More

    ಗೆಲುವಿನ ಹಳಿ ಏರುವ ತವಕದಲ್ಲಿ ಆರ್‌ಸಿಬಿ-ಮುಂಬೈ ಇಂಡಿಯನ್ಸ್

    ದುಬೈ: ಭಾರತ ಟಿ20 ತಂಡದ ನಿರ್ಗಮನ ನಾಯಕ ವಿರಾಟ್ ಕೊಹ್ಲಿ ಮತ್ತು ಭವಿಷ್ಯದ ನಾಯಕ ರೋಹಿತ್ ಶರ್ಮ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗದಲ್ಲಿ ಭಾನುವಾರ ಮುಖಾಮುಖಿ ಆಗಲಿದ್ದಾರೆ. ಅರಬ್ ರಾಷ್ಟ್ರದಲ್ಲಿ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳಿಗೆ ಪ್ಲೇಆಫ್ ಹಂತಕ್ಕೇರುವ ದೃಷ್ಟಿಯಿಂದ ಈ ಪಂದ್ಯ ಮಹತ್ವ ಪಡೆದಿದ್ದು, ಗೆಲುವೊಂದೇ ಮಾರ್ಗವಾಗಿದೆ. ಉಭಯ ತಂಡಗಳು ಸ್ಟಾರ್ ಬ್ಯಾಟ್ಸ್‌ಮನ್‌ಗಳನ್ನೇ ಹೊಂದಿದ್ದರೂ ನಿಸ್ತೇಜ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಿಂದಾಗಿ ಕಳೆದೆರಡು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿವೆ.

    ಒತ್ತಡದಲ್ಲಿ ಆರ್‌ಸಿಬಿ: ಪ್ರಸಕ್ತ ಆವೃತ್ತಿ ಬಳಿಕ ಆರ್‌ಸಿಬಿ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿರುವ ವಿರಾಟ್ ಕೊಹ್ಲಿ ಪಾಲಿಗೆ ವೈಯಕ್ತಿಕವಾಗಿ ಈ ಲೀಗ್ ಪ್ರತಿಷ್ಠೆಯ ಕಣವಾಗಿದೆ. ಪ್ರತಿಷ್ಠಿತ ಟ್ರೋಫಿ ಎತ್ತಿಹಿಡಿಯಲು ಕಡೇ ಅವಕಾಶ ಹೊಂದಿದ್ದಾರೆ. ಹಿಂದಿನ ಸಿಎಸ್‌ಕೆ ಎದುರಿನ ಹಣಾಹಣಿಯಲ್ಲಿ ಅರ್ಧಶತಕ ಸಿಡಿಸಿದ್ದ ಕೊಹ್ಲಿ, ಮತ್ತೊಮ್ಮೆ ಮಿಂಚುವ ತವಕದಲ್ಲಿದ್ದಾರೆ. ಕೊಹ್ಲಿ-ದೇವದತ್ ಪಡಿಕಲ್ ಜೋಡಿ ಸಿಎಸ್‌ಕೆ ಎದುರು ಮೊದಲ ವಿಕೆಟ್‌ಗೆ 111 ರನ್ ಕಲೆಹಾಕಿದ್ದರೂ ಇದೇ ಲಯ ಮುಂದುವರಿಸಲು ಆರ್‌ಸಿಬಿ ಮಧ್ಯಮ ಕ್ರಮಾಂಕ ವಿಫಲವಾಗಿತ್ತು. ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಎಬಿ ಡಿವಿಲಿಯರ್ಸ್‌, ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ಕೈಕೊಡುತ್ತಿರುವುದು ತಂಡಕ್ಕೆ ಹಿನ್ನಡೆ ತಂದಿದೆ. ಲೀಗ್‌ನಲ್ಲಿ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 5 ಜಯ, 4ರಲ್ಲಿ ಸೋಲನುಭವಿಸಿರುವ ಆರ್‌ಸಿಬಿಗೆ ಉಳಿದಿರುವ 5 ಪಂದ್ಯಗಳಲ್ಲಿ ಕನಿಷ್ಠ 3 ಗೆಲುವು ಅನಿವಾರ್ಯವಾಗಿದೆ.

    *ಸಂಕಷ್ಟದಲ್ಲಿ ಮುಂಬೈ
    ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನ ಗುರಿ ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿದೆ. ನಾಯಕ ರೋಹಿತ್ ಶರ್ಮ ತಂಡಕ್ಕೆ ವಾಪಸಾದರೂ ಮುಂಬೈ ತಂಡ ಕೆಕೆಆರ್ ಎದುರು ಹೀನಾಯ ಸೋಲು ಕಂಡಿತ್ತು. ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೂ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ವಿಫಲರಾಗುತ್ತಿದ್ದರೆ, ಸಿಎಸ್‌ಕೆ ಎದುರು ಮಿಂಚಿದ್ದ ಬೌಲಿಂಗ್ ಪಡೆ ಕೆಕೆಆರ್ ಎದುರು ಬುಮ್ರಾ ಹೊರತುಪಡಿಸಿ ದುಬಾರಿಯಾಗಿತ್ತು. ಮುಂಬೈ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 4 ಜಯ, 5ರಲ್ಲಿ ಸೋಲು ಕಂಡಿದ್ದು, 8 ಅಂಕ ಹೊಂದಿದೆ.

    ಟೀಮ್ ನ್ಯೂಸ್:
    ಆರ್‌ಸಿಬಿ: ಸಿಕ್ಕ 2 ಅವಕಾಶಗಳನ್ನು ಕೈಚೆಲ್ಲಿರುವ ವಾನಿಂದು ಹಸರಂಗ ಬದಲಿಗೆ ಕೈಲ್ ಜೇಮಿಸನ್ ತಂಡಕ್ಕೆ ವಾಪಸಾಗಬಹುದು. ಸಿಎಸ್‌ಕೆ ಎದುರು ನಿರಾಸೆ ಮೂಡಿಸಿದ ನವದೀಪ್ ಸೈನಿ ಬದಲಿಗೆ ಸ್ಪಿನ್ನರ್ ಶಾಬಾಜ್ ಅಹ್ಮದ್‌ಗೆ ಮಣೆ ಹಾಕಬಹುದು.
    ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ಫಿಟ್ ಆಗಿದ್ದು, ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹಾರ್ದಿಕ್ ಪಾಂಡ್ಯ ಕಣಕ್ಕಿಳಿದರೆ ಸೌರಭ್ ತಿವಾರಿ ಹೊರಗುಳಿಯಬಹುದು.

    ಮುಖಾಮುಖಿ: 28, ಮುಂಬೈ: 17, ಆರ್‌ಸಿಬಿ: 11
    ಹಿಂದಿನ ಮುಖಾಮುಖಿ: ಆರ್‌ಸಿಬಿಗೆ 2 ವಿಕೆಟ್ ಜಯ
    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts