More

    ನೀರಾ ಸಂಸ್ಕರಣ ಘಟಕಕ್ಕೆ ಮರು ಚಾಲನೆ

    ಸಂದೀಪ್ ಸಾಲ್ಯಾನ್ ಬಂಟ್ವಾಳ

    ಕಾರಣಾಂತರಗಳಿಂದ ಕಾರ್ಯ ಸ್ಥಗಿತಗೊಳಿಸಿರುವ ಬಂಟ್ವಾಳ ತಾಲೂಕಿನ ನೀರಾ ಸಂಸ್ಕರಣಾ ಘಟಕವನ್ನು ಪುನಾರಂಭಿಸುವ ಬಗ್ಗೆ ಚಿಂತನೆ ನಡೆದಿದೆ. ಮೂರ್ತೆದಾರರ ಮಹಾಮಂಡಲ ಅಥವಾ ತೆಂಗು ಉತ್ಪಾದಕ ಸಂಸ್ಥೆಗಳ ಸಹಕಾರದೊಂದಿಗೆ ಆಸಕ್ತ ಯುವಕರಿಗೆ ತರಬೇತಿ ನೀಡಿ ನೀರಾ ಸಂಸ್ಕರಣ ಘಟಕವನ್ನು ಮರು ಚಾಲನೆಗೊಳಿಸಲು ತೋಟಗಾರಿಕಾ ಇಲಾಖೆ ಯೋಜನೆ ರೂಪಿಸಿದೆ.

    ತೆಂಗಿನ ಮರಗಳಿಂದ ನೀರಾ ತೆಗೆದು ಅವುಗಳನ್ನು ಸಂಸ್ಕರಣ ಘಟಕದ ಮೂಲಕ ಸಂಗ್ರಹಿಸಿ ತಂಪು ಪಾನೀಯವನ್ನು ಟೆಟ್ರಾ ಪ್ಯಾಕ್ ಮೂಲಕ ಮಾರುಕಟ್ಟೆಗೆ ಪೂರೈಕೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಹಲವು ವರ್ಷಗಳ ಹಿಂದೆ ತುಂಬೆಯಲ್ಲಿರುವ ತೋಟಗಾರಿಕಾ ಇಲಾಖೆಯ ಕಾರ್ಯಕ್ಷೇತ್ರದಲ್ಲಿ ನೀರಾ ಸಂಸ್ಕರಣ ಘಟಕ ಸ್ಥಾಪಿಸಲಾಗಿತ್ತು. ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಯಂತ್ರೋಪಕರಣಗಳನ್ನು ಅಳವಡಿಸಲಾಗಿತ್ತು. ಘಟಕ ಸ್ಥಾಪನೆಯಿಂದ ತೆಂಗು ಬೆಳೆಗಾರರ ಅದೃಷ್ಟ ಖುಲಾಯಿಸಿತು ಎನ್ನುವಷ್ಟರಲ್ಲೇ ಆರಂಭಿಕ ವಿಘ್ನ ಎದುರಾಗಿ ಕೆಲ ವರ್ಷಗಳ ಕಾಲ ನೀರಾ ಸಂಸ್ಕರಣ ಘಟಕ ಬಾಗಿಲು ಮುಚ್ಚಿದ ಸ್ಥಿತಿಯಲ್ಲೇ ಇತ್ತು. ಬಳಿಕ ಕೇರಳದ ಪಾಲಕ್ಕಾಡಿನ ತೆಂಗು ಉತ್ಪಾದನಾ ಕಂಪನಿಗೆ ನೀರಾ ಸಂಸ್ಕರಣ ಘಟಕದ ಜವಾಬ್ದಾರಿ ವಹಿಸಿಕೊಂಡಿತು. ಕೆಲ ದಿನಗಳ ಕಾಲ ಕಂಪನಿಯ ಕಾರ್ಮಿಕರು ನೀರಾ ಸಂಗ್ರಹಿಸಿ, ಅದರಿಂದ ಬೆಲ್ಲ, ಸಕ್ಕರೆಯಂತಹ ನೀರಾ ಉತ್ಪನ್ನಗಳನ್ನು ತಯಾರಿ ಮಾಡುತ್ತಿದ್ದರು. ಉತ್ಪನ್ನಗಳಿಗೆ ಮಾರುಕಟ್ಟೆ ಸಿಗದೆ, ಲಾಭದಾಯಕವಲ್ಲದೆ ನಷ್ಟದಲ್ಲೇ ನೀರಾ ಘಟಕ ಮುಂದುವರಿಯಬೇಕಾದ ಪರಿಸ್ಥಿತಿ ಎದುರಾದಾಗ ಕಂಪನಿ ಅರ್ಧದಲ್ಲೇ ಬಿಟ್ಟು ಹೋಯಿತು. ಆ ಬಳಿಕ ಘಟಕವನ್ನು ಪುನಾರಂಭಿಸಬೇಕು ಎನ್ನುವ ಮಾತುಗಳು ಆಗ್ಗಾಗ್ಗೆ ಕೇಳಿ ಬರುತ್ತಿದರೂ ಪ್ರಯತ್ನಗಳೆಲ್ಲ ವಿಫಲವಾದವು.

    ಮೂರ್ತೆದಾರಿಕೆ ತರಬೇತಿ: ಕಾಸರಗೋಡಿನ ಸಿಪಿಸಿಆರ್‌ಐ ಸಂಸ್ಥೆ ನೀರಾ ಮೂರ್ತೆದಾರಿಕಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ನಿಗದಿತ ಶುಲ್ಕ ಪಾವತಿಸಿ ಆ ತಂತ್ರಜ್ಞಾನವನ್ನು ಪಡೆದುಕೊಂಡು ಮೂರ್ತೆದಾರಿಕೆ ತರಬೇತಿಯನ್ನು ಆಸಕ್ತರಿಗೆ ನೀಡಬಹುದು. ಕೇವಲ ತೋಟಗಾರಿಕಾ ಇಲಾಖೆಯಿಂದ ಅಸಾಧ್ಯವಾದ ಕಾರಣ ಮೂರ್ತೆದಾರಿಕೆ ಮಾಡುವ ಅಥವಾ ತೆಂಗು ಉತ್ಪಾದಕ ಸಂಸ್ಥೆಗಳ ಸಹಕಾರ ಪಡೆಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈಗಾಗಲೇ ಮೂರ್ತೆದಾರರ ಮಹಾಮಂಡಲ, ತೆಂಗು ಅಭಿವೃದ್ಧಿ ಸೊಸೈಟಿಯಂತಹ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಅವರ ಸಹಕಾರದ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲು ತೀರ್ಮಾನಿಸಿದೆ.

    ಕೆಡಿಪಿ ಸಭೆಯಲ್ಲಿ ಚರ್ಚೆ: ಶುಕ್ರವಾರ ನಡೆದ ತಾಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನೀರಾ ಸಂಸ್ಕೃರಣ ಘಟಕಾ ಪುನಾರಂಭಿಸುವ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಕ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಈ ಸಂದರ್ಭ ಕಾಸರಗೋಡು ಸಿಪಿಸಿಆರ್‌ಐ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ಬಗ್ಗೆ ಅಧಿಕಾರಿ ಮಾಹಿತಿ ನೀಡಿದ್ದು ಮೂರ್ತೆದಾರರ ಮಹಾಮಂಡಲ ಅಥವಾ ತೆಂಗು ಸೊಸೈಟಿಯ ಮೂಲಕ ಯೋಜನೆ ಕಾರ್ಯಗತಗೊಳಿಸಲು ಯೋಜನೆ ರೂಪಿಸುತ್ತಿರುವುದಾಗಿ ಮಾಹಿತಿ ನೀಡಿದರು. ನೀರಾ ಘಟಕ ಆರಂಭಗೊಂಡಲ್ಲಿ ತೆಂಗು ಬೆಳೆಗಾರರ ಆದಾಯ 10 ಪಟ್ಟು ಹೆಚ್ಚಾಗುತ್ತದೆ. ರೈತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಆದಷ್ಟು ಶೀಘ್ರ ಘಟಕ ಪುನಾರಂಭಿಸಲು ಕ್ರಮಕೊಳ್ಳಲು ಶಾಸಕರು ಸೂಚಿಸಿದ್ದಾರೆ.

    ನೀರಾ ಸಂಸ್ಕರಣ ಘಟಕದಿಂದ ತೆಂಗು ಬೆಳೆಗಾರರಿಗೆ ಪ್ರಯೋಜನವಾಗಬೇಕು. ಗೋವಾ ರಾಜ್ಯದಲ್ಲಿ ಈಗಾಗಲೇ ಯಶಸ್ವಿಯಾಗಿ ನೀರಾ ಇಳಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಆರಂಭಿಸಬಹುದಾಗಿದೆ. ಇದರಿಂದಾಗಿ ತೆಂಗು ಬೆಳೆಗಾರರ ಆದಾಯ ಹತ್ತು ಪಟ್ಟು ಹೆಚ್ಚಾಗಲಿದೆ.
    – ರಾಜೇಶ್ ನಾಕ್, ಬಂಟ್ವಾಳ ಶಾಸಕ

    ಮೂರ್ತೆದಾರರ ಅಭಾವದಿಂದ ನೀರಾ ಸಂಸ್ಕರಣ ಘಟಕ ಕಾರ್ಯ ಸ್ಥಗಿತಗೊಳಿಸಿತ್ತು. ಮತ್ತೆ ಪುನಾರಂಭಿಸುವ ನಿಟ್ಟಿನಲ್ಲಿ ಮೂರ್ತೆದಾರರ ಮಹಾಮಂಡಲ, ತೆಂಗು ಸೊಸೈಟಿಗಳ ಸಹಕಾರ ಪಡೆಯಲು ನಿರ್ಧರಿಸಲಾಗಿದ್ದು, ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಲಾಗಿದೆ.
    – ಪ್ರದೀಪ್ ಡಿಸೋಜ, ಸಹಾಯಕ ನಿರ್ದೇಶಕರು ತೋಟಗಾರಿಕ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts