರುವ ಜಲಕ್ಷಾಮ ನಮಗೂ ತಟ್ಟದೇ ಇರದು. ಈ ಎಚ್ಚರಿಕೆಯನ್ನು ಮನಗಂಡು ಜಲ ಸಾಕ್ಷರರಾಗುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.

    ಪ್ರತೀ ಐದು ವರ್ಷಕ್ಕೊಮ್ಮೆ ಮಳೆ ಬೀಳುವ ಮಾದರಿಯಲ್ಲಿ ತುಸು ಬದಲಾವಣೆ ಆಗುತ್ತಿದೆ. ಈ ಮಳೆ ಚಕ್ರದ ಅವಧಿಯ ಒಂದು ವರ್ಷ ಮಳೆಯಾಗದೆ ಬರ ಆವರಿಸಿಕೊಳ್ಳುತ್ತದೆ. ಇದರಿಂದ ಕೃಷಿ, ಕುಡಿಯುವ ನೀರಿಗೆ ಕೊರತೆ ಕಾಡುತ್ತದೆ. ನಂತರ ವರ್ಷದಲ್ಲಿ ಸಾಮಾನ್ಯ ಮಳೆಯಾದರೂ ಕೆಲ ವ್ಯತ್ಯಾಸಗಳು ಮುಂದುವರಿಯುತ್ತವೆ. ಕರ್ನಾಟಕದಂತಹ ಒಣ ಹವಾಗುಣ ರಾಜ್ಯದಲ್ಲಿ ಮಳೆ ಕಣ್ಣಾಮುಚ್ಚಾಲೆ ಆಡುವುದರಿಂದ ಮಳೆನೀರು ಕೊಯ್ಲು ನೀರಿನ ಅಭಾವವನ್ನು ನೀಗಿಸುವ ಏಕಮಾತ್ರ ಪರಿಹಾರ ವಿಧಾನವಾಗಿದೆ. ಸದ್ಯ ಶೇಕಡ 2-3 ಪ್ರಮಾಣದ ಮಳೆನೀರು ಭೂಮಿಯೊಳಗೆ ಇಂಗುತ್ತಿದ್ದು, ಇದನ್ನು ಶೇಕಡ 30-40ಕ್ಕೆ ಹೆಚ್ಚಿಸಬೇಕು.

    ಅಂತರ್ಜಲ ವೃದ್ಧಿಗೆ ಒತ್ತು ನೀಡಿರಿ: ಕೃಷಿ ಜಮೀನಿನಲ್ಲಿ ಅಂತರ್ಜಲ ವೃದ್ಧಿಸಲು ಹೆಚ್ಚು ಅವಕಾಶಗಳಿವೆ. ಪಟ್ಟಾ ಬಂಡಿಂಗ್ ಮಾದರಿಯಲ್ಲಿ ಜಮೀನಿನಲ್ಲಿ ಕಂಪಾರ್ಟ್​ವೆುಂಟ್ ರೀತಿ ವಿಂಗಡಿಸಿಕೊಂಡು 1.5 ಅಡಿ ಆಳಕ್ಕೆ ಉದ್ದಕ್ಕೂ ಕಾಲುವೆ ರೀತಿ ಅಗೆದು ನೀರನ್ನು ಇಂಗಿಸಬೇಕು. ಕಂಪಾರ್ಟ್​ವೆುಂಟ್ ಮಾದರಿಯಲ್ಲಿ ಒಂದು ಎಕರೆಯಲ್ಲಿ 1 ಮೀ. ಆಳಕ್ಕೆ ಹಾಗೂ ಪ್ರತೀ 10 ಮೀ. ಉದ್ದಕ್ಕೂ ಕಾಲುವೆ ರಚಿಸಿಕೊಳ್ಳಬೇಕು. ಟ್ರೆಂಚ್ ಹಾಗೂ ಪಿಟ್ ಮಾದರಿಯಲ್ಲಿಯೂ ಗುಂಡಿಗಳನ್ನು ತೋಡಿ ಮಳೆನೀರನ್ನು ನೇರವಾಗಿ ಭೂಮಿಯೊಳಗೆ ಇಂಗಿಸುವುದರಿಂದ ಕೆಲ ವರ್ಷದಲ್ಲೇ ಇಡೀ ಜಮೀನಿನಲ್ಲಿ ಅಂತರ್ಜಲ ಮಟ್ಟ ವೃದ್ಧಿ ಜತೆಗೆ ತೇವಾಂಶದ ಮಟ್ಟವೂ ಹೆಚ್ಚುತ್ತದೆ. ಇದರಿಂದ ಮಣ್ಣಿನ ಸವಕಳಿ ತಡೆಗಟ್ಟಬಹುದು, ಕೃಷಿಗೆ ಅಗತ್ಯ ನೀರು ಪೂರೈಸಿಕೊಳ್ಳುವ ಜತೆಗೆ ನಿರಂತರವಾಗಿ ನೀರಿನ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಅಯ್ಯಪ್ಪ ಮಸಗಿ ಸಲಹೆ ನೀಡಿದರು.

    ವರ್ಷದ ಮಳೆ 3 ವರುಷ ಬಳಸಬಹದು!: ಬೆಂಗಳೂರಿನಲ್ಲಿ ವರ್ಷದ ಹೆಚ್ಚಿನ ತಿಂಗಳು ಮಳೆಯಾಗುತ್ತದೆ. ಇಲ್ಲಿ ಒಂದು ವರ್ಷ ಸುರಿಯುವ ಮಳೆಯನ್ನು ಪೂರ್ಣವಾಗಿ ಹಿಡಿದಿಟ್ಟಲ್ಲಿ ಮೂರು ವರುಷ ಬಳಸಿಕೊಳ್ಳಲು ಅವಕಾಶ ಇದೆ. ಈ ನಿಟ್ಟಿನಲ್ಲಿ ನಮ್ಮನ್ನಾಳುವ ಆಡಳಿತಗಾರರು ಹೆಚ್ಚು ಜಾಗೃತರಾಗಬೇಕಿದೆ. ಜನರಿಗೆ ಮಳೆನೀರನ್ನು ಇಂಗಿಸುವ ಕ್ರಮವನ್ನು ತಿಳಿಹೇಳಬೇಕಿದೆ. ಬೆಂಗಳೂರಿನಲ್ಲಿ ವಿಶಾಲ ರಸ್ತೆಗಳಿವೆ. ಇಲ್ಲಿ ಒಂದು ಕಿ.ಮೀ. ರಸ್ತೆ ಉದ್ದಕ್ಕೂ ಎರಡೂ ಬದಿಯಲ್ಲಿ ಮಳೆನೀರನ್ನು ಇಂಗಿಸಿದರೆ ವಾರ್ಷಿಕ 3 ಕೋಟಿ ಲೀಟರ್ ನೀರು ಸಂಗ್ರಹವಾಗುತ್ತದೆ. ಇದನ್ನು ಜಾರಿಗೆ ತರಲು ತಂತ್ರಜ್ಞಾನ ನಮ್ಮಲ್ಲೇ ಇದೆ. ಈ ಕೆಲಸವನ್ನು ಕೇವಲ 25 ಲಕ್ಷ ರೂ. ವೆಚ್ಚದಲ್ಲಿ ಜಾರಿಗೆ ತರಬಹುದು. ಇದರಿಂದ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುವುದು ನಿಶ್ಚಿತ.

    ಅರಿವು ಹೆಚ್ಚಬೇಕಿದೆ: ಮಳೆ ನೀರು ಸಂಗ್ರಹ, ಜಲಮರುಪೂರಣ ವ್ಯವಸ್ಥೆ ಸರಳ ವಿನ್ಯಾಸವಾಗಿದ್ದು, ಪ್ರತಿಯೊಬ್ಬರೂ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಬಹುದು. ಭವಿಷ್ಯದ ದೃಷ್ಟಿಯಿಂದ ಛಾವಣಿ ನೀರನ್ನು ಸಂಗ್ರಹಿಸುವುದು, ಕೊಳವೆಬಾವಿ ಪಕ್ಕದಲ್ಲಿ ನೀರು ಇಂಗಿಸುವುದು, ಮಳೆ ನೀರು ಕೊಯ್ಲು ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕಿದೆ. ಪ್ರತಿ ವರ್ಷ ಶೇ.30ರಿಂದ 40 ಮಳೆ ನೀರು ಇಂಗಿದರೆ, ನೀರಿನ ಸಮಸ್ಯೆ ಇಲ್ಲದಂತಾಗುತ್ತದೆ ಎಂದು ಅಯ್ಯಪ್ಪ ಮಸಗಿ ಕಿವಿಮಾತು ಹೇಳಿದರು.

    Ayyappa Masagi

    ಪರಿಶ್ರಮಕ್ಕೆ ಸಿಕ್ಕ ಫಲ: ಮೂಲತಃ ಮೆಕಾನಿಕಲ್ ಇಂಜಿನಿಯರ್ ಆಗಿರುವ ಅಯ್ಯಪ್ಪ ಮಸಗಿ ಪ್ರವೃತ್ತಿಯಾಗಿ ಬೆಳೆಸಿಕೊಂಡ ಜಲಮರುಪೂರಣ ಕೈಂಕರ್ಯವು ಅವರನ್ನು ಇಂದು ಜಲತಜ್ಞರಾಗಿಸಿದೆ. ಕೊರಟಗೆರೆ ತಾಲೂಕಿನ ಹೊಲವನಹಳ್ಳಿಯಲ್ಲಿ ಗುತ್ತಿಗೆಯಡಿ ಪಡೆದ ಬರಡು ಜಮೀನನ್ನು ನಂದನವನವನ್ನಾಗಿಸಿದ್ದಾರೆ. ಇಲ್ಲಿ 189 ಗುಂಡಿಗಳು, 29 ಇಂಗುಗುಂಡಿಗಳು, 3 ಕಂಪಾರ್ಟ್​ವೆುಂಟ್, ಸಣ್ಣ ಕೆರೆ ಸೇರಿ ವಾರ್ಷಿಕ 6.5 ಕೋಟಿ ಲೀಟರ್ ಮಳೆನೀರನ್ನು ಭೂಮಿಗಿಳಿಸಿ ಅಂತರ್ಜಲ ವೃದ್ಧಿಗೆ ಕಾರಣರಾಗಿದ್ದಾರೆ. ಒಂಬತ್ತು ವರ್ಷದ ಸತತ ಪರಿಶ್ರಮದಿಂದಾಗಿ ಅವರ ಜಮೀನು ಸಮೃದ್ಧವಾದ ಬೆಳೆಗಳಿಂದ ಕಂಗೊಳಿಸುತ್ತಿದ್ದು ಮಿನಿ ಅರಣ್ಯವಾಗಿ ಮಾರ್ಪಟ್ಟಿದೆ. ಇವರ ಜಮೀನಿನ ಸುತ್ತಲಿನ ರೈತರ ತೋಟದಲ್ಲಿರುವ ಬೋರ್​ವೆಲ್​ಗಳಲ್ಲಿ ನೀರಿನ ಮಟ್ಟ ಹೆಚ್ಚಿ ಖುಷಿಪಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂರ್ಪಸಿ, ಜಲ ಸಾಕ್ಷರತಾ ಪ್ರತಿಷ್ಠಾನದ ವೆಬ್​ಸೈಟ್: https://www.waterliteracyfoundation.com/ ಸಂಪರ್ಕ ಸಂಖ್ಯೆ: 94483-79497 ದೂರವಾಣಿ: 080-23339497

    ಸೋರಿಕೆ ತಡೆಯಲು ಮೀಟರ್ ಅಳವಡಿಸಿ: ಬೆಂಗಳೂರು ನಗರದಲ್ಲಿ ಸರಬರಾಜು ಆಗುತ್ತಿರುವ ಕಾವೇರಿ ನೀರು ಬಹಳಷ್ಟು ಸೋರಿಕೆಯಾಗುತ್ತಿದೆ. ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು. ಪ್ರತೀ ಸಂಪರ್ಕಕ್ಕೂ ಮೀಟರ್ ಹಾಕಬೇಕು. ಮಧ್ಯಮ ಗಾತ್ರ ಮನೆಗಳು ಸೇರಿ ಎಲ್ಲ ಕಟ್ಟಡಗಳಲ್ಲೂ ಮಳೆಕೊಯ್ಲು ಪದ್ಧತಿಯನ್ನು ಕಡ್ಡಾಯಗೊಳಿಸಬೇಕು. ಅಪಾರ್ಟ್​ವೆುಂಟ್​ಗಳ ಮೇಲೆ ಬೀಳುವ ಅಷ್ಟೂ ನೀರನ್ನು ಸಂಪ್​ಗೆ ತುಂಬಿಸುವ ಜತೆಗೆ ಬೋರ್​ವೆಲ್​ಗಳಿಗೆ ಮರುಪೂರಣಗೊಳಿಸಬೇಕು. ರಸ್ತೆಗಳಲ್ಲಿ ಪ್ರತೀ 20-30 ಅಡಿಗೊಂದರಂತೆ ಇಂಗುಗುಂಡಿ ನಿರ್ವಿುಸಿ ಅಲ್ಲಿಯೇ ಮಳೆನೀರು ಇಂಗಿಸುವ ಕಾರ್ಯಕ್ರಮವನ್ನು ಕೈಗೊಳ್ಳಬೇಕು.

    500 ಅಡಿಗಿಂತ ಆಳದ ನೀರು ಬಳಕೆ ಸಲ್ಲ: ಅಂತರ್ಜಲ ಕುಸಿತದ ಪರಿಣಾಮ ಸಾವಿರ ಅಡಿ ಕೊರೆದರೂ ನೀರು ಸಿಗದು ಎಂಬ ಪರಿಸ್ಥಿತಿ ಎದುರಾಗಿದೆ. ವೈಜ್ಞಾನಿಕವಾಗಿ ಹೇಳುವುದಾದರೆ, ಕೊಳವೆಬಾವಿ ಕೊರೆಯುವಾಗ 500 ಅಡಿಯೊಳಗೆ ನೀರು ಸಿಗಬೇಕು. ಇಲ್ಲವಾದರೆ ಆ ಬೋರ್​ವೆಲ್ ಒಂದಲ್ಲ ಒಂದು ದಿನ ಬತ್ತಿ ಹೋಗುವುದು ನಿಶ್ಚಿತ. ಜತೆಗೆ ಆ ನೀರಿನ ಬಳಕೆ ಒಳ್ಳೆಯದಲ್ಲ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

    ‘ರೀಚಾರ್ಜ್’ ನಿರಂತರ…: ಕೊಳವೆಬಾವಿಗೆ ನೀರಿನ ರೀಚಾರ್ಜ್ ಪ್ರಕ್ರಿಯೆ ನಿರಂತರವಾಗಿ ಆಗುತ್ತಿರಬೇಕು. ಇದಕ್ಕಾಗಿ ಕೊಳವೆಬಾವಿ ಸುತ್ತ ಕನಿಷ್ಠ 2 ಅಡಿ ಆಳ ಗುಂಡಿ ತೋಡಬೇಕು. ಇಲ್ಲಿ ನೀರು ಶೇಖರಣೆಗೊಂಡು, ಇಂಗುತ್ತಿರುತ್ತದೆ. ಆಳ ಹೆಚ್ಚಾದಷ್ಟು ಲಾಭ ಜಾಸ್ತಿ. ಬಹುತೇಕ ಜನರಲ್ಲಿ ಈ ವ್ಯವಸ್ಥೆ ಅಳವಡಿಸಲು ಹಣ ಖರ್ಚಾಗುತ್ತದೆ ಎಂಬ ಕಲ್ಪನೆ ಇದೆ. ಇದೊಂದು ಸರಳ ವಿಧಾನವಾಗಿದ್ದು, ಹೆಚ್ಚು ಖರ್ಚಿಲ್ಲ. ಒಂದು ಬಾರಿ ಹಣ ಹೂಡಿದರೆ, ನಿರಂತರವಾಗಿ ಬಳಕೆ ಮಾಡಬಹುದು.

    ನೀರಿನ ಮಿತವ್ಯಯಕ್ಕೆ ಕೆಲ ಸಲಹೆಗಳು

    • ನೀರಿನ ಸೋರಿಕೆಗೆ ಕಡಿವಾಣ ಹಾಕಲು ಮನೆಗಳಿಗೆ ಮೀಟರ್ ಅಳವಡಿಕೆ
    • ಜನಸಂಖ್ಯೆ ಆಧಾರದಲ್ಲಿ ನೀರಿನ ಬಳಕೆ ವಿಧಾನ ಅಳವಡಿಕೆ
    • ಹೆದ್ದಾರಿ ಬದಿ ‘ಟ್ರೀ ಹಬ್’ ಮಾದರಿ ಕಿರು ಅರಣ್ಯ
    • ಪರಿಣಾಮಕಾರಿಯಾಗಿ ಮಳೆ ನೀರು ಇಂಗಿಸುವಿಕೆಗೆ ಆದ್ಯತೆ
    • ಕಾಂಕ್ರೀಟ್ ಪ್ರದೇಶದಲ್ಲಿ ಜಲ ಮರುಪೂರಣಕ್ಕೆ ಪ್ರತ್ಯೇಕ ಸ್ಥಳ
    • ನಗರಗಳಲ್ಲಿ ಇಂಗುಗುಂಡಿ, ಬೋರ್​ವೆಲ್ ಮರುಪೂರಣ ಅತ್ಯಗತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts