More

    ಮರು ವಿಂಗಡಣೆ ಕಸರತ್ತು ಪೂರ್ಣ

    ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದರಿಂದ ಅವಳಿ ನಗರದಲ್ಲಿ ವಾರ್ಡ್​ಗಳ ಸಂಖ್ಯೆ ಎಷ್ಟಿರಬಹುದು ಎಂಬ ಕುತೂಹಲ ಮೂಡಿದೆ.

    ಹಿಂದಿನ ಚುನಾವಣೆಯಲ್ಲಿ 67 ವಾರ್ಡ್​ಗಳಿದ್ದವು. 2017ರಲ್ಲಿ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಜರುಗಿಸಿದಾಗ, ವಾರ್ಡ್ ಸಂಖ್ಯೆಯನ್ನು 67ರಿಂದ 82ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು. ವಾರ್ಡ್ ಮರು ವಿಂಗಡಣೆಯಲ್ಲಿ ಲೋಷದೋಷಗಳಿರುವುದನ್ನು ಪ್ರಶ್ನಿಸಿ ಅನೇಕರು ನ್ಯಾಯಾಲಯದ ಮೊರೆ ಹೋದರು. ಹೀಗಾಗಿ, ಮತ್ತೆ ವಾರ್ಡ್ ವಿಂಗಡಣೆಗೆ ನ್ಯಾಯಾಲಯದ ಆದೇಶಿಸಿದೆ. ಈಗ ಪಾಲಿಕೆ ಅಧಿಕಾರಿಗಳು ಈ ಕುರಿತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರಕಾರ, ಈ ಸಂಖ್ಯೆ 82ಕ್ಕೆ ಏರುವ ಸಾಧ್ಯತೆ ಅಧಿಕವಾಗಿದೆ. ಆದರೂ ಈ ಸಂಖ್ಯೆಯಲ್ಲಿ ಅಲ್ಪ ಕುಸಿತ ಆಗಬಹುದಾಗಿದೆ. ಅಲ್ಲದೆ, ವಾರ್ಡ್ ವ್ಯಾಪ್ತಿ, ಗಡಿ, ಜನಸಂಖ್ಯೆ, ನಿರ್ದಿಷ್ಟ ಸಮುದಾಯದ ಮತಗಳ ಹಂಚಿಕೆ ಎಂಬಿತ್ಯಾದಿ ಅಂಶಗಳು ಕೂಡ

    ಬದಲಾಗುವುದು ನಿಶ್ಚಿತವಾಗಿದೆ.

    ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಡಿಸೆಂಬರ್ 17 (2020)ರಂದು ನೀಡಿದ ತೀರ್ಪಿನನ್ವಯ ಹು-ಧಾ ಮಹಾನಗರ ಪಾಲಿಕೆಯ ವಾರ್ಡ್ ಮರು ವಿಂಗಡಣೆ ಪ್ರಕ್ರಿಯೆ ಜರುಗಿಸಲಾಗಿದೆ. ನ್ಯಾಯಾಲಯದ ತೀರ್ಪಿನ ಆದೇಶವು ಪಾಲಿಕೆ ಅಧಿಕಾರಿಗಳಿಗೆ ತಡವಾಗಿ ಕೈ ಸೇರಿತ್ತು. ನಗರಾಭಿವೃದ್ಧಿ ಇಲಾಖೆಯ ಮಾರ್ಗಸೂಚಿಯನ್ವಯ ಒಂದು ತಿಂಗಳ ಅವಧಿಯೊಳಗೆ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

    ಹೀಗಿದ್ದವು ಹೊಸ ಮಾರ್ಗಸೂಚಿ: ಮೊದಲಿದ್ದ

    ವಾರ್ಡ್​ನ ಶೇ. 60ರಷ್ಟು ಭೂ ಭಾಗ ಉಳಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಗಣತಿ ಬ್ಲಾಕ್ ವಿಭಜಿಸಿ ಬೇರೆ ವಾರ್ಡ್​ಗೆ ಸೇರ್ಪಡೆ ಮಾಡಬಾರದು. ಪ್ರತಿ ವಾರ್ಡ್​ಗಳಿಗೆ 2011ರ ಜನಗಣತಿ ಪ್ರಕಾರ 10ರಿಂದ 13 ಸಾವಿರ ಜನಸಂಖ್ಯೆ ಮಿತಿ ಇರಬೇಕು. ಕೆಲವೊಂದು ನಿರ್ದಿಷ್ಟ ಪ್ರಕರಣಗಳಲ್ಲಿ ಜನಸಂಖ್ಯೆ 13 ಸಾವಿರಕ್ಕಿಂತ ಶೇ. 10ರಷ್ಟು ಹೆಚ್ಚಿಗೆ ಆಗಬಹುದು. ಒಂದು ಬಡಾವಣೆಯನ್ನು ಎರಡು ವಿಧಾನಸಭೆ ಕ್ಷೇತ್ರಗಳಿಗೆ ಹಂಚಿಕೆ ಮಾಡಬಾರದು. ಈ ರೀತಿ ಹಲವು ಅಂಶಗಳನ್ನು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

    ಹಿಂದಿನ ತಪ್ಪುಗಳು: 2017ರಲ್ಲಿ ವಾರ್ಡ್ ವಿಂಗಡಣೆ ಮಾಡುವಾಗ ಅಧಿಕಾರಿಗಳು ಸಾಕಷ್ಟು ತಪ್ಪುಗಳನ್ನು ಮಾಡಿದ್ದರಿಂದ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶ ಸೃಷ್ಟಿಯಾಯಿತು. ಕೆಲ ವಾರ್ಡ್​ಗಳ ಕ್ಷೇತ್ರ ವ್ಯಾಪ್ತಿಯನ್ನು ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಹಂಚಿಕೆ ಮಾಡಲಾಗಿತ್ತು. ಧಾರವಾಡ ನವಲೂರಿನ 10 ಸಾವಿರ ಮತದಾರರನ್ನು ವಾರ್ಡ್ ಸಂಖ್ಯೆ 23ರ ಶೆಟ್ಟರ್ ಕಾಲನಿ, ನವಲೂರ, ವಾರ್ಡ್ ಸಂಖ್ಯೆ 24ರ ತಡಸಿನಕೊಪ್ಪ, ಇಟಿಗಟ್ಟಿ ಹಾಗೂ ವಾರ್ಡ್ ಸಂಖ್ಯೆ 26ರ ಸತ್ತೂರು, ನವಲೂರಿಗೆ ಸೇರಿಸಲಾಗಿತ್ತು. ಇಂಥ ಹಲವು ಲೋಪಗಳನ್ನು ಪ್ರಶ್ನಿಸಿ ಹಾಗೂ ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿ ಸಾರ್ವಜನಿಕರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಪಾಲಿಕೆಗೆ ಚುನಾವಣೆ ವಿಳಂಬವಾಗಿದೆ.

    2019ರ ಮಾರ್ಚ್ 6ರಂದು ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡಿದೆ. ಅಂದರೆ, ಕಳೆದ 23 ತಿಂಗಳಿಂದ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತವೇ ಮುಂದುವರಿದಿದೆ.

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್​ಗಳ ಮರು ವಿಂಗಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಜಿಲ್ಲಾಧಿಕಾರಿಯವರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಒಂದೆರಡು ದಿನಗಳಲ್ಲಿ ನಗರಾಭಿವೃದ್ಧಿ ಇಲಾಖೆ ಇದನ್ನು ಗೆಜೆಟ್​ನಲ್ಲಿ ಪ್ರಕಟಿಸಲಿದೆ. ಬಳಿಕ ಆಕ್ಷೇಪಣೆಗಳನ್ನು ಆಹ್ವಾನಿಸಿ ಸಾರ್ವಜನಿಕರಿಗೆ 15 ದಿನಗಳ ಸಮಯ ನೀಡಲಾಗುತ್ತದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.

    | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts