More

    ಸಂಪಾದಕೀಯ: ಕರೊನಾ ವಿಚಾರದಲ್ಲಿ ಮತ್ತಷ್ಟು ಎಚ್ಚರಿಕೆ ಅಗತ್ಯ

    ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಸಾವಿನ ಪ್ರಮಾಣವೂ ತಗ್ಗಿದೆ. ದಿನಕ್ಕೆ ಸರಾಸರಿ 55-60 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಈ ವರ್ಷದ ಮಾರ್ಚ್​ನಲ್ಲೇ ಆರಂಭಗೊಂಡ ಸೋಂಕಿನ ಹಾವಳಿ, ಭಾರಿ ಹಾನಿಯನ್ನು ಸೃಷ್ಟಿಸಿದೆ. ಅಲ್ಲದೆ, ವೈದ್ಯಕೀಯ ವ್ಯವಸ್ಥೆ ಮತ್ತು ಉಳಿದ ಕರೊನಾ ಸೇನಾನಿಗಳ ಮೇಲೂ ಒತ್ತಡ ಹೆಚ್ಚಿಸಿದೆ. ಸದ್ಯಕ್ಕೆ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿರುವುದು ಸಮಾಧಾನಕರ ಸಂಗತಿಯಾದರೂ, ಚಳಿಗಾಲದ ಅವಧಿ ಮತ್ತು ಹಬ್ಬದ ದಿನಗಳಲ್ಲಿ ಮತ್ತೆ ಪ್ರಕರಣಗಳು ಏರಿಕೆ ಆಗುವ ಸಾಧ್ಯತೆಯೂ ಇದೆ. ಅದೇನಿದ್ದರೂ, ‘ಯಾವಾಗ ಕರೊನಾ ಪೂರ್ಣವಾಗಿ ಅಂತ್ಯಗೊಳ್ಳಲಿದೆ? ಜನಜೀವನ ಮೊದಲಿನಂತೆ ಯಾವಾಗ ಸಾಮಾನ್ಯಗೊಳ್ಳಲಿದೆ?’ ಎಂಬ ಪ್ರಶ್ನೆ ಎಲ್ಲರನ್ನೂ ಬೆಂಬಿಡದೆ ಕಾಡುತ್ತಿದೆ. ತಜ್ಞರ ವರದಿಯನ್ನು ಆಧರಿಸಿ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಹತ್ವದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ‘ಮುಂಬರುವ ದಿನಗಳಲ್ಲಿ ಪ್ರಕರಣಗಳು ಇಳಿಕೆಯಾಗುತ್ತ ಬರಲಿದ್ದು, 2021 ಫೆಬ್ರವರಿ ಹೊತ್ತಿಗೆ ದೇಶದಲ್ಲಿ ಕೇವಲ 40 ಸಾವಿರ ಸಕ್ರಿಯ ಕೇಸುಗಳು ಉಳಿಯಲಿವೆ’ ಎಂದಿದ್ದಾರೆ. ಅಂದರೆ, ಫೆಬ್ರವರಿ ಬಳಿಕ ಈ ಸಮಸ್ಯೆಯಿಂದ ಕೊಂಚ ನಿರಾಳತೆ ಸಿಗುವ ಸಾಧ್ಯತೆ ಇದೆಯಾದರೂ, ಆ ಅವಧಿಯವರೆಗೆ ಇನ್ನಷ್ಟು ಎಚ್ಚರಿಕೆ ವಹಿಸುವ, ಸೋಂಕು ಪ್ರಕರಣಗಳು ಹೆಚ್ಚದಂತೆ ಜಾಗ್ರತೆ ವಹಿಸುವ ಅಗತ್ಯತೆ ಇದೆ.

    ಕರೊನಾ ವಿರುದ್ಧದ ಸಮರ ಒಂದು ನಿರ್ಣಾಯಕ ಹಂತಕ್ಕೆ ತಲುಪಿರುವುದು ಹೌದಾದರೂ, ಮುಂಬರುವ ದಿನಗಳಲ್ಲಿ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಬೇಕಿದೆ. ‘ಭಾರತದಲ್ಲಿ ಕೋವಿಡ್-19 ಪ್ರಕರಣಗಳು ನೂರಾರು ಸಂಖ್ಯೆಯಲ್ಲಿ ಇದ್ದಾಗಲೇ ಲಾಕ್​ಡೌನ್ ಘೋಷಿಸಿದ ಪರಿಣಾಮ ಸೋಂಕು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆ ಹಿಡಿಯಲು ಸಾಧ್ಯವಾಯಿತು. ಅಮೆರಿಕಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜನರಿರುವ ಈ ದೇಶದಲ್ಲಿ ಪ್ರಸಕ್ತ ಸವಾಲು ತುಂಬ ಕಠಿಣವಾಗಿತ್ತು’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ‘ಲಸಿಕೆ ಕಂಡುಹಿಡಿಯುವಲ್ಲೂ ಭಾರತ ಮಹತ್ವದ ಪಾತ್ರವಹಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ‘ಕರೊನಾ ಪಿಡುಗು ಯಾವುದೇ ಭೇದ-ಭಾವ ಇಲ್ಲದೆ ನಮಗೆ ತಂಡವಾಗಿ ಕೆಲಸ ಮಾಡುವುದನ್ನು ಕಲಿಸಿ ಕೊಟ್ಟಿದೆ’ ಎಂಬ ಸಕಾರಾತ್ಮಕ ಸಂಗತಿಯನ್ನೂ ಪ್ರಧಾನಿ ಉಲ್ಲೇಖಿಸಿದ್ದಾರೆ. ಇದೇ ಮಾದರಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತ ಸಾಗಿದರೆ ಖುಷಿಯ ವಿಚಾರವೇ. ಆದರೆ, ಈ ಪ್ರಕ್ರಿಯೆ ತನ್ನಿಂದತಾನೇ ಸಂಭವಿಸುವುದಿಲ್ಲ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವುದರಿಂದ ಓಡಾಟ, ಇತರ ಚಟುವಟಿಕೆಗಳು ಹೆಚ್ಚಿವೆ. ಇಂಥ ಹೊತ್ತಲ್ಲಿ ಸ್ವಲ್ಪ ಮೈಮರೆತರೂ ಅಪಾಯ ಆಹ್ವಾನಿಸಿಕೊಂಡಂತೆ. ರಾಜ್ಯದ ಆರೋಗ್ಯ ಸಚಿವರು ಇದೇ ಧಾಟಿಯಲ್ಲಿ ಮಾತನಾಡಿದ್ದು, ಫೆಬ್ರವರಿವರೆಗೆ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳ ಜತೆಗೆ ಕರೊನಾ ವಿರುದ್ಧ ಹೋರಾಟದಲ್ಲಿ ಜನರೂ ಪ್ರಮುಖ ಪಾತ್ರ ವಹಿಸಬೇಕು. ಆದಷ್ಟು ಬೇಗ ದೇಶ ಕರೊನಾಮುಕ್ತ ಆಗುವತ್ತ ದೃಢ ಹೆಜ್ಜೆ ಇರಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts