More

    ಕೆಲವರಿಗೆ ಸುಳ್ಳೇ ಮನೆದೇವರು

    ರಾಮನಗರ :  ಸಂಸದರು ಮಾಡಿದ ಕೆಲಸಗಳನ್ನು ನಾನು ಮಾಡಿಸಿದ್ದು, ನನ್ನ ತಂದೆ ಮಾಡಿಸಿದ್ದು ಎಂದು ಹೇಳುವ ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಮತದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಮಾಡಿಸಿದ ಕೆಲಸಗಳ ಬಗ್ಗೆ ಜನರಿಗೆ ತಿಳಿಸಿ ಪೂಜೆ ಮಾಡಲಿ ಎಂದು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದರು.
    ಕಸಬಾ ಹೋಬಳಿ ಬಸವನಪುರದಲ್ಲಿ ಗ್ರಾಮ ಸಡಕ್ ಯೋಜನೆಯಡಿ ಗಂಗರಾಜನಹಳ್ಳಿ, ಬಸವನಪುರ, ಹಳ್ಳಿಮರದೊಡ್ಡಿ, ಕೇತೋಹಳ್ಳಿ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
    ಸ್ಥಳೀಯ ಶಾಸಕರು ಕಾರ್ಯಕ್ರಮಗಳ ಗುದ್ದಲಿ ಪೂಜೆ ಮಾಡಿ ಹೋಗುತ್ತಾರೆ. ಆದರೆ, ಕಾರ್ಯಕ್ರಮಕ್ಕೆ ಸಂಸದರನ್ನು ಕರೆಯುವ ಔದಾರ್ಯವಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

    ಕೈಲಾಂಚ ಹೋಬಳಿಯಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸುತ್ತೇವೆ ಎನ್ನುವ ಕಾರಣಕ್ಕೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ ತೆರವಿನ ನಂತರ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿದ ಸುರೇಶ್, ಕೈಲಾಂಚ ಭಾಗದ ಕರೆಗಳಿಗೆ ಯಾರು ನೀರು ತುಂಬಿಸಿದರು ಎನ್ನುವುದು ಈ ಭಾಗದ ಜನರಿಗೆ ಗೊತ್ತಿದೆ ಎಂದರು.

    ಕೆಲವರು ಕೆರೆಗಳಿಗೆ ಕೊಳಚೆ ನೀರು ತುಂಬಿಸುತ್ತಿದ್ದಾರೆ ಎಂದು ಹೇಳುತ್ತಿದ್ದರು, ಈಗ ಬೇರೆಯದ್ದೇ ಮಾತನಾಡುತ್ತಿದ್ದಾರೆ. ಯಾರ ನಾಲಿಗೆಯಲ್ಲೂ ಮೂಳೆ ಇಲ್ಲ. ಹೇಗೆ ಬೇಕಾದರೂ ಹೊರಳುತ್ತದೆ. ಹಾಗಂತ ಜನ ಎಲ್ಲವನ್ನೂ ನಂಬುತ್ತಾರೆ ಅನ್ನುಕೊಳ್ಳುವುದು ಬೇಡ. ಚುನಾವಣೆಗೆ ಇನ್ನು ಒಂದೂವರೆ ವರ್ಷ ಇದೆ. ಆಗ ರಾಜಕಾರಣ ಮಾಡೋಣಾ. ನಮ್ಮ ಗುರಿ ಜಿಲ್ಲೆ ಅಭಿವೃದ್ಧಿಯಾಗಬೇಕು ಅನ್ನುವುದು ಅಷ್ಟೇ ಎಂದರು.

    ಕೆಲವರು ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿದ್ದಾರೆ. ಯಾರು ಅಂತ ಹೇಳಲು ಹೋಗುವುದಿಲ್ಲ. ಅವರಿಗೆ ಒಂದು ವರ್ಷದಿಂದ ಜಿಲ್ಲೆ ಕಾಣಿಸುತ್ತಿದೆ. ಅದಕ್ಕಿಂತ ಮುಂಚೆ ಇಲ್ಲಿನ ಜನ ಕಾಣಿಸುತ್ತಿರಲಿಲ್ಲ. ಇದೀಗ ಓಡಾಡಿಕೊಂಡು ಮಾಡುತ್ತಿದ್ದಾರೆ ಎಂದು ಎಚ್‌ಡಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.ಎಂಎಲ್ಸಿಗಳಾದ ಸಿ.ಎಂ.ಲಿಂಗಪ್ಪ, ಎಸ್.ರವಿ, ಮಾಜಿ ಶಾಸಕ ಕೆ.ರಾಜು, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಮುಖಂಡರಾದ ಕೆ.ರಮೇಶ್, ಮಾಯಗಾನಹಳ್ಳಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಮುಂತಾದವರು ಇದ್ದರು.

    ನಾವು ಯಾರನ್ನೂ ಟಾರ್ಗೆಟ್ ಮಾಡಿಲ್ಲ : ಡಿ.ಕೆ.ಬ್ರದರ್ಸ್ ಟಾರ್ಗೆಟ್ ಮಾಡ್ತಿದ್ದಾರೆ ಎಂದಿದ್ದ ಮಾಜಿ ಸಿಎಂ ಎಚ್‌ಡಿಕೆ ಅವರನ್ನು ಟೀಕಿಸಿದ ಸಂಸದ ಸುರೇಶ್, ಅವರು ದೊಡ್ಡವರು, ನಾನೆಲ್ಲೂ ಅವರ ಬಗ್ಗೆ ಮಾತನಾಡಿಲ್ಲ, ನಾವು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಅದರ ಅವಶ್ಯಕತೆ ನಮಗಿಲ್ಲ. ಒಬ್ಬ ಪ್ರತಿನಿಧಿಯಾಗಿ ಜಿಲ್ಲೆಯ ಅಭಿವೃದ್ಧಿ ಮಾಡುವ ಗುರಿ ಇದೆ, ಅವಹೇಳನಕಾರಿಯಾಗಿ ಮಾತನಾಡುವಷ್ಟು ದೊಡ್ಡವನಲ್ಲ ನಾನು, ಅವರು ದೊಡ್ಡವರು ಮಾತನಾಡಲಿ, ಬೇರೆಯವರ ಗುರಿಯ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

    ಕೋವಿಡ್ ನಂತರ ಪಾದಯಾತ್ರೆ : ಸರ್ಕಾರ ಕೋವಿಡ್ ಕಡಿಮೆಯಾಗಿದೆ ಎಂದು ಹೇಳುತ್ತಿದೆ. ಅತೀ ಶೀಘ್ರದಲ್ಲೇ ಪಕ್ಷದ ನಾಯಕರ ಜತೆ ಮಾತನಾಡಿ ರಾಮನಗರದಿಂದಲೇ ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ ಎಂದು ಸುರೇಶ್ ತಿಳಿಸಿದರು. ರಾಜಕೀಯ ಪಕ್ಷ ಎಂದ ಮೇಲೆ ಸೇರ್ಪಡೆ ಆಗುವುದು ಸಾಮಾನ್ಯ. ಪಕ್ಷ ಸಿದ್ಧಾಂತ ಮತ್ತು ನಾಯಕರ ಮೇಲೆ ನಂಬಿಕೆ ಇಟ್ಟು ಬರುವವರಿಗೆ ಸ್ವಾಗತ. ಸಿ.ಎಂ. ಇಬ್ರಾಹಿಂ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಮಾತನಾಡ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts