More

    ಭದ್ರಾ ಮೇಲ್ದಂಡೆ ಕಾಲುವೆಗೆ ಜಮೀನು ಸ್ವಾಧೀನ ಪ್ರಕ್ರಿಯೆ ಶುರು

    ಭದ್ರಾ ಮೇಲ್ದಂಡೆ ಕಾಲುವೆಗೆ ಜಮೀನು ಸ್ವಾಧೀನ ಪ್ರಕ್ರಿಯೆ ಶುರು

    ಬೀರೂರು (ಕಡೂರು ತಾ.): ಭದ್ರಾ ಮೇಲ್ದಂಡೆ ಯೋಜನೆಯಡಿ ಕಾಲುವೆ ಹರಿಯುವ ಜಮೀನುಗಳ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಪರಿಹಾರ ನೀಡಲಾಗುವುದು ಎಂದು ತರೀಕೆರೆ ಉಪವಿಭಾಗಾಧಿಕಾರಿ ಬಿ.ಆರ್.ರೂಪಾ ತಿಳಿಸಿದರು.

    ಭಾನುವಾರ ಪಟ್ಟಣದ ವಾಸವಿ ಕಲ್ಯಾಣ ಮಂದಿರದಲ್ಲಿ ರೈತರೊಂದಿಗೆ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ರೈತರ ಒಪ್ಪಿಗೆ ಪಡೆದು ಜಮೀನು ಸ್ವಾಧೀನ ನಡೆಯುತ್ತದೆ ಎಂದರು.

    ಭದ್ರಾ ಮೇಲ್ದಂಡೆ ಯೋಜನೆಯಡಿ ಪ್ಯಾಕೇಜ್-4 ತುಮಕೂರು ಶಾಖಾ ಕಾಲುವೆ ಕಾಮಗಾರಿಗಾಗಿ ಬೇಕಾದಂತಹ ಗೌಡನಕಟ್ಟೆಹಳ್ಳಿ, ಬಿಸಲೆರೆ, ಅರೇಹಳ್ಳಿ, ಚಿಕ್ಕನಲ್ಲೂರು, ಬಾಸೂರು, ಚಿಕ್ಕಬಾಸೂರು, ಕಲ್ಲೇನಹಳ್ಳಿ, ಆಡಿಗೆರೆ, ನಾಗಗೊಂಡನಹಳ್ಳಿ ಸೇರಿ ಹಲವು ಗ್ರಾಮಗಳ ಭೂಮಿ ಅಗತ್ಯವಿದೆ. ಈ ಜಮೀನುಗಳಿಗೆ 2019 ಅ.25ರ ಅಧಿಸೂಚನೆಯಂತೆ ದರ ನಿಗದಿಯಾಗಲಿದೆ. ಸರ್ಕಾರ ನೀಡುವ ಪರಿಹಾರದ ಬಗ್ಗೆ ಆಕ್ಷೇಪಣೆಗಳು ಇದ್ದಲ್ಲಿ ರೈತರು ನ್ಯಾಯಾಲಯದ ಮೊರೆ ಹೋಗಬಹುದು. ಒಪ್ಪಿಗೆ ಇದ್ದಲ್ಲಿ ದಾಖಲೆ ಪರಿಶೀಲಿಸಿ ಪರಿಹಾರ ಮೊತ್ತ ನಿಗದಿಗೊಳಿಸಲಾಗುವುದು ಎಂದು ಹೇಳಿದರು.

    ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ರೈತರ ಹಿತ ಕಾಪಾಡುವಲ್ಲಿ ಶ್ರಮ ವಹಿಸುತ್ತೇನೆ. ರೈತರು ತಮ್ಮ ಜಮೀನಿಗೆ ಸಿಗಬೇಕಾದ ಪರಿಹಾರದ ಕೋರಿಕೆ ಸಲ್ಲಿಸಬಹುದು. ಅಹವಾಲನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ರೈತರ ತ್ಯಾಗ ಮುಂದಿನ ಪೀಳಿಗೆಯ ಏಳಿಗೆಗೆ ಮೆಟ್ಟಿಲಾಗಲಿದೆ ಮತ್ತು ಲಕ್ಷಾಂತರ ರೈತರ ಕೃಷಿ ಭೂಮಿಗೆ ನೀರು ಒದಗಿಸಲು ಆಧಾರವಾಗಲಿದೆ ಎಂದು ಹೇಳಿದರು.

    ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಜಮೀನಿನಲ್ಲಿ ಫಸಲು ನೀಡುವ ತೆಂಗು, ಅಡಕೆ, ಹುಣಸೆ, ಹಲಸು, ಮಾವು ಮರಗಳು ಇದ್ದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ವರದಿ ಪಡೆದು ಅವುಗಳಿಗೂ ಬೆಲೆ ನಿಗದಿಗೊಳಿಸಲಾಗುತ್ತದೆ. ಪಂಪ್​ಸೆಟ್ ಮತ್ತು ಕಟ್ಟಡಗಳಿಗೂ ದರ ನಿಗದಿಯಾಗಲಿದೆ ಎಂದು ಮಾಹಿತಿ ನೀಡಿದರು.

    ಸಭೆ ನಂತರ ರೈತರು ತಮ್ಮ ಜಮೀನಿನ ವಿವರ, ನಷ್ಟವಾಗಬಹುದಾದ ಭೂಮಿಗೆ ಪರಿಹಾರದ ಬಗ್ಗೆ ಬರವಣಿಗೆ ಮೂಲಕ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅಹವಾಲು ನೀಡಿದರು.

    ವಂಶಾವಳಿ ಸಾಕುವ ಭೂಮಿಗೆ ತಕ್ಕ ಪರಿಹಾರ ನೀಡಿ: ಸರ್ಕಾರ ನೀಡುವ ಹಣ ಕ್ರಮೇಣ ಕರಗಿ ಹೋಗಬಹುದು. ಆದರೆ ರೈತನ ಸುಪರ್ದಿಯಲ್ಲಿರುವ ಜಮೀನು ಅವನ ವಂಶಾವಳಿ ಸಾಕುವ ಸಾಮರ್ಥ್ಯ ಹೊಂದಿರುತ್ತದೆ. ಹೀಗಾಗಿ ಇದನ್ನು ಗಣನೆಗೆ ತೆಗೆದುಕೊಂಡು ಸೂಕ್ತ ದರ ನಿಗದಿ ಪಡಿಸುವುದು ಉತ್ತಮ. ಈಗಾಗಲೆ ಭೂಸ್ವಾಧೀನ ಪಡಿಸಿಕೊಂಡಿರುವ ಸ್ಥಳಗಳಲ್ಲಿ ನೀಡಿರುವ ಪರಿಹಾರ ಗಮನಿಸಿ ಎಕರೆಗೆ 45 ರಿಂದ 60 ಲಕ್ಷ ರೂ.ವರೆಗೆ ಪರಿಹಾರ ನೀಡುವಂತೆ ಸಭೆಯಲ್ಲಿ ಆಡಿಗೆರೆ ಗ್ರಾಮಸ್ಥ ಎ.ಇ.ಜಯಣ್ಣ ಬೇಡಿಕೆ ಇರಿಸಿದರು.

    ತರೀಕೆರೆ ಎಸಿ ಬಿ.ಆರ್.ರೂಪಾ ಮಾತನಾಡಿ, ಸ್ವಾಧೀನಕ್ಕೆ ಒಳಗಾಗಲಿರುವ ಭೂಮಿ ಕುರಿತು ಈ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಆ ವಲಯದಲ್ಲಿ ನಡೆದಿರುವ ವಹಿವಾಟಿನ ಮಾಹಿತಿಯನ್ನು ನೋಂದಣಾಧಿಕಾರಿ ಕಚೇರಿಯಿಂದ ಪಡೆದು ಮುಂದಿನ ಮೂರು ವರ್ಷಗಳಲ್ಲಿ ಆಗಬಹುದಾದ ವಹಿವಾಟು ಗಮನಿಸಿ ಎರಡನ್ನೂ ತಾಳೆ ಮಾಡಿ ದರ ನಿಗದಿಪಡಿಸಿಲಾಗುವುದು. ಒಟ್ಟು ಕುಟುಂಬದ ಒಟ್ಟಾರೆ ಜಮೀನಿನಲ್ಲಿ ಅರ್ಧಕ್ಕಿಂತ ಹೆಚ್ಚು ಭೂಮಿ ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟರೆ ಪರಿಹಾರಕ್ಕಿಂತ ಹೆಚ್ಚುವರಿಯಾಗಿ 5 ಲಕ್ಷ ರೂ. ನೀಡುವ ಅವಕಾಶವಿದೆ ಎಂದು ತಿಳಿಸಿದರು.

    ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್, ತಹಸೀಲ್ದಾರ್ ಉಮೇಶ್, ಶಿರಸ್ತೇದಾರ್ ಶಿವಮೂರ್ತಿ ನಾಯ್ಕ, ಭದ್ರಾ ಮೇಲ್ದಂಡೆ ಎಇಇ ಜಗದೀಶ್, ಬೀರೂರು ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts