More

    ರಿಷಿ ಕಪೂರ್‌ಗೆ ಮರುಜನ್ಮ ನೀಡಿದ್ದೇ ರೌಫ್​ ಲಾಲ!

    ಬಾಲಿವುಡ್‌ನ ರೊಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದ ರಿಷಿ ಕಪೂರ್, ಕ್ರಮೇಣ ವಯಸ್ಸಾಗುತ್ತಿದ್ದಂತೆಯೇ ಪೋಷಕ ಪಾತ್ರಗಳತ್ತ ಜಿಗಿದರು. ಒಂದು ಹಂತದಲ್ಲಿ ತಂದೆ ಪಾತ್ರಗಳನ್ನೂ ಮಾಡಿ ಸುಸ್ತಾಗಿದ್ದ ರಿಷಿ ಕಪೂರ್‌ಗೆ ಮರುಜನ್ಮ ನೀಡಿದ್ದಷ್ಟೇ ಅಲ್ಲ, ಹಲವು ಅವಕಾಶಗಳನ್ನು ಕೊಡಿಸಿದ್ದು ಯಾರು ಗೊತ್ತಾ? ರೌಫ್​ ಲಾಲ.

    ಈ ರೌಫ್​ ಲಾಲ ಯಾರು ಮತ್ತು ಅವರು ಹೇಗೆ ರಿಷಿಗೆ ಕಪೂರ್‌ಗೆ ಮರುಜನ್ಮ ನೀಡಿದರು ಎಂಬ ಪ್ರಶ್ನೆ ಸಹಜ. ಈ ರೌಫ್​ ಲಾಲ ಬೇರೆ ಯಾರೋ ಅಲ್ಲ, ‘ಅಗ್ನಿಪಥ್’ ಚಿತ್ರದಲ್ಲಿ ರಿಷಿ ಕಪೂರ್ ಮಾಡಿದ ಪಾತ್ರದ ಹೆಸರು. ಇದೊಂದು ಪಕ್ಕಾ ನೆಗೆಟಿವ್ ಪಾತ್ರವಾಗಿದ್ದು, ರಿಷಿ ಕಪೂರ್ ತಮ್ಮ ಚಿತ್ರಜೀವನದಲ್ಲೆಂದೂ ಆ ತರಹದ್ದೊಂದು ಪಾತ್ರ ಮಾಡಿರಲಿಲ್ಲ. ಅಷ್ಟೇ ಅಲ್ಲ, ಆ ಪಾತ್ರ ಮಾಡುವುದಕ್ಕೆ ಅವರನ್ನು ಕೇಳಿಕೊಂಡಾಗ, ತಕ್ಷಣವೇ ನೋ ಎಂದುಬಿಟ್ಟರಂತೆ ರಿಷಿ ಕಪೂರ್. ಮೊದಲಿಗೆ ಅದು ನೆಗೆಟಿವ್ ಪಾತ್ರ. ಎರಡನೆಯದಾಗಿ ಚಿತ್ರದಲ್ಲಿ ಆ ಪಾತ್ರಕ್ಕೆ ಬಹಳ ಮಹತ್ವವಿದ್ದು, ಒಂದು ಪಕ್ಷ ಆ ಪಾತ್ರವನ್ನು ನಿರ್ವಹಿಸುವುದಕ್ಕೆ ತಾನು ಸೋತರೆ, ಚಿತ್ರವೇ ಸೋತು ಹೋಗುತ್ತದೆ ಎಂದು ಭಯಪಟ್ಟಿದ್ದರಂತೆ ರಿಷಿ ಕಪೂರ್. ಆದರೆ, ನಿರ್ದೇಶಕ ಕರಣ್ ಮಲ್ಹೋತ್ರಾ ಮತ್ತು ನಿರ್ಮಾಪಕ ಕರಣ್ ಜೋಹರ್ ಇಬ್ಬರೂ ತುಂಬಾ ಒತ್ತಾಯ ಮಾಡಿದ್ದರಿಂದ, ಮೊದಲು ಲುಕ್‌ಟೆಸ್ಟ್ ಮಾಡುವುದಕ್ಕೆ ಹೇಳಿದರಂತೆ. ಲುಕ್‌ಟೆಸ್ಟ್ ಆದ ನಂತರ ಅವರಿಗೆ, ಪಾತ್ರ ಮಾಡಬಹುದು ಎಂಬ ವಿಶ್ವಾಸ ಬಂತಂತೆ.

    ಹೀಗೆ ಮೊದಲ ಬಾರಿಗೆ ರೌಫ್​ ಲಾಲ ಎಂಬ ಪಕ್ಕಾ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ರಿಷಿ ಕಪೂರ್, ಆ ಚಿತ್ರದಲ್ಲಿ ಸಖತ್ತಾಗಿ ಮಿಂಚಿದರು. ನಿಜ ಹೇಳಬೇಕೆಂದರೆ, ಆ ಚಿತ್ರದಲ್ಲಿ ಹೃತಿಕ್ ರೋಶನ್ ಮತ್ತು ಸಂಜಯ್ ದತ್ ಅವರಿಗೆ ಅದೆಷ್ಟು ಪ್ರಾಮುಖ್ಯತೆ ಇತ್ತೋ, ರಿಷಿ ಕಪೂರ್ ಅವರ ಪಾತ್ರಕ್ಕೂ ಅಷ್ಟೇ ಪ್ರಾಮುಖ್ಯತೆ ಇತ್ತು. ಚಿತ್ರ ಹಿಟ್ ಆಗಿ, ರೌಫ್​ ಲಾಲ ಪಾತ್ರ ರಿಷಿ ಕಪೂರ್‌ಗೆ ಸಾಕಷ್ಟು ಜನಪ್ರಿಯತೆ ಕೊಟ್ಟಿದ್ದಷ್ಟೇ ಅಲ್ಲ, ಮರುಜನ್ಮ ನೀಡಿತ್ತು.

    ಅಲ್ಲಿಯವರೆಗೂ ರಿಷಿ ಕಪೂರ್ ಎಂದರೆ, ಸಾಫ್ಟ್​ ಪಾತ್ರಗಳಿಗೇ ಲಾಯಕ್ಕು ಎನ್ನುತ್ತಿದ್ದವರೆಲ್ಲಾ, ಕ್ರಮೇಣ ರಿಷಿ ಕಪೂರ್ ಅವರಿಗೆ ಬೇರೆ ತರಹದ ಪಾತ್ರಗಳನ್ನು ಬರೆಯುತ್ತಾ ಹೋದರು. ಅಲ್ಲಿಂದ ‘ಡಿ ಡೇ’, ‘ಔರಂಗಜೇಬ್’, ‘ಕಪೂರ್ ಆ್ಯಂಡ್ ಸನ್ಸ್’, ‘ಬೇವಕೂಫಿಯಾನ್’, ‘102 ನಾಟ್ ಔಟ್’, ‘ಮುಲ್ಕ್’, ‘ದಿ ಬಾಡಿ’ ಮುಂತಾದ ಹಲವು ಚಿತ್ರಗಳಲ್ಲಿ ರಿಷಿ ಕಪೂರ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು.

    ಕೊನೆಗೂ ಚಿಂಟು ಪ್ರತಿಕ್ರಿಯಿಸಲೇ ಇಲ್ಲ … ರಿಷಿ ಕಪೂರ್ ದೇಹ; ಕರಣ್ ಜೋಹರ್ ಮುಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts