More

    ತರಕಾರಿ ಬೆಲೆ ದುಬಾರಿ: ಗ್ರಾಹಕರಿಗೆ ಮುಟ್ಟಿದ ಬಿಸಿ

    ಅವಿನಾಶ್ ಜೈನಹಳ್ಳಿ ಮೈಸೂರು

    ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ತರಕಾರಿಗಳ ದರದಲ್ಲಿ ಭಾರಿ ಏರಿಕೆ ಕಂಡಿದೆ. ಮಳೆ ಕೊರತೆ ಪರಿಣಾಮ ಹಣ್ಣು ಮತ್ತು ತರಕಾರಿ ಬೆಳೆ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ತರಕಾರಿ ದರ ಬಿಸಿಲ ತಾಪದಂತೆ ಏರಿಕೆಯಾಗುತ್ತಿದೆ.

    ಮಳೆ ಕೊರತೆ ಪರಿಣಾಮ ಜಿಲ್ಲೆಯ ಕೆ.ಆರ್.ನಗರ, ಹುಣಸೂರು ಸೇರಿದಂತೆ ವಿವಿಧ ಭಾಗದಲ್ಲಿ ರೈತರು ಬೆಳೆದಿದ್ದ ತರಕಾರಿ, ಹಣ್ಣು ಮತ್ತು ಸೊಪ್ಪು ಹೊಲದಲ್ಲೇ ಒಣಗುತ್ತಿದ್ದು, ಇಳುವರಿ ಕುಂಠಿತವಾಗಿದೆ. ಪರಿಣಾಮ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗದಿರುವುದರಿಂದ ತರಕಾರಿ ಬೆಲೆ ಗಗನಕ್ಕೇರಿದೆ.

    ತೀವ್ರ ಬರಗಾಲದಿಂದ ನದಿ, ಕೆರೆ-ಕಟ್ಟೆಗಳ ಜತೆಗೆ ಅಂತರ್ಜಲ ಮಟ್ಟವೂ ಕುಸಿದಿರುವುದರಿಂದ ಬೇಸಿಗೆಯಲ್ಲಿ ನೂರಾರು ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹಣ್ಣು, ತರಕಾರಿ ಬೆಳೆಗೆ ನೀರು ಒದಗಿಸಲಾಗದೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇತ್ತ ವಾತಾವರಣದಲ್ಲಿನ ಉಷ್ಣತೆಗೆ ಫಸಲಿನ ಇಳುವರಿಯೂ ಕುಂಠಿತವಾಗಿದೆ.

    ತಗ್ಗಿದ ಪೂರೈಕೆ ಪ್ರಮಾಣ

    ಮೈಸೂರು ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಪಕ್ಕದ ಗುಂಡ್ಲುಪೇಟೆ, ಶ್ರೀರಂಗಪಟ್ಟಣ ತಾಲೂಕುಗಳಿಂದ ನಿತ್ಯವೂ 2 ಸಾವಿರ ಟನ್‌ಗೂ ಹೆಚ್ಚು ತರಕಾರಿಯನ್ನು ನೂರಾರು ವಾಹನಗಳಲ್ಲಿ ತರಲಾಗುತ್ತಿತ್ತು. ಆದರೆ, ಕಳೆದೊಂದು ತಿಂಗಳಿನಿಂದ ಮೈಸೂರಿಗೆ ಪೂರೈಕೆಯಾಗುತ್ತಿರುವ ಪ್ರಮಾಣ ಕಡಿಮೆಯಾಗಿದ್ದು, 1 ಸಾವಿರ ಟನ್‌ಗೆ ಇಳಿಕೆಯಾಗಿದೆ. ಪರಿಣಾಮ ತರಕಾರಿ ಮತ್ತು ಸೊಪ್ಪಿಗೆ ಬೇಡಿಕೆ ಹೆಚ್ಚಾಗಿರುವ ಜತೆಗೆ ಬೆಲೆಯೂ ಹೆಚ್ಚಿದೆ.

    ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ತರಕಾರಿ ಬೆಲೆ ಸಾಧಾರಣವಾಗಿರುತ್ತದೆ. ಆದರೆ ಈ ಬಾರಿ ಎಲ್ಲ ಬಗೆಯ ತರಕಾರಿಗಳು 50 ರೂ. ಗಡಿ ದಾಟಿದ್ದು, ಗ್ರಾಹಕರು ತರಕಾರಿ ಖರೀದಿಸಲು ಯೋಚಿಸುವಂತಾಗಿದೆ.

    ಸಗಟು ಮಾರುಕಟ್ಟೆಯಲ್ಲಿ ದಪ್ಪಮೆಣಸಿನಕಾಯಿ, ಕ್ಯಾರೆಟ್, ಬೀನ್ಸ್, ಟೊಮ್ಯಾಟೊ, ಈರುಳ್ಳಿ ಸೇರಿದಂತೆ ಹಲವು ತರಕಾರಿ ದರ ಹೆಚ್ಚಾಗಿದ್ದು, ರಿಟೇಲ್ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಜನರು ಕಂಗಾಲಾಗಿದ್ದಾರೆ.

    ಸಗಟು ಮಾರುಕಟ್ಟೆಯಲ್ಲಿ ಈ ಹಿಂದೆ ಕೆ.ಜಿ.ಗೆ 10-20 ರೂ. ದರವಿದ್ದ ಟೊಮ್ಯಾಟೊ 40-50ಕ್ಕೆ ಏರಿಕೆಯಾಗಿದೆ. ಒಂದು ಕಂತೆ ದಂಟು, ಮೆಂತ್ಯ, ಪಾಲಕ್, ಸಪ್ಸಿಗೆ, ಕೊತ್ತಂಬರಿ ಸೊಪ್ಪು 10 ರೂ.ಗೆ ಮುಟ್ಟಿದೆ. 30-40 ರೂ.ಗೆ ದೊರೆಯುತ್ತಿದ್ದ ಬೀನ್ಸ್ ಈಗ ಬಲು ದುಬಾರಿಯಾಗಿದ್ದು, ಪ್ರತಿ ಕಿಲೋಗೆ 160ರಿಂದ 180 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಜತೆಗೆ 40 ರೂ. ಇದ್ದ ಹಸಿ ಮೆಣಸಿನ ಕಾಯಿ ಬೆಲೆ ಸದ್ಯಕ್ಕೆ 70ರಿಂದ 80 ರೂ.ಗೆ ಏರಿಕೆಯಾಗಿದೆ. ಬೆಂಡೆಕಾಯಿಗೆ 60, ಮೂಲಂಗಿ 60, ಕ್ಯಾರೆಟ್-ಬೀಟ್‌ರೂಟ್ 70, ಸೌತೆಕಾಯಿ 50, ಹಾಗಲಕಾಯಿ 70, ಕೋಸು 40 ರೂ.ಗೆ ಮಾರಾಟವಾಗುತ್ತಿದೆ.

    ಚಿಲ್ಲರೆ ಅಂಗಡಿಯಲ್ಲಿ ದುಪ್ಪಟ್ಟು

    ನಗರದ ವಿವಿಧೆಡೆ ಹಾಗೂ ಸಂತೆಗಳಲ್ಲಿ ತರಕಾರಿ ಸಗಟು ಮಾರಾಟ ಕೇಂದ್ರಗಳಿಗಿಂತ ದುಪ್ಪಟ್ಟು ಬೆಲೆಗೆ ತರಕಾರಿ ಮತ್ತು ಸೊಪ್ಪು ಮಾರಾಟವಾಗುತ್ತಿದೆ. ಟೊಮ್ಯಾಟೊ ಪ್ರತಿ ಕೆಜಿಗೆ 100, ಈರುಳ್ಳಿಗೆ 90, ಕ್ಯಾರೆಟ್‌ಗೆ 80 ರೂ.ನಂತೆ ಮಾರಾಟವಾಗುತ್ತಿದೆ.

    ಕಳೆದ 15 ದಿನಗಳಿಂದ ಯಾವುದೇ ತರಕಾರಿಯ ಬೆಲೆ ಕೇಳಲು ಆಗುತ್ತಿಲ್ಲ. ಎಲ್ಲ ತರಕಾರಿಗೂ ಡಬಲ್ ಬೆಲೆ ಹೇಳುತ್ತಿದ್ದಾರೆ. ತರಕಾರಿಯ ಬೆಲೆ ಹೀಗೆ ಹೆಚ್ಚಾಗುತ್ತಿದ್ದರೆ ತುಂಬ ಕಷ್ಟವಾಗುತ್ತದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ರೈತರು ಹಾಗೂ ಗ್ರಾಹಕರು ಇಬ್ಬರಿಗೂ ಸಮಸ್ಯೆಯಾಗದಂತೆ ಬೆಲೆ ನಿಗದಿ ಮಾಡಬೇಕು.
    ಸಂತೋಷ್, ಗ್ರಾಹಕ

    ತರಕಾರಿ -ಹಳೆಯ ದರ -ಪ್ರಸ್ತುತ ದರ

    ಟೊಮ್ಯಾಟೊ- 20- 45 ರೂ.
    ಬೆಂಡೆಕಾಯಿ- 30- 60
    ಮೆಣಸಿನಕಾಯಿ: 30 -70
    ಬದನೆಕಾಯಿ- 15 – 40
    ಕ್ಯಾರೆಟ್ – 40- 70
    ಬೀನ್ಸ್ – 40- 180
    ಸೌತೆ – 20 – 50
    ಮೂಲಂಗಿ – 30 – 50
    ದಪ್ಪಮೆಣಸಿನಕಾಯಿ- 30 – 70
    ಎಲೆಕೋಸು – 20 – 40
    ತೊಂಡೆಕಾಯಿ – 20 – 80
    ಈರುಳ್ಳಿ – 30- 30
    ಪೈರ್ – 30 – 60

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts