More

    ಮಳವಳ್ಳಿಯ ವಿವಿಧೆಡೆ ಶಿವಕಥೆಗಳ ವಾಚನ ಕಾರ್ಯಕ್ರಮ

    ಮಳವಳ್ಳಿ: ಶಿವರಾತ್ರಿ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಇರುವ ಶಿವನ ದೇವಾಲಯಗಳಲ್ಲಿ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ವಿವಿಧೆಡೆಗಳಲ್ಲಿ ಶಿವಕಥೆಗಳ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಭಕ್ತ ಸಮೂಹ ಜಾಗರಣೆ ನಡೆಸಿ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು.

    ಪಟ್ಟಣದ ಇತಿಹಾಸ ಪ್ರಸಿದ್ಧ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮುಂಜಾನೆಂದಲೇ ಪ್ರಧಾನ ಅರ್ಚಕ ಸತೀಶ್ ನೇತೃತ್ವದಲ್ಲಿ ಹೋಮ ಹವನ ನೆರವೇರಿತು. ಇದರೊಂದಿಗೆ ಶಿವಲಿಂಗಕ್ಕೆ ಹಾಲು, ಮೊಸರು, ಎಳನೀರು ಸೇರಿದಂತೆ ವಿವಿಧ ಫಲ, ಪುಷ್ಪ, ಅಷ್ಟಗಂಧ, ಗೋಮೂತ್ರದಿಂದ ಅಭಿಷೇಕ ಮಾಡಲಾಯಿತು. ನಂತರ ಬಿಲ್ವಾರ್ಚನೆ ಹಾಗೂ ಹಲವು ಹೂಗಳಿಂದ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಲಾಯಿತು.

    ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ತಾಲೂಕಿನ ಹಲಗೂರು ಸಮೀಪದ ಅಂತರಹಳ್ಳಿ ಸಿದ್ದೇಶ್ವರ, ಬಸವನ ಬೆಟ್ಟದ ಹೆಬ್ಬೆಟ್ಟದ ಬಸವೇಶ್ವರ, ನಡುಮಾರ್ಗದ ಬಸವೇಶ್ವರ, ಗೌಡಗೆರೆ ಬಸವೇಶ್ವರ, ಬೆಳಕವಾಡಿ ಕಾಶಿ ವಿಶ್ವನಾಥ, ಪೂರಿಗಾಲಿ ಪಾತಾಳೇಶ್ವರ, ಕಂದೇಗಾಲ ಸಮೀಪದ ಮತ್ತಿತಾಳೇಶ್ವರ, ಮಹದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.

    ಪಟ್ಟಣದ ಗಂಗಾಧರೇಶ್ವರ, ಕೋಟೆ ಬೀದಿಯಲ್ಲಿರುವ ಶಂಕರ ಮಠದ ಬಸವೇಶ್ವರ ಗುಡಿ ಆವರಣ, ಗೌಡಗೆರೆ ಬಸವೇಶ್ವರ ಹಾಗೂ ಅಂತರಹಳ್ಳಿ ಸಿದ್ದೇಶ್ವರ ಮತ್ತು ತೆಂಕಹಳ್ಳಿ ಸಮೀಪವಿರುವ ಶನೈಶ್ಚರ ದೇವಸ್ಥಾನದಲ್ಲಿ ಭಕ್ತರ ಜಾಗರಣೆ ನಡೆಸಿದರು. ಶಾಸಕ ನರೇಂದ್ರಸ್ವಾಮಿ ಹಾಗೂ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಗಂಗಾಧರೇಶ್ವರ ದೇವಸ್ಥಾನಕ್ಕೆ ಪ್ರತ್ಯೇಕವಾಗಿ ತೆರಳಿ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts