More

    ತಾಲೂಕು ಕೇಂದ್ರದಲ್ಲಿಲ್ಲ ಸಾರ್ವಜನಿಕ ಶೌಚಗೃಹ

    ಚಿದಾನಂದ ಮಾಣೆ ರಟ್ಟಿಹಳ್ಳಿ

    ನಿತ್ಯ ಸಾವಿರಾರು ಜನರು ಬಂದು ಹೋಗುವ ರಟ್ಟಿಹಳ್ಳಿ ತಾಲೂಕು ಕೇಂದ್ರದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಗೃಹವಿಲ್ಲ. ಹೀಗಾಗಿ, ವ್ಯಾಪಾರ- ವಹಿವಾಟಿಗಾಗಿ ಬರುವ ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.

    ರಟ್ಟಿಹಳ್ಳಿ ತಾಲೂಕು 63 ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿನ ಜನರು ಸರ್ಕಾರಿ ಸೇವೆಗಳು, ದಾಖಲಾತಿಗಳ ಕೆಲಸ, ಬ್ಯಾಂಕ್ ವ್ಯವಹಾರ, ಆರೋಗ್ಯ, ಶಿಕ್ಷಣ ಸೇರಿ ಅನೇಕ ಕೆಲಸಗಳಿಗೆ ನಿತ್ಯ ಪಟ್ಟಣಕ್ಕೆ ಆಗಮಿಸುತ್ತಾರೆ. ಪಟ್ಟಣದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ ವೃತ್ತ, ಭಗತ್ ಸಿಂಗ್ ವೃತ್ತ, ಶಿವಾಜಿ ನಗರ, ಕುರಬಗೇರಿ ಸೇರಿ ವಿವಿಧ ಪ್ರದೇಶಗಳು ಸದಾ ಜನನಿಬಿಡ ಪ್ರದೇಶಗಳಾಗಿವೆ. ಆದರೆ, ಇಲ್ಲೆಲ್ಲ ಸಾರ್ವಜನಿಕರಿಗೆ ಮಲಮೂತ್ರ ವಿಸರ್ಜನೆಗಾಗಿ ಶೌಚಗೃಹದ ವ್ಯವಸ್ಥೆ ಮಾಡದಿರುವುದು ಬಯಲು ಶೌಚಮುಕ್ತ ಯೋಜನೆಗೆ ಹಿನ್ನಡೆಯಾಗುವಂತೆ ಮಾಡಿದೆ.

    ಪಟ್ಟಣದಲ್ಲಿ ಗ್ರಾ.ಪಂ. ಕೇಂದ್ರದ ಮುಂಭಾಗದಲ್ಲಿದ್ದ ಏಕೈಕ ಸಾರ್ವಜನಿಕ ಶೌಚಗೃಹವನ್ನು ನೂತನ ವಾಣಿಜ್ಯ ಮಳಿಗೆ ನಿರ್ವಣಕ್ಕಾಗಿ ತೆರವುಗೊಳಿಸಲಾಗಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಪಕ್ಕದಲ್ಲೇ ತಾತ್ಕಾಲಿಕವಾಗಿ ತಾಡಪತ್ರಿಯ ಶೆಡ್ ನಿರ್ವಿುಸಿ ಶೌಚಗೃಹ ನಿರ್ವಿುಸಲಾಗಿದೆ. ಆದರೆ, ಅದು ಪುರುಷರಿಗೆ ಮೀಸಲಾಗಿದೆ. ಸಮರ್ಪಕ ವ್ಯವಸ್ಥೆ ಇಲ್ಲದ್ದರಿಂದ ಮಹಿಳೆಯರು ಹೋಗದಂತ ಸ್ಥಿತಿ ನಿರ್ವಣವಾಗಿದೆ. ಪುರುಷರು ಹೇಗೋ ಬಾಧೆ ತೀರಿಸಿಕೊಳ್ಳುತ್ತಾರೆ. ನಾವೆಲ್ಲಿ ಹೋಗುವುದು ಎಂದು ಸ್ತ್ರೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾತ್ರಿ ವೇಳೆ ಬೆಳೆಕಿನ ವ್ಯವಸ್ಥೆ ಇರದ ಕಾರಣ ಕೆಲವರು ಶೆಡ್ ಎದುರೇ ಮೂತ್ರ ವಿಸರ್ಜನೆ ಮಾಡುವುದರಿಂದ ಅಲ್ಲಿನ ಪರಿಸರ ಗಬ್ಬೆದ್ದು ನಾರುತ್ತಿದೆ.

    ಶುಕ್ರವಾರ ಸಂತೆ, ಶೌಚಗೃಹದ್ದೇ ಚಿಂತೆ: ಪಟ್ಟಣದಲ್ಲಿ ಪ್ರತಿ ಶುಕ್ರವಾರ ಸಂತೆ ಜರುಗುತ್ತದೆ. ಈ ಸಂತೆಗೆ ತಾಲೂಕಿನ ಅನೇಕ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಆದರೆ, ಇಲ್ಲಿ ಮಲ- ಮೂತ್ರ ವಿಸರ್ಜನೆಗೆ ಯಾವುದೇ ವ್ಯವಸ್ಥೆ ಮಾಡದ ಕಾರಣ ಸಾರ್ವಜನಿಕರು ಬಯಲನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಶೌಚಗೃಹ ವ್ಯವಸ್ಥೆ ಇಲ್ಲದ್ದರಿಂದ ಕೆಲವರು ಪರಿಚಯಸ್ಥರ ಮನೆಗಳಿಗೆ ತೆರಳುತ್ತಾರೆ. ಉಳಿದವರು ಅನಿವಾರ್ಯವಾಗಿ ಹತ್ತಿರದ ಪ್ರದೇಶಗಳನ್ನು ಅವಲಂಬಿಸುತ್ತಿದ್ದಾರೆ. ಆದರೆ, ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಅನೇಕ ಬಾರಿ ಜಗಳಗಳಾಗಿವೆ.

    ಪ್ರಸ್ತುತ ಪಟ್ಟಣದಲ್ಲಿ ಸಾರ್ವಜನಿಕ ಶೌಚಗೃಹ ಇಲ್ಲದಿರುವುದು ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ. ಮಹಿಳೆಯರ ಸಮಸ್ಯೆ ಹೇಳತೀರದು. ವಾಣಿಜ್ಯ ಮಳಿಗೆ ನಿರ್ಮಾಣ ಮಾಡುವ ಮೊದಲು ಸಾರ್ವಜನಿಕ ಶೌಚಗೃಹ ನಿರ್ವಣಕ್ಕೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು.

    | ರುದ್ರೇಶ ಬೆಣ್ಣಿ, ಸ್ಥಳೀಯ ನಿವಾಸಿ

    6 ತಿಂಗಳಿನಿಂದ ಶೌಚಗೃಹದ ಸಮಸ್ಯೆ ಇರುವುದರಿಂದ ಈಗಾಗಲೇ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ 1.80 ಲಕ್ಷ ರೂ. ಅನುದಾನದಲ್ಲಿ ಪುರುಷರಿಗೆ ಹಾಗೂ 1.80 ಲಕ್ಷ ರೂ. ಅನುದಾನದಲ್ಲಿ ಮಹಿಳೆಯರಿಗಾಗಿ ವಾಣಿಜ್ಯ ಮಳಿಗೆಗೆಳ ನಿರ್ವಣಕ್ಕೂ ಮೊದಲೇ ಗ್ರಾ.ಪಂ. ಕೇಂದ್ರದ ಮುಂಭಾಗದಲ್ಲಿ ಶೌಚಗೃಹ ನಿರ್ವಿುಸಲಾಗುತ್ತದೆ. ಜ. 4ರಿಂದ ಕಾಮಗಾರಿ ಪ್ರಾರಂಭಿಸಲಾಗುವುದು.

    | ಪ್ರಕಾಶ ಸುಂಕಾಪುರ, ಪಿಡಿಒ, ರಟ್ಟಿಹಳ್ಳಿ ಗ್ರಾ.ಪಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts