More

    ಗಣ್ಯರೇ ಇವರ ಟಾರ್ಗೆಟ್​! ಫೇಸ್​ಬುಕ್​ನಲ್ಲಿ ಗಣ್ಯರ ನಕಲಿ ಖಾತೆ ಸೃಷ್ಟಿಸಿ, ಸ್ನೇಹಿತರ ಬಳಿ ಹಣ ಕೇಳುತ್ತೆ ಈ ಗ್ಯಾಂಗ್​

    ಚನ್ನಪಟ್ಟಣ: ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಿ ಹಣ ಕೀಳುವ ಖದೀಮರ ಜಾಲವೊಂದು ತಾಲೂಕಿನಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿದೆ.

    ಪ್ರತಿಷ್ಠಿತರು, ಗಣ್ಯವ್ಯಕ್ತಿಗಳ ಮುಖಪುಟವನ್ನು ನಕಲಿ ಮಾಡಿರುವ ಈ ತಂಡ, ಆ ಮೂಲಕ ಸಂದೇಶ ಕಳಿಸಿ, ತುರ್ತು ಸಂದರ್ಭವಿರುವ ಕಾರಣ ಗೂಗಲ್ ಅಥವಾ ಫೋನ್‌ಪೇ ಮೂಲಕ ಹಣ ಕಳುಹಿಸುವಂತೆ ಮನವಿ ಮಾಡುತ್ತಿರುವ ಸಂದೇಶಗಳು ಹೆಚ್ಚಾಗಿದೆ.

    ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ಮುಖಪುಟವನ್ನೇ ಟಾರ್ಗೆಟ್ ಮಾಡುತ್ತಿರುವ ಈ ತಂಡ, ಅವರ ಸ್ನೇಹಿತರ ಪಟ್ಟಿಯಲ್ಲಿರುವ ಮಂದಿಗೆ ಮೊದಲು ಹಾಯ್, ಹಲೋ, ಹೇಗಿದ್ದೀರಾ ಎಂಬ ಸಂದೇಶ ಕಳುಹಿಸುತ್ತಾರೆ. ಆ ಕಡೆಯಿಂದ ಪ್ರತಿಕ್ರಿಯೆ ಬಂದ ತಕ್ಷಣ ನೇರವಾಗಿ ವಿಷಯಕ್ಕೆ ಬರುವ ತಂಡ ತುರ್ತು ಹಣದ ಅವಶ್ಯಕತೆಯಿದೆ ಎಂದು ಪುಸಲಾಯಿಸುತ್ತಾರೆ.

    ಯಾಮಾರಿದರೆ ಹಣ ಗೋವಿಂದ: ಸಂದೇಶ ಕಳುಹಿಸುವವರ ನಂಬರ್ ಇಲ್ಲದೇ, ಏನೋ ಸಮಸ್ಯೆ ಇರಬಹುದು ಎಂದು ನಂಬಿ ನಾಲ್ಕೈದು ಸಾವಿರ ಹಣ ಕಳುಹಿಸಿ, ಮೋಸ ಹೋಗಿರುವವರ ಸಂಖ್ಯೆಯೂ ಇದ್ದು. ಅಸಲಿ ವಿಷಯ ಗೊತ್ತಾದ ನಂತರ, ಈ ವಿಚಾರ ಹೇಳಿಕೊಂಡರೆ ನಗೆಪಾಟಲಿಗೆ ಕಾರಣವಾಗುತ್ತೇವೆ ಎಂದು ತೆಪ್ಪಗಿರುವವರೂ ಇದ್ದಾರೆ.

    ಮನವಿ: ತಾಲೂಕಿನ ವಿರುಪಸಂದ್ರ ಗ್ರಾಮದ ವೈದ್ಯ ಹಾಗೂ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಾ. ಅಪ್ಪಾಜಿಗೌಡರ ಮುಖಪುಟದ ಮೂಲಕ ತಾಲೂಕಿನ ಹಲವರಿಗೆ ಸಂದೇಶಗಳು ಬಂದಿವೆ. ವಿಚಾರ ಅರಿತ ಅವರು, ಅಸಲಿ ಮುಖಪುಟದ ಮೂಲಕ ನನ್ನ ಫೇಸ್‌ಬುಕ್ ಖಾತೆ ನಕಲಿ ಮಾಡಿ, ಹಣ ಕೇಳುತ್ತಿದ್ದಾರೆ. ಇದಕ್ಕೆ ಯಾರೂ ಪ್ರತಿಕ್ರಿಯಿಸಬಾರದು ಎಂದು ಮನವಿ ಮಾಡಿದ್ದಾರೆ.

    ಧನ್ಯವಾದ ಹೇಳುವ ಭಂಡರು: ಈ ರೀತಿಯಾದ ಸಂದೇಶ ಬಂದ ನಂತರ, ಇದು ಫೇಕ್ ಅಕೌಂಟ್ ಎಂದು ಮರು ಸಂದೇಶ ಕಳುಹಿಸಿದರೆ, ಅದಕ್ಕೆ ಧನ್ಯವಾದ ಹೇಳುವ ತಂಡ ನಂತರ, ಮುಂದಿನ ವ್ಯಕ್ತಿಗೆ ಬಲೆಬೀಸಲು ಮುಂದಾಗುತ್ತಿದೆ. ಹಣದ ಸಹಾಯ ಕೇಳುವ ಸಮಯದಲ್ಲಿ ಬುದ್ದಿವಂತಿಕೆ ಉಪಯೋಗಿಸುತ್ತಿರುವ ಈ ಖತರ್‌ನಾಕ್‌ಗಳು ನನ್ನ ಸ್ನೇಹಿತ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಅವನ ನಂಬರ್‌ಗೆ ನೀವು ಹಣ ವರ್ಗಾವಣೆ ಮಾಡಿ ಎಂದು ದೂರವಾಣಿ ಸಂಖ್ಯೆಯೊಂದನ್ನು ಕಳುಹಿಸುತ್ತಿದ್ದಾರೆ.

    ಗಣ್ಯರೇ ಇವರ ಟಾರ್ಗೆಟ್​! ಫೇಸ್​ಬುಕ್​ನಲ್ಲಿ ಗಣ್ಯರ ನಕಲಿ ಖಾತೆ ಸೃಷ್ಟಿಸಿ, ಸ್ನೇಹಿತರ ಬಳಿ ಹಣ ಕೇಳುತ್ತೆ ಈ ಗ್ಯಾಂಗ್​

    ಗಣ್ಯರೇ ಟಾರ್ಗೆಟ್ ಏಕೆ?: ಸಾಮಾನ್ಯವಾಗಿ ಸಮಾಜದ ಬಹುತೇಕ ಗಣ್ಯರು ಮುಖಪುಟವನ್ನು ಬಳಸುತ್ತಿದ್ದಾರೆ. ಇವರ ಖಾತೆ ನಕಲು ಮಾಡುತ್ತಿರುವ ಈ ಖದೀಮರ ಜಾಲ ಹಣಕ್ಕಾಗಿ ಈ ರೀತಿ ಬಲೆ ಬೀಸುತ್ತಿದ್ದಾರೆ. ಗಣ್ಯರು ಏನೋ ತುರ್ತು ಇರುವ ಕಾರಣಕ್ಕಾಗಿ ಹಣ ಕೇಳುತ್ತಿರಬಹುದು ಎಂದು ಸಾರ್ವಜನಿಕರು ಯಾಮಾರುತ್ತಾರೆ ಎಂಬುದು ಖದೀಮರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರು, ಸರ್ಕಾರಿ ಅಧಿಕಾರಿಗಳು ಸೇರಿ ಹಲವರ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ನಕಲಿ ಖಾತೆ ಸೃಷ್ಟಿಸಿದ್ದನ್ನು ಸ್ಮರಿಸಬಹುದಾಗಿದೆ.

    ಗಣ್ಯರು ಹಾಗೂ ಸಾರ್ವಜನಿಕರ ನಕಲಿ ಮುಖಪುಟವನ್ನು ಸೃಷ್ಟಿಸಿ, ಆ ಮೂಲಕ ಹಣ ಕೇಳುವ ಪ್ರಕರಣಗಳು ಗಮನಕ್ಕೆ ಬಂದಿವೆ. ಈಗಾಗಲೇ 3 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಸಾರ್ವಜನಿಕರು ಮುಖಪುಟದ ಖಾತೆ ನಕಲಾಗಿದ್ದರೆ ಅಥವಾ ಹಣ ಕಳುಹಿಸಿ ಮೋಸವಾಗಿದ್ದರೆ ಕೂಡಲೇ ಹತ್ತಿರದ ಠಾಣೆಗೆ ದೂರು ಸಲ್ಲಿಸಿ. ವಂಚಕರ ಜಾಲ ಪತ್ತೆಹಚ್ಚಲು ಈಗಾಗಲೇ ಕಾರ್ಯೋನುಮುಖವಾಗಿದ್ದೇವೆ.
    ಎಸ್. ಗಿರೀಶ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts