More

    ಲಿಖಿತ ಪರೀಕ್ಷೆಗೆ 4,200 ಜನ ಅರ್ಹ

    ಹಾವೇರಿ: ಅಗ್ನಿಪಥ್ ಯೋಜನೆಯಡಿ ಹಾವೇರಿಯಲ್ಲಿ ಕಳೆದ 18 ದಿನಗಳಿಂದ ಆಯೋಜಿಸಿದ್ದ ಅಗ್ನಿವೀರರ ನೇಮಕಾತಿ ಭಾನುವಾರ ಪೂರ್ಣಗೊಂಡಿದೆ. ರ್ಯಾಲಿಯಲ್ಲಿ ಪಾಲ್ಗೊಂಡಿದ್ದ 43 ಸಾವಿರ ಅಭ್ಯರ್ಥಿಗಳ ಪೈಕಿ 4,200 ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

    ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸೇನಾ ನೇಮಕಾತಿ ವಿಭಾಗದಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಅವರು, ಸೆ. 1ರಿಂದ ಅಗ್ನಿವೀರರ ನೇಮಕಾತಿ ರ‍್ಯಾಲಿ ಪ್ರಕ್ರಿಯೆ ನಡೆಯಿತು. ರಾಜ್ಯದ 11 ಜಿಲ್ಲೆಯ 58,218 ಅಭ್ಯರ್ಥಿಗಳು ಆನ್​ಲೈನ್ ಮೂಲಕ ನೊಂದಾಯಿಸಿಕೊಂಡಿದ್ದರು. ಈ ಪೈಕಿ 43 ಸಾವಿರ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು, 4,200 ಅಭ್ಯರ್ಥಿಗಳು ದಾಖಲಾತಿ, ರನ್ನಿಂಗ್, ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೈದ್ಯಕೀಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಈಗಾಗಲೇ 3 ಸಾವಿರ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದೆ. ಉಳಿದ 1,200 ಅಭ್ಯರ್ಥಿಗಳನ್ನು ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಬೆಂಗಳೂರಿಗೆ ವರ್ಗಾಯಿಸಲಾಗಿದೆ. ಎಲ್ಲರ ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ ನವೆಂಬರ್ 13ರಂದು ಮಂಗಳೂರಿನಲ್ಲಿ ಲಿಖಿತ ಪರೀಕ್ಷೆ ಏರ್ಪಡಿಸಲಾಗಿದೆ. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಅಗ್ನಿವೀರರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದರು.

    ಅಗ್ನಿವೀರರ ನೇಮಕಾತಿಯಲ್ಲಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಭಾಗವಹಿಸಿದ್ದಾರೆ. ರೆಡ್​ಕ್ರಾಸ್ ಸಂಸ್ಥೆ, ಸೇವಾಭಾರತಿ ಸೇರಿ ವಿವಿಧ ಸಂಘ- ಸಂಸ್ಥೆಗಳು ಅಭ್ಯರ್ಥಿಗಳಿಗೆ ಉಚಿತ ಉಪಾಹಾರ ಹಾಗೂ ಊಟ ನೀಡಿದ್ದಾರೆ. ನಗರದ ಸಮುದಾಯ ಭವನ, ಕಲ್ಯಾಣಮಂಟಪದ ಮಾಲೀಕರು ಉಚಿತವಾಗಿ ವಸತಿ ಸೇವೆ ನೀಡಿದ್ದಾರೆ. ಎಲ್ಲರಿಗೂ ಜಿಲ್ಲಾಡಳಿತದಿಂದ ಅಭಿನಂದನ ಪತ್ರ ಸಲ್ಲಿಸಲಾಗುವುದು ಎಂದರು.

    ಜಿಲ್ಲಾಡಳಿತದ ವತಿಯಿಂದ ಸೇನಾ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿ ಮೇಜರ್ ಜನರಲ್ ಪಿ. ರಮೇಶ, ಮಂಗಳೂರು ಸೇನಾ ನೇಮಕಾತಿ ವಿಭಾಗದ ಕರ್ನಲ್ ಅನುಜ್ ಗುಪ್ತಾ, ಮೇಜರ್ ಅನಿಲ್ ಹಾಗೂ ಸೇನಾ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಸನ್ಮಾನಿಸಿದರು.

    ಎಸ್ಪಿ ಹನುಮಂತರಾಯ, ಎಎಸ್ಪಿ ವಿಜಯಕುಮಾರ ಸಂತೋಷ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಸೀಲ್ದಾರ್ ಗಿರೀಶ ಸ್ವಾದಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು, ಸೇನಾ ನೇಮಕಾತಿ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts