More

    ಜಿಲ್ಲೆಯಲ್ಲಿ 50 ಸಾವಿರ ಧ್ವಜ ವಿತರಣೆ: ಮಹಿಳಾ ಸ್ವಸಹಾಯ ಸಂಘದಲ್ಲಿ ಸಿದ್ಧವಾಗುತ್ತಿದೆ ತಿರಂಗಾ

    ಗಂಗಾಧರ್ ಬೈರಾಪಟ್ಟಣ ರಾಮನಗರ
    ದೇಶದ ಸ್ವಾತಂತ್ರೃಕ್ಕೆ ಈಗ 75ರ ಸಂಭ್ರಮ. ಪ್ರತಿ ಮನೆ ಮೇಲೂ ತ್ರಿವರ್ಣ ಧ್ವಜ ಹಾರಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘದ ಗುಂಪುಗಳು ಸರ್ಕಾರದ ಜತೆ ಕೈಜೋಡಿಸಿವೆ.


    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮನೆಮನೆಗೆ ತ್ರಿವರ್ಣ ಧ್ವಜ ಕಾರ್ಯಕ್ರಮದಲ್ಲಿ ಸ್ಥಳೀಯ ಮಾನವ ಸಂಪನ್ಮೂಲ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಜಿಲ್ಲಾ ಪಂಚಾಯಿತಿ, ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಂದ ಸಿದ್ಧಪಡಿಸಿದ ತ್ರಿವರ್ಣ ಧ್ವಜವನ್ನು ಜಿಲ್ಲೆಯಾದ್ಯಂತ ಮಾರಾಟ ಮಾಡಲು ಮುಂದಾಗಿದೆ.


    ಇದಕ್ಕಾಗಿ ಜಿಪಂ ಅಧೀನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಮೂಲಕ ಸ್ವಸಹಾಯ ಸಂಘದ ಮಹಿಳೆಯರಿಂದ ಧ್ವಜ ಸಿದ್ಧಪಡಿಸಿ, ಗ್ರಾಪಂಗಳ ಮೂಲಕ ವಿತರಣೆ ಮಾಡಲು ಮುಂದಾಗಿದೆ.


    ಜಿಲ್ಲೆಯಾದ್ಯಂತ ಸುಮಾರು 50 ಸಾವಿರ ಧ್ವಜಗಳನ್ನು ವಿತರಣೆ ಮಾಡಲು ಮುಂದಾಗಿರುವ ಜಿಪಂ, ಈಗಾಗಲೇ ಕಳೆದ 10 ದಿನಗಳಿಂದ 50 ಮಹಿಳೆಯರ ಮೂಲಕ ಧ್ವಜ ತಯಾರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಈಗಾಗಲೇ 35 ಸಾವಿರ ಧ್ವಜಗಳನ್ನು ಸಿದ್ಧಪಡಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ 50 ಸಾವಿರ ಧ್ವಜವನ್ನು ಸಿದ್ಧಪಡಿಸಿ ವಿತರಿಸಲಿದೆ.

    28 ರೂ.ಗೆ ಮಾರಾಟ: ಜಿಲ್ಲೆಯ ಮಹಿಳೆಯರು ತಯಾರಿಸುತ್ತಿರುವ ತ್ರಿವರ್ಣಧ್ವಜವನ್ನು ಪ್ರತಿ ಧ್ವಜಕ್ಕೆ 28 ರೂ. ನಂತೆ ಮಾರಾಟ ಮಾಡಲು ಜಿಪಂ ಅಧಿಕಾರಿಗಳ ಸಭೆ ನಿರ್ಧರಿಸಿದೆ. ಕೆಲ ಜಿಲ್ಲೆಗಳಲ್ಲಿ 50 ರೂ.ವರೆಗೂ ದರ ನಿಗದಿ ಮಾಡಲಾಗಿದೆಯಾದರೂ ಜಿಲ್ಲೆಯಲ್ಲಿ ಮಾತ್ರ ಕಡಿಮೆ ಬೆಲೆ. ಧ್ವಜ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಮಹಿಳೆಯರೇ ಖರೀದಿ ಮಾಡಿ, ಸಿದ್ಧಪಡಿಸಿ ಕಡಿಮೆ ಬೆಲೆಗೆ ಜಿಲ್ಲೆಯ ಜನತೆಗೆ ದೊರಕುವಂತೆ ಮಾಡುತ್ತಿರುವುದು ವಿಶೇಷವೆನಿಸಿದೆ. ಸಂಜೀವಿನಿ ಮಹಿಳಾ ಸ್ವಸಹಾಯ ಒಕ್ಕೂಟದ 50 ಸದಸ್ಯರು ಪ್ರತಿದಿನ 1500ರಿಂದ 2000 ಧ್ವಜ ತಯಾರಿಸುತ್ತಿದ್ದಾರೆ. ಈ ಕಾರ್ಯದಿಂದ ಮಹಿಳೆಯರಿಗೂ ಲಾಭವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.


    ಜಿಪಂ ಉಸ್ತುವಾರಿಯಲ್ಲಿ ತಯಾರಾಗುತ್ತಿರುವ ತ್ರಿವರ್ಣ ಧ್ವಜವನ್ನು ಮಾರಾಟ ಮಾಡುವ ಹೊಣೆ ಗ್ರಾಮ ಪಂಚಾಯಿತಿಗಳದ್ದಾಗಿದೆ. ಜಿಲ್ಲೆಯ 127 ಗ್ರಾಪಂಗಳಿಗೆ ಧ್ವಜ ಮಾರಾಟದ ಹೊಣೆ ವಹಿಸಿದ್ದು, ಪ್ರತಿ ಮನೆಗೆ ಧ್ವಜ ತಲುಪಿಸುವ ಜತೆಗೆ ಮಾರಾಟವಾದ ಹಣವನ್ನು ಸಂಜೀವಿನಿ ಒಕ್ಕೂಟಕ್ಕೆ ನೀಡುವುದು ಗ್ರಾಪಂ ಅಧಿಕಾರಿಗಳ ಜವಾಬ್ದಾರಿಯಾಗಿದೆ.


    ಜಿಪಂ ಸಿಇಒ ಸೂಚನೆ ಮೇರೆಗೆ ಮಹಿಳಾ ಸ್ವ ಸಹಾಯ ಗುಂಪುಗಳಿಂದಲೇ ರಾಷ್ಟ್ರ ಧ್ವಜ ಸಿದ್ಧಪಡಿಸಲಾಗುತ್ತಿದೆ. ಸಂಜೀವಿನಿ ಮಹಿಳಾ ಒಕ್ಕೂಟಗಳು ತಯಾರಿಸುತ್ತಿರುವ ಧ್ವಜಗಳು ಧ್ವಜ ಸಂಹಿತೆ ಅಡಿಯಲ್ಲಿಯೇ ಸಿದ್ಧಗೊಳ್ಳುತ್ತಿವೆ. ಇದರಿಂದ ಮಹಿಳೆಯರಿಗೆ ಕೆಲಸದ ಜತೆಗೆ ಆರ್ಥಿಕ ನೆರವು ದೊರೆತಂತಾಗಿದೆ.
    | ವಿನೋದ್‌ಕುಮಾರ್ ವ್ಯವಸ್ಥಾಪಕರು ಎನ್‌ಆರ್‌ಎಂಎಲ್ ರಾಮನಗರ

    ದೇಶಕ್ಕೆ ಸ್ವಾತಂತ್ರೃ ಬಂದು 75 ವರ್ಷ ತುಂಬುವ ಹೊತ್ತಿನಲ್ಲಿ ನಮ್ಮಿಂದಲೂ ಕಿರು ಕಾಣಿಕೆ ಸಲ್ಲಿಕೆ ಆಗುತ್ತಿರುವುದು ಖುಷಿ ತಂದಿದೆ. ಮಹಿಳೆಯರಿಗೆ ಕಳೆದ 10 ದಿನಗಳಿಂದ ಕೆಲಸದ ಜತೆಗೆ ಸ್ವಲ್ಪ ಆದಾಯವೂ ಸಿಕ್ಕಿದೆ. ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳು.
    | ಗೀತಾ ಸ್ವಸಹಾಯ ಸಂಘದ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts