More

    ಗಂಗಾವತಿಯಲ್ಲಿ ಭೂತ ಬಂಗ್ಲೆಯಂತಾದ ಸರ್ಕಾರಿ ಕಚೇರಿ ಕಟ್ಟಡಗಳು

    ವಿಜಯವಾಣಿ ವಿಶೇಷ ಗಂಗಾವತಿ
    ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ನಿರ್ವಹಣೆ ಕೊರತೆಯಿಂದ ಸರ್ಕಾರಿ ಕಟ್ಟಡಗಳು ಭೂತ ಬಂಗ್ಲೆಗಳಾಗುತ್ತಿದ್ದು, ಕಚೇರಿಗಾಗಿ ಖಾಸಗಿ ಕಟ್ಟಡಗಳ ಮೇಲಿನ ಅಧಿಕಾರಿಗಳ ವ್ಯಾಮೋಹ ಕಡಿಮೆಯಾಗಿಲ್ಲ.

    ಆರ್ಥಿಕ ವೆಚ್ಚ ಸುಧಾರಣೆಗೆ ಸರ್ಕಾರ ಹಲವು ಕಸರತ್ತು ನಡೆಸುತ್ತಿದ್ದು, ಇಲಾಖೆಗಳ ವಿಲೀನ ಮತ್ತು ಅನಗತ್ಯ ಖರ್ಚಿಗೆ ಕಡಿವಾಣ ಹಾಕಲು ಯೋಜನೆ ರೂಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಟ್ಟಡಗಳು ಹಾಳಾಗುತ್ತಿದ್ದು, ಪರ್ಯಾಯ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗುತ್ತಿಲ್ಲ.

    ಹಳೇ ಕಟ್ಟಡ ಮತ್ತು ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಸರ್ಕಾರಿ ಕಚೇರಿಗಳು ಬಿಕೋ ಎನ್ನುತ್ತಿದ್ದು, ಸಾರ್ವಜನಿಕ ಮೂತ್ರಾಲಯಗಳಾಗಿ ಮಾರ್ಪಟ್ಟಿವೆ. ನಿಜಾಮರ ಕಾಲದಲ್ಲಿ ನಿರ್ಮಿಸಿದ ಕಟ್ಟಡ ಗಟ್ಟಿಯಾಗಿದ್ದರೂ, ಅಧುನಿಕ ವ್ಯವಸ್ಥೆಯಿಲ್ಲ ಎಂಬ ಕಾರಣಕ್ಕೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ಹಳೇ ಕಟ್ಟಡಗಳು ಬೇರೆ ಇಲಾಖೆಗೆ ನೀಡಲು ಅಧಿಕಾರಿಗಳಲ್ಲಿ ಅಸಕ್ತಿಯಿಲ್ಲ.

    ಹಳೇ ಕಟ್ಟಡಕ್ಕೆ ಬರಲು ಬೇರೆ ಇಲಾಖೆ ಅಧಿಕಾರಿಗಳಿಗೂ ಮನಸ್ಸಿಲ್ಲ. ಆರ್ಥಿಕ ವೆಚ್ಚ ಕಡಿವಾಣಕ್ಕೆ ಸರ್ಕಾರ ಚಾಪೆ ಕೆಳಗೆ ತೂರಿದರೆ, ದುಂದು ವೆಚ್ಚಕ್ಕಾಗಿ ಇಲಾಖಾಧಿಕಾರಿಗಳು ರಂಗೋಲಿ ಕೆಳಗೆ ತೂರುವ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

    ವಿಷಜಂತುಗಳ ಆವಾಸಸ್ಥಾನ
    50 ವರ್ಷಗಳಿಂದಲೂ ತಾಲೂಕು ಆಡಳಿತ ಕಚೇರಿಯಾಗಿದ್ದ ತಹಸಿಲ್ ಕಚೇರಿ, ನ್ಯಾಯ ನೀಡಿದ ಜೆಎಂಎ್ಸಿ, ಖಜಾನೆ, ಪೊಲೀಸ್ ನಗರ ಠಾಣೆ, ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ನೀರಾವರಿ ಮತ್ತು ರೈತ ತರಬೇತಿ ಕೇಂದ್ರದ ಕಟ್ಟಡಗಳು ಹಾಳಾಗಿದ್ದು, ವಿಷ ಜಂತುಗಳ ವಾಸದ ಭೂತ ಬಂಗ್ಲೆಗಳಾಗಿವೆ. ಬಾಲಕರ ಸ.ಪ.ಪೂ.ಕಾಲೇಜಿನ 10 ಕೊಠಡಿಗಳು ತ್ಯಾಜ್ಯ ಸಂಗ್ರಹದ ಕೇಂದ್ರವಾಗಿವೆ. ನಿರ್ವಹಣೆ ಕೊರತೆಯಿಂದ ವರ್ಷದ ಕೆಳಗೆ ಎಪಿಎಂಸಿ ಆವರಣದಲ್ಲಿದ್ದ ರೈತ ಕೇಂದ್ರ ನೆಲಸಮಗೊಳಿಸಲಾಗಿದೆ.

    ದುಬಾರಿ ಬಾಡಿಗೆ ಪಾವತಿ
    ಹಲವು ಕಚೇರಿಗಳು ಖಾಸಗಿ ಕಟ್ಟಡದಲ್ಲಿದ್ದು, ದುಬಾರಿ ಬಾಡಿಗೆ ಭರಿಸುತ್ತಿವೆ. ಅಬಕಾರಿ ಕಚೇರಿ ತ್ರಿಬಲ್ ಬೆಡ್ ರೂಂಗೆ ಸ್ಥಳಾಂತರಿಸಿದರೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಪಂಗಡ ಇಲಾಖೆ ಕಚೇರಿ ವಾಣಿಜ್ಯ ಕಟ್ಟಡದಲ್ಲಿವೆ. ಅಶಕ್ತ ಕಾರ್ಮಿಕರು ಮೇಲೆ ಹತ್ತಲಾಗದ ಮೊದಲ ಅಂತಸ್ತಿನ ಕಟ್ಟಡದಲ್ಲಿ ಕಾರ್ಮಿಕ ಕಚೇರಿಯಿದೆ. ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಹಲವು ಬಾರಿ ಖಾಸಗಿ ಕಟ್ಟಡಗಳಿಗೆ ಸ್ಥಳಾಂತರಗೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. 500ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರನ್ನು ಹೊಂದಿದ ಸಿಡಿಪಿಒ ಕಚೇರಿ ಕಡಿಮೆ ವಿಸ್ತಾರದ ಖಾಸಗಿ ಕಟ್ಟಡದಲ್ಲಿದೆ. ಸ್ಮಶಾನಕ್ಕೆ ಹೊಂದಿಕೊಂಡ ಯಾರೂ ಬಾರದ ದುಬಾರಿ ಬಾಡಿಗೆ ಕಟ್ಟಡದಲ್ಲಿ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಕಚೇರಿಯಿದೆ. ಅಲ್ಪ ಸಂಖ್ಯಾತ ವಿಸ್ತೀರ್ಣಾಧಿಕಾರಿ ಮತ್ತು ಅಕ್ಷರ ದಾಸೋಹ ಇಲಾಖೆ ಕಚೇರಿ ಉರ್ದು ಮಾಧ್ಯಮ ಶಾಲೆಗೆ ಶ್‌ಟಿ ಆಗಿವೆ.

    ರೇಷ್ಮೆ ಇಲಾಖೆಗಿಲ್ಲ ಕಚೇರಿ
    ಹಲವು ವರ್ಷಗಳಿಂದ ರೇಷ್ಮೆ ಇಲಾಖೆಗೆ ಕಚೇರಿಯಿಲ್ಲ. ಮೀನುಗಾರಿಕೆ ಇಲಾಖೆ ಕಚೇರಿಯು ಅರಣ್ಯ ಇಲಾಖೆ ಶೆಡ್‌ನಲ್ಲಿದೆ. ಜಾಗದ ಕೊರತೆಯಿಂದ ಶಿಕ್ಷಣ ಇಲಾಖೆ ಹಲವು ಕಡತಗಳು ಬಾಲಕರ ಪ.ಪೂ.ಕಾಲೇಜಿನ ತರಗತಿ ಕೊಠಡಿಯಲ್ಲಿಡಲಾಗಿದೆ. ಇಸ್ಲಾಂಪುರ ಮತ್ತು ಲಕ್ಷ್ಮೀಕ್ಯಾಂಪ್ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಖಾಸಗಿ ಕಟ್ಟಡದಲ್ಲಿವೆ.

    ಕೆಲ ಹಾಸ್ಟೆಲ್‌ಗಳು ಜನವಸತಿ ಪ್ರದೇಶದ ಖಾಸಗಿ ಕಟ್ಟಡವನ್ನು ಅವಲಂಬಿಸಿದೆ. ನೆಲ ಅಂತಸ್ತಿನಲ್ಲಿರಬೇಕಾದ ಸಬ್ ರಿಜಿಸ್ಟ್ರಾರ್ ಕಚೇರಿ ಮೊದಲ ಮಹಡಿಯಲ್ಲಿದ್ದು, ಪ್ರಯಾಸದಿಂದ ಹತ್ತಬೇಕಿದೆ. ಬಹುಕಚೇರಿಗಳನ್ನೊಳಗೊಂಡ ಮಿನಿವಿಧಾನಸೌಧದಲ್ಲಿ ಕಂದಾಯ, ಸಬ್ ರಿಜಿಸ್ಟ್ರಾರ್ ಮತ್ತು ಖಜಾನೆ ಇಲಾಖೆಯಿದ್ದು, ಮೂಲ ಸೌಲಭ್ಯಗಳಿಲ್ಲ.

    ತಹಸಿಲ್ ಕಚೇರಿಯ ಹಳೇ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಉದ್ದೇಶಿತ ಜಾಗದಲ್ಲಿ ಎಲ್ಲ ಇಲಾಖೆಗಳನ್ನೊಳಗೊಂಡ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಹಿಂದಿನ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇಂದಿರಾ ಕ್ಯಾಂಟೀನ್‌ಗೆ ಜಾಗ ನೀಡುವಂತೆ ನಗರಸಭೆ ಕೇಳಿಕೊಂಡಿದ್ದು, ಡಿಸಿ ಗಮನಕ್ಕೆ ತರುತ್ತೇನೆ.
    ಮಂಜುನಾಥ ಭೋಗಾವತಿ, ತಹಸೀಲ್ದಾರ್. ಗಂಗಾವತಿ

    ದುಬಾರಿ ಬಾಡಿಗೆ ಕಟ್ಟಡದಲ್ಲಿರುವ ಎಲ್ಲ ಕಚೇರಿಗಳನ್ನು ಸರ್ಕಾರಿ ಜಾಗ ಮತ್ತು ಕಟ್ಟಡಗಳಲ್ಲಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೆ. ಹಾಳಾಗುತ್ತಿರುವ ಸರ್ಕಾರಿ ಕಟ್ಟಡಗಳನ್ನು ಅಧಿಕಾರಿಗಳು ಸಂರಕ್ಷಿಸಬೇಕಿದೆ.
    ಬಸವರಾಜ ಮ್ಯಾಗಳಮನಿ, ಜಿಲ್ಲಾಧ್ಯಕ್ಷ, ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts