More

    ಉಡುಪಿ ಕಂಟೈನ್‌ಮೆಂಟ್ ಪ್ಲಾನ್ ಸಿದ್ಧ

    ಉಡುಪಿ: ಜಿಲ್ಲೆಯಲ್ಲಿ ಇದುವರೆಗೆ 3 ಕರೊನಾ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ಒಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಡೆಗೊಂಡಿದ್ದಾರೆ, ಇನ್ನಿಬ್ಬರು ಸಹ ಅರೋಗ್ಯದಿಂದಿದ್ದು, ಅವರ ವೈದ್ಯಕೀಯ ವರದಿ ನಿರೀಕ್ಷೆಯಲ್ಲಿದೆ. ಹೊಸದಾಗಿ ಕರೊನಾ ಪ್ರಕರಣ ಕಂಡು ಬಂದರೆ ಅದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕಂಟೈನ್‌ಮೆಂಟ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಭಾನುವಾರ ಜಿಪಂ ಸಭಾಂಗಣದಲ್ಲಿ ಕಂಟೈನ್‌ಮೆಂಟ್ ಪ್ಲಾನ್ ರಚನೆ ಕುರಿತು ಸಭೆ ನಡೆಸಿದರು.
    ಜಿಲ್ಲೆಯಲ್ಲಿ ಇನ್ನು ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ, ಪ್ರಕರಣ ಕಂಡು ಬಂದ ಸ್ಥಳದ 3 ಕಿ.ಮೀ ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್ ಝೋನ್ ವ್ಯಾಪ್ತಿಗೆ ಹಾಗೂ ನಂತರದ 2 ಕಿ.ಮೀ ವ್ಯಾಪ್ತಿಯಲ್ಲಿ ಬಫರ್ ಝೋನ್ ನಿರ್ಮಿಸಲಾಗುವುದು. ಕೇವಲ 2 ಗಂಟೆಗಳಲ್ಲಿ ಕಂಟೈನ್‌ಮೆಂಟ್ ಝೋನ್ ನಿರ್ಮಾಣ ಮತ್ತು ನಂತರದ 4 ಗಂಟೆಗಳ ಅವಧಿಯಲ್ಲಿ ವೈದ್ಯಕೀಯ, ಅಗತ್ಯ ವಸ್ತುಗಳ ಸೇವೆ, ಕಂಟ್ರೋಲ್ ರೂಂ ಸೇರಿದಂತೆ ಎಲ್ಲ ಅಗತ್ಯಗಳನ್ನು ಆ ಪ್ರದೇಶದಲ್ಲಿ ಒದಗಿಸಲು ಯೋಜನೆ ಸಿದ್ಧಪಡಿಸಿದ್ದು, ಇದಕ್ಕೆ ಅಗತ್ಯವಾದ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವಂತೆ ಹಾಗೂ ಸೇವೆಗೆ ಲಭ್ಯವಾಗಲು ಸದಾ ಸಿದ್ದವಾಗಿರುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

    ಗಡಿ ಬಂದ್: ಜಿಲ್ಲೆಯ ಎಲ್ಲ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಹೊರ ಜಿಲ್ಲೆಗಳಿಂದ ಬರುವ ವಾಹನಗಳು ಮತ್ತು ಪ್ರಯಾಣಿಕರನ್ನು ನಿರ್ಬಂಧಿಸಲಾಗಿದೆ. ವೈದ್ಯಕೀಯ ಮತ್ತು ಸರಕು ವಾಹನಗಳಿಗೆ ಮಾತ್ರ ವಿನಾಯಿತಿ ಇದೆ. ಹೊರ ಜಿಲ್ಲೆಗಳಿಂದ ಪಾಸ್ ಪಡೆದು ಜಿಲ್ಲೆಗೆ ಬರಲು ಯತ್ನಿಸುವವರ ಪಾಸ್‌ಗಳನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡುವುದಿಲ್ಲ. ಅಕ್ರಮವಾಗಿ ಒಳಬಂದವರಿಗೆ ಕಡ್ಡಾಯವಾಗಿ 14 ದಿನಗಳ ಸರ್ಕಾರಿ ಕ್ವಾರಂಟೈನ್ ವಿಧಿಸುವುದಾಗಿ ಡಿಸಿ ಎಚ್ಚರಿಸಿದರು.

    ಜಿಲ್ಲೆಯ ಎಲ್ಲ ಗಡಿಗಳಲ್ಲಿ ಸಂಬಂದಪಟ್ಟ ತಹಸೀಲ್ದಾರ್‌ಗಳು ಮತ್ತು ಪೊಲೀಸ್ ಇಲಾಖೆ ಅತ್ಯಂತ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವ ನಿಟ್ಟಿನಲ್ಲಿ ಚೆಕ್‌ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸುವಂತೆ ಸೂಚಿಸಿದರು.
    ಜಿಲ್ಲಾ ಕರೊನಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ಕಂಟೈನ್‌ಮೆಂಟ್ ಪ್ಲಾನ್ ಬಗ್ಗೆ ವಿವರಿಸಿದರು. ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts